ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕೈಂಕರ್ಯಕ್ಕೆ ಕಾವೇರಿ ಕನ್ನಡ ಸಂಘದ ಮನ್ನಣೆ

By Staff
|
Google Oneindia Kannada News

ಅಮೆರಿಕೆಯಲ್ಲಿ ಸುಮಾರು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅಗ್ಗಳಿಕೆಯ ‘ಕಾವೇರಿ ಕನ್ನಡ ಸಂಘ’ ಕನ್ನಡ.ಇಂಡಿಯಾಇನ್ಫೋ.ಕಾಂನ ಸಹ ಸಂಪಾದಕ ಎಸ್‌.ಕೆ.ಶಾಮಸುಂದರ ಅವರಿಗೆ, ಆ ಮೂಲಕ ಕನ್ನಡ.ಇಂಡಿಯಾಇನ್ಫೋ.ಕಾಂಗೆ ಹೊಸ ವರ್ಷದ ಉಡುಗೊರೆಯನ್ನು ಅಡ್ವಾನ್ಸ್‌ ಆಗಿ ಕೊಟ್ಟಿದೆ.

ಕನ್ನಡಕ್ಕೆ ವಿಶೇಷ ಸೇವೆ ಸಲ್ಲಿಸಿದವರನ್ನು ಪ್ರತಿ ವರ್ಷ ಗುರ್ತಿಸಿ, ಗೌರವ ಪ್ರಮಾಣ ಪತ್ರವನ್ನು ಕೊಡುವುದು ಕಾವೇರಿ ಕನ್ನಡ ಸಂಘದ ಸಂಪ್ರದಾಯ. 2001ನೇ ಸಾಲಿನ ಈ ಗೌರವಕ್ಕೆ ಪಾತ್ರರಾಗಿರುವ ಎಂಟು ಸಾಧಕರ ಪೈಕಿ ಕನ್ನಡ.ಇಂಡಿಯಾಇನ್ಫೋ.ಕಾಂನ ಸಹ ಸಂಪಾದಕ ಎಸ್‌.ಕೆ.ಶಾಮಸುಂದರ ಅವರು ಕೂಡ ಒಬ್ಬರು. ಡಿಸೆಂಬರ್‌ 16ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.

[email protected] - ಈ ಮೂಲಕ ಅಮೆರಿಕೆಯಲ್ಲಿ ಚಿರಪರಿಚಿತರಾದ ಶಾಮ ಸುಂದರ ಕನ್ನಡ.ಇಂಡಿಯಾಇನ್ಫೋ.ಕಾಂ ಹಿಂದಿನ ಮಿದುಳು. ಅವರ ಬಗ್ಗೆ ಪೋರ್ಟಲ್‌ ಮಾತಾಡುತ್ತದೆ. ಉಳಿದದ್ದು ನಿಮಗೆ ಗೊತ್ತೇ ಇದೆ.

ಸಂಘದ ಗೌರವಕ್ಕೆ ಪಾತ್ರರಾಗಿರುವ ಇತರರ ಸಂಕ್ಷಿಪ್ತ ಪರಿಚಯ ಇಂತಿದೆ....

ಸಂದೇಶ್‌ ಶ್ರೀನಿವಾಸ್‌

ಮೇರಿಲ್ಯಾಂಡಿನ ಸಿಲ್ವರ್‌ ಸ್ಪ್ರಿಂಗ್‌ನಲ್ಲಿರುವ ಸ್ಪ್ರಿಂಗ್‌ಬುಕ್‌ ಹೈಸ್ಕೂಲ್‌ನಲ್ಲಿ ಓದುತ್ತಿರುವ ಈತ 14 ವರ್ಷದ ಹುಡುಗ. 10 ನೇ ಗ್ರೇಡರ್‌ನಲ್ಲಿ ಕಲಿಯುತ್ತಿದ್ದರೂ, ಈತನ ಸಾರ್ವತ್ರಿಕ ಚಟುವಟಿಕೆಗಳು ಹಲವು. ಪುಟ್ಟ ವಯಸ್ಸಿನಲ್ಲೇ ತಬಲ ಅಕಾಡೆಮಿ ಪಾರ್‌ ಯೂಥ್ಸ್‌ (STAY) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾನೆ ಸಂದೇಶ್‌. ಇದರ ಮೂಲಕ ಅನೇಕರಿಗೆ ತಬಲ ಬಾರಿಸುವುದನ್ನು ಕಲಿಸುತ್ತಾನೆ. ಓದುವುದರಲ್ಲೂ ಮುಂದು. ಚಿನಕುರುಳಿಗಳು ತಮ್ಮ ಪ್ರತಿಭೆ ಅಭಿವ್ಯಕ್ತಿಸಲೆಂದೇ ಇರುವ Young Talents Concerts ನ ಅಧ್ಯಕ್ಷತೆಯ ಹೊಣೆಯನ್ನೂ ಹೊತ್ತು ಸಂದೇಶ್‌ ಸೈ ಎನ್ನಿಸಿಕೊಂಡಿದ್ದಾನೆ. ವರ್ಷ ಕಾಲದ ಈ ಜವಾಬ್ದಾರಿಯ ನಡುವೆಯೂ ಓದು, ತಬಲದಲ್ಲಿ ಸಂದೇಶ್‌ ಮಾಸಲಿಲ್ಲ. ಈ ಒಂದು ವರ್ಷದಲ್ಲಿ ಸುಮಾರು 500 ತಾಸುಗಳ ಕಾಲದ ಸೇವೆಯನ್ನು ಮಾಡಿದ್ದಾನೆ ಈತ.

ನಂದಾ ಶ್ರೀಕಂಠಯ್ಯ

ಬೆಥೆಸ್ಡದ ವಾಲ್ಟ್‌ ವಿಟ್‌ಮ್ಯಾನ್‌ ಹೈಸ್ಕೂಲಿನ ಸೀನಿಯರ್‌ ವಿದ್ಯಾರ್ಥಿನಿ. ಭಾಷಣ, ಚರ್ಚೆ ಮಾಡಲೆಂದೇ ಇರುವ ಶಾಲಾ ತಂಡದಲ್ಲಿ ಈಕೆ ಪ್ರಮುಖ ಆಕರ್ಷಣೆ. ಬ್ಲಾಕ್‌ ಅಂಡ್‌ ವೈಟ್‌ ಎಂಬ ಶಾಲಾ ಪತ್ರಿಕೆಯಲ್ಲೂ ಎರಡು ವರ್ಷಗಳಿಂದ ಕೆಲಸ ಮಾಡಿದ ಅನುಭವವಿದೆ. ಪ್ರಸಕ್ತ ವರ್ಷ ಶಾಲಾ ಚರ್ಚಾ ತಂಡದ ಅಧ್ಯಕ್ಷೆ ಈಕೆ. ಪತ್ರಿಕೆಯ ಸಂಪಾದಕತ್ವದ ಹೊಣೆಯೂ ಈಕೆಯದ್ದೇ. ಅಮೆರಿಕೆಯಲ್ಲಿ ರಾಷ್ಟ್ರೀಯ ಮಟ್ಟದ ಚರ್ಚಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಮೊಗೆದುಕೊಂಡಿರುವ ಅಪರೂಪದ ಪ್ರತಿಭೆ ನಂದಾ ಶ್ರೀಕಂಠಯ್ಯ.

ಷಣ್ಮುಗನಾಥನ್‌ ಪಟ್ಟು

ಯಶಸ್ವಿ ವ್ಯಾಪಾರಿ. ಹೃದಯವಂತ. ವರ್ಷಗಳಿಂದ ಕಾವೇರಿ ಕನ್ನಡ ಕೂಟದ ಪ್ರಮುಖ ಪ್ರಾಯೋಜಕ. ಕಾವೇರಿ ಸುದ್ದಿಪತ್ರಿಕೆ (ನ್ಯೂಸ್‌ಲೆಟರ್‌ ಮ್ಯಾಗಜೀನ್‌) ಈ ಹೊತ್ತು ನೂರಾರು ಜನರನ್ನು ತಲುಪುತ್ತಿದೆ. ಈ ಒಳ್ಳೆ ಕೆಲಸದ ಹಿಂದಿನ ಕೈ ಪಟ್ಟು ಷಣ್ಮುಗನಾಥನ್‌ ಅವರದು.

ಕೆನ್‌ ವೆಂಕಟೇಶ್‌

ಕಾವೇರಿಯ ಹಳೆಯ ಆಪ್ತ ಗೆಳೆಯ. ದಶಕದಿಂದ ಕೂಟದ ಏಳಿಗೆಯಲ್ಲಿ ಪಾತ್ರ ವಹಿಸಿದ್ದಾರೆ. ಕೂಟದ ನ್ಯೂಸ್‌ಲೆಟರ್‌ ಮ್ಯಾಗಜೀನ್‌ನ ಪ್ರಮುಖ ಪ್ರಾಯೋಜಕರಿವರು.

ರಾಜಶೇಖರ್‌ ದೊಡ್ಡಣ್ಣ

1971ರಲ್ಲಿ ಕಾವೇರಿ ಜನ್ಮತಾಳಿದಾಗಿನಿಂದ ಇವರು ಕ್ರಿಯಾಶೀಲ ಸದಸ್ಯರು. ಕೂಟದ ಮಾಜಿ ಅಧ್ಯಕ್ಷರೂ ಹೌದು. ಸ್ವಯಂ ಸೇವೆ ಮಾಡಲು ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಇವರು ಕೂಟಕ್ಕೆ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಡಾ.ಕೆ.ಎಲ್‌.ವಸಂತ್‌

ಸದಸ್ಯ, ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ(1987ರಲ್ಲಿ) ಕೂಟಕ್ಕೆ ಸೇವೆ ಸಲ್ಲಿಸಿದ್ದಾರೆ. ಪೂರ್ವ ಅಮೆರಿಕನ್‌ ಕನ್ನಡ ಸಮ್ಮೇಳನ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹುರಿಯಾಳು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ತಂದು, ಅದರ ಮೂಲಕ 20 ಸಾವಿರ ಡಾಲರ್‌ ಹಣ ಸಂಗ್ರಹಿಸಿದರು. ಸಮ್ಮೇಳನಕ್ಕಾಗಿ 10 ಸಾವಿರ ಡಾಲರ್‌ ಖರ್ಚಿನ ನಂತರ ಉಳಿದ ಹಣವನ್ನು ಸಂಚಿತ ಠೇವಣಿ ಇಟ್ಟಿರುವ ಅಗ್ಗಳಿಕೆ ಇವರದು. ಈ ಠೇವಣಿಯಿಂದಾಗಿ ಚಿಕ್ಕ ಮೊತ್ತವಾದರೂ ನಿರಂತರ ಹಣ ಬರುವಂತಾಗಿದೆ. ಕನ್ನಡ ನಾಟಕಗಳು ಹಾಗೂ ಸಮೂಹ ಗಾಯನವನ್ನು ಆಯೋಜಿಸುವ (ನಿರ್ದೇಶನ, ನಟನೆ ಹೀಗೆ) ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಸಮಾಜಕ್ಕೆ ನಾವು ಏನನ್ನಾದರೂ ಕೊಡಬೇಕು ಎಂಬ ಕಳಕಳಿಯಿಂದ, ಮನೆಯಿಲ್ಲದವರಿಗೆ ಗಾಂಧಿ ಜಯಂತಿ ದಿನ ಉಣ ಬಡಿಸುವ ಅಪರೂಪದ ವ್ಯಕ್ತಿ ಡಾ.ವಸಂತ್‌.

ಶ್ರೀಕಂಠಯ್ಯ ತಾವರೆಕೆರೆ

ಶಿಕಾಗೋದ ಡೊಮಿನಿಕನ್‌ ವಿಶ್ವವಿದ್ಯಾಲಯದ ನಾಲೆಡ್ಜ್‌ ಮೇನೇಜ್‌ಮೆಂಟ್‌ ಸೆಂಟರ್‌ನ ನಿರ್ದೇಶಕ. ಕಾವೇರಿಯ ಮಾಜಿ ಅಧ್ಯಕ್ಷ. ಗೆಳೆಯರ ಬಳಗರದಲ್ಲಿ ಕಂಠಿ ಎಂದೇ ಫೇಮಸ್ಸು. ಎಎಸ್‌ಐಎಸ್‌ ಮೊನೋಗ್ರಾಫ್‌ ಸೀರೀಸ್‌ ಇವರ ಬೌದ್ಧಿಕ ನಿರ್ವಹಣೆ (Knowledge Management) ಕುರಿತಾದ ವೃತ್ತಿಪರ ಹೊತ್ತಗೆಯನ್ನು ಪ್ರಕಟಿಸಿದೆ. ಮೈಕೆಲ್‌ ಕೋಯಿಂಗ್‌ ಜೊತೆ ಪುಸ್ತಕವನ್ನು ಸಂಪಾದನೆ ಮಾಡಿದ ಅನುಭವ ಕಂಠಿ ಅವರದು. 1999ರಲ್ಲಿ ಪ್ರಕಟವಾದ ಇವರ ಪುಸ್ತಕ ಇವತ್ತಿಗೂ ಪ್ರಮುಖ ರೆಫರೆನ್ಸ್‌ ಸರಕು. ಬೌದ್ಧಿಕ ನಿರ್ವಹಣೆ ಕ್ಷೇತ್ರದ ಪರಿಣತರಲ್ಲಿ ಕಂಠಿ ಕೂಡ ಒಬ್ಬರು.

ವಿಜೇತರಿಗೆ ಅಭಿನಂದನೆಗಳು!

(ಇನ್ಫೋ ಇನ್‌ಸೈಟ್‌)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X