• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸೀಳ್ಗವನಗಳು’-ಒಂದು ಅಪೂರ್ವ ಕವನ ಸಂಕಲನ

By Staff
|

*ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

ಬಹುಮುಖ ಪ್ರತಿಭೆಯ ಕೋಟ ಶಿವರಾಮ ಕಾರಂತರು ಸಮೃದ್ಧ ಬರಹಗಾರರು. ಡಾ. ಕಾರಂತರು ಕಾದಂಬರಿಗಳನ್ನ, ನಾಟಕಗಳನ್ನ, ವೈಚಾರಿಕ ಸಾಹಿತ್ಯ ಪ್ರಬಂಧಗಳನ್ನ, ಹರಟೆ ವಿಡಂಬನೆಗಳನ್ನ, ಪ್ರವಾಸ ಕಥನಗಳನ್ನ, ಜೀವನ ಚರಿತ್ರೆಗಳನ್ನ, ಕೋಶ ವಿಶ್ವಕೋಶ ಬಾಲ ಪ್ರಪಂಚ ವಿಜ್ಞಾನ ಪ್ರಪಂಚ ಯಕ್ಷಗಾನ ಬಯಲಾಟದಂಥ ಪರಾಮರ್ಶನ ಉದ್‌ಗ್ರಂಥಗಳನ್ನ, ಅನುವಾದಗಳನ್ನ ಬರೆದವರೆಂದು, ಇವುಗಳಲ್ಲಿನ ಮೇರು ಕೃತಿಗಳಿಂದ ಕನ್ನಡ ಸಾಹಿತ್ಯ ಪರ್ವತ ಶ್ರೇಣಿಗಳಲ್ಲಿ ಉತ್ತುಂಗ ಶಿಖರಕ್ಕೆ ಏರಿ ನಿಂತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಇವರೆಂದು ಕನ್ನಡಿಗರು ಗುರುತಿಸುವುದನ್ನ ಸಾಮಾನ್ಯವಾಗಿ ನೋಡಿದ್ದೇವೆ. ಇಂಥವರು ಕಾವ್ಯ ಕ್ಷೇತ್ರದಲ್ಲೂ ಕೈಯಾಡಿಸಲಿಲ್ಲವೇ ? - ಎಂಬ ಮಾತು ಬರುವುದುಂಟು. ಉತ್ತರ : ಆಡು ಮುಟ್ಟದ ಸೊಪ್ಪಿಲ್ಲ ; ಕಾರಂತರು ತೊಡಗದ ಸಾಹಿತ್ಯ ಪ್ರಕಾರವಿಲ್ಲ !

ಕಾರಂತರ ಸೀಳ್ಗವನಗಳು ಈ ನನ್ನ ಪರಿಚಯಾತ್ಮಕ ಪ್ರಬಂಧದ ಉದ್ದೇಶ. ಗದ್ಯ ಬರಹಗಳಿಂದ ಪ್ರಖ್ಯಾತರಾದವರ ಪದ್ಯಪ್ರಯೋಗಗಳು ಅಚ್ಚರಿಯ ಮತ್ತು ಕುತೂಹಲದ ಸಂಗತಿಯಾಗಬಲ್ಲ ವಿಷಯವಾದುದರಿಂದ ಕಾರಂತರ ಈ ಅಪರಿಚಿತ ಮುಖವನ್ನು ಪರಿಚಯಮಾಡಿಕೊಳ್ಳಲು ಓದುಗರೊಂದಿಗೆ ಲೇಖಕನೂ ಇಲ್ಲಿ ಪ್ರಯತ್ನಿಸುತ್ತಿದ್ದಾನೆ.

ನಾನು ಈಗ ಏಕೆ ಕವನ ಬರೆಯತೊಡಗಿದೆ ?

ಓದುಗರು ಏನು ಕೇಳಿಯಾರೆಂಬ ಗುಮಾನಿ ಮೊದಲೇ ಕಾರಂತರಿಗೆ ಇದೆ. ಅದಕ್ಕೇ ಮುನ್ನುಡಿಯಲ್ಲೇ ಉತ್ತರಿಸಿ ಬಿಡುತ್ತಾರೆ. ‘ಬಹಳ ಕಾಲ ಗದ್ಯವನ್ನೇ ರೂಢಿಸಿಕೊಂಡು ಬಂದ ನಾನು ಈಗ ಏಕೆ ಕವನ ಬರೆಯ ತೊಡಗಿದೆ ಎಂದು ಯಾರಾದರೂ ಕೇಳಿದರೆ, ಹಿಂದೆ ಪದ್ಯರೂಪದಲ್ಲಿ ಸಾಕಷ್ಟು ಬರೆದಿದ್ದೆ ’ -ಎಂದೇನು. ಹಾಗೆ ಬರೆದ ನಾಟಕಗಳನ್ನು ಈಗ (1990) ಅಚ್ಚಿಗೂ ಕೊಟ್ಟಿರುವೆ. ಈ ದೀರ್ಘ ಅವಧಿಯಲ್ಲಿ ಕವಿಗಳ ಸಂಖ್ಯೆ ಹೆಚ್ಚಿದ್ದಷ್ಟೇ ಅಲ್ಲದೆ, ನನಗೆ ಏನೂ ಅರ್ಥವಾಗದವರನ್ನೂ ಕಂಡಾಗ - ಹೊಸಯುಗ ಬಂದ ಅರಿವಾಯಿತು. ಆ ಕಾರಣದಿಂದ ನೀಳ್ಗವನದ ಬದಲು ಸೀಳ್ಗವನ ಬರೆಯತೊಡಗಿದೆ....’(ಸೀಳ್ಗವನಗಳು ಮುನ್ನುಡಿ)

ಇಲ್ಲೇ ಚುರುಕು ಮುಟ್ಟಿಸುತ್ತಾರೆ, ‘ಅರ್ಥವಾಗದಂತೆ ಬರೆವುದನ್ನೇ ವಿಶಿಷ್ಠ ಕಾವ್ಯ ತಂತ್ರವೆಂದು ಭ್ರಮಿಸುವ ಪಂಡಿತಂಮನ್ಯರಿಗೆ ! ರಮ್ಯ, ನವೋದಯ, ನವ್ಯ, ಬಂಡಾಯ ಹೀಗೆ ಹಲವು ಘಟ್ಟಗಳನ್ನು ಮುಟ್ಟಿ ಹರಿಯ ತೊಡಗಿದ ಕಾವ್ಯವಾಹಿನಿ ಜನರ ಕೈಗೆ ಎಟುಕದ ಗುಪ್ತಗಾಮಿನಿ ಆದಾಗ ನೊಂದು ಸಿಡಿದ ಕಿಡಿನುಡಿ, ಅದು. ಒಳಗೆ ಏನಿದೆ ಎಂಬುದರ ಮುನ್ಸೂಚನೆ ಇಲ್ಲೇ ಸಿಕ್ಕಿ ಬಿಡುತ್ತೆ.

ವಿದೇಶ ಸಂಚಾರದ ವಿರಾಮಕಾಲದಲ್ಲಿ ರೂಪುಗೊಂಡ ಕವನಗಳು ಇವು- ಎಂದು ತಿಳಿದಾಗ ಇದೂ ಗಮನಾರ್ಹ ಅಂಶ ಎನಿಸದಿರದು.

‘ನಾನೇಕೆ ಬರೆಯುತ್ತೇನೆ ? ’ ಪ್ರಶ್ನೆಗೆ ‘ರವಿ ಕವಿಗಳಿಬ್ಬರಿಗೂ ಕಾಣಸಿಗದ ಕೆಲವು ವಸ್ತುಗಳನ್ನು ಈಗ ಪ್ರಕಟಿಸುತ್ತಿದ್ದೇನೆ’ ಎನ್ನುವ ಧೃಡ ವಿಶ್ವಾಸ ದಾರ್ಷ್ಟ್ಯ ‘ ಖಾರಾಂತ’ರದು. ಈ ಗ ‘ಸೀಳ್ಗವನಗಳೊ’ಳಗೆ ನುಗ್ಗೋಣ !

ಕಾವ್ಯದಿಂದ ಪ್ರಯೋಜನವಾದರೂ ಏನು ?

ತಮ್ಮ ತಾಯಿಗೆ ಕವನ ರೂಪದಲ್ಲಿ ಅರ್ಪಣೆಯ ತಿಲಕವಿಡುತ್ತ ಪ್ರಾರಂಭವಾಗುವ ಐವತ್ತೇಳು ಪದ್ಯಗಳ ಸಂಕಲನ ಈ ‘ಸೀಳ್ಗವನಗಳು’. ಸಾಹಿತ್ಯದ ಒಟ್ಟು ಪ್ರಯೋಜನವನ್ನು ಸಾಮಾನ್ಯೀಕರಿಸುತ್ತಾ, ಶತಮಾನಗಳ ಹಿಂದೆ, ಮಮ್ಮಟ ತನ್ನ ‘ಕಾವ್ಯ ಪ್ರಕಾಶ(1.2)ದಲ್ಲಿ ‘ ಕಾವ್ಯಂ ಯಶಸೇ, ಅರ್ಥಕೃತೇ, ವ್ಯವಹಾರವಿದೇ, ಶಿವೇತರ-ಕ್ಷತಯೇ, ಸದ್ಯ: ಪರ-ನಿರ್ವೃತಯೇ, ಕಾಂತಾ-ಸಂಮಿತತಯಾ ಉಪದೇಶಯುಜೇ’(ಕಾವ್ಯದಿಂದ ಪ್ರಯೋಜನವೇನು ? ಅದಿರುವುದು ಏಕೆ ? ಕೀರ್ತಿಗಳಿಸುವುದಕ್ಕಾಗಿ, ಧನಾರ್ಜನೆಯ ಸಲುವಾಗಿ, ವ್ಯವಹಾರ ಜ್ಞಾನ ಪಡೆಯಲು, ಅಮಂಗಳವನ್ನು ನಿವಾರಿಸಬಲ್ಲದೆಂದು ನಂಬಿ , ತತ್ಕಾಲದಲ್ಲೇ ಅತಿ ಸಂತೋಷ ಕೊಡುವ ಸಾಧನ ರೂಪದಲ್ಲಿ ಮತ್ತು ಮನದನ್ನೆಯಂತೆ ಸಮಯೋಚಿತ ಸಲಹೆ ನೀಡುತ್ತದೆಯೆಂದು)- ಎಂದಿದ್ದಾನೆ. ಇಲ್ಲಿ ಹೇಳಿರುವ ಕಾಂತಾಸಂಮಿತವನ್ನು ಮೀರಿ, ವಿಡಂಬನೆ, ವ್ಯಂಗ್ಯ, ಶತಾರಿ, ತರುಚುಗಬ್ಬ-ಗಳ ಪ್ರಯೋಗಗಳೂ ‘ಸೀಳ್ಗವನ’ಗಳಲ್ಲಿ ಪರಿಣಾಮಕಾರಿಯೇ ಆಗಿವೆ. ಪ್ರಾರಂಭದಲ್ಲಿಯೇ,

‘ಗದ್ಯ ಹೊಮ್ಮುವ ವಿಷಯ ಹೊಳೆಯದಿರಲಾಗ
ಪದ್ಯವನು ನೇಯಲ್ಕೆ ತೊಡಗಿದವರು’

ಪಡುವ ಕಷ್ಟವನ್ನು ಕಂಡು ಕವಿ ಮರುಗುತ್ತಾರೆ. ಮತ್ತು ‘ ವಾಗಾರ್ಥಪ್ರತಿಪತ್ತಿ’ಯನ್ನು ಅರಿಯದ ಆ ಹುಂಬರನ್ನು ‘ಧ್ವನ್ಯಾಲೋಕ’(1.7)ದ ಕಡೆ ಬೊಟ್ಟು ಮಾಡುತ್ತಾ ನೆನೆಯುತ್ತಾರೆ : ‘ಶಬ್ದಾರ್ಥ ಶಾಸನ- ಜ್ಞಾನಮಾತ್ರೇಣ ಏವ ನ ವೇದ್ಯತೆ । ವೇದ್ಯತೇ ಸ ಹಿ ಕಾವ್ಯಾರ್ಥ ತತ್ತ್ವಜ್ಞೈರ್‌ ಏವ ಕೇವಲಮ್‌ ।।’(ಅದು ವ್ಯಾಕರಣ ಕೋಶಗಳ ಜ್ಞಾನವಿದ್ದ ಮಾತ್ರಕ್ಕೆ ತಿಳಿವ ವಿಷಯವಲ್ಲ, ಅದು ಅರಿವಾಗುವುದು ಕಾವ್ಯಾರ್ಥದ ಹುರುಳನ್ನು ಯಾರು ಬಲ್ಲರೋ ಕೇವಲ ಅಂಥವರಿಗೆ ಮಾತ್ರಾ !) ಇಲ್ಲಿ ಇವರೋ,

‘ ತಮ್ಮ ಮಾತಿಗೆ ತಾವ ಅರ್ಥ ಕಾಣದ ಹೊತ್ತು
ಸುತ್ತಲೂ ಚೆಲ್ಲಿದರು- ಮಾತು ಮುತ್ತು!
ಬೆಳೆ ಚಿಗುರದನು ಕಂಡು, ಕಾಲು ಕಿತ್ತು,
ಥಟ್ಟನೇ ಏರಿದರು ಬೆಟ್ಟವೊಂದ!’
ಹತ್ತಿದ್ದಾದರೂ ಏಕೆ ? ಉದ್ದೇಶ ಘನವಾದದ್ದೇ-
‘ಕಣ್ಣೆಟುಕಿನಾ ತನಕ ಸಂದೇಶ ಸಾರೆ.’
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X