ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್‌

By Staff
|
Google Oneindia Kannada News

‘ಹಾಗೇ ಮುಂದೆ ಹೋದಾಗ.. ಸೇನಾ- ನಾಯಕ ಪಟ್ಟ ಕಟ್ಟುವ ಸಂದರ್ಭದ ಚಿತ್ರಣ. ಇಬ್ಬರೂ ಕವಿಗಳಲ್ಲೂ ಅಸಂತುಷ್ಟ ಕರ್ಣನನ್ನು ಕಾಣುತ್ತೇವೆ. ಪಂಪ ಮತ್ತು ಕುಮಾರವ್ಯಾಸ ಇಬ್ಬರಲ್ಲೂ ಕರ್ಣ ಭೀಷ್ಮರನ್ನು ತೆಗಳಿ ಹೀಗಳೆಯುವುದು ಇದ್ದರೂ ರೀತಿ ಇಬ್ಬರಿಗೂ ವಿಶಿಷ್ಟವಾಗಿದೆ. ಪಂಪನ ಕರ್ಣ ಮುತ್ತಮುದಿಪಂಗೆ ಪಟ್ಟ ಕಟ್ಟಿದೆಯೆಂದು ಗೆಳೆಯನ ಮೇಲೆ ಕೋಪಿಸಿಕೊಂಡರೆ, ಕುಮಾರವ್ಯಾಸನ ಕರ್ಣ ಅಲುಗುವ ಮಂಡೆಯ, ನರೆತ ಗಡ್ಡದ.. ಅಜ್ಜನಿಗೆ ಬಿಲ್ಲನ್ನೆತ್ತಲೂ ಆಗದು ಎಂದೂ ಹೀಗಳೆಯುತ್ತಾನೆ. ಇಲ್ಲಿ ಭೀಷ್ಮ ಕೊಡುವ ಉತ್ತರ ಬಹು ಮಾರ್ಮಿಕವಾದ್ದು . ರೂಪಕ ಚಕ್ರವರ್ತಿಯ ಇನ್ನೊಂದು ಚಳಕು ಇಲ್ಲಿದೆ. ಕಲಿತನದುರ್ಕು, ಜವ್ವನದ ಸೊರ್ಕು, ತೋಳ್ಬಲದ ಪೆರ್ಚು, ನಿಜೇಶನ ಮೆಚ್ಚು ... ನಿನಗಿಪ್ಪುದಲ್ಲದೆ ಎನಗಿರ್ಪುದೇ, ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೋಳ್‌ ಎನ್ನುವ ಆ ಮಹಾಜ್ಞಾನಿಯ ವಾಕ್ಯ ಜ್ಞಾನ ದೀವಿಗೆಯಂಥಾದ್ದು . ಈ ಜೀವನದಲ್ಲಿ ಸರದಿಯಂತೆ ಬಂದದ್ದನ್ನು ಸ್ವೀಕರಿಸಬೇಕೆನ್ನುವ ಅನುಭಾವಿಕ ಸತ್ಯವದು. ಇಂತಹ ಚುರುಕು ಸಂಭಾಷಣೆ, ಮಾತಿನ ಚಕಮಕಿ ಯುದ್ಧ ಘಟನೆಗಳ ಉದ್ದಕ್ಕೂ ಕಾಣುತ್ತೇವೆ, ಇದು ಕುಮಾರವ್ಯಾಸನ ವಿಶೇಷತೆ. ಪಂಪನಲ್ಲಿ ಭಾಷಣಗಳ ಗಂಭೀರತೆ ಕಂಡುಬರುತ್ತದೆ.

‘ಕೊನೆಗೆ ಪಂಪನ ಸುಯೋಧನ ಕರ್ಣನ ಗುಣಗಾನ ಮಾಡುವುದು ಮತ್ತೆ ಆತನ ಮತ್ತು ದೊರೆ ಅರಿಗನ ಸ್ನೇಹದ ತಳಹದಿಯತ್ತ ಬೆಟ್ಟು ಮಾಡುತ್ತದೆ. ಕರ್ಣ ರಸಾಯನಮೀ ಭಾರತಂ.., ಕರ್ಣ ಮುಂಪುಟ್ಟೆ ಪುಟ್ಟಿತು ಚಾಗ.. ಎಂದು ಮುಂತಾಗಿ ಹಾಡಿ ಹೊಗಳಿ, ಅಶ್ವತ್ಥಾಮನೊಡನೆ ನಿನ್ನಿಂದ ತ್ರಿಭುವನ ರಾಜ್ಯಂ ದೊರಕುವೊಡೆ ಬೇಡೆನಗೆ.. ಎನ್ನುತ್ತಾನೆ, ಸತ್ತು ಸ್ವರ್ಗದಲ್ಲಿರುವ ತನ್ನ ಮಿತ್ರನ ಬಗ್ಗೆ ಒಡಕು ಮಾತಾಡಬೇಡವೆಂದು ಸಿಡಿಯುತ್ತಾನೆ. ಇಂತಹ ಸ್ನೇಹಗಾಢತೆ ನಾವು ವ್ಯಾಸರಲ್ಲಾಗಲಿ ಕುಮಾರವ್ಯಾಸನಲ್ಲಾಗಲಿ ಕಾಣುವುದಿಲ್ಲ . ಕರ್ಣನ ಕಥೆ ಕಣ್ಣೀರ ಕಥೆ, ಕರುಣೆಯ ಕಥೆ.

ಕಾವ್ಯ ದರ್ಶನವೂ ಕವಿ ದರ್ಶನವೂ..

ಮೂಲ ಭಾರತದ ಸ್ವರ್ಗಾರೋಹಣ ಪರ್ವದಲ್ಲಿ ವ್ಯಾಸರು ತೋರುವ ದರ್ಶನಕ್ಕೆ ಕುಮಾರವ್ಯಾಸ ತುಸುಮಟ್ಟಿಗೆ ಸಾಟಿಯಾಗಿ ನಿಲ್ಲಬಲ್ಲನಾದರೂ ಆ ನೆಲೆಯಲ್ಲಿ ಪಂಪ ಸೋಲುತ್ತಾನೆ. ಲೌಕಿಕ ಕಾವ್ಯವೆಂದು ಹೇಳಿ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪಂಪ ತಾನು ಆದಿಪುರಾಣದಲ್ಲಿ ತೋರಿದ ಭಕ್ತಿಯನ್ನು ಇಲ್ಲಿ ತೋರಲಾಗದೇ ಹೋಗುತ್ತಾನೆ. ಇದರಿಂದಾಗಿ ಅತಿಮಾನುಷನಾದ ಕೃಷ್ಣನನ್ನು ಆ ವ್ಯಕ್ತಿತ್ವವನ್ನು ತನ್ನ ಕಾವ್ಯದಲ್ಲಿ ಸಮರ್ಥವಾಗಿ ಅಳವಡಿಸಲಾಗದೆ, ಚಿತ್ರಿಸಲಾಗದೆ ಹೋಗುತ್ತಾನೆ. ಕೃಷ್ಣನನ್ನು ದೇವನಾಗಿ ಚಿತ್ರಿಸಿದ್ದರೂ, ವಿಶ್ವರೂಪ ದರ್ಶನ ಮಾಡಿಸಿದ್ದರೂ ಭಕ್ತಿಯ ಕೋಡಿ ಹರಿಸಿಲ್ಲ , ಪವಾಡ ಸದೃಶ ಕಾರ್ಯ ಮಾಡಿಸಿಲ್ಲ . ಮಾನವನ ನೆಲೆಯಲ್ಲಿ ನಿಂತ ಕಾವ್ಯ ದೈವತ್ವವನ್ನು ತಲುಪಲಿಲ್ಲ . ವ್ಯಾಸರ ದಿವ್ಯ ದರ್ಶನಕ್ಕೆ ಸಾಟಿಯಾಗಿ ನಿಲ್ಲುತ್ತಾನೆ ಕುಮಾರವ್ಯಾಸ. ಭಕ್ತಿಯ ತೀವ್ರತೆಯಲ್ಲಿ ಭಗವದ್ದರ್ಶನ ಮಾಡಿಸುವಲ್ಲಿ ಆತ ಅದ್ವಿತೀಯ.’

‘ಪಂಪ, ಕುಮಾರವ್ಯಾಸ ಇಬ್ಬರೂ ಕಾಲದ ದೃಷ್ಟಿಯಿಂದ 400 ವರ್ಷಗಳ ವ್ಯತ್ಯಾಸದಲ್ಲಿದ್ದವರು. ವ್ಯಾಸರ ಕಥೆಯನ್ನು ಮೂಲವಾಗಿ ತೆಗೆದುಕೊಂಡರೂ ಅದರ ವಿಸ್ತರಣೆಯಲ್ಲಿ ತಮ್ಮ ದೃಷ್ಟಿಗೆ ತಕ್ಕ ಸೃಷ್ಟಿಯನ್ನು ಮಾಡುವಲ್ಲಿ ಸ್ವಾತಂತ್ರ್ಯವನ್ನು ತೆಗೆದುಕೊಂಡಿದ್ದಾರೆ, ತಮ್ಮ ತಮ್ಮ ಸ್ವೋಪಜ್ಞತೆಯನ್ನು ಮೆರೆದಿದ್ದಾರೆ. ಒಂದೊಂದು ವಿಶಿಷ್ಟ ಸನ್ನಿವೇಶಗಳನ್ನೂ ಕೂಡಾ ಅತ್ಯಂತ ಸುಂದರವಾದ ಪ್ರತಿಮೆ, ರೂಪಕಗಳನ್ನು ನಿರ್ಮಾಣ ಮಾಡಿ ಓದುಗರನ್ನು ಚೇತೋಹಾರಿಗಳನ್ನಾಗಿ ಮಾಡಿದ್ದಾರೆ. ಕುಮಾರವ್ಯಾಸ ಕೊನೆಗೆ ನರನಾರಾಯಣನ ಕಥೆಯನ್ನು ಹೇಳಿದ್ದೇನೆ... ಕೃಷ್ಣನ ಕಥೆಯನ್ನು ಹೇಳಿದ್ದೇನೆ.. ಇದರಲ್ಲಿ ಅಕ್ಷರಮಾತ್ರ ಕೇಳಿದವರಿಗೂ ಮೋಕ್ಷ ಪ್ರಾಪ್ತಿಯಾಗಲಿ.. ಎಂದು ಹೇಳಿದ್ದಾನೆ. ಹೀಗೆ ಅವನು ಲೌಕಿಕದಿಂದ ಪರಮಾರ್ಥಕ್ಕೆ ದಾರಿ ತೋರಿದ್ದಾವೆ. ’ ಎನ್ನುತ್ತಾ ತಮ್ಮ ಮಾತುಗಳನ್ನು ಮುಗಿಸಿದ ಡಾ.ಸಾ.ಶಿ ಮರುಳಯ್ಯ ಅವರು ಮಂತ್ರಮುಗ್ಧ ಶೋತೃವೃಂದವನ್ನು ಭಾರತಲೋಕಕ್ಕೆ ಕರೆದೊಯ್ದಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಹುಲಿಕಲ್‌ ವಿಶ್ವನಾಥ್‌, ಅಲ್ಲಿ ನೆರೆದಿದ್ದ ಕನ್ನಡಿಗರ ಸ್ನೇಹದ ಕಾಣಿಕೆಯನ್ನೂ, ಕನ್ನಡ ಬಳಗದ ಬೆನ್ನೆಲುಬು ಆಗಿರುವ ವಿದ್ವಾನ್‌ ಗಜಾನನ ಜೋಶಿಯವರು ಪ್ರಧಾನ ಸಂಪಾದಕರಾಗಿ ಬರೆದ ಮತ್ತು ಹುಲಿಕಲ್‌ ವಿಶ್ವನಾಥ್‌ ಬರೆದ ಕೆಲವು ಪುಸ್ತಕಗಳನ್ನೂ , ಕನ್ನಡ ಬಳಗದ ಪರವಾಗಿ, ಮರುಳಯ್ಯನವರಿಗೆ ಅರ್ಪಿಸಿದರು. ಹರಿಹರೇಶ್ವರ ಅವರು ನಿರ್ವಹಿಸಿದ ಈ ಕಾರ್ಯಕ್ರಮವನ್ನು ನಾಗಲಕ್ಷ್ಮಿ ಹರಿಹರೇಶ್ವರ ಅವರು ವಂದನಾರ್ಪಣೆಯಾಂದಿಗೆ ಮುಕ್ತಾಯಗೊಳಿಸಿದರು. ಮೃಷ್ಟಾನ್ನ ಭೋಜನದ ಬಳಿಕ ಸಹೃದಯರು ಮನೆಗೆ ಮರಳಿದರು!

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X