ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಣ್ಯಕಶಿಪುವಿನ ಕರುಳು ಬಗೆದು ಮಾಲೆ ಹಾಕಿಕೊಂಡ ಎಂಬಲ್ಲಿಗೆ..

By Super
|
Google Oneindia Kannada News

ಪುರಾಣಗಳ ರೀತ್ಯ ಹಿರಣ್ಯ ಕಶಿಪು, ದಿತಿ- ಕಶ್ಯಪರ ಪುತ್ರ. ಇವ ಅಡಿ ಇಟ್ಟರೆ ನಡುಗುತ್ತಿತ್ತು, ಭೂಮಿ, ತಲೆ ಎತ್ತಿದರೆ ನಡುಗುತ್ತಿತ್ತು ಬಾನು. ಇಂದ್ರ.. ಚಂದ್ರ.. ದೇವೇಂದ್ರಾದಿಗಳೆಲ್ಲ ತತ್ತರಿಸಿ ಇವನ ಪಾದದಡಿ ಬಿದ್ದಿದ್ದರು. ಆದರೆ... ಇವನ ಮಗ, ಇವ ಸಾಕಿದ ಮಗ, ಹರಿನಾಮ ಸಂಕೀರ್ತನೆ ಮಾಡುತ್ತಾ.. ಹಿರಣ್ಯ ಕಶಿಪುವಿನ ಪ್ರಾಣಕ್ಕೇ ಮುಳುವಾದ, ನರಸಿಂಹಾವತಾರಕ್ಕೆ ಕಾರಣನಾದ.

ನನಗೊಂದು ಡೌಟ್‌ ಬಹಳ ದಿನದಿಂದ ಕಾಡುತ್ತಿದೆ. ಶ್ರೀಮನ್ನಾರಾಯಣ ಹತ್ತು ಅವತಾರ ಎತ್ತಿದ್ದೂ.. ದುಷ್ಟ ಶಿಕ್ಷಣೆಗಾಗಿ ಹಾಗೂ ಶಿಷ್ಟ ರಕ್ಷಣೆಗಾಗಿ. ಅದಕ್ಕೇ ಅಲ್ಲವೇ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಯುದ್ಧಭೂಮಿಯಲ್ಲಿ ಹೀಗೆ ಹೇಳಿದ್ದು..

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯತ್ಥಾನಮಧರ್ಮ ಸ್ಯ ತದಾತ್ಮಾನಂ ಸೃಜಾಮ್ಯಹಮ್‌ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್‌
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ

ಅದೆಲ್ಲಾ ಸರಿ, ಪುರಾಣಗಳ ಪ್ರಕಾರ ಹಿರಣ್ಯ ಕಶಿಪು, ಹಿರಣ್ಯಾಕ್ಷ .. ಶಾಪಗ್ರಸ್ತರಾದ ವೈಕುಂಠದ ಗೇಟ್‌ ಕೀಪರ್‌ಗಳು ಅರ್ಥಾತ್‌ ದ್ವಾರಪಾಲಕರು. ಇವರ ಹಿಂದಿನ ಹೆಸರು ಜಯ ಮತ್ತು ವಿಜಯ. ಮುನಿಗಳ ಕೋಪಕ್ಕೆ ಗುರಿಯಾದ ಇವರು ಭೂಮಿಯಲ್ಲಿ ಹುಟ್ಟುವುದು ಅನಿವಾರ್ಯವಾಯಿತು.

ಆಗ ನಾರಾಯಣನೇ ಇವರಿಗೆ ಎರಡು ಆಪ್‌ಷನ್‌ ಕೊಟ್ಟ. 1. ದೈವಭಕ್ತರಾಗಿ ನನ್ನ ನಾಮ ಸ್ಮರಣೆ ಮಾಡುತ್ತಾ ಭೂಮಿಯಲ್ಲಿ 7 ಜನ್ಮ ಎತ್ತುತ್ತೀರೋ.. ಇಲ್ಲ.. ನನ್ನ ಶತ್ರುಗಳಾಗಿ 3 ಜನ್ಮ ಎತ್ತುತ್ತೀರೋ ಅಂತ.

ಜಯ ವಿಜಯರು ಅರ್ಜೆಂಟಾಗಿ ವೈಕುಂಠಕ್ಕೆ ವಾಪಸ್‌ ಆಗೋ ಆತುರದಲ್ಲಿ ಶತ್ರುಗಳಾಗೇ ಹುಟ್ಟುತ್ತೇವೆ ಅಂದ್ರು. ಇವರನ್ನು ರಾಕ್ಷಸರನ್ನಾಗಿ ಮಾಡಿದ್ದೂ, ನಾರಾಯಣನೇ. ಅವರನ್ನು ಕೊಲ್ಲಲು ಭೂಮಿಗೆ ಬಂದಿದ್ದೂ ಅವನೆ. ಅಲ್ಲ ವಿಷ್ಣುಗೆ ಈ ಅಗತ್ಯವಾದ್ರೂ ಏನಿತ್ತು...?

ನಮಗೇಕೆ ಬಿಡಿ, ನದಿ ಮೂಲ, ಗುರು ಮೂಲ, ದೈವ ಮೂಲ.. ಎಲ್ಲ ಹುಡುಕಬಾರದು.. ಶಾಂತಂ ಪಾಪಂ...

ಹಿರಣ್ಯ ಕಶಿಪು : ಅಂದಹಾಗೆ ಹಿರಣ್ಯ ಕಶಿಪು ಮರತೇ ಹೋದನಲ್ಲ. ಈತ ಮಹಾನ್‌ ಶೂರನೂ ವೀರನೂ ಆದ ರಕ್ಕಸ. ಬ್ರಹ್ಮನ ಕುರಿತು ಘೋರ ತಪಸ್ಸು ಮಾಡಿ ದೇವರಿಂದಾಗಲೀ, ಪ್ರಾಣಿಗಳಿಂದಾಗಲೀ, ಮನುಷ್ಯರಿಂದಾಗಲೀ, ಹಗಲಾಗಲೀ, ಇರುಳಾಗಲೀ, ಮನೆಯ ಹೊರಗಾಗಲೀ, ಒಳಗಾಗಲೀ, ಯಾವುದೇ ಆಯುಧದಿಂದಾಗಲೀ ತನಗೆ ಸಾವು ಬಾರದಂತೆ ವರ ಪಡೆದ.

ವರಬಲದಿಂದ ಬಲಿಷ್ಠನಾದ ಆತ ದೇವಲೋಕಕ್ಕೂ ನುಗ್ಗಿ, ದೇವೇಂದ್ರನ ಹೆಡೆಮುರಿಕಟ್ಟಿದ. ರಾಜ್ಯಭ್ರಷ್ಟರನ್ನಾಗಿ ಮಾಡಿದ. ಇವನ ವಿಕಟಾಟ್ಟಹಾಸ ಯಾವ ಮಟ್ಟಕ್ಕೆ ಹೋಯಿತೆಂದರೆ, ಇನ್ನು ಮುಂದೆ ತನ್ನ ರಾಜ್ಯದಲ್ಲಿ ಯಾರೂ ದೇವರನ್ನು ಪೂಜಿಸಲೇಬಾರದು. ತಾನೇ ದೇವರು ಎಂದು ಘೋಷಿಸಿದ. ಎಲ್ಲ ದೇವಾಲಯಗಳಲ್ಲೂ ತನ್ನ ಮೂರ್ತಿಯನ್ನೇ ಪ್ರತಿಷ್ಠಾಪಿಸಿದ.

ಯಜ್ಞ ಯಾಗಾದಿಗಳನ್ನು ಮಾಡುವ ಋಷಿ ಮುನಿಗಳಿಗೆ ಕಾಟಕೊಟ್ಟ. ಇಷ್ಟಾದ ಮೇಲೆ ಆತನ ಪಾಪದ ಕೊಡ ತುಂಬಿದಂತೆಯೇ ಅಲ್ಲವೇ.. ಅಷ್ಟೊತ್ತಿಗೆ ಆತನ ಮಗ ಪ್ರಹ್ಲಾದ ಮಹಾನ್‌ ವಿಷ್ಣುಭಕ್ತನಾಗಿದ್ದ. ಊರನ್ನೇ ಹೆದರಿಸಿದ ಹಿರಣ್ಯ ಕಶಿಪು, ತನ್ನ ಮಗನಿಗೆ ಬುದ್ಧಿ ಹೇಳದಾದ.

ಮಗನಿಗೆ ಅಂಟಿಕೊಂಡಿದ್ದ ನಾರಾಯಣನ ಹುಚ್ಚನ್ನು ಬಿಡಿಸಲು, ಆನೆಯ ಕೈಲಿ ತುಳಿಸಿದ. ಬೆಟ್ಟದಿಂದ ಕೆಳಗೆಸೆದ. ಕೊನೆಗೆ ಹೆತ್ತ ತಾಯಿ ಅರ್ಥಾತ್‌ ತನ್ನ ಧರ್ಮಕಾಂತೆಯಿಂದ ಮಗನಿಗೆ ವಿಷಪ್ರಾಶನವನ್ನೂ ಮಾಡಿಸಿದ. ಕೊಲ್ಲುವವನ ಒಬ್ಬನಾದರೆ, ಕಾಯುವವ ಮುಕ್ಕೋಟಿ. ಮಹಾವಿಷ್ಣು ಪ್ರಹ್ಲಾದನ ರಕ್ಷಿಸಿದ.
ಪ್ರಹ್ಲಾದನೋ ಶ್ರೀಮನ್ನಾರಾಯಣ ಎಲ್ಲೆಲ್ಲೂ ಇರುವನೆಂದ. ಕೋಪಗೊಂಡ ಹಿರಣ್ಯಕಶಿಪು, ಹಾಗಾದರೆ ತನ್ನ ಅರಮನೆಯ ಕಂಬದಲ್ಲಿ ನಾರಾಯಣನ ತೋರಿಸೆಂದ. ದೃಢ ಭಕ್ತಿಯಲಿ ಪ್ರಹ್ಲಾದನು ಶ್ರೀಮನ್ನಾರಾಯಣನ ಜಪಿಸಿದಾಗ, ಸಡಗರದಿ ಕಂಬದಿಂದೊಡೆದು ಹೊರಬಂದ ಉಗ್ರನರಸಿಂಹ ತನ್ನ ಪರಮ ಭಕ್ತನಾದ ಪ್ರಹ್ಲಾದನಿಗೆ ದರ್ಶನವಿತ್ತಿದಲ್ಲದೆ...

ಹಿರಣ್ಯಕಶಿಪು ಪಡೆದ ವರಕ್ಕೆ ಚ್ಯುತಿಯಾಗದಂತೆ, ಹಗಲೂ ಅಲ್ಲದ ರಾತ್ರಿಯೂ ಅಲ್ಲದ (ಸೂರ್ಯಾಸ್ತವಾಗುವ) ಹೊತ್ತು ಮುಳುಗುವ ಹೊತ್ತಿನಲ್ಲಿ , ಮನೆಯ ಒಳಗೂ ಅಲ್ಲದ ಹೊರಗೂ ಅಲ್ಲದ ಸ್ಥಳದಲ್ಲಿ ಅಂದರೆ ಮುಂಬಾಗಿಲ ಹೊಸಲಿನ ಮೇಲೆ, ದೇವರಾಗಲೀ, ಮನುಷ್ಯನಾಗಲೀ ಅಲ್ಲದ ರೂಪದಲ್ಲಿ ಅಂದರೆ ಅರ್ಧ ಸಿಂಹ ಹಾಗೂ ಅರ್ಧ ನರ ಒಟ್ಟಾರೆಯಾಗಿ ನರಸಿಂಹಾವತಾರದಲ್ಲಿ, ಯಾವುದೇ ಆಯುಧಗಳ ನೆರವಿಲ್ಲದೆ ಕೇವಲ ಕೈ ಉಗುರ ನೆರವಿನಿಂದ ಹಿರಣ್ಯಕಶಿಪುವಿನ ಕರುಳು ಬಗೆದು ಮಾಲೆ ಹಾಕಿಕೊಂಡ ಎಂಬಲ್ಲಿಗೆ ಲೋಕಕಂಠಕನಾದ ಹಿರಣ್ಯ ಕಶಿಪುವಿನ ಅಧ್ಯಾಯವು ಸಮಾಪ್ತಂ.

English summary
Hiranya KashipuA mythological character broght to modern day kannada books !
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X