• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರಕ್ಕೆ ಮಹಾ ವಟವೃಕ್ಷಕೆ, ಬೇಲಿ ಕಟ್ಟುವವರೂ ಇಲ್ಲುಂಟು

By Staff
|

ಇಲ್ಲಿ ಕೆಲವರಿಗೆ ‘ಬೆಳೆದು ನಿಂತ ಮರಕ್ಕೆ ಮಹಾ ವಟವೃಕ್ಷಕೆ, ಬೇಲಿ ಕಟ್ಟುವ ಬಯಕೆ’ ; ಇನ್ನು ಕೆಲವರಿಗೆ,

‘ಇದ್ದಕ್ಕಿದ್ದಂತೆ
ಹುತಾತ್ಮರಾಗುವ ಬಯಕೆ.
ಅದಕ್ಕೆ, ಕಂಡ ಕಂಡದ್ದಕ್ಕೆ
ಹರಿ ಹಾಯ್ದು ಗುದ್ದುತ್ತಾರೆ;
ಆದರೂ ಹೋಗುವುದಿಲ್ಲ ಪ್ರಾಣ
ಒಂದಷ್ಟು ಕಡಿಮೆಯಾಗುತ್ತದೆ
ಮೈಯಾಳಗಣ ತ್ರಾಣ!’
(-‘ಕೆಲವರಿಗೆ’, ‘ಕಾಡಿನ ಕತ್ತಲಲ್ಲಿ’ ಕವನ ಸಂಕಲನ)


ಮತ್ತೂ ಕೆಲವರದು ಇನ್ನೊಂದು ತರಹೆಯ ಕೋಳಿಜಂಭ :

‘ತಮ್ಮ ಸ್ವಿಚ್ಚಿನಿಂದಲೇ
ಎಲ್ಲ ಬಲ್ಬುಗಳು ಹತ್ತುತ್ತವೆಂದು
ಕತ್ತಲಲ್ಲೇ ತಡಕಾಡುತ್ತ
ನೆಟ್ಟ ನಡುರಾತ್ರಿ ಮೆಟ್ಟಿಲು ಹತ್ತಿ
ಮನೆಯ ಬಾಗಿಲು ಬಡಿದು
ನಿದ್ದೆ ಕೆಡಿಸುತ್ತಾರೆ!’
(-‘ನಮ್ಮವರು’, ‘ಗೋಡೆ’ ಕವನ ಸಂಕಲನ)

ಇವರನ್ನ ಕಂಡು ಕವಿಗೆ ತುಂಬಾ ಮರುಕ :

‘ಎಂಥ ಹುಚ್ಚು ಜನರು ಇವರು?
ಕೊಚ್ಚೆಯನ್ನೆ ಕಾಂಬರು!
ಕೊಚ್ಚೆಯುಂಡು, ದಡದಿ ಬೆಳೆದ
ಹಚ್ಚ ಹಸುರು ಕಾಣರು!
ಹಚ್ಚ ಹಸುರ ಬಣ್ಣಿಸಿದರೆ
ಅದು ಕಲ್ಪನೆ ಎಂಬರು!
ನಾರುತಿರುವ ಕೊಚ್ಚೆಯನ್ನೆ ಪರಮ ಸತ್ಯವೆಂಬರು!’

(‘ಜನರು’, ‘ದೀಪದ ಹೆಜ್ಜೆ’ ಕವನ ಸಂಕ ಲನ)

ಕೊಚ್ಚೆಯಲ್ಲಿ ಸದಾ ಮುಳುಗಿ ಎದ್ದು ತೇಲುತಿರುವವರಿಗೆ ಅದೇ ಅಪ್ಯಾಯಮಾನ. ಕತ್ತಲಲ್ಲೇ ಹುಟ್ಟಿ ಬದುಕುತ್ತಿರುವ, ಕತ್ತಲೇ ಪರಮ ಪ್ರಿಯವಾದ ಜಂತುಗಳಗೆ ಬೆಳಕು ಪ್ರಾಣಾಂತಿಕ ವಿಷ. ಅದಿರಲಿ, ‘ಗೊತ್ತಿಲ್ಲ ಎಂಬುದೇ ಗೊತ್ತಿಲ್ಲ’ ದಂಥವರನ್ನು ಹೇಗೆ ಸುಧಾರಿಸುವುದು? ಗೊತ್ತಿದ್ದೂ ಬದಲಾಯಿಸಿಕೊಳ್ಳಲೊಲ್ಲದವರ ಬಗ್ಗೆ ಏನು ಹೇಳುವುದು?

‘ಧರ್ಮವೆಂಬುದದೇನು ಗೊತ್ತುಂಟು, ಬಿಡು ಬಿಡು।
ನನಗಲ್ಲಿ ಪ್ರವೃತ್ತಿ ಕೊಂಚವೂ ಇಲ್ಲವೇ ಇಲ್ಲ ।
ಅಧರ್ಮವೇನು ಅದೂ ಬಲ್ಲೆ , ಸುಮ್ಮನಿರು।
ಅದರಿಂದ ನನಗಿನಿತೂ ನಿವೃತ್ತಿಯಿಲ್ಲವಲ್ಲ !।।’


(‘ಧರ್ಮಂ ತು ಜಾನಾಮಿ ನ ಚ ಮೇ ಪ್ರವೃತ್ತಿ : ।
ಅಧರ್ಮಂ ಹಿ ಜಾನಾಮಿ, ನ ಚ ಮೇ ನಿವೃತ್ತಿ : ।।’
- ಮಹಾಭಾರತ)

ಎನ್ನುವ ಜನಕ್ಕೆ ಏನು ತಾನೆ ತಲೆ ಚಚ್ಚಿಕೊಳ್ಳುವುದು? ಇಲ್ಲಿ ನೆನಪಿಗೆ ಬರುತ್ತೆ. ಪ್ರೊಫೆಸರ್‌ ಗೋಪಾಲಕೃಷ್ಣ ಅಡಿಗರ ಈ ‘ನನ್ನ ಅವತಾರ’ ಕವನ :

‘ರಾಮನ ಬಳಿ ಇದ್ದೆ ನಾನು...
ಉಳಿದೆ ನಾನು, ಆಗಲೂ, ಈಗ ಇಲ್ಲಿ ಕೊಳೆವೊಲು.
ಕೃಷ್ಣನೊಡನೆ ಗೋಕುಲದಲಿ ನಾನು ಕೂಡ ಬೆಣ್ಣೆ ಕದ್ದು
ಗೋಪಿಯರ ಸೆರಗು ಹಿಡಿದು ಕಾಡುತಿದ್ದೆ ನಿತ್ಯವೂ-
ಅವನೋ ಯೋಗಿರಾಜನಾದ...
ನಾನೋ ಸುಣ್ಣಕಲ್ಲಿನಂತೆ ಕೆಸರ ನಡುವೆ ಉಸಿರು ಕಟ್ಟಿ
ಪಾಚಿ ಕಟ್ಟೆ ಕಾಯುತಿದ್ದೆ-
ಭೋಗರಾಜ, ರೋಗರಾಜ-
ಆಗಿನಂತೆ ಈಗಲೂ...
(ಬುದ್ಧನ ಬಳಿಯೂ ಸಹ)
ಕೆಂಡದ ಬಳಿ ಇದ್ದೂ ಕೂಡ ಈ ಇದ್ದಲು ಇತ್ತು ಹಾಗೆ...
ನಾನ್‌ ಅಚ್ಯುತ, ನಾ ನಿರ್ಜರ, ನಾನೆ ಅದ್ವಿತೀಯ!’
(-ಗೋಪಾಲಕೃಷ್ಣ ಅಡಿಗ, ‘ನನ್ನ ಅವತಾರ’)ರಾಮ, ಕೃಷ್ಣ, ಬುದ್ಧ, ಗಾಂಧಿ- ಇಂಥವರೆಲ್ಲರ ಜೊತೆಗೆ ಜೊತೆಗೆ ಇದ್ದರೂ, ಅವರಂತೆ ಮೇಲೆ ಏರದೆ, ಕೆಳ ಕೆಳಕ್ಕೇ ಇಳಿದು ಹೋದವರನ್ನ ಹಂಗಿಸುವ ಮೋಡಿ ಇದು.

ಹೀಗಾದಾಗ, ಅವರು
‘ನೂರು ದಾರಿಗಳ ಜೇಡ ಜಾಲದಲಿ
ದಿಕ್ಕು ತಪ್ಪುತ ಅಲೆದು
ಇದೆ ಪ್ರಗತಿಯೆಂದು ಕರೆದು
ತಡೆಕಾಡುತಿಹುದು ಮನುಕುಲವು ನೋಡು
ಆ ಜ್ಯೋತಿ ಪಥವ ಮರೆದು !’
(-‘ದಾರಿ’, ‘ದೇವಶಿಲ್ಪ’ ಕವನ ಸಂಕಲನ)

- ಎಂದು ದಾರಿ ತಪ್ಪಿದವರ ಬಗ್ಗೆ ಮರುಕಪಡುತ್ತಾರೆ, ತಮ್ಮ ಅಳಲನ್ನ ತೋಡಿಕೊಳ್ಳುತ್ತಾರೆ, ಕೂಡ.

ಕನ್ನಡಿಗರ ಅಭಿಮಾನ- ಶೂನ್ಯತೆಯ ಬಗ್ಗೆ ಕವಿಯ ಆಕ್ರೋಶವನ್ನು ‘ಕನ್ನಡ ಕುಲಬಾಂಧವರ ಸ್ವಾಗತ ಗೀತೆ’ (‘ಗೋಡೆ’ ಕವನ ಸಂಕಲನ) ಚೆನ್ನಾಗಿ ಮನದಟ್ಟಾಗಿಸುತ್ತದೆ. ಓರೆ ಕೋರೆಗಳತ್ತ ಇಷ್ಟೆಲ್ಲ ಬೊಟ್ಟು ಮಾಡಿ ತೋರಿಸಿದರೂ, ಸುಮ್ಮನೆ ಸಿನಿಕ್‌ ಆಗಿ, ದೂಷಣೆ ಮಾಡುವುದೇ ಈ ಕವನಗಳ ಹಿನ್ನೆಲೆ ಆಗಿಲ್ಲ ; ಪರಿಹಾರದ ಸೂಚನೆಗಳೂ ಇವೆ: ನಿದರ್ಶನಕ್ಕೆ ಈ ‘ಹಾರೈಕೆ’(‘ಅನಾವರಣ’ ಕವನ ಸಂಕಲನ)ಯನ್ನು ಗಮನಿಸಿ:

ಹಾರೈಕೆ

ಕಣಿವೆ ತಳದೊಳು ಕೊಳೆವ ಜೊಂಡಾಗದಿರು ಮಗುವೆ,
ಬೆಟ್ಟಗುಡ್ಡವ ಹೀರಿ ತೇಗವಾಗು.
ತಲೆಯ ಬಾಗದೆ ನಿಂತು, ಕೊಂಬೆ ರೆಂಬೆಯ ಚಾಚಿ
ಮಳೆ- ಬಿಸಿಲು- ಗಾಳಿಗಳ ತೊಟ್ಟಿಲಾಗು.


ಕಡಲೆಡೆಗೆ ತುಡಿವೆದೆಯ ಹತ್ತು ದಿಕ್ಕಿಗೆ ಹರಿಸಿ
ಯಾವುದೋ ‘ಸಹರ’ ದಲಿ ಇಂಗಿಸದಿರೋ.
ತಂಗು ಒಂದೆಡೆ ನೀನು, ಅಣೆಕಟ್ಟುಗಳ ಕಟ್ಟು,
ಸುತ್ತ ಬಂಜರು ನೆಲವ ಹಸುರಾಗಿಸೋ.


ಹಸುರು ಹಾವಸೆಹಬ್ಬಿ ಕೊಳೆವ ಕೊಳವಾಗದಿರು
ಲಲಿತ ನಿರ್ಮಲ ಜಲದ ಕಾಸಾರವಾಗು.
ರವಿಕಿರಣ ಮಿಡಿದಿರಲು, ಮೀನು-ಹೂ-ಹಕ್ಕಿಗಳ
ದುಂಬಿಗುಂಜಾರವದ ಸ್ವರಮೇಳವಾಗು.


ಸದ್ಯಕ್ಕೆ ಬೇಡ ಬಿಡು ದೂರ ಗಿರಿನೆತ್ತಿಗಳ
ಮಂಜಿನಾಚೆಗೆ ನಿಂತು ಕರೆವ ತಾರೆ.
ಇರುವ ಹಣತೆಗೆ ಮೊದಲು ಎಣ್ಣೆ ಬತ್ತಿಯನೂಡು,
ಹಳೆಯ ಪಣತದ ಕಾಳ ಮಾಡದಿರು ಸೂರೆ.


ಕಣ್ಣೆತ್ತಿಯೂ ನೋಡದಿರು ಈ ದೊಡ್ಡವರ ಸಣ್ಣ-
ತನದತ್ತ ; ಬಿಟ್ಟುಬಿಡು ಅವರನ್ನು ಅತ್ತ ಕಡೆಗೆ,
ಕೆಟ್ಟ ಇಟ್ಟಿಗೆಯಿಂದ ಕಟ್ಟದಿರು ಹೊಸ ಮನೆಯ,
ನಾಳಿನಾಸೆಯ ಶಿಖರ ನೀನೆ ನಮಗೆ !
(- ಜಿ.ಎಸ್‌.ಎಸ್‌., ‘ಅನಾವರಣ’ ಕವನ ಸಂಕಲನ).ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X