ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ. ಜಿ.ಎಸ್‌.ಎಸ್‌. ಅವರ ಕಾವ್ಯ ಕುಸುಮಗಳನ್ನ ನೋಡೋಣ

By Staff
|
Google Oneindia Kannada News

ಗುಲಾಬಿಗಳ ಸನಿಹದಲ್ಲಿನ ಮುಳ್ಳುಗಳನ್ನ ಮೆಲ್ಲಗೆ ಮುಟ್ಟೋಣ : ಈ ಕವಿಯ ಎಲ್ಲ ಕವನಗಳಲ್ಲೂ ಕಾಣ ಬರುವ ಕಮನೀಯತೆ, ಮಾರ್ದವತೆಯ ಭದ್ರ ಪ್ರಾಕಾರವನ್ನು ಭೇದಿಸಿಕೊಂಡು, ಒಳ ನುಗ್ಗಿ ನೋಡಬೇಕಾಗಿದೆ- ವಿಷಾದ ವಿಡಂಬನೆಯ ಉರಿ ಎಲ್ಲಿ ಹೆಡೆಯಾಡುತ್ತಿದೆ ಎಂಬುದನ್ನ ಕಾಣಲು.

ಜೀವನದಲ್ಲಿ ಸಾಮಾನ್ಯವಾಗಿ ಎಲ್ಲರೂ, ಒಂದಲ್ಲ ಒಂದು ಬಾರಿ ಅನುಭವಿಸುವ, ಒಂದು ಸತ್ಯವನ್ನು ನೋವಿನ ಚುಳುಕನ್ನ, ಮಾರ್ಮಿಕವಾಗಿ ಗುರುತಿಸುತ್ತಾರೆ. ಜಗತ್ತೇ ನಿಂತಿರುವುದು, ನಂಬಿಕೆಯ ಬುನಾದಿಯ ಮೇಲೆ ; ಅದೇ ಕುಸಿದರೆ?

‘ನಂಬಿದವರೇ ನಮಗೆ
ಕಾರುವರು ವಿಷದ ಹೊಗೆ
ಆಂತರ್ಯದೊಳಗೆ ;
ಹೂವೆಂದು ಅಪ್ಪಿದೆನು ;
ಹಾವಾಗಿ ಬಿಸುಗುಟ್ಟಿ ,
ಹೆಡೆಯೆತ್ತಿತು.
ಒಲವೆಂದು ನಂಬಿದೆನು ;
ಹಗೆತನದ ಹೊಗೆಯಿದ್ದು /
ಪ್ರಜ್ವಲಿಸಿತು...
ಇದು ದೈವದಾಟ!’
(-‘ಆಟ’ ; ‘ಸಾಮ-ಗಾನ’ ಕವನ ಸಂಕಲನ)

- ಎಂದು ಬಿಸುಸುಯ್ಯುತ್ತಾರೆ, ಅವರು. ಎಲ್ಲಿ ತಪ್ಪು ಹೆಜ್ಜೆ ಇಟ್ಟೆ ? ಏನೋ ನನ್ನದೇ ತಪ್ಪೇ ? ಮನುಷ್ಯನದು ಆರು ಬಗೆ ಚಿಂತೆಯಾದರೆ, ದೈವದ ಚಿಂತನೆ ಬೇರೊಂದು ತಾನೇ- ಎಂಬ ಹುಸಿ ಸಮಾಧಾನ!

ಆದರೆ, ದೇಶೋದ್ಧಾರಕರಿಗಿಂತ ದೋಷೊದ್ಧಾರಕರೇ ಜಾಸ್ತಿ ತುಂಬಿರುವ ಈ ಜಗತ್ತಿನಲ್ಲಿ , ಇನ್ನೊಬ್ಬರ ಒಳಿತನ್ನ , ಉನ್ನತಿಯನ್ನ ಸಹಿಸದ ‘ಹಿತ-ಶತ್ರು’ಗಳ ಲೇವಡಿ ಮಾಡಲು ಅವರಿಗೆ ಸಂಕೋಚವಿಲ್ಲ :

‘ಚೆನ್ನಾಗಿ ನಡೆವ ಹೊಚ್ಚ ಹೊಸ ಯಂತ್ರಕ್ಕೆ
ಸದ್ದಿರದ ಒಂದೇ ಒಂದು ಹಿಡಿ ಮರಳು ಸೇವೆಯ ಸಲಿಸಿ,
ನಸು ನಿಲ್ಲುವ ಭಾವುಕ’
(ದೋಷೋದ್ಧಾರಕ, ‘ತೆರೆದ ಬಾಗಿಲು’ ಕವನ ಸಂಕಲನ)

ಇಂಥವರನ್ನು ಕಂಡು ಉರಿದೇಳುತ್ತಾರೆ. ಹುಡುಕುವುದೇನೂ ಬೇಡ- ಎನ್ನುತ್ತಾರೆ. ಯಾರನ್ನ ಹುಡುಕುವುದು? ನಂಬಿ, ನಮ್ಮನ್ನ ಆಳಲು ಚುನಾಯಿಸಿಕೊಂಡ ಆ ಮುತ್ಸದ್ಧಿಯನ್ನೇ ? ಭವ್ಯ ಭಾರತದ ಭಾವೀ ಅಸಮಂಜನನ್ನೇ ?

‘ನಮ್ಮೀ ಜನಗಣಮನ ಅಧಿನಾಯಕ/ಎಲ್ಲಿದ್ದಾನೆ?
ಇದ್ದಾನೆ; ಇಲ್ಲೇ ಇದ್ದಾನೆ :
ಕೈಯಲ್ಲಿ ಕಲ್ಲನು ಹಿಡಿದಿದ್ದಾನೆ
ಬೀದಿ ದೀಪಗಳ, ಕಿಟಕಿ ಗಾಜುಗಳ
ಒಡೆದಿದ್ದಾನೆ ;
ಬಸ್ಸಿಗೆ ಬೆಂಕಿ ಹಚ್ಚಿದ್ದಾನೆ;
ಪುಸ್ತಕಗಳ ಎಸೆದಿದ್ದಾನೆ, ಮನೆಗಳ ಮುರಿದಿದ್ದಾನೆ;
ಹೂಗಳ ಹೊಸಕಿದ್ದಾನೆ;
ವರುಷಕ್ಕೊಂದೆರಡಾದರೂ
ಲಂಕಾದಹನದ ನಾಟಕ ಆಡುತ್ತಾನೆ...
ಎಚ್ಚರವಾಗಿರು...
‘ಜಯ ಹೇ’ ಅನ್ನದೇ ಇದ್ದರೆ
ನಿನಗೂ ಯಾರೆಂಬುದ ಕಾಣಿಸುತ್ತಾನೆ !’
(‘ಜನಮಣಮನ ಅಧಿನಾಯಕ’, ‘ಗೋಡೆ’ ಸಂಕಲನ)

ಸುತ್ತಲೂ ಇಂಥ ಮಹಾನುಭಾವರೇ ಇರುವಾಗ, ಲೋಕವೇ ‘ಹೊಗಳು-ಭಟ್ಟರ ಸಂತೆ’ ಆಗಿದ್ದಾಗ, ಕೇಳಿಲ್ಲವೇ?

‘ಅತಿ ಸುಲಭವೋ, ಓ ರಾಜ,
ಸತತವೂ ನಿನಗೆ ಹಿತವಾದುದನೇ ಹೇಳಿ,
ಸಿಕ್ಕಾರು ಖುಷಿ ಪಡಿಸುವ ಜನ ಧಂಡಿ, ಧಂಡಿ ;
ಅಪ್ರಿಯವಾದರೂನೂ ಅದು ನಿಜವಿರಲು ಹಾಗೆಂದು
ನಿನಗೆ ಹೇಳುವವನೂ ಸಿಗನು;
ಕೇಳುವವನಂತೂ ಲೋಕದೊಳು ಹುಡುಕಿದರೂ ಸಿಗಲಾರ!’
(ಸುಲಭಾ: ಪುರುಷಾ: ರಾಜನ್‌, ಸತತಂ ಪ್ರಿಯವಾದಿನ: ।
ಅಪ್ರಿಯಸ್ಯ ಸತ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭ:।।)
- ಎನ್ನುವುದನ್ನ ?
‘ಆದರ್ಶ- ಗೀದರ್ಶ/ ಬರಿ ಬಣಗು ಕಂಥೆ/
ಪುಸ್ತಕದ ಬದನೆಕಾಯಿ ತಿನ್ನುವುದಕ್ಕೆ ಬಂತೆ’
(‘ಇದು ಲೋಕವಂತೆ’, ‘ದೇವಶಿಲ್ಪ’ ಕವನಸಂಕಲನ)

ಎನ್ನುವಂತೆ ಪರಿಸ್ಥಿತಿ ಬಿಗಡಾಯಿಸಿದಾಗ, ‘ದೊಡ್ಡಪ್ಪ ಹೇಳಿದ್ದು’ ನೆನಪಾಗುತ್ತೆ , ಕವಿಗೆ :

‘ಅಯ್ಯಾ ಮರಿ, /ನೀನು ಕುರಿಯಾಗು/
ಇಲ್ಲಾ ನರಿಯಾಗು!...
ತೋರಣಕ್ಕೆ ತಂದ ತಳಿರ ಮೇಯುತ್ತ
ಹಾಯಾಗಿ ಇರಬಹುದು’

‘ಸಾಗಿದ್ದೇ ಗುರಿಗಳಾದ’ ಕುರಿಗಳಾಗಿ ; ಇಲ್ಲವೇ ನರಿಗಳಾಗುವ ಐಚ್ಛಿಕವೂ ಇದೆ! ಪಂಚತಂತ್ರದ ಕತೆಯಲ್ಲಿನ ಕರಟಕ ದಮನಕರಾಗಿ ಊಳಿಗದೂಟಕ್ಕೆ ಚಪ್ಪರಿಸುವ ನಾಲಗೆಯವರಾಗಬಹುದು.

‘ಮೃಗರಾಜನಾಸ್ಥಾನದಲಿ...
ತಿಂದೆಸೆದ ಸಿಂಹಪಾಲಿಗೆ ಬಾಧ್ಯಸ್ಥನಾಗಿ/

ಹದ್ದುಗಳ ಜೊತೆಗೆ ಹಾಯಾಗಿ ಬದುಕಲೂ ಬಹುದು ’
(-‘ದೊಡ್ಡಪ್ಪ ಹೇಳಿದ್ದು’, ‘ಗೋಡೆ’ ಕವನ ಸಂಕಲನ).

ಬೆಳಕು ಗಾಳಿ ಎಲ್ಲ ಕಡೆಯಿಂದ ಬರಲೆಂದು (‘ಆ ನೋ ಭದ್ರಾ: ಕ್ರತವೋ ಯನ್ತು ವಿಶ್ವತ: ।।’) ಮನಸ್ಸಿನ ಎಲ್ಲ ಕಿಟಕಿಗಳನ್ನು ತೆರೆದಿಡುವ ಪರಿಪಾಠ ಕಡಿಮೆಯಾಗುತ್ತಿದೆ. ಏಕೆನ್ನುತ್ತೀರೋ? ಈಗೀಗ ಬದುಕೆಲ್ಲ ಒಂದು ರೀತಿಯ ಗಡಿನಾಡಿನ ಯುದ್ಧ ಆಗಿಬಿಟ್ಟಿದೆಯಲ್ಲ !

‘ಜಾತಿಯ ಗಡಿ, ನೀತಿಯ ಗಡಿ,
ದೇಷದ ಗಡಿ, ಭಾಷೆಯ ಗಡಿ,
ವರ್ಣದ ಗಡಿ, ಪಂಥದ ಗಡಿ,
ಹೆಜ್ಜೆ ಹೆಜ್ಜೆಗೂ ಒಳಗೂ ಹೊರಗೂ
ಗಡಿ ಗುರುತಿನ ಗೆರೆ ಗೋಡೆ,
ಕಾವಲು ನಿಂತಿರುವರು ಪಂಡಿತರೂ ಶಾಸ್ತ್ರಿಗಳೂ
ಸೈನಿಕರೂ ಎಲ್ಲ ಕಡೆ..
ಒಡೆದಿರುವೀ ಕನ್ನಡಿ ಬಿರುಕಿನ ಗೆರೆಗೆರೆಯೇ
ಗಡಿರೇಖೆಯ ಗರುಟು
ಕಾಣುವುದೆಂತೀ ಸಮಗ್ರ ಮಾನವ್ಯದ ಮುಖವಿದರೊಳು
ಬರಿ ವಿಕೃತಿಯ ಹೊರತು? ’
(-‘ಒಡೆದ ಕನ್ನಡಿ’, ‘ತೆರೆದ ದಾರಿ’ ಕವನ ಸಂಕಲನ)


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X