• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಅನುವಾದವನ್ನು ಎಷ್ಟರಮಟ್ಟಿಗೆ ಕಬ್ಬಿಣವಾಗಿಸಬಹುದೆಂದರೆ...

By Staff
|

ಸುಲಭವಾಗಿ ಅರ್ಥವಾಗಬಲ್ಲ ಒಂದು ಸಂಸ್ಕೃತ ಶ್ಲೋಕವನ್ನು ಎಷ್ಟು ಕಷ್ಟಪಟ್ಟು ಕನ್ನಡಿಸಿ, ಕಠಿಣಗೊಳಿಸಬಹುದು ಎನ್ನುವುದಕ್ಕೆ ಈ ‘ನೀತಿದರ್ಪಣ’(1893)ರ ಉದಾಹರಣೆಯನ್ನು ಗಮನಿಸಿ :

‘ಕವಿವರ ಕಾಲಿದಾಸನ ಕವಿತ್ವದೆ ತೋರುಗುಮುತ್ತಮೋಪಮಾ।
ಕವನದೆ ದಂಡಿಯೆಂಬನೊಳಗುಂಟು ಪದೋನ್ನತ ಸುಂದರತ್ವಮಾ।
ಭುವನ ನುತಾರ್ಹ ಭಾರವಿಯಾಳರ್ಥದ ಗೌರವಮೈದೆ ರಾಜಿಕುಂ।
ನವರಸಯುಕ್ತ ಮಾಘದೊಳಗೀ ತ್ರಿಗುಣಂಗಳುಮಿರ್ಪವೀಕ್ಷಿಕುಂ।।’
(‘ಉಪಮಾ ಕಾಲಿದಾಸಸ್ಯ, ಭಾರವೇರ್‌ ಅರ್ಥಗೌರವಮ್‌।
ದಂಡಿನ : ಪದಲಾಲಿತ್ಯಂ, ಮಾಘೕ ಸನ್ತಿ ತ್ರಯೋ ಗುಣಾ: ।।’ ಎಂಬುದರ, ‘ವೃತ್ತ’ರೂಪಕ್ಕೆ ಕಟ್ಟುಬಿದ್ದ , ಕೆಟ್ಟ ಭಾಷಾಂತರ, ಇದು!)

ಆದರೆ, ಇಂಥದನ್ನೆಲ್ಲಾ ಸಹಿಸಲಾರದೇ, ಶತ್ರು ಪಾಳ್ಯಕ್ಕೇ ನುಗ್ಗಿ, ಅವರದೇ ಆಯುಧದಿಂದ ಅವರನ್ನು ಪ್ರಹರಿಸುವ (ಅಥವಾ ‘ಚುಚ್ಚುವ’) ಕೆಲಸವನ್ನ ಮಾಡಲು, ತಮ್ಮ ಪುಸ್ತಕದಲ್ಲಿನ ‘ತುರುಚು-ಗಬ್ಬ’ಗಳ ಮೂಲಕ ಕ್ರಾಂತಿಯ ಬಿರುಗಾಳಿಯನ್ನೆಬ್ಬಿಸುವುದಕ್ಕೆ ‘ಪುರುಷ-ಸರಸ್ವತಿ’ಯ ಶ್ರೀ ರಾಜರತ್ನಂರವರಿಗಾಗಿ ಕನ್ನಡ ಕಾಯಬೇಕಾಯಿತು.

ಇಲ್ಲೊಂದು ಮಾತು : ವಿಡಂಬನೆಗಳನ್ನು ಕ್ರೀಡಾ ಮನೋಭಾವದಿಂದ ಸ್ವಾಗತಿಸುವ ಔದಾರ್ಯ ಓದುಗನಲ್ಲಿ ಇರಬೇಕು. ರಾಜಕೀಯ ವಿಡಂಬನೆಗಳನ್ನ , ಸಾಮಾಜಿಕ ಟೀಕೆಗಳನ್ನ ಎಲ್ಲವನ್ನೂ ತಮಗಾಗಿ ಬರೆದಿರಬಹುದೆಂಬ, ವೈಯಕ್ತಿಕವಾಗಿ ಅನ್ವಯಿಸಿಕೊಳ್ಳುವ ಅಸಹಿಷ್ಣುತೆ ಇರಬಾರದು. ಹೆಗಲನ್ನು ಮುಟ್ಟಿಕೊಳ್ಳಬೇಕಾದ ಅವಶ್ಯಕತೆ ಬೀಳಬಾರದು. ಉದಾಹರಣೆಗೆ, ಒಂದು ಸಂಸ್ಕೃತದ ‘ಚಾಟು’ವನ್ನು ಗಮನಿಸಿ :

ಮರಗಳ ನೋಡಿ, ಕಲಿ ಕಲಿ, ಪಾಠವ ;
ತಗ್ಗದೆ ಬಗ್ಗದೆ ಬೆಳೆದರೆ ಅಪಾಯ ;
ನೆಟ್ಟಗೆ ಎತ್ತರ ಬೆಳೆದುದ ಕಡಿವರು-
ಕುಗ್ಗಿದ ಜಗ್ಗಿದುದನಲ್ಲೇ ಬಿಡುವರು!
(ನ ಅತ್ಯನ್ತ ಸರಳೈರ್‌ ಭಾವ್ಯಂ, ಗತ್ವಾ ಪಶ್ಯ ವನಸ್ಥಲೀಂ ;
ಛಿದ್ಯನ್ತೇ ಸರಳೈಸ್‌ ತತ್ರ, ಕುಬ್ಜಾಸ್‌ ತಿಷ್ಠನ್ತಿ ಪಾದಪಾ : ।।)
(-ಸಮಯೋಚಿತ ಪದ್ಯಮಾಲಿಕಾ)

ಇದನ್ನು ಓದಿದ ವಾಮನರಾಯರು, ಆಕಾಶರಾಯರೂ ಕೆಂಡ ಕಾರಬಾರದು, ಬುದ್ದಿಯಿಲ್ಲದೆ ಗದ್ದುಗೆ ಹತ್ತಿದವರನ್ನು ಕುರಿತು ಕಟಕಿ ‘ಚುಟುಕ’ ಗಳುಂಟು; ಉದಾಹರಣೆಗೆ ಒಂದು :

(ಬುಡ ಭದ್ರವೇನಿರದ ಗದ್ದುಗೆಯನೇರಿರುವ
ತಲೆಯಿರದ ಮುಕುಟ ಧರಿಸಿರುವವರ ಓಲೈಸಬಹುದೇ?
ಅದು ಕತ್ತಿಯಲಗನು ನೆಕ್ಕಿ /ಸಿಂಹವನು ಬಿಗಿದಪ್ಪಿ /
ಸರ್ಪಿಣಿಯ ಮುಖಕೊಮ್ಮೆ ಮುತ್ತಿಕ್ಕಿದಂತೆ!
(ರಾಜಸೇವಾ ಮನುಷ್ಯಾಣಾಂ ಅಸಿಧಾರಾ- ಅವಲೇಹನಮ್‌ ;
ಪಂಚಾನನ- ಪರಿಶ್ವನ್ಜೋ ವ್ಯಾಲೀ- ವದನ- ಚುಂಬನಮ್‌।।
- ನೀತಿರತ್ನ)

ಅಧಿಕಾರಿಗಳೆಲ್ಲ ಇದಕ್ಕೆ ಮೂಗು ಮುರಿಯಬಾರದು. ಗೇಲಿ ಮಾಡುವ ಉದ್ದೇಶ ಅನುಭವಜನ್ಯ ಸಿದ್ಧಾಂತವಾಗಿರಬಹುದು ಇನ್ನೊಂದಕ್ಕೆ ;

ಸಾಹಿತ್ಯ- ಸಂಗೀತ- ಕಲಾ ವಿಹೀನರುಗಳು ಎಲ್ಲ
ಸಾಕ್ಷಾತ್‌ ಪಶುಗಳೇನೇ, ಕೇವಲ ಕೊಂಬು ಬಾಲವೊಂದಿಲ್ಲ !
‘ಹುಲ್ಲನ್ನೇನೂ ಅವರು ತಿನ್ನರಲ್ಲ’- ಎನ್ನುವಿರಾ ನೀವು?
ಅದು ಉಳಿದ ಹಸುಕರುಗಳ ಪುಣ್ಯ ಅಲ್ಲವೇನು ?
(ಸಾಹಿತ್ಯಸಂಗೀತಕಲಾವಿಹೀನ : ಸಾಕ್ಷಾತ್‌ ಪಶು : ಪುಚ್ಛವಿಷಾಣಹೀನ:। ತೃಣಂ ನ ಖಾದನ್ನಪಿ ಜೀವಮಾನ :, ತದ್‌ ಭಾಗದೇಯಂ ಪರಮಂ ಪಶೂನಾಮ್‌।। ಭರ್ತೃಹರಿ, ನೀತಿಶತಕ)

ಕಲೆಗೇಕೆ ಖರ್ಚು ಎನ್ನುವವರಿಂದ ಇದಕ್ಕೆ ಕೊಳೆತ ಟೊಮೆಟೋ/ಮೊಟ್ಟೆ ಎಸೆತದ ಪ್ರತಿಕ್ರಿಯೆ ಬೇಡ! ಸಾಮಾನ್ಯವಾಗಿ ಸುಭಾಷಿತಗಳ ಕೆಲಸವೂ ಕೆಲವೊಮ್ಮೆ ತಿವಿದು ಹೇಳುವುದೇನೇ. ಇದನ್ನು ನೋಡಿ :

ವಿದ್ಯೆ ವಿವಾದಕ್ಕೆ, ಹಣ ಸೊಕ್ಕಿ ಮೆರೆಯಲಿಕೆ,
ಶಕ್ತಿ ಇರುವುದು ಪರರ ಪೀಡಿಸಲು- ಖಳಗೆ;
ಸಜ್ಜನಗೋ ಬೇರೆ ಇವುಗಳಿಂದುಪಯೋಗ-
ಜ್ಞಾನಕ್ಕೆ, ದಾನಕ್ಕೆ ಮತ್ತು ರಕ್ಷಣೆಗೆ!
(ವಿದ್ಯಾ ವಿವಾದಾಯ, ಧನಂ ಮದಾಯ ;
ಶಕ್ತಿ : ಪರೇಷಾಂ ಪರಿಪೀಡನಾಯ।
ಖಲಸ್ಯ; ಸಾಧೋರ್‌ ವಿಪರೀತಂ ಏತತ್‌,
ಜ್ಞಾನಾಯ, ದಾನಾಯ ಚ ರಕ್ಷಣಾಯ।।
-ಭವಭೂತಿ, ಗುಣರತ್ನ)

‘ಬುರುಡೆ’ಗಳಂಥ ನಿರರ್ಥಕ ಪದ್ಯಗಳೂ ವ್ಯಂಗ್ಯ ಕವನಗಳ ನೆರಳಿನಲ್ಲಿ ಕುಣಿಯಬಹುದು ; ಆದರೆ, ಲಂಗು ಲಗಾಮಿಲ್ಲದೆ ಹಾರುವ ವೇಳೆಯಲ್ಲಿ ಅವು ನಮಗೆ ತಗುಲಿದರೆ ಮುನಿಸಿಕೊಳ್ಳಬಾರದು !

ಕೊನೆಯಲ್ಲಿ ಒಂದು ಮಾತು : ಹಂಗಿಸಿ, ಚುಡಾಯಿಸಿ, ಲೇವಡಿ ಮಾಡಿ, ನೇರವಾಗಿ ಕಾಣುವಂತೆಯೋ, ಶಾಲಿನಲ್ಲಿ ಸುತ್ತಿಯೋ ಎಸೆದಂತೆ ಕವಿ ಬರೆಯಬಹುದು (‘ನೆಹರೂ ನಿವೃತ್ತರಾಗುವುದಿಲ್ಲ ! ಇನ್ನು ಗಾಳಿ ಬೀಸಬಹುದು... !’ಎಂದಂತೆ!) ಆದರೆ, ಬಿಟ್ಟ ಬಾಣ ದಪ್ಪ ಚರ್ಮಕ್ಕೆ ಚುಚ್ಚದೇ ಹೋದರೆ, ಆವಾಗ ಹೇಳಿಕೊಳ್ಳಬೇಕಾಗುತ್ತೆ :

‘ಮುನ್ನ ನಾ ಮಾಡಿದ ಪಾಪದ ಫಲವ ಹೇಗೆ ಬೇಕೋ ಹಾಗೆ
ಬರೆ ನನ್ನ ಹಣೆ ಮೇಲೆ, ಸಹಿಸುವೆನು ಹೇಗೋ ಏನೋ ;
ಆದರೊಂದೇ ಬಿನ್ನಹ, ಬ್ರಹ್ಮ, ಬರೆಯದಿರು, ಬರೆಯದಿರು-
ರಸಿಕರಲ್ಲದವರೆದುರು ಕಾವ್ಯ ನಿವೇದನೆಯನು !’
(ಇತರ ಪಾಪಫಲಾನಿ ಯಥೇಚ್ಛಯಾ ಲಿಖಿತಾನಿ ಸಹೇ, ಚತುರಾನನ !
ಅರಸಿಕೇಷು ಕವಿತ್ವನಿವೇದನಂ ಮಾ ಲಿಖ, ಮಾ ಲಿಖ, ಮಾ ಲಿಖ !
- ಮಹಾಭಾರತ)


ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more