ಕವಿ ಜಿ.ಎಸ್. ಶಿವರುದ್ರಪ್ಪ ಅಮೆರಿಕಾ ಪ್ರವಾಸ
(ವಿಶೇಷ ವರದಿ)
ಬೆಂಗಳೂರು: ಎದೆ ತುಂಬಿ ಹಾಡಿದೆನು ಅಂದು ನಾನು.... ಎಂದ ಸಾಹಿತಿ ಪ್ರೊ. ಜಿ.ಎಸ್. ಶಿವರುದ್ರಪ್ಪ ಅವರು ಇದೇ ತಿಂಗಳು ಅಮೆರಿಕಾ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಜೂನ್ 26ರಂದು ಬೆಂಗಳೂರನ್ನು ಬಿಡುವ ಅವರು, 27ರಂದು ಸ್ಯಾನ್ಫ್ರಾನ್ಸಿಕೋ ತಲುಪಲಿದ್ದಾರೆ.
ಬಂಧು - ಮಿತ್ರರೊಂದಿಗೆ ಕೆಲ ಕಾಲ ಕಳೆಯಲು ಬಯಸಿರುವ ಜಿ.ಎಸ್.ಎಸ್.ರ ಕಾರ್ಯಕ್ರಮ ಪಟ್ಟಿಯಲ್ಲಿ ಹಲವು ಕನ್ನಡ ಸಂಘಗಳ ಭೇಟಿಯಷ್ಟೇ ಅಲ್ಲದೆ ಕ್ಯಾಲಿಫೋರ್ನಿಯಾ ಪ್ರದೇಶದ ಸ್ಯಾನ್ಜೋಸ್ನಲ್ಲಿ ನಡೆಯಲಿರುವ ವೀರಶೈವ ಸಮಾವೇಶದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮವೂ ಇದೆ.
ಉತ್ತರ ಅಮೆರಿಕೆಯಲ್ಲಿರುವ ವೀರಶೈವ ಸಮಾಜ (ಮುಕ್ಕಾಲು ಭಾಗ ಜೂನ್ 30 ಹಾಗೂ ಜುಲೈ 1ರಂದು ) ಈ ವಾರ್ಷಿಕ ಸಮಾವೇಶ ಏರ್ಪಡಿಸಿದೆ. ವಾಸ್ತವವಾಗಿ ಪ್ರೊ. ಜಿ.ಎಸ್.ಎಸ್. ಅಮೆರಿಕೆಗೆ ಹೋಗುತ್ತಿರುವುದೂ ವೀರಶೈವ ಸಮಾಜದ ಅಧಿಕೃತ ಅಹ್ವಾನದ ಮೇಲೆ. ಅವರೇ ಸಮಾವೇಶದ ಮುಖ್ಯ ಅತಿಥಿ.
27ರಂದು ಸ್ಯಾನ್ಫ್ರಾನ್ಸಿಸ್ಕೋ ತಲುಪುವ ಅವರು, ಅಲ್ಲಿಂದ ಫೀನಿಕ್ಸ್ಗೆ ತೆರಳಿ ಗೆಳೆಯರೊಡನೆ ಕೆಲ ಕಾಲ ಕಳೆದು, ಅಲ್ಲಿನ ಕನ್ನಡ ಸಂಘಕ್ಕೆ ಭೇಟಿ ಕೊಡುತ್ತಾರೆ. ಆನಂತರ ವಾಷಿಂಗ್ಟನ್ನಲ್ಲಿ ತಮ್ಮ ಬಂಧುಗಳ ಮನೆಯಲ್ಲಿ ಒಂದೆರಡು ದಿನವಿದ್ದು, ನ್ಯೂಜೆರ್ಸಿ - ಫಿಲಿಡೆಲ್ಫಿಯಾದ ಕನ್ನಡ ಸಂಘದ ಸೌಹಾರ್ದ ಸಮ್ಮಿಲನ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಾರೆ.
ಇದು ಜಿ.ಎಸ್.ಎಸ್. ಅವರ ಮೂರನೇ ಅಮೆರಿಕಾ ಯಾತ್ರೆ. ಈಗಾಗಲೇ ಎರಡು ಬಾರಿ ಅಮೆರಿಕೆಗೆ ಹೋಗಿ ಬಂದಿರುವ ಅವರಿಗೆ ಅಲ್ಲಿ ನೂರಾರು ಗೆಳೆಯರಿದ್ದಾರೆ, ಅಭಿಮಾನಿಗಳೂ ಇದ್ದಾರೆ. ಅವರೊಂದಿಗೆ ಆತ್ಮೀಯವಾಗಿ ಕೆಲ ದಿನ ಕಳೆಯುವುದು ಕವಿಯ ಹೆಬ್ಬಯಕೆ.
ಈ ಎಲ್ಲ ಕಾರ್ಯಕ್ರಮಗಳ ನಡುವೆ ಪ್ರಮುಖವಾಗಿ ವೀರಶೈವ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ನೆನಪಿಗೆ ಹೊರತರುತ್ತಿರುವ ಸ್ಮರಣ ಸಂಚಿಕೆಗೆ ‘ರಿಲವೆನ್ಸ್ ಆಫ್ ಶರಣ ಮೂಮೆಂಟ್’ ಎಂಬ ವಿಷಯದ ಮೇಲೆ ಪುಟ್ಟ ಪ್ರಬಂಧವೊಂದನ್ನೂ ಅವರು ಬರೆದು ಕಳುಹಿಸಿದ್ದಾರೆ.
ತಮ್ಮ ಅಮೆರಿಕ ಪ್ರವಾಸದ ವಿವರಗಳನ್ನು ಭಾನುವಾರ ಕನ್ನಡ.ಇಂಡಿಯಾ ಇನ್ಫೋಗೆ ನೀಡಿದ ಪ್ರೊ.ಜಿ.ಎಸ್.ಎಸ್., ಅಮೆರಿಕದ ಹಲವು ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸೂಚನೆಯನ್ನೂ ನೀಡಿದರು.
ವಿ.ಸೂ : ಅಮೆರಿಕೆಯಲ್ಲಿ ನಡೆಯಲಿರುವ ವೀರಶೈವ ಸಮಾವೇಶದ ಸಂದರ್ಭದಲ್ಲಿ ಕನ್ನಡ.ಇಂಡಿಯಾಇನ್ಫೋ.ಕಾಂ ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ.
Warm welcome to Prof. G.S. Shivarudrappa
What do you think about this article
ಜಿಎಸ್ಎಸ್ - ಬದುಕಿಗೆ ಬದ್ಧವಾದ ಹಾಡುಹಕ್ಕಿ
ಮೇಷ್ಟ್ರು ವ್ಯಾಪಾರಿಯಾಗುತ್ತಿದ್ದಾರೆ - ಪ್ರೊ. ಜಿಎಸ್ಎಸ್ ವಿಷಾದ