ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಕ್ಟರಾದ ಮೇಲೆ.... ಪುಟ-3

By Staff
|
Google Oneindia Kannada News

ಹೌ ಮಚ್‌ ಈ ಟೂ ಮಚ್‌ ?

ಬಹಳ ಸೂಕ್ಷ್ಮವಾದ ಪ್ರಶ್ನೆ. ನಾನು ಎರಡು ತುತ್ತ ತುದಿಗಳನ್ನು ಮಾತ್ರ ಉದಾಹರಿಸಿದ್ದೇನೆ. ಮೊದಲನೆಯದಾಗಿ, ವೈದ್ಯಕೀಯದ ತಂತ್ರಜ್ಞಾನದ ಆಧುನಿಕತೆ ವ್ಯಾಪಕವಾಗಿ ಲಭ್ಯವಿರುವ ಈ ಕಾಲದಲ್ಲಿ ಆ ತಂತ್ರಜ್ಞಾನಕ್ಕೂ ಒಂದು ಮಿತಿಯಿದೆ ಎಂದು ಸಾಮಾನ್ಯ ರೋಗಿಗೂ ಅರ್ಥವಾಗುವುದು ಯಾವಾಗ ? ಅದೂ ಇವೆಲ್ಲಕ್ಕೊಂದು ಆರ್ಥಿಕ ಚೌಕಟ್ಟು ಇಲ್ಲದಿದ್ದಾಗ. ಗುಣವಾಗದ ಕಾಯಿಲೆಯಿರುವ ಎಂಬತ್ತು ವರುಷದ ಮುದುಕಿಯ ಜರ್ಝರಿತ ದೇಹವನ್ನು ಎಷ್ಟುದಿನ ಎಳೆಯಲು ಸಾಧ್ಯ ? ದೇಹಕ್ಕಿರುವುದು ಕ್ಯಾನ್ಸರ್‌. ಈಗಿರುವ ತುರ್ತು ಕಾಯಿಲೆ ನ್ಯುಮೋನಿಯ. ಆಕೆ ಸಾಯುತ್ತಿರುವುದು ನ್ಯುಮೋನಿಯಾದಿಂದಲೇ ಹೊರತು ಕ್ಯಾನ್ಸರ್‌ನಿಂದಲ್ಲ. ಆದ್ದರಿಂದ ನ್ಯುಮೋನಿಯಾ ಗುಣಪಡಿಸಲು ಎಲ್ಲ ರೀತಿಯ ಚಿಕಿತ್ಸೆಯನ್ನು ನೀನು ಮಾಡು. ಅದು ಜೀವವನ್ನುಳಿಸುವ ವೆಂಟಿಲೇಟರ್‌ಗೆ ಹಾಕುವಂತಹ ಸೂಕ್ಷ್ಮ ಕ್ರಿಯೆಯಾದರೂ ಪರವಾಗಿಲ್ಲ ಎಂದು ರೋಗಿ ವೈದ್ಯನಿಗೇ ಹೇಳಿದಾಗ, ಈಕೆ ಸಾಯುತ್ತಿರುವುದು ಬರೀ ನ್ಯುಮೋನಿಯಾದಿಂದಲ್ಲ ಎಂದು ಹೇಳುವುದು ಯಾವ ವೈದ್ಯನಿಗೂ ತೀರಾ ಕಷ್ಟ.

ಬಳಲಿದ ಎಂಬತ್ತು ವರ್ಷದ ದೇಹಕ್ಕೆ ಸುಖವಾಗಿರುವ ಇಪ್ಪತ್ತು ವರ್ಷದ ದೇಹಕ್ಕಿಂತ ಪ್ರಾಣ ಬಿಡುವ ಆಸೆ ಹೆಚ್ಚಿರುತ್ತದೆ. ನ್ಯುಮೋನಿಯಾ ಇಲ್ಲಿ ನೆಪಮಾತ್ರ. ಸಾಯುವುದಕ್ಕೆ ಏನಾದರೂ ಕಾರಣ ಬೇಕಲ್ಲವೇ(ಯಾವ ಜೀವಿಯನ್ನೂ ನಾನು ವಸ್ತುವಾಗಿ ಪರಿಗಣಿಸುತ್ತಿಲ್ಲ . ಜೀವದಿಂದ ಇರುವಷ್ಟೇ ಮುಖ್ಯವಾದಾಗ ಈ ರೀತಿ ಡಿಹ್ಯೂಮನೈಜ್‌ ಆಗಿ ಕಂಡರೆ ಓದುಗನ ಕ್ಷಮೆಯಿರಲಿ). ಸಾವು ಬದುಕಿನ ನಡುವೆ ಹೋರಾಡುತ್ತಿರುವ ಒಬ್ಬ ವ್ಯಕ್ತಿಯ ಬದುಕಬಲ್ಲ ಸಾಧ್ಯತೆಯನ್ನು ಯಾವೊಂದು ವೈದ್ಯಕೀಯ ಪರೀಕ್ಷೆಯಿಂದಲೂ ಅಂಕಿಅಂಶ ಸಮೇತ ನಿಖರವಾಗಿ ಹೇಳಲು ಸಾಧ್ಯವಿಲ್ಲ . ಅದೂ ಇಂತ ಗಂಭೀರ ಪರಿಸ್ಥಿತಿಯಲ್ಲಿ . ಒಬ್ಬ ವೈದ್ಯನ ವೈದ್ಯಕೀಯ ಹಾಗೂ ಸಾಮಾನ್ಯಜ್ಞಾನ, ಈಕೆ ತನ್ನ ಹತ್ತು ಹಲವು ಕಾಯಿಲೆಗಳಿಂದ ನೊಂದು ಬೆಂಡಾಗಿದ್ದಾಳೆ, ಈಕೆ ಈ ದುಬಾರಿ ವೈದ್ಯಕ್ಕೆ ಯೋಗ್ಯಳಲ್ಲ ಎಂದಷ್ಟೇ ಹೇಳಬಲ್ಲುದು. ರೋಗಿಯ ಕುಟುಂಬಕ್ಕೆ ಆಕೆ ಒಬ್ಬಳೇ. ವೈದ್ಯ ಹೇಳುತ್ತಿರುವುದು ಇಂತಹ ಸಾವಿರ ರೋಗಿಗಳನ್ನು ಈ ರೀತಿಯ ಚಿಕಿತ್ಸೆಗೊಳಪಡಿಸಿದಾಗ ಆಗುವುದೇನು ಅನ್ನುವ ಅಂಕಿಅಂಶ. ನೂರರಲ್ಲಿ ಎಪ್ಪತ್ತು ಜನ ಸಾಯುತ್ತಾರೆ ಎಂದರೂ, ಈ ಮುದುಕಿ ಎಪ್ಪತ್ತರಲ್ಲಿ ಬರುತ್ತಾಳೋ ಅಥವಾ ಮೂವತ್ತರಲ್ಲಿ ಬರುತ್ತಾಳೋ ಎಂದು ಹೇಳುವುದು ಯಾವ ವೈದ್ಯನಿಗೂ ಸಾಧ್ಯವಿಲ್ಲ . ಆದ್ದರಿಂದಲೇ ಒಬ್ಬನೇ ಒಬ್ಬ ವ್ಯಕ್ತಿಗೆ, ಈ ಅಂಕಿಅಂಶಗಳು ನಿಷ್ಪ್ರಯೋಜಕ. ಆದರೆ ಒಂದು ಮಾತ್ರ ನಿಜ. ಈ ಸಂದರ್ಭದಲ್ಲಿ ಈಕೆಗೆ ಈ ಚಿಕಿತ್ಸೆ ದೊರಕದಿದ್ದರೆ ಆಕೆ ಸಾಯುವುದು ಗ್ಯಾರಂಟಿ. ಸಿಕ್ಕರೂ ಬದುಕುವುದು ಗ್ಯಾರಂಟಿಯಿಲ್ಲ . ಹಾಗಾಗಿಯೇ ಆಗ ವೈದ್ಯ ಗುಡ್‌ ಸಮಾರಿಟನ್‌ ಆಗಿ ಕೆಟ್ಟದ್ದನ್ನು ಮಾಡಬೇಡ ಅನ್ನುವ ನಿಯಮಕ್ಕುನುಗುಣವಾಗಿ ಆಕೆಗೆ ಸರಿಯೆನಿಸಿದ ಚಿಕಿತ್ಸೆ ಮಾಡಲೇಬೇಕಾಗುತ್ತದೆ. ತನ್ನ ನಂಬಿಕೆಯನ್ನು ಬದಿಗಿಡಲೇಬೇಕಾಗುತ್ತದೆ.

ವೈದ್ಯನ ಮನಸ್ಸಿನಲ್ಲೇಕೆ ಈ ಹಣಾಹಣಿ, ದ್ವಂದ್ವ?

ಎಂತ ಕಾಯಿಲೆಯಿರಲಿ, ಬದುಕುವ ಅವಕಾಶ ಸ್ವಲ್ಪವೇ ಇದ್ದರೂ ಆ ಜೀವವನ್ನು ಉಳಿಸುವುದು ವೈದ್ಯನ ಕರ್ತವ್ಯವಲ್ಲವೇ? ಆತ ಹಾಗೆ ಮಾಡದಿದ್ದರೆ ಅದು ಕೊಲೆ ಮಾಡಿದಂತಲ್ಲವೇ? ಕಾಯಿಲೆಯೇನೆಂದು ಗೊತ್ತಿದೆ, ಅದಕ್ಕೆ ಶುಶ್ರೂಷೆಯೇನೆಂದೂ ಗೊತ್ತಿದೆ. ಎರಡಕ್ಕೆ ಎರಡು ಸೇರಿಸಿದರೆ ನಾಲ್ಕಾಗುತ್ತಲ್ಲವೇ? ಅದು ಇಷ್ಟು ಸುಲಭವಾಗಿಬಿಟ್ಟಲ್ಲಿ ಈ ಪ್ರಪಂಚ ತುಂಬಾ ಸುಂದರವಾಗಿ ಬಿಡುತ್ತದೆ. ವೈದ್ಯಕೀಯದ ಹೊರಗಿರುವ ಎಷ್ಟೋ ಅಂಶಗಳು ವೈದ್ಯ ರೋಗಿಗೆ ಕೊಡುವ ಚಿಕಿತ್ಸೆಯ ನಡುವೆ ಬರುತ್ತವೆ. ನಮ್ಮ ದೇಶದಲ್ಲಿ ಅತಿ ಮುಖ್ಯವಾದದ್ದು ಹಣ. ಆಸ್ಪತ್ರೆಯ ಬಿಲ್ಲನ್ನು ಭರಿಸುವ ಶಕ್ತಿ ರೋಗಿಗಿದ್ದಲ್ಲಿ ರೋಗಿಯ ಕಾಯಿಲೆ ಮುಖ್ಯವಾಗುವುದೇ ಇಲ್ಲ . ಮೇಲೆ ನಾನು ಉದಾಹರಿಸಿರುವ ಮುದುಕಿ ಇಂಡಿಯಾದಲ್ಲೇನಾದರೂ ಇದ್ದು , ವೆಂಟಿಲೇಟರ್‌ ಬೇಕಾದರೆ ದಿನಕ್ಕೆ ಕೆಲವು ಸಾವಿರ ರುಪಾಯಿಗಳು ಖರ್ಚಾಗುತ್ತವೆ. ಆಸ್ಪತ್ರೆ ಪ್ರತಿದಿನ ಬಿಲ್ಲನ್ನು ಕಳುಹಿಸುತ್ತಾ ಹೋದಲ್ಲಿ ರೋಗಿಯ ಸಂಬಂಧಿಕರಿಗೆ ಈ ವಿಷಯ ನಿರ್ಣಯ ತುಂಬಾ ಸುಲಭ. ರೋಗಿಯ ಬಳಿ, ಅವನ ಕುಟುಂಬದ ಬಳಿ ಸಾಕಷ್ಟು ದುಡ್ಡಿದ್ದರೆ ವೆಂಟಿಲೇಟರ್‌ ಕೆಲಸ ಮಾಡುತ್ತದೆ. ಇಲ್ಲವಾದಲ್ಲಿ ದುಡ್ಡಿಗೆ ತಕ್ಕಂತೆ ಉಸಿರಾಡಿ ಮುದುಕಿ ಪ್ರಾಣ ಬಿಡುತ್ತಾಳೆ. ತಕ್ಕಹಾಗೆ ದುಡ್ಡು ಹೊಂದಿಸುವ ಶಕ್ತಿಯಿದ್ದಲ್ಲಿ ಎಂಬತ್ತಲ್ಲ , ನೂರು ವರ್ಷದವರಿಗೂ ಎರಡಲ್ಲ ಮೂರು ಬಾರಿ ಬೇಕಾದರೂ ಬೈಪಾಸ್‌ ಸರ್ಜರಿ ಮಾಡಿಸಬಹುದು.

ಯೋಗ್ಯತೆ, ಸಂಬಂಧ, ಸಂಪರ್ಕಗಳಿಗನುಸಾರ ಚಿಕಿತ್ಸೆ

ಆದರೆ ಈ ಹಣ ಹೊಂದಿಸುವಾತ ಮೂರನೆಯವನಾದರೆ ಪರಿಸ್ಥಿತಿಯೇನಾಗುತ್ತದೆ? ಅಥವಾ ನಿಮ್ಮ ದುಡ್ಡೇ ನಿಮಗೆ ಗೊತ್ತಾಗದ ಹಾಗೆ ಎಲ್ಲರಿಗೂ ಉಪಯೋಗವಾದರೆ ಅಥವಾ ಎಲ್ಲರ ದುಡ್ಡಿನ ಹಿಸ್ಸೆಯಲ್ಲಿ ನೀವೂ ಸಮಾನವಾಗಿ ಹಂಚಿಕೊಂಡರೆ ಹೇಗೆ? ಈ ಮೂರನೆಯ ವ್ಯಕ್ತಿ ರೋಗಿಯು ಕೆಲಸ ಮಾಡುವ ಕಂಪನಿಯ ಮಾಲಿಕನಾಗಿರಬಹುದು, ಸರ್ಕಾರವಾಗಿರಬಹುದು ಅಥವಾ ವಿಮಾ ಕಂಪನಿಯಾಗಿರಬಹುದು. ರೋಗಿಗೆ ಸಂಬಂಧವಿಲ್ಲದಾತ ರೋಗಿಗೋಸ್ಕರ ಖರ್ಚು ಮಾಡುತ್ತಿರುವಾಗ ಅದಕ್ಕೊಂದು ಮಿತಿಯನ್ನು ಆತ ಹಾಕುವುದು ಸಹಜ. ವೈದ್ಯನಿಗೆ, ಆಸ್ಪತ್ರೆಗೆ ಬರುವ ಹಣಕ್ಕೆ ಒಂದು ಮಿತಿಯಿದ್ದಲ್ಲಿ , ಆ ಮಿತಿಗೆ ತಕ್ಕಂತೆ ಶುಶ್ರೂಷೆ ಮಾಡಬೇಕಾದ ಪರಿಸ್ಥಿತಿ ವೈದ್ಯನಿಗೊದಗುತ್ತದೆ. ಈ ಮೂರನೆಯ ವ್ಯಕ್ತಿ /ಸಂಸ್ಥೆ , ತಾನೇ/ತಾವೇ ಹಾಕಿಕೊಂಡಿರುವ ಗುಣಮಟ್ಟದ ನಿಯಮಗಳಿಗನುಗುಣವಾಗಿ ಆಸ್ಪತ್ರೆಯ ಬಿಲ್ಲು ಕಟ್ಟುತ್ತಾನೆ. ಉದಾಹರಣೆಗೆ ನೀವು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತೀರೆಂದುಕೊಳ್ಳೋಣ. ನಿಮಗೆ ಹರ್ನಿಯಾ ಆಪರೇಶನ್‌ ಆಗಬೇಕಿರುತ್ತದೆ. ಬ್ಯಾಂಕಿನಲ್ಲಿ ನೀವಿರುವ ಹುದ್ದೆಗೆ ತಕ್ಕಂತೆ ನಿಮ್ಮ ಆಸ್ಪತ್ರೆಯ ಬಿಲ್ಲು ಪಾವತಿಯಾಗುತ್ತದೆ. ನಿಮ್ಮ ಯೋಗ್ಯತೆಗೆ ಅನುಗುಣವಾಗಿ ಆದು ವಿಕ್ಟೋರಿಯಾ ಅಸ್ಪತ್ರೆಯಿಂದ ಹಿಡಿದು ಮಣಿಪಾಲ್‌ ಆಸ್ಪತ್ರೆಯ ತನಕ ಎಲ್ಲಿ ಬೇಕಾದರೂ ಆಗಬಹುದು (ನಮ್ಮಲ್ಲಿ ಚಿಕಿತ್ಸೆಯ ಗುಣಮಟ್ಟವನ್ನು ಆಸ್ಪತ್ರೆಯ ಹೆಸರಿನಿಂದ ಅಳೆಯುವುದರಿಂದ ಹೀಗೆ ಹೇಳುತ್ತಿದ್ದೇನೆ ಅಷ್ಟೇ). ನನಗೆ ತಿಳಿದ ಮಟ್ಟಿಗೆ ಅದಕ್ಕೊಂದು ಮಿತಿಯಿರುತ್ತದೆ. ನಿಮಗೆ ಗುಣವಾಗದಂತಹ ಅಥವಾ ಕಂಪನಿಯ/ಬ್ಯಾಂಕಿನ ಶೇಕಡಾ ಐವತ್ತು ಭಾಗ ವೈದ್ಯಕೀಯ ಭತ್ಯೆ ಖರ್ಚು ಮಾಡಿಸುವ ಕೆಟ್ಟ ಕಾಯಿಲೆ ಬಂದಲ್ಲಿ ಒಂದಲ್ಲ ಒಂದು ದಿನ ನಿಮ್ಮ ಬಿಲ್‌ ಪಾವತಿ ಮಾಡುವಾತ ಕೈ ಹಿಡಿಯಲೇಬೇಕಾಗುತ್ತದೆ (ಹಾಗಾಗದಿದ್ದಲ್ಲಿ ನೀವೇ ಅದೃಷ್ಟವಂತರು, ಆ ಕೆಲಸವನ್ನು ದೇವರಾಣೆ ಬಿಡಬೇಡಿ). ಹಾಗಾದಾಗ ಇಬ್ಬರೂ ಅನುಸರಿಸಿಕೊಂಡುಹೋಗಲೇಬೇಕಾದ ಪರಿಸ್ಥಿತಿ ಬರುತ್ತದೆ. ಶೇಕಡಾ ಎಪ್ಪತ್ತು -ಮೂವತ್ತೋ, ಎಂಬತ್ತು -ಇಪ್ಪತ್ತೋ ಪರಿಮಾಣದಲ್ಲಿ ರೋಗಿ ಖರ್ಚನ್ನು ಹಂಚಿಕೊಳ್ಳಬೇಕಾಗುತ್ತದೆ. ಇಂಡಿಯಾದಲ್ಲಿದ್ದರೆ ನಿಮ್ಮ ಸಂಬಳದ ಚೆಕ್‌ ಆ ಭಾಗದಷ್ಟು ಸಣ್ಣದಾಗುತ್ತದೆ. ಅಮೆರಿಕಾದಲ್ಲಿದ್ದರೆ ಅದನ್ನೇ ವಿಮಾಕಂಪೆನಿಯಾತ ಕಿತ್ತುಕೊಳ್ಳುತ್ತಾನೆ. ಇದಕ್ಕೆ ಕೋ ಪೇಮೆಂಟ್‌ ಅನ್ನಿ , ಕೋ ಇನ್ಷೂರೆನ್ಸ್‌ ಅನ್ನಿ , ಏನೋ ಒಂದು. ನಮ್ಮ ದೇಶದಲ್ಲಿ ಇರುವ ಅನುಕೂಲವೆಂದರೆ ಆಸ್ಪತ್ರೆಯ ಗುಮಾಸ್ತನನ್ನು ನೀವು ಸರಿಮಾಡಿಕೊಂಡರೆ ಆ ಶೇಕಡಾ ಇಪ್ಪತ್ತು ಮೂವತ್ತನ್ನೂ ಅಡ್ಜಸ್ಟ್‌ ಮಾಡಿಬಿಡಬಹುದು. ನೀವು ನಿವೃತ್ತರಾದಮೇಲೆ ಈ ಅನುಕೂಲ ಕಳೆದುಕೊಳ್ಳುವಿರಿ.

ಆದರೆ ಒಂದು ಕೆಟ್ಟ ಸತ್ಯವೇನು ಗೊತ್ತೇ? ನಿಮ್ಮ ಜೀವನದ ಶೇಕಡಾ ಎಂಬತ್ತು ಭಾಗ ವೈದ್ಯಕೀಯ ಖರ್ಚು ನೀವು ಸಾಯುವ ಕೊನೆಯ ಎರಡು ವರ್ಷದಲ್ಲಿ ಆಗುತ್ತದೆ. ನಾವಿಲ್ಲಿ ಮಾತನಾಡುತ್ತಿರುವುದು ನಿಮಗೆ ಬಂದಿರುವ ಕಾಯಿಲೆಗೆ ಅತ್ಯುತ್ತಮ ಚಿಕಿತ್ಸೆ ಸಿಕ್ಕಿದಾಗ ಆಗುವ ಖರ್ಚು ಮಾತ್ರ. ಮತ್ತು ಅಂತಹ ಚಿಕಿತ್ಸೆ ಸಿಗುವ ತನಕ ನೀವು ಬದುಕಿದ್ದರೆ. ಏಕ್‌ದಂ ಸತ್ತರೆ ಖರ್ಚೇ ಇಲ್ಲ, ಬಿಡಿ. ನಮ್ಮ ದೇಶದಲ್ಲಿ ಶೇಕಡಾ ಐದು ಭಾಗ ಜನ ಮಾತ್ರ ಕಾಯಿಲೆಗೆ ಲಭ್ಯವಿರುವ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯ. ಈ ಮೇಲ್ಕಂಡ ಮುದುಕಿ ಅಮೆರಿಕಾದಲ್ಲಿದ್ದರಿಂದ ವೆಂಟಿಲೇಟರ್‌ ಬಗ್ಗೆ ಯೋಚನೆಯನ್ನಾದರೂ ಮಾಡಬಹುದು. ಆಕೆ ಇಂಡಿಯಾದಲ್ಲಿ ಸಮಾನಾಂತರ ಆರ್ಥಿಕ ಪರಿಸ್ಥಿತಿಯಲ್ಲಿದ್ದಿದ್ದರೆ ಸತ್ತು ಸುಮಾರು ವರ್ಷಗಳಾಗುತ್ತಿದ್ದವು.


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X