ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಕ್ಟರಾದ ಮೇಲೆ.... ಪುಟ- 2

By Staff
|
Google Oneindia Kannada News

ವೆಂಟಿಲೇಟರ್‌ ಮೇಲೆ ಹೋದವರು ಹೊರಗೆ ಬರುತ್ತಾರೆಯೇ?

‘‘ನಿನಗೆ ಹೇಳುವುದು ಸುಲಭ. ನಿನಗೆ ಆಕೆ ಎಲ್ಲರಂತೆ ಒಬ್ಬ ಪೇಷಂಟ್‌. ನನಗೆ ಆಕೆ ಹೈಸ್ಕೂಲಿನ ಗೆಳತಿ, ಐವತ್ತು ವರ್ಷ ಜೊತೆಗಿದ್ದ ಮುದ್ದು ಹೆಂಡತಿ. ಮೇಲಾಗಿ ಆಕೆಗಿರುವುದು ನ್ಯೂಮೋನಿಯ. ಅದು ಗುಣಪಡಿಸಬಲ್ಲ ಕಾಯಿಲೆ. ಹೀಗಿರುವಾಗ ಅದು ಗುಣವಾಗುವ ತನಕ ಆಕೆಯನ್ನು ವೆಂಟಿಲೇಟರ್‌ ಮೇಲಿಡುವುದರಲ್ಲಿ ತಪ್ಪೇನು’’ ಕೇಳಿದ ಜ್ಯಾಕ್‌. ‘‘ವೆಂಟಿಲೇಟರ್‌ ಮೇಲೆ ಹೋದವರು ಅದರಿಂದ ಹೊರಗೆ ಬರುವುದು ಅನುಮಾನ’’ ತಡೆದು ಹೇಳಿದ್ದೆ. ನನ್ನ ಮಾತು ಯಾವ ಕಡೆ ವಾಲುತ್ತಿದೆ ಎಂದು ನನಗೆ ಅರಿವಾಗುತ್ತಿತ್ತು.

‘‘ ಡಾಕ್ಟರ್‌, ಹೋದ ವರ್ಷ ಕಾಯಿಲೆ ಇನ್ನೂ ತೀವ್ರವಾಗಿತ್ತು. ಆಗಲೂ ಆಕೆ ವೆಂಟಿಲೇಟರ್‌ ಮೇಲಿದ್ದಳು. ಹೊರಗೂ ಬಂದಳು. ನಂತರ ಆರು ತಿಂಗಳು ಚೆನ್ನಾಗಿಯೇ ಇದ್ದಳು. ಈಗಲೂ ಹಾಗೆಯೇ ಆಗುತ್ತಿದೆ. ’’ ನಂಬಿಕೆಯಿಂದ ಹೇಳಿದ ಜ್ಯಾಕ್‌. ‘‘ ಮತ್ತೊಂದು ಮಾತು, ಡಾಕ್ಟರ್‌ ನಿನ್ನ ಕುಟುಂಬದವರಿಗೆ ಯಾರಿಗಾದರೂ ಹೀಗೆಯೇ ಆಗುತ್ತಿದ್ದರೆ ನೀನೇನು ಮಾಡುತ್ತಿದ್ದೆ ?’’. ‘‘ ವೆಂಟಿಲೇಟರ್‌ ಹಾಕುತ್ತಿರಲಿಲ್ಲ. ’’ ಉಗುಳು ನುಂಗಿ ಹೇಳಿದೆ. ಅದು ಅರ್ಧ ಸತ್ಯವಿರಬಹುದೆಂದು ನನ್ನ ನುಂಗಿದ ಉಗುಳಿನ ಪ್ರಾಮಾಣಿಕತೆಯಿಂದ ಅರಿತಂತೆ ಅವ , ಖಡಾಖಂಡಿತವಾಗಿ ‘‘ ನಾನು ಹಾಕುತ್ತೇನೆ ’’ಅಂದ . ನನ್ನ ನಂಬಿಕೆಗಳ ಮೇಲೆ ಪ್ರಹಾರವಾಗುತ್ತೇನೋ ಅನ್ನಿಸಿತು.

ಹಿಂದಿದ್ದ ಬ್ರೇಕ್‌ರೂಮಿಗೆ ಹೋದೆ. ಕಾಫಿ ಬೆರೆಸಿ ಕುಡಿಯುತ್ತಿದ್ದಾಗ ಮನಸ್ಸು ಸುಮಾರು ಎಂಟು ವರ್ಷ ಹಿಂದೆ ಓಡಿತು. ಬಳ್ಳಾರಿ ಮೆಡಿಕಲ್‌ ಕಾಲೇಜಿನ ಹೊರ ರೋಗಿ ವಿಭಾಗ. ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯ. ರಣರಣ ಬಿಸಿಲು. ಜಾತ್ರೆಗೆ ನುಗ್ಗುವಂತೆ ಮೈಮೇಲೆ ಬಿದ್ದು ಬರುವ ರೋಗಿಗಳ ಗುಂಪು. ಕೆಟ್ಟ ಸೆಕೆ. ಸರತಿ ಪ್ರಕಾರ ಕಾಫಿ ಕುಡಿಯಲು ಹೊರಟಿದ್ದೆವು. ನನ್ನ ಸರತಿ ಬಂದಾಗ ಯಾರೋ ಒಬ್ಬ ಐವತ್ತು ವರ್ಷದಾತ ಎದೆನೋವೆಂದು ಬಂದ. ಬೀಪಿ ವಗೈರೆ ಪರೀಕ್ಷಿಸಿದಾಗ ಸರಿಯಾಗೇ ಇತ್ತು. ಇಸಿಜಿಗೆ ದೊಡ್ಡ ಕ್ಯೂ ಇತ್ತು. ಆತನನ್ನು ಕ್ಯೂನಲ್ಲಿ ನಿಲ್ಲಿಸಿ(?) ಬೇಗ ಕಾಫಿ ಮುಗಿಸಿ ಬಂದೆ.

ಬಂದು ಇಸಿಜಿ ನೋಡಿದರೆ ದೊಡ್ಡ ಹಾರ್ಟ್‌ ಅಟ್ಯಾಕ್‌. ತನಗಾಗಿರುವ ಕಾಯಿಲೆಯ ತೀವ್ರತೆಯೂ ಅರ್ಥವಾಗದೇ ಹೊರಗೆ ಬೆಂಚಿನ ಮೇಲೆ ಕುಳಿತು ಬೀಡಿ ಸೇದುತ್ತಿದ್ದ. ಆಸ್ಪತ್ರೆಯ ಚೀಟಿ ನೋಡಿದೆ. ‘ಚಾಮಯ್ಯ’ ಎಂದಿತ್ತು. ಒಳಗೆ ಕರೆದುಕೊಂಡು ಬರಲು ತಳ್ಳುವ ಕುರ್ಚಿ ಕಳುಹಿಸಿದೆ. ನಡೆದೇ ಬರುತ್ತೇನೆಂದು ಬಂದ.‘‘ ಏನಪ್ಪ, ಎದೆ ನೋಯುತ್ತಿದೆಯಾ ’’ಕೇಳಿದೆ. ‘‘ ಇದ್ಯಾವ ನೋವು ಬಿಡ್ರಿ ಸಾ, ದಿನ್ನಾ ಸೈಕಲ್‌ ರಿಕ್ಷಾ ತುಳಿತೀನಿ. ಬರೀ ನೋಯ್ತಿದ್ರೆ ನಾಯೇನು ಆಸ್ಪತ್ರೆಗೆ ಬರ್ತಾಯಿರ್ಲಿಲ್ಲ ಸಾ, ಉಸ್ರು ಇಟ್ಕೊಂಬುಟ್ತು. ಬೆಳಗ್ಗಿಂದ ಎರಡು ಸಾರಿ ವಾಂತಿ ಆಯ್ತು. ಎಂಡ್ತಿ ಮಕ್ಕಳಿದಾರೆ. ಇಂಗೇ ತೋರಿಸ್ಕಂಬರಾಣಾಂತ ಬಂದೆ.’’

ಆತನ ಮುಗ್ಧತೆಗೆ ನಗಬೇಕೋ, ಅಳಬೇಕೋ ತಿಳಿಯಲಿಲ್ಲ

ಆಸ್ಪತ್ರೆಯಲ್ಲಿರಲು ಸುತರಾಂ ಒಪ್ಪಲಿಲ್ಲ. ಆಸ್ಪತ್ರೆಗೆ ಸೇರದಿದ್ದಲ್ಲಿ ತಕ್ಷಣವೇ ಸಾಯುತ್ತಾನೆಂದೂ, ಸೇರಿದರೆ ಎರಡೇ ದಿನದಲ್ಲಿ ಮನೆಗೆ ಕಳಿಸುತ್ತೇನೆಂದು ಹೇಳಿದ ಮೇಲೆ ಒಪ್ಪಿದ. ಅದೂ ತಕ್ಷಣಕ್ಕೆ ಅಲ್ಲ. ಮೂರು ಕಿಲೋ ಮೀಟರ್‌ ದೂರದಲ್ಲಿರುವ ತನ್ನ ಮನಗೆ ಒಬ್ಬನೇ ತನ್ನ ಸೈಕಲ್‌ ರಿಕ್ಷಾ ತುಳಿದುಕೊಂಡು ಹೋಗಿ, ಬರುವಾಗ ತನ್ನ 16 ವರ್ಷದ ಮಗನನ್ನು ಕರೆದುಕೊಂಡು ಬಂದ.

ಒಟ್ಟು ಹೇಳುವುದಿದ್ದರೆ, ಈತ ಎಲ್ಲ ವೈದ್ಯಕೀಯ ನಿಯಮಗಳನ್ನೂ ಮುರಿದಿದ್ದ. ಎರಡು ದಿನ ವಾದ ಮೇಲೆ ಮನೆಗೆ ಹೋಗುತ್ತೇನೆಂದು ಕೇಳಿದ. ಆದರೆ ಈತನ ಸ್ಥಿತಿ ಸುಧಾರಿಸಿರಲಿಲ್ಲ. ಹೃದಯ ಸರಿಯಾಗಿ ಕೆಲಸ ಮಾಡದೇ ಶ್ವಾಸಕೋಶಗಳಲ್ಲಿ ನೀರು ತುಂಬಿ ಉಸಿರಾಟಕ್ಕೆ ತೀರಾ ತೊಂದರೆಯಾಗಿತ್ತು. ಈತನಿಗೆ ಸಾಯುತ್ತಿರುವ ಪರಿವೆಯೂ ಇರಲಿಲ್ಲ. ಬಳ್ಳಾರಿಯಲ್ಲಿ ಈತನಿಗೆ ಮಾಡಬಹುದಾದ್ದು ಇನ್ನೇನೂ ಇಲ್ಲ. ಬೇರೆ ಎಲ್ಲೂ ಹೋಗಲು ಈತನಿಗೆ ಶಕ್ತಿ ಇಲ್ಲ. ಒಂದೇ ಸಮನೆ ಮನೆಗೆ ಹೋಗುತ್ತೇನೆಂದು ಹಠ ಹಿಡಿದಿದ್ದಾನೆ. ನಾನು ಈತನನ್ನು ಉಳಿಸಲು ಪ್ರಯತ್ನ ಮಾಡುತ್ತಿದ್ದೇನೆಂಬುದೂ ಅರ್ಥವಾಗುತ್ತಿಲ್ಲ. ನನಗೆ ರೇಗಿ ಹೋಯಿತು. ನಮ್ಮ ದೇಶದಲ್ಲಿ ರೋಗಿಗಳ ಮೇಲೆ ರೇಗಬಹುದಲ್ಲ.

‘‘ ಏನಯ್ಯಾ ಅಂಥ ಘನಕಾರ್ಯ. ನಮ್ಮಗಳ ನಿದ್ದೆ ಬಿಟ್ಟು ನಿನ್ನ ಪ್ರಾಣ ಉಳಿಸಲು ಒದ್ದಾಡುತ್ತಿದ್ದೇವೆ. ನೀನು ಏನು ಕಡಿಯೋಕೆ ಹೋಗ್ತೀನಂತೀಯಾ. ನಿನ್ನ ಜೀವದ ಮೇಲೆ ಆಸೆ ಇದೆಯೋ ಇಲ್ಲವೋ, ಸತ್ತು ಹೋಗ್ತೀಯಾ ನೋಡು ’’ಯಾವುದೇ ಮುಲಾಜಿಲ್ಲದೆ ಹೇಳಿದೆ. ‘‘ ಸತ್ತರೂ ಪರವಾಗಿಲ್ಲ ಸ್ವಾಮಿ. ನಾನು ಓಗಲೇ ಬೇಕು. ಇವತ್ತು ಅಣ್ಣಾವ್ರ‘ಅಕಸ್ಮಿಕ’ ರಿಲೀಜು. ನಂಗೆ ಬುದ್ಧಿ ಬಂದಮ್ಯಾಕೆ ಅವ್ರುದ್ದು ಯಾವ ಪಿಚ್ಚರ್ರೂ ಮೊದಲ ದಿನ ನೋಡದೇ ತೀರಿಲ್ಲ. ಇದನ್ನು ಎಂಗೆ ಬಿಡೋದು ಸ್ವಾಮಿ ’’ ಎಂದು ಉಸಿರಾಡಲು ಆಗದಿದ್ದರೂ ಗಂಟು ಮೂಟೆ ಕಟ್ಟಿಹೊರಟೇ ಬಿಟ್ಟ. ಆತ ಇಂದು ಬದುಕಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ನಟ ಸಾರ್ವಭವನ ಅಕಸ್ಮಿಕವಂತೂ 100 ದಿನ ಓಡಿತು.


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X