• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾಕ್ಟರಾದ ಮೇಲೆ....

By Staff
|

*ಡಾ. ಗುರುಪ್ರಸಾದ್‌ ಕಾಗಿನೆಲೆ , ಮಿನ್ನೆಸೋಟ

Doctors Dilemmaಭಾನುವಾರ ಬೆಳಗ್ಗೆ. ತುಂಬಾ ಬಿಡುವಾಗಿಯೂ ಇಲ್ಲ. ತೀರ ಗಿಜಿಗಿಜಿಯೂ ಇಲ್ಲ. ಹಿಮ ಬಿದ್ದಿದ್ದರಿಂದ ಹೊರಗೆ ಚುಮುಚುಮು ಚಳಿ ಆದಷ್ಟು ರೋಗಿಗಳನ್ನು ಆಸ್ಪತ್ರೆಯ ಎಮರ್ಜೆನ್ಸಿ ರೂಮಿನಿಂದ ಹೊರಗಿಡಲು ಸಫಲವಾಗಿತ್ತು. ಈ ಭಾನುವಾರ ಬೆಳಗ್ಗೆ ಕೆಲಸ ಮಾಡಿಸುವ ಕೆಲಸವನ್ನು ಶಪಿಸುತ್ತಾ ಇಡೀ ಜಗತ್ತಿನಲ್ಲಿ ಎಮರ್ಜೆನ್ಸಿ ರೂಮಿನಲ್ಲಿ ಕೆಲಸ ಮಾಡುವ ಡಾಕ್ಟರು, ನರ್ಸುಗಳ ಅದೃಷ್ಟವನ್ನು ಹಳಿದುಕೊಳ್ಳುತ್ತಾ ಕಾಫಿ ಡೋನಟ್ಟುಗಳನ್ನು ಹಂಚಿಕೊಳ್ಳುತ್ತಿದ್ದೆವು.

ವಾರದಲ್ಲಿ ಮೂರು ದಿನ ರಜೆ ಸಿಕ್ಕರೂ ಶನಿವಾರ ಭಾನುವಾರ ಕೆಲಸ ಮಾಡಬೇಕಾದ ಹಿಂಸೆ ಮಾಡುವವರಿಗೇ ಗೊತ್ತು. ಮ್ಯಾನಿಕ್ಯುರ್‌ ಮಾಡಲು ಸಾಧ್ಯವಿಲ್ಲ. ಶಾಪಿಂಗ್‌ ಮಾಡಲು ಮಜಾ ಬರುವುದಿಲ್ಲ ಇತ್ಯಾದಿ ಸ್ತ್ರೀಸಂಕಟಗಳನ್ನು ಹೇಳಿಕೊಂಡು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಳು ನರ್ಸ್‌ ಕಾರ್ಲ. ಏನಾದರೂ ಮಾತಾಡಿದರೆ ಅವಳ ಗೋಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದು ಅಲ್ಲಿಂದ ಹೇಗೆ ಜಾಗ ಖಾಲಿ ಮಾಡುವುದೆಂದು ಯೋಚಿಸುತ್ತಿದ್ದೆ. ನನ್ನ ಯೋಚನೆಗೆ ಉತ್ತರ ಸಿಕ್ಕಿದಂತೆ ಬಣ್ಣ ಬಣ್ಣದ ದೀಪ , ಸೈರನ್ನುಗಳೊಂದಿಗೆ ಪ್ರತ್ಯಕ್ಷವಾಯಿತು ಅಂಬ್ಯುಲೆನ್ಸ್‌. ಕಾರ್ಲಳ ಮಾತಿನಿಂದ ಮುಕ್ತಿ ಸಿಕ್ಕಿತೆಂದೆನಿಸಿ ರೋಗಿಯ ಕಡೆ ಹೆಜ್ಜೆ ಹಾಕಿದೆ.

ಗುಬ್ಬಚ್ಚಿಯಂತೆ ಮುದುಡಿ ಮಲಗಿದ್ದಳು 80ರ ಮುದುಕಿ

ಮೂವತ್ತೆೈದು, ನಲವತ್ತು ಕೆಜಿಗಿಂತ ಹೆಚ್ಚು ತೂಕವಿಲ್ಲ. ಜ್ಞಾನವಿದ್ದ ಹಾಗೆ ಕಾಣಲಿಲ್ಲ. ರೆಪ್ಪೆಗಳೆರಡೂ ಮುಚ್ಚಿದ್ದವು. ಮರುಭೂಮಿಯ ನೆಲದಂತೆ ಮುಖವಿಡೀ ಸುಕ್ಕುಗಳು. ಪುಟ್ಟದಾದ ಬಾಯಿ, ಆಶ್ಚರ್ಯ ಬರುವಷ್ಟು ನೀಟಾಗಿ ಒಂದರ ಪಕ್ಕ ಒಂದು ಜೋಡಿಸಿಟ್ಟಂತೆ ಇರುವ ಹಲ್ಲುಗಳು. ಜೋತು ಬಿದ್ದ ಕುತ್ತಿಗೆ ಚರ್ಮ, ಬಟಾಬಯಲಿನಂತಿರುವ ಎದೆ, ಮುಖದ ಜೊತೆ ಸ್ಪರ್ಧಿಸುತ್ತಿರುವ ದೋಣಿಯಂತಿರುವ ಹೊಟ್ಟೆ, ಅದರ ಮೇಲಿನ ಸುಕ್ಕುಗಳು, ಗಂಟಲಿನಿಂದ ಗೊರಗೊರ ಶಬ್ದ. ಉಸಿರಿಗೊಮ್ಮೆ ಅರಳುತ್ತಿರುವ ಹೊಳ್ಳೆಗಳು. ಮುಖದ ಮೇಲಿರುವ ಆಕ್ಸಿಜನ್‌ ಮಾಸ್ಕ್‌- ಸಾಯಲು ಸಿದ್ಧವಾಗಿರುವ ಮುದುಕಿಯಿದು ಎಂದರಿಯಲು ನನ್ನೊಳಗಿನ ವೈದ್ಯನಿಗೆ ತೀರ ಕಷ್ಟವಾಗಲಿಲ್ಲ. ಇವಳ ಈ ಸ್ಥಿತಿ ಇವತ್ತು ನೆನ್ನೆಯದಲ್ಲ ಎಂದು ನೋಡಿದ ತಕ್ಷಣ ಹೇಳಬಹುದಿತ್ತು. ಆದರೆ ಆ ಗಳಿಗೆಯಲ್ಲಿ ನನಗೆ ಆಶ್ಚರ್ಯ ತರುತ್ತಿದ್ದುದು ಆ ಮುದುಕಿಯ ವೇಷ. ಒಣಗಿರುವ ಆ ತುಟಿಗಳಿಗೆ ನೀಟಾಗಿ ಹಚ್ಚಿರುವ ಲಿಪ್‌ಸ್ಟಿಕ್‌, ಕಣ್ಣಿಗೆ ಕಾಡಿಗೆ, ಕೆನ್ನೆಗೆ ಬಣ್ಣ, ಸಪೂರವಾಗಿ ಕತ್ತರಿಸಿ ಬಣ್ಣ ಹಚ್ಚಿರುವ ಉಗುರುಗಳು, ಮೈಯಿಂದ ಬರುತ್ತಿರುವ ಪರ್‌ಫ್ಯೂಮಿನ ವಾಸನೆ ಮತ್ತು ಮಲಮೂತ್ರಗಳಿಂದ ಅವಳನ್ನು ರಕ್ಷಿಸಲು ಹಾಕಿರುವ ಡಯಾಫರ್‌. - ಒಂದಕ್ಕೊಂದು ತಾಳೆ ಹೊಂದಲಿಲ್ಲ. ತನ್ನನ್ನು ತಾನು ಇಷ್ಟು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವೇ ಇಲ್ಲ ಈ ಮುದುಕಿಗೆ ಅನ್ನಿಸಿತು.

‘ಹೆಸರೇನು’ ಕೇಳಿದೆ. ಪಕ್ಕದಲ್ಲಿದ್ದ ಪ್ಯಾರಮೆಡಿಕ್‌ಗೆ. ‘‘ ಸೆಲಿನಾ ಲ್ಯೂತರ್‌. ಹೋದವರ್ಷ ಮೆಲನೋಮ ಡಯಗ್ನೋಸ್‌ ಆಯ್ತು. ಆಂದಿನಿಂದ ಇವಳ ಸ್ಥಿತಿ ಉತ್ತಮವಾಗಲೇ ಇಲ್ಲ. ಮನೆಯಲ್ಲಿ ಗಂಡ ಜ್ಯಾಕ್‌ನೊಂದಿಗೆ ಇದ್ದಾಳೆ. ಈಗ ಕಳೆದ ಮೂರು ದಿನದಿಂದ ಉಸಿರಾಟಕ್ಕೆ ತೊಂದರೆಯಿತ್ತಂತೆ. ಮನೆಯಲ್ಲೇ ಅವಳ ಗಂಡ ಒಂದಿಷ್ಟು ಡಾಕ್ಟರಿಕೆ ಮಾಡಿದ್ದಾನೆ. ಏನೂ ಉಪಯೋಗವಾಗಲಿಲ್ಲ. ಈಗ ನಮ್ಮನ್ನೂ ಕರೆದ. ಅವನೂ ಹಿಂದೆ ಬರುತ್ತಿದ್ದಾನೆ. ’’ ಹೇಳಿದ. ‘‘ ಎಲ್ಲಿಯತನಕ ಮುಂದುವರೆಯಬೇಕು ಅವಳ ಚಿಕಿತ್ಸೆ, ಏನಾದರೂ ಸರಿಯಾಗಿ ಬರೆದಿದೆಯೇ ಚಾರ್ಟ್‌ನಲ್ಲಿ ’’ ಕೇಳಿದೆ ಕಾರ್ಲಳನ್ನು.

ಹೆಂಡತಿ ಸಾಯುತ್ತಾಳೆಂದರೆ ನಂಬುವುದು ಹೇಗೆ?

‘‘ ಪ್ರತಿಯಾಂದೂ, ನೀನು ಮೆಡಿಕಲ್‌ ಕಾಲೇಜಿನಲ್ಲಿ ಕಲಿತಿರುವುದೆಲ್ಲಾ . ಅವಳ ಗಂಡನಿಗೆ ಇಷ್ಟು ಬೇಗ ಹೆಂಡತಿಯನ್ನು ಬಿಟ್ಟುಕೊಡಲು ಇಷ್ಟವಿಲ್ಲ. ಆತನಿಗೂ ಇವಳ ವಿಷಯ ಪೂರ ಅರ್ಥವಾಗುತ್ತದೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ಹೆಂಡತಿ ಸಾಯುತ್ತಿದ್ದಾಳೆಂದು ನಂಬಲು ಆತ ತಯಾರಿಲ್ಲ. ಅವಳನ್ನು ಬಿಟ್ಟರೆ ಅವನಿಗೆ ಬೇರೆ ಯಾರೂ ಇಲ್ಲ’’ ಎಂದಳು ಕಾರ್ಲ. ಸುಮ್ಮನೆ ಕೆಲಸ ಮುಂದುವರೆಸಿದೆ. ಉಬ್ಬಿ ಕಾಣುತ್ತಿರುವ ತೋಳಿನ ರಕ್ತನಾಳವೊಂದಕ್ಕೆ ಸೂಜಿ ಸಿಕ್ಕಿಸಿ, ಆಕ್ಸಿಜನ್‌ ಜಾಸ್ತಿ ಮಾಡಿ ನನ್ನ ಮುಖ ನೋಡಿದಳು ಕಾರ್ಲ. ಮುಂದಿನ ನಿರ್ಣಯ ನನ್ನದು ಎನ್ನುವಂತಿತ್ತು ಅವಳ ನೋಟ.

ಅಷ್ಟರಲ್ಲಿ ಜ್ಯಾಕ್‌ ಬಂದು ಹಾಸಿಗೆಯ ಬಳಿ ನಿಂತ. ಅಸಹಾಯಕತೆ, ದುಃಖ, ಸುಸ್ತು ಎಲ್ಲವೂ ಕೋಪಕ್ಕೆ ತಿರುಗಿತ್ತು. ಈತ ಅಲ್ಲಿದ್ದರೆ ತೊಂದರೆಯಾಗಬಹುದೆಂದು ಕಾರ್ಲಳಿಗೆ ಅವನನ್ನು ಹೊರಗೆ ಕೂರಿಸಲು ಹೇಳಿ ಬೇಕಾದ ಪರೀಕ್ಷೆಗಳನ್ನು ಮಾಡಲು ಪ್ರಾರಂಭಿಸಿದೆ. ಸ್ವಲ್ಪ ತಡೆದು ಹೊರಗೆ ಹೋಗಿ ಮುದುಕನ ಜೊತೆ ಮಾತಾಡಲು ಕುಳಿತೆ. ‘‘ ಸೆಲಿನಾಳಿಗೆ ನ್ಯುಮೋನಿಯಾ . ವಯಸ್ಸಾಗಿದೆ. ಬೇರೆ ಕಾಯಿಲೆಗಳಿಂದ ದೇಹ ದಣಿದಿದೆ. ವೆಂಟಿಲೇಟರ್‌ ಸಹಾಯವಿಲ್ಲದಿದ್ದರೆ ಆಕೆ ಬದುಕುವುದಿಲ್ಲ. ಈ ಸಂದರ್ಭದಲ್ಲಿ ಕೃತಕವಾಗಿ ಏನು ಮಾಡಿದರೂ ಅದು ತೀರ ತಾತ್ಕಾಲಿಕ. ಇಂದು ಸಾಯುವವಳು ಕೆಲವು ದಿನಗಳ ನಂತರ ಸಾಯಬಹುದು. ಅದಲ್ಲದೆ, ಬದುಕಿನ ಪ್ರತಿಕ್ಷಣವನ್ನು ಅದರ ಗುಣದಿಂದ ಅಳೆಯಬೇಕಾದಲ್ಲಿ ವೆಂಟಿಲೇಟರ್‌ ಮೇಲಿನ ಬದುಕು ಅದರಿಂದ ಹೊರಗುಳಿಯುತ್ತದೆ. ಆಕೆ ಈಗ ಯಾವುದೇ ನಿರ್ಣಯ ಮಾಡದೇ ಇರುವ ಸಂದರ್ಭವಿರುವುದರಿಂದ ಆಕೆಯ ಪವರ್‌ ಆಫ್‌ ಅಟಾರ್ನಿ ನಿನ್ನನ್ನು ಕೇಳುತ್ತಿದ್ದೇನೆ. ಹೇಗೆ ಸಾಯಬೇಕೆಂಬುದರ ಬಗ್ಗೆ ಆಕೆ ನಿನ್ನ ಬಳಿ ಏನಾದರೂ ಮಾತಾಡಿದ್ದಳೇ ?’’ ಕೇಳಿದೆ. ನನ್ನ ರೋಗಿಯ ಬಗೆಗಿದ್ದಷ್ಟೆ ಹಿತಾಸಕ್ತಿ ನನಗೆ ಸಂಬಳ ಕೊಡುವ ಆಸ್ಪತ್ರೆ, ಆಸ್ಪತ್ರೆಗೆ ಸೆಲಿನಾಳ ಪರವಾಗಿ ಕೊಡುವ ತೆರಿಗೆದಾರನ ಡಾಲರ್‌ ಮೇಲೆಯೂ ಇರಬೇಕಾದ ಅನಿವಾರ್ಯತೆಯನ್ನು ಯಾವುದೇ ಪೂರ್ವಾಗ್ರಹವೂ ಇಲ್ಲದೆ ಹೇಳುವ ಪ್ರಯತ್ನ ಮಾಡಿದ್ದೆ. ಸೆಲಿನಾಳ ಆರೋಗ್ಯದ ಸ್ಥಿತಿ ಹಾಗೂ ಆಕೆಗೆ ಉಪಯೋಗವಾಗದೇ ಇರಬಹುದಾದ ದುಬಾರಿ ವೈದ್ಯದ ಮಿತಿಯನ್ನು ಜ್ಯಾಕ್‌ಗೆ ಅರ್ಥವಾಗುವ ರೀತಿಯಲ್ಲಿ ಆತನ ಈ ಸೂಕ್ಷ್ಮ ಸ್ಥಿತಿಯಲ್ಲಿ ಹೇಳುವುದು ಒಂದು ದೊಡ್ಡ ಹೊಡೆದಾಟ.


ಮುಖಪುಟ / ಸಾಹಿತ್ಯ ಸೊಗಡು


ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more