ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನಂಜೆ ಸಂದರ್ಶನ, ಪುಟ-4

By Staff
|
Google Oneindia Kannada News

ಮೈಶ್ರೀನ : ನೀವು ಅನೇಕ ಮಠಗಳನ್ನು ಹತ್ತಿರದಿಂದ ನೋಡಿದ್ದೀರಿ. ಇಂದಿನ ಮಠಗಳು ಧರ್ಮ ಪ್ರಚಾರಕ್ಕಾಗಿ, ಸಮಾಜದ ಮತ್ತು ದೇಶದ ಏಳಿಗೆಗಾಗಿ ಮಾಡಬೇಕಾದ್ದನ್ನು ಮಾಡಬೇಕಾದಷ್ಟು ಮಾಡುತ್ತಿವೆಯೇ ?

ಬನ್ನಂಜೆ : ಮಠಗಳ ಮತ್ತು ಮಠಾಧಿಪತಿಗಳ ಪರಂಪರೆ ಪ್ರಾರಂಭವಾದದ್ದು ದೇಶದಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿಯನ್ನುಂಟು ಮಾಡಲೆಂದೇ. ಇದರಲ್ಲಿ ಸಂಶಯವಿಲ್ಲ. ಆದರೆ ಇಂದು ಹೆಚ್ಚಿನ ಮಠಗಳಿಗೆ ತಮ್ಮ ಜವಾಬ್ದಾರಿಯ ಅರಿವೇ ಇಲ್ಲ. ಅವರಿಂದ ದೇಶಕ್ಕೆ, ಸಮಾಜಕ್ಕೆ, ಹಾಗೂ ಧರ್ಮಕ್ಕೆ ಏನು ಕೊಡುಗೆ ಆಗಬೇಕು, ಆಗಬಹುದು ಎಂಬ ಕಲ್ಪನೆಯೇ ಇಲ್ಲ. ಹಿಂದೆ ಯತಿಗಳಿಗೆ ಶ್ರೀಮಂತಿಕೆ ಇರಬಾರದೆಂಬ ನಂಬಿಕೆ ಇತ್ತು. ಇಂದು ಮಠಗಳಿಗೆ ಜಮೀನು, ಆಸ್ತಿ ಇವೆಲ್ಲಾ ಸೇರಿ ಮಠಾಧಿಪತಿಗಳು ಜಮೀನುದಾರರಂತೆ ತಮ್ಮ ವಹಿವಾಟನ್ನು ನಡೆಸುತ್ತಾ ಅದರೊಡನೆ ಬರುವ ರಾಜಕೀಯವನ್ನು ಸಹಿಸುತ್ತ ಅಥವ ಅದರಲ್ಲಿ ನೇರವಾಗಿ ಭಾಗವಹಿಸುತ್ತ ಇದ್ದಾರೆ. ಕೆಲವರಿಗೆ ಧರ್ಮದಲ್ಲಿ ಶ್ರದ್ಧೆ ಇದ್ದರೂ ಹೇಗೆ ಧರ್ಮ ಪ್ರಚಾರ ಮಾಡಬೇಕೆಂಬ ಕಲ್ಪನೆಯೇ ಇಲ್ಲದೆ ಇನ್ನೂ ಹದಿನೆಂಟನೇ ಶತಮಾನದಲ್ಲಿಯೇ ಇದ್ದಾರೆ. ಇನ್ನು ಕೆಲವರು ತಮ್ಮ ಪಂಗಡ, ಉಪಪಂಗಡಗಳಲ್ಲಿ ತಮ್ಮವರ, ತಮಗೆ ಬೇಕಾದವರ ಉದ್ಧಾರವನ್ನೇ ಧರ್ಮದ ಉದ್ಧಾರವೆಂದು ಭಾವಿಸಿದ್ದಾರೆ. ಇಂದಿನ ಸಮಾಜದ ಸಮಸ್ಯೆಗಳಿಗೆ, ದೇಶದ ಆಗುಹೋಗುಗಳಿಗೆ ಸ್ಪಂದಿಸಿ ದುಡಿಯುತ್ತಿರುವ ಮಠಾಧಿಪತಿಗಳು ನೂರರಲ್ಲಿ ಒಬ್ಬರೂ ಇದ್ದಾರೋ ಇಲ್ಲವೋ ಹೇಳುವುದು ಕಷ್ಟ. ಹಾಗಾಗಿ ಹೆಚ್ಚಿನ ಮಠಗಳು ಇಂದು ಸಮಾಜಕ್ಕೆ ಭಾರವಾಗಿ ಉಳಿದಿವೆ. ಅವುಗಳು ಎಂದಿದ್ದರೂ ನಾಶವಾಗುವುವು. ನಾಶವಾಗಬೇಕಾದವು.

ಮೈಶ್ರೀನ : ಇಲ್ಲಿನ ಮಕ್ಕಳು ಇತರ ಧರ್ಮಗಳನ್ನು ಅನುಸರಿಸುವ ಮಿತ್ರರಿಂದ ಹಿಂದೂ ಧರ್ಮದ ಬಗ್ಗೆ ಕೇಳುವ ಕೆಲವು ಚುಚ್ಚು ಮಾತುಗಳು ಹೀಗಿವೆ. ‘‘ ನಿಮ್ಮ ಧರ್ಮದಲ್ಲಿ ಒಬ್ಬ ಗುರುವಿಲ್ಲ, ಒಂದು ಧರ್ಮಗ್ರಂಥವಿಲ್ಲ. ಒಬ್ಬ ದೇವರಿಲ್ಲ, ಒಂದು ರೀತಿಯ ಪದ್ಧತಿಯಿಲ್ಲ, ಒಬ್ಬೊಬ್ಬ ಆಚಾರ್ಯರು ಒಂದೊಂದು ರೀತಿ ವಿವರಿಸುತ್ತಾರೆ, ಆದ್ದರಿಂದ ನಿಮ್ಮ ಧರ್ಮ ಧರ್ಮವೇ ಅಲ್ಲ. ’’ಇತ್ಯಾದಿ. ಈ ಮಾತುಗಳನ್ನು ಕೇಳಿದಾಗ ನಾವು ಮಕ್ಕಳಿಗೆ ಏನು ಸಮಾಧಾನ ಹೇಳಬೇಕು ?

ಬನ್ನಂಜೆ: ಅವರು ಯಾವುದನ್ನು ಹಿಂದೂ ಧರ್ಮದ ಬಲಹೀನತೆ ಎಂದು ತಪ್ಪಾಗಿ ಕಲ್ಪಿಸಿ ಟೀಕೆ ಮಾಡುತ್ತಾರೊ, ಅದೇ ನಮ್ಮ ಧರ್ಮದ ಬಲ. ನಮ್ಮ ಧರ್ಮದಲ್ಲಿರುವಂತೆ ವಿಚಾರ ಸ್ವಾತಂತ್ರ್ಯ ಮತ್ತು ಆಧ್ಯಾತ್ಮಿಕ ಪ್ರಜಾಪ್ರಭುತ್ವ ವಿಶ್ವದ ಇನ್ನಾವ ಧರ್ಮದಲ್ಲೂ ಇಲ್ಲ. ನಮ್ಮಲ್ಲಿ ವೇದ ಉಪನಿಷತ್ತು ಭಗವದ್ಗೀತೆ ಇವೆಲ್ಲಾ ಇದ್ದಾಗ್ಯೂ, ಯಾರೊಬ್ಬರ ಮಾತನ್ನೂ ಕಣ್ಮುಚ್ಚಿ ಒಪ್ಪಬೇಕೆಂಬ ಕಡ್ಡಾಯವಿಲ್ಲ. ಧಾರ್ಮಿಕ ಕುರುಡುತನಕ್ಕೆ ಇಲ್ಲಿ ಅವಕಾಶವಿಲ್ಲ. ಯಾವ ಆಚಾರ್ಯರ ಮತವನ್ನು ಬೇಕಾದರೂ ಪ್ರಶ್ನಿಸಬಹುದಾಗಿದೆ. ಶಾಸ್ತ್ರಿಗಳ ಮಾತನ್ನು ಅಧ್ಯಯನ ಮಾಡಿ ಮನಗಂಡು ನಮ್ಮ ನಂಬಿಕೆಗನುಸಾರವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯ ನಮಗಿರುವಂತೆ ಇನ್ನಾವ ಮತಾವಲಂಬಿಗಳಿಗೂ ಇಲ್ಲ.

ಮೈಶ್ರೀನ : ನೀವು ಅನೇಕ ದೇಶಗಳನ್ನು ಸುತ್ತಿದ್ದೀರಿ. ಅಮೇರಿಕದಲ್ಲಿ ಭಾರತೀಯರೊಂದಿಗೆ ಕಾಲ ಕಳೆದಿದ್ದೀರಿ. ಅನಿವಾಸೀ ಭಾರತೀಯರಿಗೆ ತಮ್ಮ ಕಿವಿಮಾತುಗಳೇನಾದರೂ ಇದ್ದರೆ ತಿಳಿಸಬೇಕು.

ಬನ್ನಂಜೆ : ಅಮೇರಿಕದಲ್ಲಿರುವ ಭಾರತೀಯರಿಗೆ ಭಾರತದ ಬಗ್ಗೆ ಅಪಾರವಾದ ತುಡಿತವಿದೆ. ಭಾರತದ ಬಗ್ಗೆ ತೀವ್ರವಾದ ಸೆಳೆತವಿದೆ. ವಿಶ್ವದ ಯಾವ ಜನದ ಮುಂದೆ ಆದರೂ ತಲೆ ಎತ್ತಿ ನಿಲ್ಲಲುಬೇಕಾದ ಆಧ್ಯಾತ್ಮಿಕ ಸಂಪತ್ತನ್ನು ಭಾರತ ನಿಮಗೆ ಕೊಟ್ಟಿದೆ. ಆದುದರಿಂದ ಬಿಳಿಯರೊಂದಿಗೆ ನೀವು ಕೀಳರಿಮೆ ತೋರಿಸುವುದಕ್ಕೆ ಕಾರಣವಿಲ್ಲ. (ಕೆಲವರಲ್ಲಾದರೂ ಇಂಥಾ ಕೀಳರಿಮೆ ಇರುವುದನ್ನು ಗಮನಿಸಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ.) ಆತ್ಮಾಭಿಮಾನವನ್ನು

ಬೆಳೆಸಿಕೊಳ್ಳಿ ಎಂಬುದೇ ನನ್ನ ಕಿವಿ ಮಾತು .

ಮೈಶ್ರೀನ : ನಮಸ್ಕಾರ. ತಮ್ಮ ಅಮೂಲ್ಯ ಸಮಯವನ್ನು ನಮ್ಮೊಂದಿಗೆ ಕಳೆದು ಈ ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X