ಕೂಡ್ಲಿಗಿಯಲ್ಲಿ ನಾಗೇಂದ್ರ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು?

Posted By: ಜಿಎಂ ರೋಹಿಣಿ, ಬಳ್ಳಾರಿ
Subscribe to Oneindia Kannada

ಬಳ್ಳಾರಿ, ಮಾರ್ಚ್, 29: ಕೂಡ್ಲಿಗಿ ಎಸ್ಟಿ (ವಾಲ್ಮೀಕಿ) ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿಗಾಗಿ ಕಾಂಗ್ರೆಸ್‍ನಿಂದ ಸ್ಪರ್ಧಿಸುತ್ತಿರುವ ಬಿ. ನಾಗೇಂದ್ರ ವಿರುದ್ಧ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಯಾರು? ಜೆಡಿಎಸ್‍ನಿಂದ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರು ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ಈ ಪ್ರಶ್ನೆ ಇಡೀ ಕ್ಷೇತ್ರದ ಮತದಾರರನ್ನು ತೀವ್ರವಾಗಿ ಕಾಡುತ್ತಿದೆ.

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಮೊಳಕಾಲ್ಮೂರು ಎಸ್ಟಿ ಮೀಸಲು ಕ್ಷೇತ್ರದ ಬಿಎಸ್‍ಆರ್ ಪಕ್ಷದ ಶಾಸಕ ತಿಪ್ಪೇಸ್ವಾಮಿ ಅವರ ಸಹೋದರ, ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ, ಜಿಲ್ಲಾ ಪಂಚಾಯಿತಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಗಣಿ ಹಗರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ, ಜಿ. ಜನಾರ್ದನರೆಡ್ಡಿಯ ಪರಮಾಪ್ತ ಎಸ್. ಮುತ್ತಯ್ಯ ಮತ್ತು ಕೋಡಿಹಳ್ಳಿ ಭೀಮಪ್ಪ ಅವರ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಕೂಡ್ಲಿಗಿಯ 'ಹಳೆ ಹುಲಿ' ಬೊಮ್ಮಣ್ಣ, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ

ಬಿಜೆಪಿಯು ಬಿ. ಶ್ರೀರಾಮುಲು, ರೆಡ್ಡಿ ಸಹೋದರರ ಮಾತನ್ನು ಗೌರವಿಸಿದಲ್ಲಿ ಎಸ್. ಮುತ್ತಯ್ಯ ಅವರ ಸ್ಪರ್ಧೆ ಬಹುತೇಕ ಖಚಿತ. ಆದರೆ, ಸ್ಥಳೀಯರಿಗೇ ಟಿಕೇಟ್ ಎನ್ನುವ ಸೂತ್ರವನ್ನು ಪಾಲಿಸಿದಲ್ಲಿ ಕೋಡಿಹಳ್ಳಿ ಭೀಮಪ್ಪನಿಗೆ ಟಿಕೇಟ್ ಗ್ಯಾರೆಂಟಿ.

ಬಿಜೆಪಿಯಲ್ಲಿ ಅಭ್ಯರ್ಥಿ ಅಂತಿಮ ಆಗದ ಕಾರಣ, ಕೂಡ್ಲಿಗಿ ಕ್ಷೇತ್ರದ ಮತದಾರರು ಸೋಲು/ಗೆಲುವಿನ ಲೆಕ್ಕಾಚಾರ ಹಾಕಲು, ಚುನಾವಣೆಯ ಬಗ್ಗೆ ವಿಶ್ಲೇಷಣೆ ಮಾಡಲು ಆಸಕ್ತಿ ತೋರುತ್ತಿಲ್ಲ. ಮುತ್ಯಯ್ಯ ಅವರು ಸ್ಪರ್ಧಿಸಿದಲ್ಲಿ ಟಪಾಲ್ ಗಣೇಶ್ ಕೂಡ್ಲಿಗಿಯಲ್ಲೂ ಈ ನಿವೃತ್ತ ಅಧಿಕಾರಿಯ ಭ್ರಷ್ಟಾಚಾರ ಬ್ರಹ್ಮಾಂಡವನ್ನು ಪ್ರಚಾರಕ್ಕಾಗಿ ಬಳಸಿದಲ್ಲಿ ಹೇಗೆ? ಎಂದು ಪಕ್ಷ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಕೂಡ್ಲಿಗಿ ಕ್ಷೇತ್ರ ಪರಿಚಯ : ವಲಸಿಗರ ನಡುವೆ ಕದನ?

ಬಿಜೆಪಿಯಿಂದ ಮೇಲ್ಕಾಣಿಸಿದ ಇಬ್ಬರಲ್ಲಿ ಯಾರೋ ಸ್ಪರ್ಧಿಸಿದರೂ ನೇರಾನೇರಾ ಸ್ಪರ್ಧೆ ಏರ್ಪಡುವುದು ಬಿ. ನಾಗೇಂದ್ರ ಮತ್ತು ಎನ್.ಟಿ. ಬೊಮ್ಮಣ್ಣ ಅವರ ಮಧ್ಯೆ. ಎನ್.ಟಿ. ಬೊಮ್ಮಣ್ಣ ಅವರು ಕ್ಷೇತ್ರವನ್ನು ಒಂದರೆಡುಬಾರಿ ಸುತ್ತಿ, ಮುಖಂಡರನ್ನು ಭೇಟಿ ಮಾಡಿ, ಮಾತನಾಡಿಸಿ, ಸ್ಥಳೀಯರಿಗೆ ಆದ್ಯತೆ ನೀಡಲು ಮನವಿ ಮಾಡಿದ್ದಾರೆ.

ಬಿ. ನಾಗೇಂದ್ರ ಟಿಕೇಟ್‍ಗಾಗಿ ಇನ್ನೂ ಬೆಂಗಳೂರು ಮತ್ತು ದೆಹಲಿ ಮಧ್ಯೆ ತಿರುಗಾಟ ನಡೆಸಿದ್ದು ಅಲ್ಲದೇ, ಕ್ಷೇತ್ರದ ಆಯ್ದ ಮುಖಂಡರನ್ನು ಬೆಂಗಳೂರಿಗೆ ಕರೆಯಿಸಿ, ಮಾತನಾಡುತ್ತಿದ್ದಾರೆ. ಆದರೆ, ಎರೆಡು ಅವಧಿಯ ಶಾಸಕರಾಗಿ ಇವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ ಎನ್ನುವ ಜನಸಾಮಾನ್ಯರ ಅಭಿಪ್ರಾಯ, ಹೊರಗಿನವರು ಎನ್ನುವ ಕಾರಣ ಅವರ ಹ್ಯಾಟ್ರಿಕ್ ಗೆಲುವು ಸಾಹಸವೇ ಸೈ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2018 : Who is contesting opposite to B. Nagendra Kudligi Constituency. JDS is confirmed ticket to veteran N. T Bomanna. BJP is yet to finalise its candidate.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ