ಐಸ್ ಬಕೆಟ್ ಚಾಲೆಂಜ್ ಕಾರ್ಯಕರ್ತ ಪ್ಯಾಟ್ರಿಕ್ ನಿಧನ
ವಾಷಿಂಗ್ಟನ್, ನವೆಂಬರ್ 23: ಐಸ್ ಬಕೆಟ್ ಚಾಲೆಂಜ್ ಹೋರಾಟಗಾರ ಪ್ಯಾಟ್ರಿಕ್ ಕ್ವಿನ್ ನಿಧನರಾಗಿದ್ದಾರೆ.
ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೊಸಿಸ್ ರೋಗದಿಂದ ಬಳಲುತ್ತಿದ್ದ 37 ವರ್ಷದ ಪ್ಯಾಟ್ರಿಕ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
2013ರಿಂದಲೂ ಅವರು ಈ ರೋಗದಿಂದ ಬಳಲುತ್ತಿದ್ದರು, ಹಾಗೆಯೇ ರೋಗದ ವಿರುದ್ಧ ಜಗತ್ತಿನಾದ್ಯಂತ ಜಾಗೃತಿಯನ್ನೂ ಮೂಡಿಸಿದ್ದರು. ರೋಗದ ನಡುವೆಯೂ ಐಸ್ ಬಕೆಟ್ ಚಾಲೆಂಜ್ ನಡೆಸಿ ಪ್ಯಾಟ್ರಿಕ್ ವಿಶ್ವ ವಿಖ್ಯಾತರಾಗಿದ್ದರು. ಕೋಟ್ಯಂತರ ಜನರು ಪ್ಯಾಟ್ರಿಕ್ ಸವಾಲು ಸ್ವೀಕರಿಸಿ ಐಸ್ ಬಕೆಟ್ ಚಾಲೆಂಜ್ ಮಾಡಿದ್ದರು.
ಈ ಅಭಿಯಾನದಿಂದ ಎಎಲ್ಎಸ್ ರೋಗದ ವಿರುದ್ಧದ ಹೋರಾಟಕ್ಕೆ ಸುಮಾರು 22 ಕೋಟಿ ಡಾಲರ್ ಹಣ ಸಂಗ್ರಹಿಸಲಾಗಿತ್ತು.
ಎಎಲ್ಎಸ್ ರೋಗದಿಂದ ಈಗಾಗಲೇ ಸಾಕಷ್ಟು ಮಂದಿ ಮೃತಪಟ್ಟಿದ್ದು, ಇದು ನರ ಸಂಬಂಧಿ ರೋಗವಾಗಿದೆ. ಐಸ್ ಬಕೆಟ್ ಚಾಲೆಂಜ್ ಅಭಿಯಾನದ ಮೂಲಕ ಎಎಲ್ಎಸ್ ರೋಗಿಗಳ ಚಿಕಿತ್ಸೆಗೆ ನೆರವು ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗಿತ್ತು.