ಅಮೆರಿಕಾದಲ್ಲಿ ತುರ್ತು ಅಧಿಕಾರ ಹಸ್ತಾಂತರಕ್ಕೆ ಜೋ ಬಿಡೆನ್ ಮನವಿ
ವಾಶಿಂಗ್ಟನ್, ನವೆಂಬರ್.17: ಅಮೆರಿಕಾದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮತ್ತಷ್ಟು ಜನರು ಪ್ರಾಣ ಬಿಡುವುದಕ್ಕೂ ಮೊದಲು ಆಡಳಿತ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಸಹಕಾರ ನೀಡಬೇಕು ಎಂದು ಜೋ ಬಿಡೆನ್ ಹೇಳಿದ್ದಾರೆ.
ಅಮೆರಿಕಾದ ದೆಲವಾರೆ ಎಂಬಲ್ಲಿ ಮಾತನಾಡಿರುವ ಜೋ ಬಿಡೆನ್, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಯುಎಸ್ಎನಲ್ಲಿ ಟ್ರಂಪ್ ಅಧಿಕಾರವನ್ನು ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬ ಮಾಡಿದಷ್ಟು ಜನರ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕೊವಿಡ್-19 ಸೋಂಕಿನ ನಿಯಂತ್ರಣ, ನಿರ್ವಹಣೆ ಮತ್ತು ಲಸಿಕೆ ಸಂಶೋಧನಾ ಕಾರ್ಯಚಟುವಟಿಕೆಗೆ ಚುರುಕು ಮುಟ್ಟಿಸಬೇಕಿದೆ. ಅದಕ್ಕಾಗಿ ಡೊನಾಲ್ಡ್ ಟ್ರಂಪ್ ಸಹಕಾರ ನೀಡುವಂತೆ ಜೋ ಬಿಡೆನ್ ಹೇಳಿದ್ದಾರೆ.
ಯುಎಸ್ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವು ಒಪ್ಪಿಕೊಂಡ ಟ್ರಂಪ್!
ಕೊರೊನಾವೈರಸ್ ಲಸಿಕೆ ವಿತರಣೆ ಪ್ರಕ್ರಿಯೆ ಹೊಣೆಯನ್ನು ಡೊನಾಲ್ಡ್ ಟ್ರಂಪ್ ಗಿಂತ ನೂತನ ಅಧ್ಯಕ್ಷ ಜೋ ಬಿಡೆನ್ ವಹಿಸಿಕೊಳ್ಳುವುದು ಉತ್ತಮ ಎನ್ನಲಾಗುತ್ತಿದೆ. ಜನವರಿ.20ರವರೆಗೂ ಟ್ರಂಪ್ ಅಧಿಕಾರವಧಿ ಇರಲಿದ್ದು, ಅಲ್ಲಿವರೆಗೂ ವಿಳಂಬ ಮಾಡುವುದು ಸೂಕ್ತವಲ್ಲ. ಹೀಗಾಗಿ ಅಷ್ಟರೊಳಗೆ ಅಧಿಕಾರ ಹಸ್ತಾಂತರಿಸುವಂತೆ ಕೋರಲಾಗಿದೆ.
ಸೋಲೊಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್:
ಸೋಮವಾರವಷ್ಟೇ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಜೋ ಬಿಡೆನ್ ಪ್ರತಿಕ್ರಿಯೆ ನೀಡಿದ್ದು, ಯುಎಸ್ಎ ಅಧ್ಯಕ್ಷೀಯ ಚುನಾವಣೆಯಲ್ಲಿನ ಸೋಲನ್ನು ಡೊನಾಲ್ಡ್ ಟ್ರಂಪ್ ಒಪ್ಪಿಕೊಳ್ಳುತ್ತಿಲ್ಲ. ಇದೊಂದು ಬೇಜವಾಬ್ದಾರಿತನವನ್ನು ತೋರುತ್ತದೆ ಎಂದು ದೂಷಿಸಿದ್ದರು. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಚೆಲ್ ಒಬಾಮಾ ಕೂಡಾ ಟ್ರಂಪ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಎನ್ನುವುದು ಆಟವಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ 290 ಮತಗಳನ್ನು ಪಡೆದುಕೊಳ್ಳುವ ಮೂಲಕ ಜಯಭೇರಿ ಬಾರಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 232 ಮತಗಳೊಂದಿಗೆ ಸೋಲು ಕಂಡಿದ್ದಾರೆ.