ಡೊನಾಲ್ಡ್ ಟ್ರಂಪ್ ಜೂನಿಯರ್ಗೂ ಕೊರೊನಾ ಸೋಂಕು ದೃಢ
ವಾಷಿಂಗ್ಟನ್, ನವೆಂಬರ್ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ಗೂ ಕೊರೊನಾ ಸೋಂಕು ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ರೋಗದ ಯಾವ ಲಕ್ಷಣ ಇಲ್ಲದ ಕಾರಣ ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಈ ವಾರದ ಆರಂಭದಲ್ಲೇ ಅವರಿಗೆ ಕೊವಿಡ್ ಪಾಸಿಟಿವ್ ವರದಿಯಾಗಿದೆ. ಅಂದಿನಿಂದ ಅವರು ತಮ್ಮ ಕ್ಯಾಬಿನ್ ನಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಜೂನಿಯರ್ ರ ವಕ್ತಾರ ಹೇಳಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೊನಾ ಸೋಂಕು
ಡೊನಾಲ್ಡ್ ಟ್ರಂಪ್ ಜೂನಿಯರ್ ಈ ವಾರದ ಆರಂಭದಲ್ಲಿ ಕೊರೊನಾ ಸೋಂಕಿನ ಬಗ್ಗೆ ತಿಳಿದುಕೊಂಡು ನಂತರ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಿದ್ದಾರೆ.
ಅವರು ಇಲ್ಲಿಯವರೆಗೆ ಸಂಪೂರ್ಣವಾಗಿ ಲಕ್ಷಣರಹಿತರಾಗಿದ್ದಾರೆ ಮತ್ತು ವೈದ್ಯಕೀಯವಾಗಿ ಶಿಫಾರಸು ಮಾಡಿದ ಎಲ್ಲಾ ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ.
ಶ್ವೇತ ಭವನದಲ್ಲಿ ಯಾರೊಂದಿಗಾದರೂ ಸಂಪರ್ಕ ಹೊಂದಿದ್ದರೆ ಅವರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯವೂ ನಡೆದಿದೆ. ಜೊತೆಗೆ ಅವರ ತಂದೆ ಡೊನಾಲ್ಡ್ ಟ್ರಂಪ್, ಟ್ರಂಪ್ ಪತ್ನಿ ಮೆಲೇನಿಯಾ ಮತ್ತು ಟ್ರಂಪ್ ಕಿರಿಯ ಮಗ ಬ್ಯಾರನ್ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿತ್ತು. ಸಣ್ಣ ಪ್ರಮಾಣದ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದ ಟ್ರಂಪ್ ಅವರನ್ನು ಶ್ವೇತ ಭವನದಿಂದ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.