ಅಮೆರಿಕಾದಲ್ಲಿ ಟಾಯ್ಲೆಟ್ ಪೇಪರ್ ಖರೀದಿಗೆ ಮುಗಿಬಿದ್ದ ಜನತೆ: ಸ್ಟೋರ್ಗಳೆಲ್ಲಾ ಖಾಲಿ.. ಖಾಲಿ..
ನ್ಯೂಯಾರ್ಕ್, ನವೆಂಬರ್ 21: ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿರುವ ಕುಖ್ಯಾತಿಗೆ ಒಳಗಾಗಿರುವ ರಾಷ್ಟ್ರ ಅಮೆರಿಕಾದಲ್ಲಿ ಮತ್ತೊಂದು ಸುತ್ತಿನಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ. ಹೀಗಾಗಿ ಕ್ಯಾಲಿಫೋರ್ನಿಯಾದಿಂದ ನ್ಯೂಯಾರ್ಕ್ ರಾಜ್ಯಗಳವರೆಗೆ ಕೋವಿಡ್-19 ಕರ್ಪ್ಯೂ ಮತ್ತು ನಿಬಂಧನೆಗಳು ಜಾರಿಯಲ್ಲಿದ್ದು, ಜನರು ದಿನಬಳಕೆ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ವಾಲ್ಮಾರ್ಟ್ ಶುಕ್ರವಾರ ಹೇಳಿರುವ ಪ್ರಕಾರ ''ಟಾಯ್ಲೆಟ್ ಪೇಪರ್ ಖರೀದಿ ಹೆಚ್ಚಾಗಿ, ಸಾಮಾನ್ಯ ಲಭ್ಯತೆಗಿಂತ ಕಡಿಮೆ ಪಾಕೆಟ್ಗಳನ್ನು ಮಳಿಗೆಗಳಲ್ಲಿ ನೋಡುತ್ತಿದ್ದೇವೆ. ಜನರು ತುಂಬಾ ಆತುರದಿಂದ ಟಾಯ್ಲೆಟ್ ಪೇಪರ್ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ಎಷ್ಟೇ ತರಿಸಿಟ್ಟಿದ್ದರೂ ಟಾಯ್ಲೆಟ್ ಪೇಪರ್ಗಳು ಮತ್ತೆ ಖಾಲಿಯಾಗುತ್ತಿವೆ'' ಎಂದು ಹೇಳಿದೆ.
ಡೊನಾಲ್ಡ್ ಟ್ರಂಪ್ ಜೂನಿಯರ್ಗೂ ಕೊರೊನಾ ಸೋಂಕು ದೃಢ
ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ, ಅಮೆರಿಕಾದ 22 ರಾಜ್ಯಗಳು ಕೊರೊನಾ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಬಂಧಗಳನ್ನು ವಿಧಿಸಿವೆ. ಇದು ಮತ್ತೊಂದು ಸುತ್ತಿನಲ್ಲಿ ಸೋಂಕು ಹರಡುವ ಭೀತಿಯನ್ನು ಸೃಷ್ಟಿಸಿದ್ದು, ಅತಿದೊಡ್ಡ ಸೂಪರ್ ಮಾರ್ಕೆಟ್ ಸರಪಳಿಯಾದ ವಾಲ್ಮಾರ್ಟ್ , ಟಾರ್ಗೆಟ್, ಕ್ರೋಗರ್ ಸೇರಿದಂತೆ ಅನೇಕ ಮಳಿಗೆಗಳಲ್ಲಿ ಜನರು ಅಗತ್ಯಕ್ಕಿಂತ ಹೆಚ್ಚಿನದನ್ನು ಖರೀದಿಸಿದ್ದಾರೆ.
ವಾಲ್ಮಾರ್ಟ್ ಮತ್ತು ಕಾಸ್ಟ್ಕೊದಂತಹ ರಿಯಾಯಿತಿ ಚಿಲ್ಲರೆ ಮಳಿಗೆಗಳಲ್ಲಿ ಜನರು ನೆಲವನ್ನು ಒರೆಸುವ ಸೋಂಕುನಿವಾರಕ ಔಷಧಗಳನ್ನು ಸಹ ಹೆಚ್ಚಾಗಿ ಖರೀದಿಸಿದ್ದಾರೆ ಎಂದು ಅಮೆರಿಕಾದ ನಗರಗಳಲ್ಲಿನ ಪ್ರಮುಖ ರಿಟೇಲ್ ಮಳಿಗೆಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಇಷ್ಟಲ್ಲದೆ ಕೈಗವಸುಗಳು, ಪೂರ್ವಸಿದ್ದ ಮಾಂಸ, ಕಾಗದದ ಟವೆಲ್ ಸೇರಿದಂತೆ ಅನೇಕ ದಿನಬಳಕೆ ವಸ್ತುಗಳ ಖರೀದಿ ಹೆಚ್ಚಿದೆ.