ಅಮೆರಿಕದಲ್ಲಿ ಕೋವಿಡ್ಗೆ ಒಂದೇ ದಿನ 2302 ಮಂದಿ ಬಲಿ
ವಾಷಿಂಗ್ಟನ್, ನವೆಂಬರ್ 26: ಅಧ್ಯಕ್ಷೀಯ ಚುನಾವಣೆಯ ಬೆನ್ನಲ್ಲೇ ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯ ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಕ್ರಿಸ್ ಮಸ್ ಹಬ್ಬ ಸಮೀಪಿಸುತ್ತಿರುವುದರಿಂದ ಸೋಂಕು ಹರಡುವ ಭೀತಿ ಮತ್ತಷ್ಟು ಹೆಚ್ಚಾಗಿದೆ. 1918ರ ಇನ್ಫ್ಲೂಯೆಂಜಾ ಪಿಡುಗಿನ ಬಳಿಕ ಅತಿ ಅಪಾಯಕಾರಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಇದು ಎಂದು ತಜ್ಞರು ಹೇಳಿದ್ದಾರೆ. ಮುಂಬವರುವ ಹಬ್ಬದ ರಜಾ ಅವಧಿಯ ವೇಳೆಗೆ ಸೋಂಕಿನ ತೀವ್ರತೆ ಕಡಿಮೆಯಾಗುವ ಲಕ್ಷಣವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಅಮೆರಿಕದಲ್ಲಿ ಬುಧವಾರ 2302 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಮೇ ತಿಂಗಳಿನಿಂದ ಈವರೆಗೆ ಇದು ಒಂದು ದಿನದಲ್ಲಿ ದಾಖಲಾದ ಅತ್ಯಧಿಕ ಕೊರೊನಾ ವೈರಸ್ ಸೋಂಕಿನ ಮರಣ ಪ್ರಮಾಣವಾಗಿದೆ.
ಅಮೆರಿಕಾದಲ್ಲಿ ಒಂದೇ ದಿನ 2168 ಜನರ ಬಲಿ ಪಡೆದ ಕೊರೊನಾವೈರಸ್!
ದೈನಂದಿನ ಕೋವಿಡ್ ಪ್ರಕರಣಗಳಲ್ಲಿಯೂ ಏರಿಕೆಯಾಗಿದೆ. ಒಂದೇ ದಿನ 89,954 ಮಂದಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಸತತ 16ನೇ ದಿನ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಅಮೆರಿಕದಲ್ಲಿ ಇದುವರೆಗೂ 13,137,962 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 2,68,219 ಮಂದಿ ಮೃತಪಟ್ಟಿದ್ದಾರೆ. ಟೆಕ್ಸಾಸ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.
'ಕ್ರಿಸ್ಮಸ್ ವೇಳೆ ಏರಿಕೆಯಾಗುವ ಸೋಂಕಿನ ಪ್ರಮಾಣಕ್ಕೆ ಥ್ಯಾಂಕ್ಸ್ ಗಿವಿಂಗ್ ಡೇ ಆಚರಣೆ ಮುನ್ನುಡಿ ಬರೆಯಲಿದೆ ಎಂಬ ಆತಂಕವಿದೆ. ಇದುವರೆಗೂ ಸಂಭವಿಸಿರುವುದು ಏನೂ ಅಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಬಹುದು' ಎಂದು ಮಿನ್ನೆಸೊಟಾ ವಿಶ್ವವಿದ್ಯಾಲಯದ ಸೋಂಕು ಕಾಯಿಲೆ ಸಂಶೋಧನೆ ಮತ್ತು ನೀತಿ ಕೇಂದ್ರದ ನಿರ್ದೇಶಕ ಮಿಖಾಯಲ್ ಓಸ್ಟರ್ಹಾಮ್ ಹೇಳಿದ್ದಾರೆ.