ವಿಜಯಪುರ: ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್!
ವಿಜಯಪುರ, ಜುಲೈ 20: ಬೈಕ್ ಮುಟ್ಟಿ ಮೈಲಿಗೆ ಮಾಡಿದ್ದಾನೆ ಎಂದು ಆರೋಪಿಸಿ, ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದ ದಲಿತ ಯುವಕನನ್ನು ಸಾಮೂಹಿಕವಾಗಿ ಹಲ್ಲೆ ನಡೆಸಿರುವ ಘಟನೆಗೆ ಟ್ವಿಸ್ಟ್ ಸಿಕ್ಕಿದೆ.
ಮಿಣಜಗಿ ಗ್ರಾಮದ ಯುವಕ ಕಾಶೀನಾಥ ಯಂಕಪ್ಪ ತಳವಾರ (28) ಎಂಬುವವನು ಬಟ್ಟೆ ತೊಳೆಯುತ್ತಿದ್ದ ಮಹಿಳೆಯರನ್ನು ಚುಡಾಯಿಸುತ್ತಿದ್ದ, ಮಹಿಳೆಯರ ಎದುರು ಬಟ್ಟೆ ಬಿಚ್ಚಿ ನಿಂತು ಅಶ್ಲೀಲವಾಗಿ ವರ್ತಿಸುತ್ತಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರಿಂದ ಥಳಿತಕ್ಕೊಳಗಾಗಿದ್ದಾನೆ.
ವಿಜಯಪುರ: ಬೈಕ್ ಮುಟ್ಟಿದ್ದು ಮೈಲಿಗೆ ಎಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿತ
ಯುವಕ ಕಾಶಿನಾಥ ಯಂಕಪ್ಪ ತಳವಾರ್ ಮೇಲೆ ಬಡಿಗೆ, ಚಪ್ಪಲಿಯಿಂದ ಥಳಿಸಲಾಗಿತ್ತು. ಈ ಕುರಿತು ಗ್ರಾಮದ 13 ಜನರ ಮೇಲೆ ಜಾತಿ ನಿಂದನೆ, ಹಲ್ಲೆ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಇಂದು ಕೂಡಾ ಯುವತಿಯಿಂದ ಹಲ್ಲೆಗೊಳಗಾದ ಕಾಶಿನಾಥನ ಮೇಲೆ ಈಗ ದೂರು ದಾಖಲಾಗಿದೆ.
ಇಂದು ಇಡೀ ಪ್ರಕರಣಕ್ಕೆ ಬಾರಿ ಟ್ವಿಸ್ಟ್ ಸಿಕ್ಕಿದ್ದು, ಗ್ರಾಮದಲ್ಲಿ ಬಟ್ಟೆ ತೊಳೆಯಲು ಹೋಗುತ್ತಿದ್ದ ಮಹಿಳೆ, ಯುವತಿಯರ ಮುಂದೆ ಬಟ್ಟೆ ಕಳಚಿ ನಿಲ್ಲುತ್ತಿದ್ದ ಕಾಶಿನಾಥ್, ಎರಡು-ಮೂರು ಬಾರಿ ಇದೇ ರೀತಿ ಮಹಿಳೆಯರ ಎದುರು ಅಶ್ಲೀಲವಾಗಿ ವರ್ತಿಸಿದ್ದ ಎಂದು ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.