ಅಸಹಾಯಕ ಸ್ಥಿತಿಯಲ್ಲಿದ್ದ ನಾಯಿಗೆ ಮರುಜನ್ಮ ನೀಡಿದ ಉಡುಪಿಯ ಯುವತಿ
ಉಡುಪಿ, ಜೂನ್ 24: ಆ ನಾಯಿ ಮರಿ ಕಳೆದ ಮೂರು ತಿಂಗಳ ಹಿಂದೆ ಉಡುಪಿಯ ಹೊಸಂಗಡಿಯ ರಸ್ತೆಯಲ್ಲಿ ನರಳಾಡುತ್ತಿತ್ತು. ರಸ್ತೆಯಲ್ಲಿ ವೇಗವಾಗಿ ಬಂದ ವಾಹನ, ನಾಯಿ ಮರಿಯ ಎಳೆಯ ಕಾಲುಗಳನ್ನು ಮುರಿದು ಬಿಟ್ಟಿತ್ತು. ನಾಯಿಯ ಮರಿಯ ನರಳಾಟ, ತೊಳಲಾಟವನ್ನು ಜನ ನೋಡಿದರೂ ಯಾರೂ ಸಹಾಯಕ್ಕೆ ಧಾವಿಸರಲಿಲ್ಲ.
15 ದಿನ ಕಳೆದರೂ ನಾಯಿ ಮಾತ್ರ ರಸ್ತೆಯ ಬದಿಯಲ್ಲೇ ನರಳಾಡುತ್ತಾ ಜೀವನ್ಮರಣ ಹೋರಾಟದಲ್ಲಿತ್ತು. ನಾಯಿಯ ಜೊತೆಗೆ ಮನುಷ್ಯನ ಮಾನವೀಯತೆ ಸತ್ತೇ ಹೋಯಿತು ಅನ್ನುವಷ್ಟರಲ್ಲೇ ನಾಯಿಯ ಪಾಲಿಗೆ ಅಶ್ವಿನಿ ದೇವತೆಯ ರೂಪದಲ್ಲಿ ಸ್ಥಳೀಯ ನಿವಾಸಿ ಕೆಪಿಸಿಎಲ್‌ನಲ್ಲಿ ಉದ್ಯೋಗದಲ್ಲಿರುವ ಪ್ರಿಯಾ ಬಂದಿದ್ದಾರೆ. ನಾಯಿಯನ್ನು ಕಂಡು ಮಮ್ಮಲ ಮರುಗಿ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿದ್ದ ಶ್ವಾನಕ್ಕೆ ಶಸ್ತ್ರಚಿಕಿತ್ಸೆ; ಮಾನವೀಯತೆ ಮೆರೆದ ಪ್ರಾಣಿಪ್ರಿಯರು
ನಾಯಿ ಹಿಂಬದಿಯ ಎರಡು ಕಾಲುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಡೆಯುವುದಕ್ಕೂ ಅಸಾಧ್ಯವಾಗಿತ್ತು. ಸುಮಾರು 15 ದಿನಗಳ ಚಿಕಿತ್ಸೆ ಇಲ್ಲದಿರುವುದರಿಂದ ಕಾಲಿನ ಗಾಯ ಕೂಡಾ ಉಲ್ಬಣವಾಗಿದೆ. ಆದರೆ, ಚಿಕಿತ್ಸೆಯ ಬಳಿಕ ವೈದ್ಯರೂ ನಾಯಿ ಬದುಕುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು.
ಆದರೆ ಪ್ರಿಯಾ ಅವರ ನಾಯಿ ಮೇಲಿದ್ದ ಪ್ರೀತಿ, ತೋರಿಸಿದ ಪರಿಶುದ್ಧವಾದ ಅಕ್ಕರೆ ನಾಯಿಯನ್ನು ಮತ್ತೆ ಬದುಕಿಸಿದೆ. ಆದರೆ ಹಿಂಬದಿಯ ಎರಡೂ ಕಾಲುಗಳು ನಿಷ್ಕ್ರಿಯವಾಗಿದೆ. ಆದರೆ ನಾಯಿ ಎದ್ದು ಓಡಾಟ ಮಾಡಲೇಬೇಕೆಂದು ಆಲೋಚಿಸಿದ ಪ್ರಿಯಾ, ತಾನು ಕಲಿತ ಇಂಜಿನಿಯರಿಂಗ್ ತಂತ್ರಗಾರಿಕೆಯನ್ನು ಉಪಯೋಗಿಸಿದ್ದಾರೆ.

ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡುವಂತಹ ವಿಧಾನವನ್ನೇ ಬಳಸಿ ನಾಯಿ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಆನ್‌ಲೈನ್ ಮೂಲಕ ಎರಡು ಪುಟ್ಟ ಚಕ್ರಗಳನ್ನು ತರಿಸಿಕೊಂಡು ಸಾಧನ ತಯಾರಿಸಿದ್ದಾರೆ. ಯುಪಿವಿಸಿ ಪೈಪ್‌ಗೆ ಚಕ್ರವನ್ನು ಜೋಡಿಸಿ ಎರಡು ಕಾಲುಗಳ ನಡುವೆ ಚಕ್ರಗಳ ಚಲನೆವಾಗುವಂತೆ ಮಾಡಿದ್ದಾರೆ.
ಅಲ್ಲಿಯವರೆಗೆ ತೆವಳಿಕೊಂಡು ಹೋಗುತ್ತಿದ್ದ ನಾಯಿ, ಈ ಸಾಧನ ಬಳಸಿ ಹೋಗಲು ಅಭ್ಯಾಸವಾಗುವಂತೆ ತರಬೇತಿ ನೀಡಿದ್ದಾರೆ. ಈ ಕೃತಕ ಕಾಲು ನಿರ್ಮಾಣದ ನಂತರ ಪುಟ್ಟ ನಾಯಿಯಲ್ಲಿ ಮತ್ತೆ ಲವಲವಿಕೆ ಎದ್ದು ಬಂದಿದೆ. ಖುಷಿಯಲ್ಲಿ ಅತ್ತಿಂದ ಇತ್ತ ಓಡಾಡಿದೆ. ಬದುಕಲು ಸಾಧ್ಯವೇ ಇಲ್ಲವೆಂದು ಎಲ್ಲರೂ ಭಾವಿಸಿದ್ದ ನಾಯಿ, ಕೇವಲ ಪ್ರೀತಿಯಲ್ಲೇ ಬದುಕಿ ಈಗ ಮನೆಯವರ ಅಚ್ಚುಮೆಚ್ಚಿನ ನಾಯಿಯಾಗಿ ಮನೆಯ ಸದಸ್ಯನ ಸ್ಥಾನವನ್ನು ಪಡೆದಿದೆ.