ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥ ಶವಗಳಿಗೆ ಶವಸಂಸ್ಕಾರ: ಇಲ್ಲೊಬ್ಬರು ವಿಶಿಷ್ಟ ಸಮಾಜ ಸೇವಕರು

|
Google Oneindia Kannada News

ರಸ್ತೆಯಲ್ಲಿ ಅಪಘಾತವಾದಾಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೇ ವಿಡಿಯೋ ಮಾಡುವಂತಹ ಇಂದಿನ ಕಾಲದಲ್ಲಿ, ಇಲ್ಲೊಬ್ಬರು ವಿಶಿಷ್ಟ ಸಮಾಜ ಸೇವಕರೊಬ್ಬರಿದ್ದಾರೆ. ಇವರ ಹೆಸರು ವಿಶು ಶೆಟ್ಟಿ ಅಂಬಲ್ಪಾಡಿ, ಊರು ಉಡುಪಿ. 45ವರ್ಷ ವಯಸ್ಸಿನ ಇವರು ಬ್ರಹ್ಮಚಾರಿ.

ಸಮಾಜಸೇವೆ ಮಾಡಲು ಇಂತಿಂಥ ಕ್ಷೇತ್ರಗಳೇ ಆಗಬೇಕೆಂದೇನಿಲ್ಲ ಎಂದು ತೋರಿಸಿಕೊಟ್ಟವರು ವಿಶುಶೆಟ್ಟಿ. ಅನಾಥ ಶವಗಳಿಗೆ ಶವಸಂಸ್ಕಾರ, ಶವಗಳನ್ನು ವಾರಸುದಾರರಿಗೆ ತಲುಪಿಸುವ, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ತಮ್ಮದೇ ಖರ್ಚಿನಲ್ಲಿ ಆಸ್ಪತೆಗೆ ದಾಖಲಿಸುವ, ಅಪರೂಪದ ಕಾಯಿಲೆಯಿಂದ ಬಳಲುವ ಬಡವ್ಯಕ್ತಿಗಳಿಗೆ ತಮ್ಮದೇ ದುಡ್ಡಿನಲ್ಲಿ ಚಿಕಿತ್ಸೆ ಕೊಡಿಸುವ .. ಮುಂತಾದ ಸಮಾಜ ಮತ್ತು ದೇವರು ಮೆಚ್ಚುವ ಕೆಲಸವನ್ನು ವಿಶುಶೆಟ್ಟಿ ಮಾಡುತ್ತಿದ್ದಾರೆ.

ಅತ್ಯಾಚಾರದ ವಿರುದ್ಧ 'ಜನದನಿ': ಜಯಲಕ್ಷ್ಮೀ ಪಾಟೀಲ್ ಸಂದರ್ಶನಅತ್ಯಾಚಾರದ ವಿರುದ್ಧ 'ಜನದನಿ': ಜಯಲಕ್ಷ್ಮೀ ಪಾಟೀಲ್ ಸಂದರ್ಶನ

ಯಾವುದೇ ಫಲಾಪೇಕ್ಷೆಯಿಲ್ಲದೇ, ಹಲವು ಸಂಘಸಂಸ್ಥೆಗಳ ಜೊತೆ 35ಕ್ಕೂ ಹೆಚ್ಚು ರಕ್ತದಾನ ಶಿಬಿರವನ್ನು ಆಯೋಜಿಸಿರುವ ವಿಶುಶೆಟ್ಟಿ, ತಾನೂ ರಕ್ತದಾನವನ್ನು ಮಾಡಿದ್ದಾರೆ. ನನ್ನ ಸಮಾಜಸೇವೆಗೆ ಇದುವರೆಗೆ ನೂರಾರು ಸಂಘಟನೆಗಳು ಗೌರವಿಸಿದ್ದರೂ, ಮಾನಸಿಕ ಖಿನ್ನತೆ, ಮನೆಯಿಂದ ಹೊರದೂಡಲ್ಪಟ್ಟ ವೃದ್ದರು ನನ್ನನ್ನು ಹರಸುವುದು ಇದೆ ನೋಡಿ..ಇವೆಲ್ಲಕ್ಕಿಂತಲೂ ಮಿಗಿಲು ಎನ್ನುತ್ತಾರೆ ವಿಶುಶೆಟ್ಟಿ.

ನಮಗೆ ಜೀವನ ಕೊಟ್ಟ ಈ ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಡೈಲಾಗುಗಳು ಸಿನಿಮಾದಲ್ಲಿ ಪುಂಖಾನುಪುಂಖವಾಗಿ ಬರುತ್ತದೆ, ಆದರೆ, ವಿಶುಶೆಟ್ಟಿ ಇದನ್ನು ತನ್ನ ಜೀವನದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಹೊರ ಪ್ರಪಂಚದ ಸಂಪರ್ಕವಿಲ್ಲದೇ, ಗೃಹಬಂಧನಕ್ಕೊಳಗಾದ ವೃದ್ದರನ್ನು ಬಂಧನದಿಂದ ವಿಮುಕ್ತಿಗೊಳಿಸಿ, ಸಮಾಜದ ಮುಖ್ಯವಾಹಿನಿಗೆ ತಂದ ಕೆಲಸಗಳನ್ನೂ ವಿಶುಶೆಟ್ಟಿ ಮಾಡಿದ್ದಾರೆ.

27.05.1990ರಂದು ಉಡುಪಿ ಅಂಬಲ್ಪಾಡಿ ಬೈಪಾಸಿನಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವರು ಗಂಭೀರ ಗಾಯಗೊಳ್ಳುತ್ತಾರೆ. ಕೂಡಲೇ ಅಂಬುಲೆನ್ಸ್ ಕರೆಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯರಿಂದ ತುರ್ತು ಚಿಕಿತ್ಸೆ ಕೊಡಿಸಿದೆವು. ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದೆವು, ಆದರೆ ಆ ವ್ಯಕ್ತಿ ಬದುಕಿ ಉಳಿಯಲಿಲ್ಲ. ಅವರು ಇನ್ಯಾರೂ ಅಲ್ಲ ಯಕ್ಷಗಾನ ಕ್ಷೇತ್ರದ ದಿಗ್ಗಜ ಗುಂಡ್ಮಿ ಕಾಳಿಂಗ ನಾವುಡ ಎಂದು ವಿಶುಶೆಟ್ಟಿ ಅಂದಿನ ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ.

ವಿಶುಶೆಟ್ಟಿಯವರ ಜೊತೆ ನಡೆಸಿದ 'ಒನ್ ಇಂಡಿಯಾ' ನಡೆಸಿದ ಕ್ವಿಕ್ ಸಂದರ್ಶನದ ಆಯ್ದಭಾಗ ಇಂತಿದೆ:

ನಿಮಗೆ ಸಮಾಜಸೇವೆ ಮಾಡಲು ಪ್ರೇರಣೆ ತಂದಿದ್ದು?

ನಿಮಗೆ ಸಮಾಜಸೇವೆ ಮಾಡಲು ಪ್ರೇರಣೆ ತಂದಿದ್ದು?

ಪ್ರ: ಯಾವ ವಿಷಯ ಅಥವಾ ಘಟನೆ ನಿಮಗೆ ಈ ರೀತಿಯ ಸಮಾಜಸೇವೆ ಮಾಡಲು ಪ್ರೇರಣೆ ತಂದಿದ್ದು?
ವಿಶುಶೆಟ್ಟಿ: ನಾನು ಆರನೇ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯೊಂದು ನನ್ನ ಕಣ್ಣ ಮುಂದೆ ಇನ್ನೂ ಇದೆ. ಅನಾಥ ಶವವೊಂದನ್ನು ನಗರಾಡಳಿತ ನಾಯಿಸಾಗಿಸುವ ವ್ಯಾನಿನಲ್ಲಿ ಸಾಗಿಸಿದರು, ಇದೇ ನನಗೆ ಮೂಲ ಪ್ರೇರಣೆ. ನನ್ನ ವಿದ್ಯಾರ್ಥಿ ಜೀವನದಲ್ಲೇ, ಸಮಾಜಕ್ಕೆ ನನ್ನ ಕೈಯಲ್ಲಾದ ಏನಾದರೂ ಕೆಲಸ ಮಾಡಬೇಕು ಎಂದೆನಿಸಿತು. ಅದನ್ನು ಇದುವರೆಗೂ ಮುಂದುವರಿಸಿಕೊಂಡು ಬಂದಿದ್ದೇನೆ. ನಾನು ಬ್ರಹ್ಮಚಾರಿ.. ಇದುವರೆಗೆ ಲಕ್ಶಾಂತರ ರೂಪಾಯಿ ಹಣವನ್ನು ವಿವಿಧ ಸಾಮಾಜಿಕ ಕೆಲಸಕ್ಕೆ ವ್ಯಯಿಸಿದ್ದೇನೆ. ನಾನು ಮಾಡುತ್ತಿರುವ ಕೆಲಸವನ್ನು ನೋಡಿ ಜನರು ಹರಸುತ್ತಾರೆ ನೋಡಿ.. ಅದೇ ನನಗೆ ದೊಡ್ಡ ಆಶೀರ್ವಾದ.

ನೂರಕ್ಕೂ ಹೆಚ್ಚು ವಾರಸುದಾರರು ಇಲ್ಲದ ಶವಗಳಿಗೆ ಸಂಸ್ಕಾರ ನಡೆಸಿದ್ದೇನೆ

ನೂರಕ್ಕೂ ಹೆಚ್ಚು ವಾರಸುದಾರರು ಇಲ್ಲದ ಶವಗಳಿಗೆ ಸಂಸ್ಕಾರ ನಡೆಸಿದ್ದೇನೆ

ಪ್ರ: ಇದುವರೆಗೆ 78ಕ್ಕೂ ಹೆಚ್ಚು ವಾರಸುದಾರರು ಇಲ್ಲದ ಶವದ ಸಂಸ್ಕಾರ ನಡೆಸಿದ್ದೀರಾ ಎನ್ನುವ ಸುದ್ದಿಯಿದೆ?
ವಿಶುಶೆಟ್ಟಿ: ನೂರಕ್ಕೂ ಹೆಚ್ಚು ವಾರಸುದಾರರು ಇಲ್ಲದ ಶವಗಳಿಗೆ ನಾನೇ ಸಂಸ್ಕಾರ ನಡೆಸಿದ್ದೇನೆ. ಅಪಘಾತಗೊಂಡ ಹದಿಮೂರು ಸಾವಿರಕ್ಕೂ ಹೆಚ್ಚು ಜನರನ್ನು ನನ್ನ ಸ್ವಂತ ದುಡ್ಡಿನಿಂದ ಅಂಬುಲೆನ್ಸ್ ಕರೆಸಿ, ತುರ್ತು ಚಿಕಿತ್ಸೆ ನೀಡಿಸಿದ್ದೇನೆ. ಶವಸಂಸ್ಕಾರ ನಡೆಸಿದ ನಂತರ ಎಷ್ಟೋ ಕುಟುಂಬಗಳು ನನ್ನನ್ನು ಸಂಪರ್ಕಿಸಿದ್ದುಂಟು.. ಸರಕಾರೀ ಆಸ್ಪತ್ರೆಯಲ್ಲಿ ದಾಖಲಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಹಲವು ರೋಗಿಗಳಿಗೆ, ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಚಿಕಿತ್ಸೆ ವೆಚ್ಚವನ್ನು ನೀಡಿದ್ದೇವೆ. ಬಲು ಅಪರೂಪದ ಕಾಯಿಲೆಗೆ ತುತ್ತಾದ ಬಡರೋಗಿಗಳ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ದುಡ್ಡು ಬೇಕಾದಾಗ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡು ಚಿಕಿತ್ಸೆ ಕೊಡಿಸಿದ ಉದಾಹರಣೆಗಳೂ ಇವೆ.

ನಮ್ಮ ಗಮನಕ್ಕೆ ಬಂದಂತಹ ಘಟೆನೆಗಳ ಶವಗಳಿಗೆ ಸಂಸ್ಕಾರ ಮಾಡಿದ್ದೇವೆ

ನಮ್ಮ ಗಮನಕ್ಕೆ ಬಂದಂತಹ ಘಟೆನೆಗಳ ಶವಗಳಿಗೆ ಸಂಸ್ಕಾರ ಮಾಡಿದ್ದೇವೆ

ಪ್ರ: ಆರ್ಥಿಕ ಮುಗ್ಗಟ್ಟು, ಸಂಸಾರದಲ್ಲಿನ ಮನಸ್ತಾಪದಿಂದಾಗಿ ಶವವನ್ನು ಹಾಗೇ ಬಿಟ್ಟು ಹೋಗಿರುವ ಉದಾಹರಣೆಗಳಿವೆಯಾ?
ವಿಶುಶೆಟ್ಟಿ: ಹಣದ ತೊಂದರೆಯಿಂದ ಚಿಕಿತ್ಸೆಯಿಲ್ಲದೇ, ಮನಯಿಂದ ಹೊರದೂಡಲ್ಪಟ್ಟ ವ್ಯಕ್ತಿಗಳು ಸಾವನ್ನಪ್ಪಿದಾಗ, ನಮ್ಮ ಗಮನಕ್ಕೆ ಬಂದಂತಹ ಘಟೆನೆಗಳ ಬಹಳಷ್ಟು ಶವಗಳಿಗೆ ಸಂಸ್ಕಾರ ಮಾಡಿದ್ದೇವೆ. ಜೊತೆಗೆ, ಉಡುಪಿ ನಗರದಲ್ಲಿ ಹದಿನಾರು ಶವಗಳ ವಾರಸುದಾರರ ವಿಳಾಸ ಪತ್ತೆಹಚ್ಚಿ, ಅವರನ್ನು ಸ್ಥಳಕ್ಕೆ ಬರಮಾಡಿಕೊಂಡು, ಶವವನ್ನು ವಾರಸುದಾರರಿಗೆ ನೀಡಿದ ಕೆಲಸಗಳನ್ನೂ ಮಾಡಿದ್ದೇನೆ.

ಎಷ್ಟೇ ದೊಡ್ಡ ವ್ಯಕ್ತಿಗಳಾಗಲಿ, ಸತ್ತ ಮೇಲೆ ಅದು ಹೆಣವೇ

ಎಷ್ಟೇ ದೊಡ್ಡ ವ್ಯಕ್ತಿಗಳಾಗಲಿ, ಸತ್ತ ಮೇಲೆ ಅದು ಹೆಣವೇ

ಪ್ರ: ಸರಕಾರಕ್ಕೆ ನಿಮ್ಮ ಸಲಹೆ ಮತ್ತು ಮನವಿ?
ವಿಶುಶೆಟ್ಟಿ: ಎಷ್ಟೇ ದೊಡ್ಡ ವ್ಯಕ್ತಿಗಳಾಗಲಿ, ಸತ್ತ ಮೇಲೆ ಅದು ಹೆಣವೇ, ವಿಐಪಿಗಳ ಶವಕ್ಕೆ ಸಾವಿರಾರೂ ರೂಪಾಯಿ ಬರೀ ಹೂವಿಗೇ ಖರ್ಚು ಮಾಡುವುದನ್ನು ನೋಡುತ್ತೇವೆ. ಗಂಧದ ಮರದ ತುಂಡಿನಲ್ಲಿ ಶವಸುಡುವುದನ್ನು ಕೇಳಿದ್ದೇವೆ. ಅನಾಥ ಶವಗಳಿಗೆ ಕನಿಷ್ಠ ಸಂಪ್ರದಾಯದಂತೆ ಹೂವು ಹಾಕಿ ಸಂಸ್ಕಾರ ನಡೆಸದೇ ಇದ್ದರೆ ಹೇಗೆ? ಈ ಸಮಾಜದಲ್ಲಿ ಇದ್ದು ನಾವು ಏನು ಪ್ರಯೋಜನ? ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಆಗಿರಲಿ, ಅವರವರ basic ಸಂಪ್ರದಾಯದಂತೆ ಶವಸಂಸ್ಕಾರ ನಡೆಸಲು ಸ್ವಲ್ಪಮಟ್ಟಿನ ಸಹಾಯವನ್ನಾದರೂ ನಗರಾಡಳಿತ ನೀಡಬೇಕು ಎನ್ನುವುದು ಸಲಹೆ ಮತ್ತು ಮನವಿ.

ಬಡ ಮಹಿಳೆಯರಿಗೆ ತಾಳಿ, ಬೆಳಕಿಲ್ಲದ ಎರಡು ಮನೆಗೆ ಸ್ವಂತ ಖರ್ಚಿನಿಂದ ಬೆಳಕಿನ ಜೋಡನೆ

ಬಡ ಮಹಿಳೆಯರಿಗೆ ತಾಳಿ, ಬೆಳಕಿಲ್ಲದ ಎರಡು ಮನೆಗೆ ಸ್ವಂತ ಖರ್ಚಿನಿಂದ ಬೆಳಕಿನ ಜೋಡನೆ

ಪ್ರ: ಬೇರೆ ಯಾವ ಯಾವ ರೀತಿಯ ಸಮಾಜಸೇವೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದೀರಿ?
ವಿಶುಶೆಟ್ಟಿ: ಸ್ವಂತ ಖರ್ಚಿನಲ್ಲಿ ವನಮಹೋತ್ಸವ, ಕ್ಷಯರೋಗಿಗಳಿಗೆ ಹಾಲು, ಮೊಟ್ಟೆ, ಹಣ್ಣು ವಿತರಣೆ, ನೂರಕ್ಕೂ ಹೆಚ್ಚು ಜನರಿಗೆ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನವನ್ನು ದೊರಕಿಸಿಕೊಟ್ಟಿದ್ದೇನೆ. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯಡಿ ಮದ್ಯವರ್ಜನೆ ಶಿಬಿರದ ಅಧ್ಯಕ್ಷ, ಮೂರು ಬಡ ಮಹಿಳೆಯರಿಗೆ ತಾಳಿ, ಬೆಳಕಿಲ್ಲದ ಎರಡು ಮನೆಗೆ ಸ್ವಂತ ಖರ್ಚಿನಿಂದ ಬೆಳಕಿನ ಜೋಡನೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಕಾನೂನು ನೆರವು..ಹೀಗೆ..ಮುಂದುವರಿಯುತ್ತದೆ..

English summary
Vishu Shetty, a social servant from Udupi (Karnataka) has done hundreds of last rites to orphan dead bodies. Vishu Shetty is a bachelor, numerous social services to physically, mentally and financially backward peoples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X