ಉಡುಪಿ: ಪೊಲೀಸ್ ಕಾನ್‌ಸ್ಟೆಬಲ್ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು; ಡೆತ್‌ನೋಟ್ ಪತ್ತೆ
ಉಡುಪಿ, ಮೇ 02: ಉಡುಪಿಯ ಆದಿ ಉಡುಪಿ ಪ್ರೌಢಶಾಲೆಯಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್‌ಸ್ಟೆಬಲ್ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ.
ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ಹಲವು ಹೆಸರಗಳನ್ನು ಉಲ್ಲೇಖಿಸಿದ್ದಾರೆ.
ಉಡುಪಿ: ಮಾನಸಿಕ ಕಿರುಕುಳ ಹಿನ್ನಲೆ; ಗುಂಡಿಕ್ಕಿಕೊಂಡು ಪೊಲೀಸ್ ಕಾನ್‌ಸ್ಟೆಬಲ್ ಆತ್ಮಹತ್ಯೆ
ರಾಜೇಶ್ ಕುಂದರ್ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಡಿಎಆರ್ ಎಪಿಸಿಗಳಾದ ಉಮೇಶ್ ಅಶ್ಫಕ್, ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ನಂಜಪ್ಪ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ. ಆರೋಪಿಗಳ ವಿರುದ್ಧ 306 RW, 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್‌ನೋಟ್ ಪತ್ತೆಯಾಗಿದ್ದು ಹೇಗೆ?
ಮೃತ ರಾಜೇಶ್ ಕುಂದರ್ ಜೊತೆಗೆ ಆದಿ ಉಡುಪಿ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಉಡುಪಿ ಡಿಎಆರ್ ಘಟಕದ ಕಾನ್‌ಸ್ಟೇಬಲ್ ಗಣೇಶ್ ಶನಿವಾರ ಕರ್ತವ್ಯ ಮುಗಿಸಿಕೊಂಡು ಡಿಎಆರ್ ಮುಖ್ಯ ಕಚೇರಿಗೆ ಬಂದು ಕಿಟ್ ಬಾಕ್ಸ್ ಪರೀಶಿಲಿಸಿದ್ದಾರೆ. ಈ ಸಂದರ್ಭ ಬ್ಯಾಗ್‌ನಲ್ಲಿದ್ದ ಸಮವಸ್ತ್ರ ಹಾಗೂ ಬೆಡ್‌ಶೀಟ್ ಹೊರತೆಗೆದಾಗ ಡೆತ್‌ನೋಟ್ ಪತ್ತೆಯಾಗಿದೆ.
ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದ ಗಣೇಶ್ ಡೆತ್‌ನೋಟ್ ಅನ್ನು ನಗರ ಠಾಣೆಗೆ ಹಾಜರುಪಡಿಸಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ರಾಜೇಶ್ ಕುಂದರ್ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.
ತಿಂಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಜಗಳವಾಗಿತ್ತು
ತಿಂಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ, ರಾಜೇಶ್ ಹೋದ್ಯೋಗಿಗಳೊಂದಿಗೆ ಜಗಳವಾಡಿದ್ದರು. ಮೂವರು ಪೊಲೀಸ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇಲಾಖೆಯಲ್ಲಿನ ಡ್ಯೂಟಿ ಟೈಮ್ ಹಾಗೂ ಸೀನಿಯಾರಿಟಿ ಸಂಬಂಧ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಈ ಗಲಾಟೆಗೆ ಸಂಬಂಧಿಸಿದಂತೆ ರಾಜೇಶ್ ಸೇರಿದಂತೆ ಮೂವರನ್ನು ಅಮಾನತಿನಲ್ಲಿ ಇರಿಸಲಾಗಿತ್ತು. ಅಮಾನತ್ತಿನ ಅವಧಿ ಪೂರೈಸಿಕೊಂಡು ಗುರುವಾರವಷ್ಟೇ ರಾಜೇಶ್ ಕುಂದರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಆಗಿರುವ ಇವರನ್ನು ಮಲ್ಪೆ ಠಾಣೆಯ ಮೂಲಕ ಆದಿಉಡುಪಿ ಶಾಲೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಕರ್ತವ್ಯದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಉಡುಪಿ ಪೊಲೀಸ್ ಇಲಾಖೆ ದಿಗ್ಭ್ರಮೆಗೆ ಒಳಗಾಗಿದೆ. ಸಹೋದ್ಯೋಗಿಗಳು ಹೇಳುವಂತೆ ಸೂಕ್ಷ್ಮ ಮನಸ್ಸಿನವರಾದ ರಾಜೇಶ್, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವೀಕ್ ಮೈಂಡೆಡ್ ಅಲ್ಲ. ಈ ಆತ್ಮಹತ್ಯೆ ಆಘಾತ ತಂದಿದೆ ಎಂದು ನಿವೃತ್ತ ಪೊಲೀಸ್ ಸಿಬ್ಬಂದಿಗಳು ಹೇಳಿದ್ದಾರೆ.
ಇಲಾಖೆಯೊಳಗಿನ ಅವ್ಯವಸ್ಥೆಯಿಂದಲೇ ಈ ರೀತಿ ಆಗುತ್ತಿದೆ. ಮೇಲಧಿಕಾರಿಗಳಿಗೆ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳ ಬಗ್ಗೆ ಸ್ವಲ್ಪವೂ ಕನಿಕರವಿಲ್ಲ. ಬ್ರಿಟಿಷರ ಕಾಲದ ಆರ್ಡರ್ಲಿಯಂತಹ ವ್ಯವಸ್ಥೆ ಇವತ್ತಿಗೂ ಜಾರಿಯಲ್ಲಿದೆ. ಕರ್ನಾಟಕದ ಪೊಲೀಸರು ಕನಿಷ್ಠ ಸಂಬಳಕ್ಕೆ ದುಡಿಯುತ್ತಿದ್ದಾರೆ. ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗಳು ಕೂಡ ಹೆಚ್ಚಿವೆ. ಇಲಾಖೆಯೊಳಗಿನ ಇಂತಹ ಸಮಸ್ಯೆಗಳಿಂದಲೇ ನೊಂದು ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಂತಾ ನಿವೃತ್ತ ಪೊಲೀಸ್ ಸಿಬ್ಬಂದಿ ಆರೋಪ ಮಾಡಿದ್ದಾರೆ.