ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೌರ್ಯ ಪ್ರಶಸ್ತಿಗೆ ಚಿಕ್ಕಾಸೂ ಬೆಲೆ ನೀಡದ ಕೇರಳ ಸರಕಾರ; ವೃದ್ಧೆಯ ದಶಕಗಳ ಹೋರಾಟ

By ರಹೀಂ ಉಜಿರೆ
|
Google Oneindia Kannada News

ಉಡುಪಿ, ಜನವರಿ 27: ಬರಿಗೈಯಲ್ಲಿ ಡಕಾಯಿತರೊಡನೆ ಹೋರಾಡಿ ಅಪ್ರತಿಮ ಸಾಹಸ ಪ್ರದರ್ಶಿಸಿದ್ದಕ್ಕಾಗಿ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಗಳಿಸಿದ ತನ್ನ ಗಂಡನಿಗೆ ಸಿಗಬೇಕಾಗಿದ್ದ ಗೌರವಧನಕ್ಕಾಗಿ ನಾಲ್ಕು ದಶಕಗಳಿಂದಲೂ ಹೋರಾಡುತ್ತಿರುವ ವಿಜಯಲಕ್ಷ್ಮಿ ಎಂಬ ವೃದ್ಧೆ ಇದೀಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾರೆ.

ಕಲ್ಲಿಕೋಟೆ ಜಿಲ್ಲೆಯ ಕೊಯಿಲಾಂಡಿಯ ನಿವಾಸಿ 82 ವರ್ಷ ವಿಜಯಲಕ್ಷ್ಮಿ ಅವರಿಗೆ ನ್ಯಾಯ ಸಿಗುವ ತನಕ ಪ್ರತಿಷ್ಠಾನದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ಸಿಕ್ಕಿದೆ. 1951ರಲ್ಲಿ ಪದವಿ ಶಿಕ್ಷಣ ಮುಗಿಸಿದ ಬಾಲಕೃಷ್ಣ ನಾಯರ್ ಅದೇ ವರ್ಷ ಮಂಗಳೂರಿನ ಬಂದರು ಪೋಲೀಸ್ ಠಾಣೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದರು. ಅನಂತರದಲ್ಲಿ ಹಂಪನ ಕಟ್ಟೆ, ಬದಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ನಾಯರ್, ಭಾಷಾವಾರು ಪ್ರಾಂತಗಳ ರಚನೆಯಾದಾಗ ಕಾಸರಗೋಡಿನಲ್ಲಿದ್ದುದರಿಂದ ಅಧಿಕೃತವಾಗಿ ಕೇರಳ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.

ಉಡುಪಿ; ತುರ್ತು ಸೇವೆಗೆ ಸಿದ್ಧಗೊಂಡಿವೆ 12 ERSS ವಾಹನಗಳು ಉಡುಪಿ; ತುರ್ತು ಸೇವೆಗೆ ಸಿದ್ಧಗೊಂಡಿವೆ 12 ERSS ವಾಹನಗಳು

ಬಾಲಕೃಷ್ಣ ನಾಯರ್ ತೋರಿದ ಅಪ್ರತಿಮ ಸಾಹಸ

ಬಾಲಕೃಷ್ಣ ನಾಯರ್ ತೋರಿದ ಅಪ್ರತಿಮ ಸಾಹಸ

1961ರಲ್ಲಿ ಮಂಜೇಶ್ವರ ಠಾಣೆಯಲ್ಲಿದ್ದಾಗ ಅಂದಿನ ಅಂತರ್ ರಾಜ್ಯ ಡಕಾಯಿತ ಕಿಟ್ಟು ಅಗಸ ತನ್ನ ಸಂಗಡಿಗರೊಂದಿಗೆ ಬದಿಯಡ್ಕದ ಭಟ್ಟರೋರ್ವರ ಮನೆಗೆ ದಾಳಿ ನಡೆಸಲಿದ್ದಾನೆ ಎಂಬ ರಹಸ್ಯ ಮಾಹಿತಿ ಪಡೆದ ನಾಯರ್, ಪೊಲೀಸ್ ಮಾಹಿತಿದಾರ ಮಹಮ್ಮದ್ ಅವರೊಂದಿಗೆ ಸ್ಥಳಕ್ಕೆ ಧಾವಿಸಿದರು. ಪೊಲೀಸ್ ಆಗಮನದ ಸುಳಿವು ದೊರೆತ ಕಿಟ್ಟು ಅಗಸ ಪಲಾಯನಕ್ಕೆ ಮುನ್ನ ಹೊಡೆದ ಗುಂಡು ಮಹಮ್ಮದರ ಕಣ್ಣಿಗೆ ತಗುಲಿತು. ಗಂಭೀರವಾಗಿ ಗಾಯಗೊಂಡ ಮಹಮ್ಮದ್ ಸ್ಥಳದಲ್ಲೇ ಕುಸಿದರು. ಜೀವದ ಹಂಗುತೊರೆದು, ಪಿಸ್ತೂಲು ಧಾರಿಯಾಗಿದ್ದ ಕಿಟ್ಟು ಅಗಸನ ಮೇಲೆ ಬರಿಗೈಯಲ್ಲೇ ಮುಗಿಬಿದ್ದ ನಾಯರ್ ಆತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದರು. ಡಕಾಯಿತನನ್ನು ಲಾಕಪ್ ಗೆ ಸೇರಿಸಿದ ನಾಯರ್, ತೀವ್ರವಾಗಿ ಗಾಯಗೊಂಡ ಮಾಹಿತಿದಾರ ಮಹಮ್ಮದ್ ಅವರನ್ನು ರಾತ್ರಿ 4:30 ಗಂಟೆಗೆ ತನ್ನ ಮೋಟಾರು ಸೈಕಲಿನಲ್ಲೇ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸಾಗಿಸಿ ಸಾರ್ವಜನಿಕರಿಂದಲೂ ಪ್ರಶಂಸೆ ಗಳಿಸಿದರು.

ಪ್ರಶಸ್ತಿಯೊಂದಿಗೆ ನೀಡಲಾಗುವ ನಗದು ಪುರಸ್ಕಾರ

ಪ್ರಶಸ್ತಿಯೊಂದಿಗೆ ನೀಡಲಾಗುವ ನಗದು ಪುರಸ್ಕಾರ

ಅದಾಗಲೇ ಆರು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಿಟ್ಟು ಅಗಸನನ್ನು ದೊಚಿದ ಹಣ ಹಾಗೂ ಒಡವೆಗಳ ಸಹಿತ ಬಂಧಿಸುವಲ್ಲಿ ತೋರಿದ ಅಪ್ರತಿಮ ಸಾಹಸ ಹಾಗೂ ಸಮಯೋಚಿತ ಕಾರ್ಯಚರಣೆಯಿಂದ ಮಹಮ್ಮದ್ ಜೀವ ಉಳಿಸಿದ್ದಕ್ಕಾಗಿ ಗಣರಾಜೋತ್ಸವದಂದು ಬಾಲಕೃಷ್ಣ ನಾಯರ್ ರಾಷ್ಟಪತಿಗಳಿಂದ ಶೌರ್ಯ ಪ್ರಶಸ್ತಿ ಹಾಗೂ ಚಿನ್ನದ ಪದಕ ಗಳಿಸಿದ್ದರು. ಕೇಂದ್ರ ಸರಕಾರ ರೂಪಿಸಿದ ನಿಯಮದಂತಯೇ ರಾಷ್ಟ್ರ ಪ್ರಶಸ್ತಿ ಗಳಿಸಿದ ಸೈನಿಕರು ಅಥವಾ ಪೊಲೀಸರು ಪ್ರಶಸ್ತಿಯ ದಿನಾಂಕದಿಂದ ಪ್ರತಿ ತಿಂಗಳೂ ತಮ್ಮ ಸಂಬಳದೊಂದಿಗೆ ವಿಶೇಷ ನಗದು ಬಹುಮಾನವನ್ನೂ ಪಡೆಯುತ್ತಾರೆ. ಒಂದು ವೇಳೆ ಪ್ರಶಸ್ತಿ ವಿಜೇತರು ನಿವೃತ್ತಗೊಂಡಲ್ಲಿ ಪ್ರಶಸ್ತಿಯ ಹಣವನ್ನು ಪ್ರತೀ ತಿಂಗಳು ಅವರ ನಿವೃತ್ತಿ ವೇತನದೊಂದಿಗೆ ನೀಡಲಾಗುತ್ತದೆ. ಅವರ ಮರಣಾನಂತರ ಅವರ ವಿಧವೆಯರೂ ಈ ನಗದು ಪುರಸ್ಕಾರಕ್ಕೆ ಅರ್ಹರಾಗುತ್ತಾರೆ.

ಶೌರ್ಯ ಪ್ರಶಸ್ತಿಯ ನಗದು ಪುರಸ್ಕಾರ

ಶೌರ್ಯ ಪ್ರಶಸ್ತಿಯ ನಗದು ಪುರಸ್ಕಾರ

ಸುಮಾರು 30 ವರ್ಷಗಳ ಸೇವೆ ಸಲ್ಲಿಸಿದ ಬಾಲಕೃಷ್ಣ ನಾಯರ್, 1981ರಲ್ಲಿ ನಿವೃತ್ತರಾದರು. ಪ್ರಶಸ್ತಿ ಸಿಕ್ಕಿದ 1961ರಿಂದ 1975ವರೆಗೆ ತಿಂಗಳಿಗೆ ಬರೀ 25 ರೂಪಾಯಿಗಳ ನಗದು ಪುರಸ್ಕಾರ ಪಡೆಯುತ್ತಿದ್ದ ನಾಯರ್, ಅಲ್ಲಿಂದ ತಮ್ಮ ಜೀವಿತಾವಧಿಯ ತನಕವೂ ತಿಂಗಳಿಗೆ 100 ರೂ.ಗಳನ್ನು ಪಡೆಯುತ್ತಿದ್ದರು. 1988ರಲ್ಲಿ ಬಾಲಕೃಷ್ಣ ನಾಯರ್ ಅವರ ಮರಣಾನಂತರ ಅವರ ಪತ್ನಿ ದಕ್ಷಿಣ ಕನ್ನಡದ ಸುರತ್ಕಲ್‍ನಲ್ಲಿ ನೆಲೆಸತೊಡಗಿದರು. ನಿಯಮದ ಪ್ರಕಾರ ಪ್ರಶಸ್ತಿ ವಿಜೇತರ ಪತ್ನಿಗೂ ಕುಟುಂಬದ ಪಿಂಚಣಿಯೊಂದಿಗೆ ಈ ಶೌರ್ಯ ಪ್ರಶಸ್ತಿಯ ನಗದು ಪುರಸ್ಕಾರವೂ ಸಿಗಬೇಕಾಗಿತ್ತು.

ಮಾಹಿತಿ ಹಕ್ಕು ಕಾಯಿದೆಯ ಮೂಲಕ ಸಿಕ್ಕಿದ ಮಾಹಿತಿ

ಮಾಹಿತಿ ಹಕ್ಕು ಕಾಯಿದೆಯ ಮೂಲಕ ಸಿಕ್ಕಿದ ಮಾಹಿತಿ

ಆದರೆ ಪ್ರಶಸ್ತಿ ಬಾಬ್ತು ಸಿಗಬೇಕಾದ 100 ರೂ.ಗಳನ್ನು ಪಡೆಯಲು ಇಂದಿನವರೆಗೂ ಪ್ರತಿ ತಿಂಗಳೂ ವಿಧವೆ ವಿಜಯಮ್ಮ ಕಲ್ಲಿಕೋಟೆಯ ಕೊಯಿಲಾಂಡಿಗೆ ಸ್ವತಃ ಹೋಗಿ ಅಲ್ಲಿನ ಪೊಲೀಸ್‍ ಠಾಣೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಅವರು ನೀಡಿದ 100 ರೂ.ಗಳ ಚೆಕ್ಕನ್ನು ಅದೇ ಊರಿನ ಸ್ಟೇಟ್ ಬ್ಯಾಂಕಿನಿಂದ ನಗದಿಸಬೇಕಾಗಿದೆ. ಈ ಹಣವನ್ನು ಸುರತ್ಕಲ್‍ನಲ್ಲಿರುವ ತನ್ನ ಬ್ಯಾಂಕ್ ಖಾತೆಗೆ ಕಳುಹಿಸಿರಿ ಎಂದು ವಿಜಯಲಕ್ಷ್ಮಿ ಮಾಡಿದ ಎಲ್ಲಾ ವಿನಂತಿಗಳೂ ವ್ಯರ್ಥವಾಗಿವೆ. ಉಪಾಯವಿಲ್ಲದೇ ವಿಜಯಲಕ್ಷ್ಮಿ ಐದಾರು ತಿಂಗಳಿಗೊಮ್ಮೆ ಕೊಯಿಲಾಂಡಿಗೆ ತೆರಳಿ ಹಣ ಪಡೆಯುವುದನ್ನು ರೂಢಿಸಿಕೊಂಡರು. ಸುಮಾರು 18 ವರ್ಷಗಳ ಕಾಲ ನಗದು ಪುರಸ್ಕಾರ ಪುರಾಣ ಹೀಗೇಯೇ ಮುಂದುವರೆಯಿತು. ಕೊನೆಗೊಮ್ಮೆ ಕಲ್ಲಿಕೋಟೆಯ ಮಾಹಿತಿ ಹಕ್ಕು ಕಾರ್ಯಕರ್ತರೋರ್ವರನ್ನು ಕಂಡು ವಿಚಾಸಿದಾಗ "ಪ್ರಶಸ್ತಿಗೆ ಸೇರಿದ ನಗದು ಪುರಸ್ಕಾರ ಜೀವನದುದ್ದಕ್ಕೂ ಒಂದೇ ಆಗಿರಲು ಸಾಧ್ಯವೇ ಇಲ್ಲ. ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ ಈ ಮೊತ್ತವನ್ನು ಏರಿಸಲೇಬೇಕು" ಎಂಬ ನಿಯಮವಿದೆ ಎಂದು ತಿಳಿಯಿತು.

ಕೇಂದ್ರ ಸರಕಾರದ ಗೃಹ ಮಂತ್ರಾಲಯಕ್ಕೆ ಅರ್ಜಿ

ಕೇಂದ್ರ ಸರಕಾರದ ಗೃಹ ಮಂತ್ರಾಲಯಕ್ಕೆ ಅರ್ಜಿ

ಆ ಕೂಡಲೇ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಕೇಂದ್ರ ಸರಕಾರದ ಗೃಹ ಮಂತ್ರಾಲಯಕ್ಕೆ ಅರ್ಜಿ ಸಲ್ಲಿಸಿ ಈ ಕುರಿತ ಮಾಹಿತಿ ನೀಡುವಂತೆ ಆಗ್ರಹಿಸಿದರು. 2014ರ ಅಕ್ಟೋಬರ್ ನಲ್ಲಿ ಗೃಹ ಸಚಿವಾಲಯದಿಂದ ಬಂದ ಪತ್ರ ಓದಿದಾಗ ತನ್ನನ್ನೇ ನಂಬದಾರರು. ಶೌರ್ಯ ಪ್ರಶಸ್ತಿ ವಿಜೇತರಿಗೆ ಸಿಗಬೇಕಾಗಿದ್ದ 100 ರೂಪಾಯಿಗಳ ಪುರಸ್ಕಾರ 1997ರಿಂದ 200 ರೂ.ಗಳಿಗೇರಿಸಲಾಗಿತ್ತು. ಅನಂತರದ ಸರಾಸರಿ ಐದು ವರ್ಷಗಳಿಗೊಮ್ಮೆ ಏರಿಸುತ್ತಾ 2013ನೇ ವರ್ಷಕ್ಕೆ ಈ ಮೊತ್ತ ತಿಂಗಳಿಗೆ 3000 ರೂ.ಗಳಿಗೇರಿಸಲಾಗಿತ್ತು. ಆದರೆ ಇವರಿಗೆ ಜೀವಮಾನವಿಡೀ ಸಿಗುತ್ತಿದ್ದದ್ದು ತಿಂಗಳಿಗೆ 100 ರೂಪಾಯಿ ಮಾತ್ರ. ಇನ್ನೂ ನಾಚಿಕೆಗೇಡಿನ ವಿಷಯವೆಂದರೆ ಕಳೆದೆರಡು ವರ್ಷಗಳಿಂದ ಅದೂ ಸಿಗುತ್ತಿಲ್ಲ.

ಕಾನೂನು ಪ್ರಕ್ರಿಯೆಗೂ ಬಗ್ಗದ ಪೊಲೀಸ್ ಇಲಾಖೆ

ಕಾನೂನು ಪ್ರಕ್ರಿಯೆಗೂ ಬಗ್ಗದ ಪೊಲೀಸ್ ಇಲಾಖೆ

ತನಗೆ ಸಿಗುತ್ತಿರುವ ಕುಟುಂಬ ಪಿಂಚಣಿಗಿಂತ ತನ್ನ ಗಂಡನ ಶೌರ್ಯ ಪ್ರಶಸ್ತಿಗೆ ಸಿಗಬೇಕಾದ ನ್ಯಾಯಯುತ ಗೌರವ ಪಡೆದೇ ತೀರುತ್ತೇನೆ ಎಂದು ಪೊಲೀಸ್ ಇಲಾಖೆಯನ್ನು ಕೋರ್ಟ್ ಗೆಳೆಯಲು ನಿರ್ಧರಿಸಿದರು. 2015ರಲ್ಲಿ ಕಲ್ಲಿಕೋಟೆಯ ವಕೀಲರೋರ್ವರಿಂದ ಕೇರಳ ಸರಕಾರದ ಗೃಹ ಸಚಿವಾಲಯಕ್ಕೆ ನೀಡಿದ ನೋಟಿಸಿಗೆ ವರ್ಷವೊಂದು ಕಳೆದರೂ ಕೇರಳ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, 2016ನೇ ನವೆಂಬರ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಲಾಯರ್ ನೋಟೀಸ್ ಕಳುಹಿಸಿದರು. ಕೇವಲ ಹತ್ತೇ ದಿನಗಳಲ್ಲಿ ಕೇರಳದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ಕೇಂದ್ರ ಗೃಹ ಸಚಿವಾಲಯವು ವಿಜಯಮ್ಮನವರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆದೇಶಿಸಿತು.

Recommended Video

ಅಂಗಡಿಗಳ ಮುಂದೆ ರಾರಾಜಿಸಲಿದೆ ಕನ್ನಡ ಫಲಕ-ಇಲ್ಲದಿದ್ರೆ Trade License Cancel ! | Oneindia Kannada
ಮಾನವ ಹಕ್ಕು ಪ್ರತಿಷ್ಠಾನದಿಂದ ಕಾರ್ಯಾಚರಣೆ

ಮಾನವ ಹಕ್ಕು ಪ್ರತಿಷ್ಠಾನದಿಂದ ಕಾರ್ಯಾಚರಣೆ

ಕೆಲ ದಿನಗಳಲ್ಲೇ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ವಿಜಯಮ್ಮನಿಗೆ ಕಳುಹಿಸಿದ ಪತ್ರದಲ್ಲಿ "ನಿಮ್ಮ ಗಂಡ ಬಾಲಕೃಷ್ಣ ನಾಯರ್ ನಿವೃತ್ತರಾದ ಯುನಿಟ್ ಯಾವುದು? ನಿವೃತ್ತಿ ಸೌಲಭ್ಯ ಮಂಜೂರು ಮಾಡಿದ ಕಚೇರಿ ಯಾವುದು?" ಎಂಬ ಅಸಂಬದ್ಧ ಪ್ರಶ್ನೆಗಳನ್ನೇ ಕೇಳಲಾಗಿತ್ತು. ಈಗಾಗಲೇ ಬರೆದ ಪತ್ರಗಳಲ್ಲಿ ಪಿಂಚಣಿ ಆದೇಶ ಪತ್ರದ (PPO) ಸಹಿತ ಎಲ್ಲಾ ವಿವರಗಳನ್ನು ನೀಡಲಾಗಿತ್ತು. ಆದರೂ ಎಲ್ಲಾ ವಿವರಗಳಿರುವ ಇನ್ನೊಂದು ರಿಜಿಸ್ಟ್ರರ್ಡ್ ಪತ್ರ ಕಳುಹಿಸಿದರು. ಅದಾಗಿ ನಾಲ್ಕು ವರ್ಷಗಳೇ ಕಳೆದಿವೆ. ಹಾಗಾಗಿ ಪೋಲೀಸ್ ಮಹಾನಿರ್ದೇಶಕರ ಕಚೇರಿಗೆ ಆಗಾಗ ಪತ್ರ ಬರೆದು ಆಗ್ರಹಿಸುವುದನ್ನು ಬಿಟ್ಟು ವಿಜಯಲಕ್ಷ್ಮೀ ಬೇರೇನು ಮಾಡಿಯಾರು? ಇತ್ತ ನ್ಯಾಯಾಲಯದಲ್ಲಿ ಹೂಡಿದ ದಾವೆ ಪ್ರಸ್ತುತ ಯಾವ ಹಂತದಲ್ಲಿದೆ ಎಂದು ವಕೀಲರು ಹೇಳುತ್ತಿಲ್ಲ. ಇದೀಗ ಅವರು ಉಡುಪಿಯ ಮಾನವ ಹಕ್ಕು ಹೋರಾಟಗಾರ ಡಾ.ರವೀಂದ್ರನಾಥ್ ಮುಂದೆ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

English summary
The 82-year-old Vijayalakshmi, a resident of Koilandi in Kallikote district, has been given full support by the Human Rights Foundation of Udupi until justice is obtained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X