ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಸಂಭ್ರಮ

|
Google Oneindia Kannada News

ಉಡುಪಿ, ಅಕ್ಟೋಬರ್ 19: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿಯೂ ದೀಪಾವಳಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಪರ್ಯಾಯ ಸ್ವಾಮೀಜಿ ತನ್ನ ಶಿಷ್ಯ ವೃಂದದವರೊಂದಿಗೆ ತೈಲ ಹಚ್ಚಿ ಸಂಭ್ರಮಿಸುತ್ತಾರೆ.

ಇದೇ ವೇಳೆ ಕೃಷ್ಣನಿಗೆ ಪಶ್ಚಿಮ ಜಾಗರ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ಬಾರಿ ಪೇಜಾವರ ಕಿರಿಯ ಸ್ವಾಮೀಜಿ ಮತ್ತು ಸೋದೆ ಮಠದ ಸ್ವಾಮೀಜಿ ಎಣ್ಣೆ ಹಚ್ಚಿದ ಬಳಿಕ ಶಿಷ್ಯರ ಜೊತೆ ಕಬಡ್ಡಿ ಆಡಿದ್ದು ಶಿಷ್ಯರಿಗೆ ದೀಪಾವಳಿ ಸಂಭ್ರಮ ಹೆಚ್ಚುವಂತೆ ಮಾಡಿತ್ತು.

 Shri Krisha Temple in Udupi celebrates Diwali with traditional flavor

ಬುಧವಾರ ದೀಪಾವಳಿ ಸಂಭ್ರಮದ ಮೊದಲ ದಿನ. ನರಕಾಸುರನನ್ನು ಶ್ರೀಕೃಷ್ಣ ಪರಮಾತ್ಮ ಸಂಹರಿಸಿ ನಾಡಿಗೆ ಅಸುರರ ಕಾಟದಿಂದ ಮುಕ್ತಿ ನೀಡಿದ ದಿನ. ಇದನ್ನೇ ನರಕ ಚತುರ್ದಶಿ ಅಂತ ಕರೆಯುತ್ತಾರೆ. ಕಡೆಗೋಲು ಕೃಷ್ಣನ ಊರಾದ ಉಡುಪಿಯ ಶ್ರೀಕೃಷ್ಣ ಮಠದಲ್ಲಂತೂ ನರಕ ಚತುರ್ದಶಿ ಸಂಭ್ರಮ ಬೆಳ್ಳಂಬೆಳಿಗ್ಗೆಯಿಂದಲೇ ಕಂಡುಬಂತು.

ಮುಂಜಾನೆ ನಾಲ್ಕೂವರೆ ಗಂಟೆಗೆ ಶ್ರೀಕೃಷ್ಣನಿಗೆ ಪಶ್ಚಿಮ ಜಾಗರ ಪೂಜೆಯನ್ನು ಸಂಪ್ರದಾಯದಂತೆ ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳು ನೆರವೇರಿಸಿ, ಬಳಿಕ ಇತರ ಸ್ವಾಮೀಜಿಯವರಿಗೆ ಎಣ್ಣೆ ಸ್ನಾನಕ್ಕಾಗಿ ತೈಲ ಹಚ್ಚಿದರು.

ಕೃಷ್ಣ ಮಠದ ಗರ್ಭ ಗುಡಿಯ ಸುತ್ತಲೂ ಇಟ್ಟಿದ್ದ ಸಾಲು ಸಾಲು ಹಣತೆಗಳು ದೀಪಾವಳಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತ್ತು. ಕಾಣಿಯೂರು, ಸೋದೆ, ಕೃಷ್ಣಾಪುರ ಮಠಾಧೀಶರು ಪರ್ಯಾಯ ಮಠದ ಸ್ವಾಮೀಜಿಗಳ ಪೂಜೆ ವೇಳೆ ಉಪಸ್ಥಿತರಿದ್ದರು.

 Shri Krisha Temple in Udupi celebrates Diwali with traditional flavor

ಇನ್ನು ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಅನೇಕ ಶಿಷ್ಯವೃಂದದವರು ಜತೆಗೂಡಿ ಎಣ್ಣೆ ಹಚ್ಚುವ ಸಂಭ್ರಮ ಕಂಡು ಬಂತು. ಒಬ್ಬೊಬ್ಬರಾಗಿ ತಮ್ಮ ನೆಚ್ಚಿನ ಗುರುಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರು.

ಪೇಜಾವರ ಪರ್ಯಾಯ ಮಠದ ಕಿರಿಯ ಯತಿಗಳಿಗೆ ಹಾಗೂ ಸೋದೆ ಮಠದ ಸ್ವಾಮೀಜಿಗಳಿಗೆ ಎಣ್ಣೆ ಹಚ್ಚಿದರು. ಅಲ್ಲದೇ ಸ್ವಾಮೀಜಿಗಳು ಕೂಡಾ ತಮ್ಮ ಶಿಷ್ಯರಿಗೆ , ಮಠಕ್ಕೆ ಆಗಮಿಸಿದ್ದ ಭಕ್ತರ ತಲೆ ಹಾಗೂ ಮೈಗೆ ಎಣ್ಣೆ ಸವರಿ ಆಶೀರ್ವದಿಸಿದರು.

ಇಷ್ಟು ಮಾತ್ರವಲ್ಲದೇ ಎಣ್ಣೆ ಹಚ್ಚಿದ ಬಳಿಕ ಸೋದೆ ಮಠದ ವಿಶ್ವವಲ್ಲಭ ಶ್ರೀಪಾದರು ಹಾಗೂ ಪೇಜಾವರ ಮಠದ ಕಿರಿಯ ಯತಿಗಳು ತಮ್ಮ ಶಿಷ್ಯರ ಜೊತೆ ತಂಡ ಕಟ್ಟಿಕೊಂಡು ಮಠದ ಒಳಾಂಗಣದಲ್ಲಿ ಗ್ರಾಮೀಣ ಸೊಗಡಿನ ಕ್ರೀಡೆ ಕಬಡ್ಡಿ ಆಟ ಆಡುವ ಮೂಲಕ ದೀಪಾವಳಿ ಹಬ್ಬದ ಸಂಭ್ರಮವನ್ನು ಇನ್ನಷ್ಟೂ ಹೆಚ್ಚಿಸಿದರು. ಬಳಿಕ ಬಿಸಿನೀರಿನಲ್ಲಿ ಸ್ವಾಮೀಜಿಗಳು ಸ್ನಾನ ಮಾಡುವ ಸಂಪ್ರದಾಯವೂ ನಡೆಯಿತು.

ಒಟ್ಟಿನಲ್ಲಿ ದೀಪಾವಳಿ ಹಬ್ಬದ ಮೊದಲ ದಿನವೇ ಅಷ್ಟಮಠಗಳ ಊರಿನಲ್ಲಿ ಸಂಭ್ರಮ ಕಳೆಗಟ್ಟಿದೆ. ಅಲ್ಲದೇ ಶ್ರೀ ಕೃಷ್ಣ ಮಠದಲ್ಲಿ ಇಂದಿಗೂ ಪರಂಪರೆಯಂತೆ ಹಬ್ಬಗಳನ್ನು ಆಚರಿಸುತ್ತಾ ಬರುತ್ತಿರುವುದು ಇಲ್ಲಿಯ ವಿಶೇಷ.

English summary
Shri Krisha Temple celebrates Diwali with traditional flavor here in Udupi on October 18. Large devotees flocked into the temple to celebrate Diwali .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X