• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೆ.18ರಂದು ಅದಮ್ಯ ಜೀವನೋತ್ಸಾಹದ ಪಗೋ ಸಂಕಥನ

By Prasad
|

ನಿಷ್ಪಕ್ಷಪಾತ ವರದಿಗಾರಿಕೆಗೆ ಹೆಸರಾಗಿದ್ದ, ಕಿರಿಯ ಪತ್ರಕರ್ತರಿಗೆ ಆದರ್ಶಪ್ರಾಯವಾಗಿದ್ದ, ಯಾರ ಮುಲಾಜಿಗೂ ಒಳಗಾಗದೆ ವಸ್ತುನಿಷ್ಠ ಸುದ್ದಿಗಳನ್ನು ಬರೆಯುತ್ತಿದ್ದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ಅಂಕಣಬರಹ ಪುಸ್ತಕ ರೂಪದಲ್ಲಿ ಲೋಕಾರ್ಪಣೆಯಾಗುತ್ತಿದೆ.

1995ನೆ ಇಸವಿಯಲ್ಲಿ ಹೊಸದಿಗಂತ ಪತ್ರಿಕೆಯ ವಾರದ ಕಾಲಂನಲ್ಲಿ 26 ವಾರ ಮೂಡಿಬಂದ 'ವಿಶೇಷ ಸೃಷ್ಟಿಗಳ ಲೋಕದಲ್ಲಿ' ಮಂಗಳೂರಿನ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರ ಅಂಕಣ ಬರಹ. ಈ ಅಂಕಣ ಬರಹಗಳೇ ಹೊತ್ತಗೆಯ ರೂಪದಲ್ಲಿ ಹೊರಬರುತ್ತಿವೆ.

ವೃತ್ತ ಪತ್ರಿಕಾ ಜಗತ್ತಿನ ಎಲ್ಲಾ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳು, ಅನುಭವಿಸಿದ ನೋವು- ನಲಿವುಗಳನ್ನು ನಿರ್ಮೋಹದಿಂದ ವಸ್ತುನಿಷ್ಠವಾಗಿ ಬರೆದ ಈ ಅಂಕಣ ಬರಹ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯದಲ್ಲೂ, ಕನ್ನಡ ಸಾಹಿತ್ಯದಲ್ಲೂ ಒಂದು ವಿಶಿಷ್ಟ ಬರವಣಿಗೆ ಹಾಗು ಈ ಅಂಕಣ ಬರಹ ಪಗೋ ಆತ್ಮಕಥೆಯ ಒಂದು ಭಾಗವೂ ಹೌದು.

ಅಂದು 1995ರಲ್ಲಿ ಹೊಸದಿಗಂತ ಪತ್ರಿಕೆಯ ಅಪಾರ ಸಂಖ್ಯೆಯ ಒದುಗರಿಂದ ಮೆಚ್ಚುಗೆ ಪಡೆದ ಅಂಕಣ ಬರಹ 'ವಿಶೇಷ ಸೃಷ್ಟಿಗಳ ಲೋಕದಲ್ಲಿ' 22 ವರ್ಷಗಳ ನಂತರ 2018ರಲ್ಲಿ 'ಅನುಭವ ಅನುಭಾವಗಳ ನಡುವೆ' ಶೀರ್ಷಿಕೆಯೊಂದಿಗೆ ಪತ್ರಕರ್ತನೊಬ್ಬನ ಜೀವನೋತ್ಸಾಹದ ಸಂಕಥನವಾಗಿ ಇನ್ನೊಮ್ಮೆ ನಾಡಿನ ಒದುಗರ ಮುಂದೆ ಕಾಂತಾವರ ಕನ್ನಡ ಸಂಘದ 'ಸಂಸ್ಕೃತಿ ಸಂವರ್ಧನಾ ಮಾಲೆ'ಯ ಮೂರನೆ ಕುಸುಮವಾಗಿ ಪುಸ್ತಕ ರೂಪದಲ್ಲಿ ಲೋಕಾರ್ಪಣೆಯಾಗಲಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಕಾಂತಾವರ ಕನ್ನಡ ಸಂಘದ, ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ರವಿವಾರ, 18ನೇ ಫೆಬ್ರವರಿ 2018ರಂದು 10 ಗಂಟೆಗೆ ಜರುಗುವ ಸಮಾರಂಭದಲ್ಲಿ ಹಿರಿಯ ರಾಜಕೀಯ ಮುತ್ಸದ್ದಿ ಮತ್ತು ಸಂಸ್ಕೃತಿ ಚಿಂತಕ ಧಾರವಾಡದ ಚಂದ್ರಕಾಂತ ಬೆಲ್ಲದ್ ಅವರ ಅಧ್ಯಕ್ಷತೆಯಲ್ಲಿ ಬಿಡುಗಡೆಯಾಗಲಿದೆ.

ಹಿರಿಯ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಬೆಂಗಳೂರಿನ ಪಾಂಚಜನ್ಯ ಪಬ್ಲಿಕೇಷನ್ಸ್ 'ಅನುಭವ ಅನುಭಾವಗಳ ನಡುವೆ' ಪುಸ್ತಕವನ್ನು ಪ್ರಕಟಿಸುತ್ತಿದೆ.

ಪ.ಗೋ ದಿವಂಗತರಾಗಿ 20 ವರ್ಷ ಕಳೆದ ನಂತರ ಅವರ ಅಂಕಣ ಬರಹ ಮತ್ತೊಮ್ಮೆ ಪುಸ್ತಕದ ರೂಪದಲ್ಲಿ ಬರುತ್ತಿದೆ. ಹೈಸ್ಕೂಲಿನ ಮೆಟ್ಟಲುಗಳನ್ನು ಏರದೇ ಇದ್ದ ಪಗೋ ಅವರ ಬರಹ ಎವರ್ -ಗ್ರೀನ್ ಎಂಬುದಕ್ಕೆ ಈ ಪುಸ್ತಕವೇ ಸಾಕ್ಷಿ.

ಪ.ಗೋ ಜೀವನ ವೃತ್ತಾಂತ

ಕರಾವಳಿಯ ಪದ್ಯಾಣ ಗೋಪಾಲಕೃಷ್ಣ ಅವರ ಹುಟ್ಟೂರು ದಕ್ಷಿಣ ಕನ್ನಡ ಮತ್ತು ಈಗಿನ ಕಾಸರಗೋಡು ಜಿಲ್ಲೆಗಳ ಗಡಿಯಂಚಿನಲ್ಲಿರುವ ಅಡ್ಯನಡ್ಕ. 1928ರಲ್ಲಿ ಜನಿಸಿದ ಅವರು 1956ರಲ್ಲಿ ಕನ್ನಡ ದಿನ ಪತ್ರಿಕೆ 'ವಿಶ್ವ ಕರ್ನಾಟಕ' ಮುಖಾಂತರ ಬೆಂಗಳೂರಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮುಂದೆ ತಾಯಿನಾಡು, ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ 'ಶಕ್ತಿ' ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದವರು ಪ.ಗೋ.

1959ರ ಸುಮಾರಿಗೆ ಮಂಗಳೂರಿಗೆ ಬಂದು ನೆಲಸಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ನಂತರ ಇಂಡಿಯನ್ ಎಕ್ಸ್ ಪ್ರೆಸ್, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಮುಂಜಾನೆ - ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿ ಮುಂದುವರಿದರು.

1963-1964ರಲ್ಲಿ ಮಂಗಳೂರಿನಲ್ಲಿ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗುವ ಮೂಲಕ, ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. 1994ರಲ್ಲಿ ಕಾರ್ಯನಿರತ ಪತ್ರಿಕೋದ್ಯಮದಿಂದ ನಿವೃತ್ತಿ ಹೊಂದುವ ಮೊದಲು ತಮ್ಮ ಒಂಬತ್ತು ವರ್ಷಗಳನ್ನು ಇಂಗ್ಲಿಷ್ ಪತ್ರಿಕಾರಂಗದ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ಸಲ್ಲಿಸಿ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಅಂಕಣ ಬರವಣಿಗೆಯನ್ನು ಕೊನೆ ತನಕ ಮುಂದುವರಿಸಿ 10-8-1997ರಂದು ಈ ಪ್ರಪಂಚಕ್ಕೆ ವಿದಾಯ ಹೇಳಿದರು.

1956ರಿಂದ 1997ನೇ ಇಸವಿವರೆಗೆ ನಾಲ್ಕು ದಶಕಗಳಷ್ಟು ದೀರ್ಘ ಕಾಲವಧಿಯಲ್ಲಿ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಪ.ಗೋ. ಬರೆದ ಅಂಕಣ ಸಾಹಿತ್ಯವು ಸುಮಾರು ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದೆ. ಬೆಳ್ಳಿಯ ಸೆರಗು ಎಂಬ ಸಾಮಾಜಿಕ ಕಾದಂಬರಿ, ಗನ್ ಬೋ ಸ್ಟ್ರೀಟ್ ಮತ್ತು ಓ.ಸಿ.67 ಎಂಬ ಪತ್ತೇದಾರಿ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಹೆಗ್ಗಳಿಕೆ ಅವರದ್ದು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ಯತೆ ಪಡೆದು, ಕರ್ನಾಟಕ ರಾಜ್ಯ ವಾರ್ತಾ ಮತ್ತು ವಿದ್ಯುತ್ ಸಚಿವರಿಂದ ವಿಧ್ಯುಕ್ತವಾಗಿ ಉದ್ಘಾಟಿಸಿ 6 ಅಕ್ಟೋಬರ್ 1976ರಂದು ಪ್ರಾರಂಭಗೊಂಡ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದವರು ಪ.ಗೋಪಾಲಕೃಷ್ಣ. ಪ್ರತಿವರ್ಷ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗಾಗಿ ಪ.ಗೋ. ಪ್ರಶಸ್ತಿ ನೀಡಲಾಗುತ್ತಿರುವುದೂ ಇಲ್ಲಿ ಸ್ಮರಣಾರ್ಹ.

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ತಮ್ಮ ನೆನಪಿನಾಳದಿಂದ ಬರೆದ 'ಪ ಗೋ ಪ್ರಪಂಚ' ಮತ್ತು ಸೇರಾಜೆ ಸೀತಾರಾಮ ಭಟ್ ಅವರು ಬರೆದ ವ್ಯಕ್ತಿ ಚಿತ್ರಣ 'ಸ್ವಾಭಿಮಾನದ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ' ಇವುಗಳು ಪತ್ರಕರ್ತ ಪ ಗೋ ಅವರ ಬಗ್ಗೆ 2016ನೇ ಇಸವಿಯಲ್ಲಿ ಹೊರಬಂದ ಪುಸ್ತಕಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior journalist Padyana Gopalakrishna's column collection is coming out in book form on 18th February in Kanthavara in Karkala Taluk, Udupi. He was fondly known as PaGo and also known for his well articulated write ups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more