ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಕ್ಷಗಾನ; ಪೆರ್ಡೂರು ಮೇಳದಿಂದ ಜನ್ಸಾಲೆ ಔಟ್, ಧಾರೇಶ್ವರ ಇನ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 26; ಕಳೆದ ಎರಡು ವರ್ಷಗಳ‌ ಹಿಂದೆ ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮಂಡಳಿಯಿಂದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ವೇದಿಕೆಯಿಂದ ಕೆಳಗಿಳಿಸಿ ಅಪಮಾನ ಮಾಡಿದ ಬಳಿಕ ಈಗ ಬಡಗುತಿಟ್ಟು ಮೇಳದಲ್ಲಿ ಇದೇ ಮಾದರಿಯ ವಿಚಾರ ನಡೆದಿದೆ.

ಬಡಗುತಿಟ್ಟಿನ ಪ್ರಖ್ಯಾತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ತಾನು ಹಲವು ವರ್ಷಗಳಿಂದ ಯಕ್ಷಗಾನ ಸೇವೆ ಮಾಡಿದ ಪೆರ್ಡೂರು ಮೇಳದ ತಿರುಗಾಟಕ್ಕೆ ತಿಲಾಂಜಲಿ ಹಾಡಿದ್ದಾರೆ. ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ಇನ್ನು ಮುಂದೆ ಪೆರ್ಡೂರು ಮೇಳದ ಭಾಗವಾಗಿರುವುದಿಲ್ಲ. ಜನ್ಸಾಲೆಯವರ ಹೀಗೊಂದು ಆಶ್ಚರ್ಯಕರ ನಿರ್ಧಾರ ಯಕ್ಷಕಲಾ ಅಭಿಮಾನಿಗಳಲ್ಲಿ ಧಿಗ್ಭಮ್ರೆ ಮೂಡಿಸಿದೆ.

ರಂಗಸ್ಥಳದಲ್ಲೇ ಕುಸಿದು ಬಿದ್ದ ಯಕ್ಷಗಾನ ಕಲಾವಿದ; ವಿಡಿಯೋ ವೈರಲ್ರಂಗಸ್ಥಳದಲ್ಲೇ ಕುಸಿದು ಬಿದ್ದ ಯಕ್ಷಗಾನ ಕಲಾವಿದ; ವಿಡಿಯೋ ವೈರಲ್

ಈ ವರ್ಷದ ತಿರುಗಾಟಕ್ಕೆ ತಯಾರಿ ನಡೆಸಿರುವ ಪೆರ್ಡೂರು ಮೇಳ ಕೆಲವೊಂದು ಮುಮ್ಮೇಳ ಕಲಾವಿದರ ಬದಲಾವಣೆ ನಡೆಸಿತ್ತು. ಆದರೆ ತಿರುಗಾಟ ಪ್ರಾರಂಭಕ್ಕೆ ಕೆಲವೇ ದಿನ ಇದೆ ಎನ್ನುವಾಗ ಕಳೆದ 9 ವರ್ಷಗಳಿಂದ ಮೇಳದ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯರು ಮೇಳದಿಂದ ನಿರ್ಗಮಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Raghavendra Acharya Jansale Quits Perdoor Mela Subramanya Dhareshwara In

ಜನ್ಸಾಲೆ ಸ್ಥಾನಕ್ಕೆ ಪೆರ್ಡೂರು ಮೇಳದಲ್ಲಿ ಹಲವು ವರ್ಷಗಳ ಮೇಳದ ನೊಗ ಹೊತ್ತಿದ್ದ ಮತ್ತೊರ್ವ ಹಿರಿಯ ಹಾಗೂ ಪ್ರಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರವರನ್ನು ಕರೆ ತರಲಾಗಿದೆ. 9 ವರ್ಷಗಳ ತರುವಾಯ ಮತ್ತೆ ಅವರು ಈ ವರ್ಷದ ತಿರುಗಾಟದ ಮೂಲಕ ಪೆರ್ಡೂರು ಮೇಳದ ಪ್ರಧಾನ ಭಾಗವತರ ನೆಲೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಕರಾವಳಿಯಲ್ಲಿ ಗೆಜ್ಜೆ ಕಟ್ಟಿ ಯಕ್ಷ ಸೇವೆಗೆ ಸಜ್ಜಾದ ಕಲಾವಿದರು ಕರಾವಳಿಯಲ್ಲಿ ಗೆಜ್ಜೆ ಕಟ್ಟಿ ಯಕ್ಷ ಸೇವೆಗೆ ಸಜ್ಜಾದ ಕಲಾವಿದರು

9 ವರ್ಷಗಳ ಹಿಂದೆ ಧಾರೇಶ್ವರರು ಬಡಗುತಿಟ್ಟಿನ ಪ್ರಸಿದ್ದ ಮೇಳಗಳಲ್ಲಿ ಒಂದಾದ ಪೆರ್ಡೂರು ಮೇಳದ ಸಾರಥ್ಯವಹಿಸಿಕೊಂಡಿದ್ದರು. ಎರಡೂವರೆ ದಶಕಕ್ಕೂ ಅಧಿಕ ಕಾಲ ಅವರು ಈ ಮೇಳದಲ್ಲಿ ಯಕ್ಷ ಕೃಷಿ ಮಾಡಿದ್ದಾರೆ. ಶಿವಾನಿ-ಭವಾನಿ, ನಾಗವಲ್ಲಿ, ದಾಮಿನಿ-ಭಾಮಿನಿ, ಸಾವನಿ-ಪಾವನಿ, ಹೀಗೆ ಅನೇಕ ಯಶಸ್ವಿ ಸಾಮಾಜಿಕ ಹಾಗೂ ಪೌರಾಣಿಕ ಪ್ರಸಂಗಗಳು ಇವರ ದಕ್ಷ ನಿರ್ದೇಶನ ಹಾಗೂ ಪ್ರಧಾನ ಭಾಗವತಿಕೆಯಲಿ ಮೂಡಿಬಂದು ಜನಪ್ರಿಯ ಕಲಾ ಪ್ರಸಂಗಗಳು ಎನಿಸಿಕೊಂಡಿದ್ದವು. ಪೆರ್ಡೂರು ಮೇಳದಿಂದ ನಿರ್ಗಮಿಸಿದ ಇವರು ಕೇವಲ ಅತಿಥಿ ಕಲಾವಿದರಾಗಿ ಹಾಗೂ ಧಾರೇಶ್ವರ ಯಕ್ಷಬಳಗದಲ್ಲಿ ಮಾತ್ರ ಭಾಗವಹಿಸುತ್ತಿದ್ದರು.

ಬೀದಿಗೆ ಬಿದ್ದ ಹಿರಿಯ ಯಕ್ಷ ಜೀವಕ್ಕೆ ಆಸರೆಯಾದ ಪಟ್ಲ ಸತೀಶ್ ಶೆಟ್ಟಿಬೀದಿಗೆ ಬಿದ್ದ ಹಿರಿಯ ಯಕ್ಷ ಜೀವಕ್ಕೆ ಆಸರೆಯಾದ ಪಟ್ಲ ಸತೀಶ್ ಶೆಟ್ಟಿ

64 ಹರೆಯದ ಧಾರೇಶ್ವರರು ಯಕ್ಷಗಾನದ ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ಪರಿಚಯಿಸಿದ ಸ್ವರ ಸಂಯೋಜಕರಾಗಿದ್ದಾರೆ. ಪೆರ್ಡೂರು ಮೇಳವೂ ಪೌರಣಿಕ ಪ್ರಸಂಗಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸಾಮಾಜಿಕ ಪ್ರಸಂಗಳನ್ನು ಆಡಿಸುವ ಮೇಳವಾಗಿದೆ. ಧಾರೇಶ್ವರರು ಈ ಎರಡು ಮಾದರಿಯ ಪ್ರಸಂಗದಲ್ಲೂ ನಿಷ್ಣಾತರಾಗಿದ್ದಾರೆ.

ನವೆಂಬರ್ 30ರಿಂದ ಮೇಳ ಈ ಸಾಲಿನ ತಿರುಗಾಟ ಆರಂಭಿಸಲಿದ್ದು ಪ್ರೊ. ಪವನ್ ಕಿರಣ್ಕರೆ ಅವರ 'ಕೃಷ್ಣಕಾದಂಬಿನಿ' ಪ್ರಸಂಗ ಈ ವರ್ಷದ ಕಥಾನಕವಾಗಿ ಪ್ರದರ್ಶನವಾಗಲಿದೆ. ಮತ್ತೆ ಮೇಳದ ಸಾರಥ್ಯ ವಹಿಸುವದನ್ನು ಧಾರೇಶ್ವರರು ಧೃಡಪಡಿಸಿದ್ದಾರೆ. "ಪೆರ್ಡೂರು ಬಿಟ್ಟ ಬಳಿಕ ಯಾವುದೇ ಮೇಳದಲ್ಲಿ ತಿರುಗಾಟ ಮಾಡಿರಲಿಲ್ಲ. ಈಗ ಕರುಣಾಕರ ಶೆಟ್ಟಿ ಅವರು ಮತ್ತೆ ಮೇಳಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ" ಎಂದು ಧಾರೇಶ್ವರ ಸ್ಪಷ್ಟ ಪಡಿಸಿದ್ದಾರೆ.

ಜನ್ಸಾಲೆ ಹಾಗೂ ಪೆರ್ಡೂರು ಮೇಳದ ಯಜಮಾನರ ನಡುವೆ ಕಳೆದೆರಡು ವರ್ಷಗಳಿಂದ ಶೀತಲ ಸಮರ ನಡೆಯುತ್ತಿರುವ ಬಗ್ಗೆ ಅಲ್ಲಲ್ಲಿ ವದಂತಿಗಳು ಇದ್ದವು. ಕೆಲವು ತಿಂಗಳ ಹಿಂದೆ ಇಂತಹ ಸುದ್ದಿ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ಜನ್ಸಾಲೆಯವರೇ ಸ್ಪಷ್ಟನೆ ನೀಡಿ ಮೇಳದಲ್ಲಿ ಮುಂದುವರಿಯುವ ಬಗ್ಗೆ ತಿಳಿಸಿದ್ದರು. ಆ ಬಳಿಕ ಮೇಳದ ನೂತನ ಪ್ರಸಂಗ 'ಕೃಷ್ಣಕಾದಂಬಿನಿʼಯ ಕರಪತ್ರಗಳಲ್ಲಿ ಜನ್ಸಾಲೆಯವರ ಭಾವಚಿತ್ರ ಹಾಗೂ ಹೆಸರು ನಮೂದಿಸಲಾಗಿತ್ತು. ಆದರ ಇದೀಗ ನಡೆದಿರುವ ಅಚ್ಚರಿಯ ಬೆಳವಣಿಗೆಯಲ್ಲಿ ಈ ಪ್ರಸಂಗದ ಕರಪತ್ರದಲ್ಲಿ ಧಾರೇಶ್ವರ ಅವರ ಭಾವಚಿತ್ರ ಹಾಗೂ ಹೆಸರನ್ನು ನಮೂದಿಸಲಾಗಿದೆ.

jansale

ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರು ಮುನಿಸಿಕೊಂಡು ಮೇಳ ಬಿಟ್ಟಿರುವುದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗುತ್ತಿದೆ. ಮೇಳವೂ ವಿಧಿಸಿರುವ ನೂತನ ಕಟ್ಟುಪಾಡುಗಳನ್ನು ಧಿಕ್ಕರಿಸಿ ಜನ್ಸಾಲೆಯವರು ಈ ನಿರ್ಧಾರಕ್ಕೆ ಬಂದಿದ್ದಾರೆ .

ಈ ಬಗ್ಗೆ ಪ್ರತಿಕ್ರಿಯಿಸಿರುವ ಜನ್ಸಾಲೆ, "ಹಗಲು ಹೊತ್ತಿನಲ್ಲಿ ಕೂಡ ಗಾನವೈಭವ, ತಾಳಮದ್ದಳೆಯಂತಹ ಕಾರ್ಯಕ್ರಮಗಳಿಗೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ನನ್ನನ್ನು ನಾನು ಮಾರಿಕೊಳ್ಳಲು ತಯಾರಿಲ್ಲ. ಆದ್ದರಿಂದ ಪೆರ್ಡೂರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದೇನೆ" ಎಂದು ಹೇಳಿದ್ದಾರೆ.

ಇನ್ನೂ ಈ ಬೆಳವಣಿಗೆಗಳ ಬಗ್ಗೆ ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿಯವರು ಪ್ರತಿಕ್ರಿಯಿಸಿದ್ದು, "ಮೇಳದ ವ್ಯವಸ್ಥೆಗಳಿಗೆ ಜನ್ಸಾಲೆ ಅವರು ಒಪ್ಪದೇ ಇರುವುದರಿಂದ ಬದಲಾವಣೆ ಅನಿವಾರ್ಯವಾಯಿತು. ಧಾರೇಶ್ವರ ಅವರು ಮೇಳದಲ್ಲಿ ಮುಂದುವರಿಯಲಿದ್ದಾರೆ. ಪ್ರದರ್ಶನ ಪೂರ್ವ ತಯಾರಿಗಳು ಅವರ ನಿರ್ದೇಶನದಲ್ಲಿ ಆರಂಭವಾಗಿವೆ" ಅಂತಾ ಹೇಳಿದ್ದಾರೆ.

ಜನ್ಸಾಲೆಯವರು ಯಕ್ಷಗಾನದ ಸ್ಟಾರ್ ಭಾಗವತರಾಗಿರುವುದರಿಂದ ಪೆರ್ಡೂರು ಮೇಳದ ಈ ಬೆಳವಣಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ, ಒಂದಷ್ಟು ಮಂದಿ ಜನ್ಸಾಲೆ ಪರ ಬ್ಯಾಟಿಂಗ್ ಮಾಡಿದರೆ ಉಳಿದವರು ಮೇಳದ ಯಜಮಾನರ ಪರ ವಾದ ಮಂಡಿಸುತ್ತಿದ್ದಾರೆ. ಅಸಂಖ್ಯಾತ ಅಭಿಮಾನಿಗಳನ್ನು ಅದರಲ್ಲೂ ವಿಶೇಷವಾಗಿ ಯುವ ಯಕ್ಷಗಾನ ಅಭಿಮಾನಿಗಳ ನೆಚ್ಚಿನ ಭಾಗವತರಾಗಿರುವ ಜನ್ಸಾಲೆ ಮೇಳದ ಯಶಸ್ಸಿಗೆ ಕಾರಣರಾಗಿದ್ದರು. ಇವರ ನಿರ್ಗಮನದಿಂದ ಮೇಳದ ಅಕರ್ಷಣೆಯಲ್ಲಿ ಕುಂಠಿತವಾಗಲಿದೆ ಎನ್ನುವ ವಾದ ಕೆಲವರದ್ದಾಗಿದೆ.

ಕಟೀಲು ಮೇಳದಿಂದ ತೆಂಕುತಿಟ್ಟಿನ ಪ್ರಸಿದ್ದ ಭಾಗವತರಾದ ಸತೀಶ ಶೆಟ್ಟಿ ಪಟ್ಲ ಅವರ ನಿರ್ಗಮನವೂ ಇದೇ ರೀತಿಯಾಗಿತ್ತು. ಕಟೀಲು ಮೇಳ ಮತ್ತು ಭಾಗವತ ಪಟ್ಲ ಸತೀಶ್ ಶೆಟ್ಟಿಯರಿಗೂ ಇದೇ ರೀತಿಯ ಮನಸ್ತಾಪ ಉಂಟಾಗಿತ್ತು. ಯಕ್ಷಗಾನ ನಡೆಯುತ್ತಿರುವ ಸಂದರ್ಭದಲ್ಲೇ ಮೇಳದ ಮಾಲೀಕರು ಪಟ್ಲ ಸತೀಶ್ ಶೆಟ್ಟಿಯವರನ್ನು ವೇದಿಕೆಯಿಂದ ಕೆಳಗಿಳಿಸಿ ಮೇಳದಿಂದ ಹೊರಹೋಗುವಂತೆ ಸೂಚನೆ ನೀಡಿದ್ದರು. ಪಟ್ಲರ ಘಟನೆಯೇ ಈಗ ಜನ್ಸಾಲೆ ವಿಚಾರದಲ್ಲಿ ಮರುಕಳಿಸಿದೆ.

Recommended Video

ಭಾರತೀಯ ವಾಯುಪಡೆಗೆ ಶಕ್ತಿಶಾಲಿ ಯುದ್ಧವಿಮಾನ ಸೇರ್ಪಡೆ | Oneindia Kannada

"9 ವರ್ಷದಿಂದ ಪೆರ್ಡೂರು ಮೇಳದಲ್ಲಿ ಮಾಡಿರುವ ಕೆಲಸದಲ್ಲಿ ತೃಪ್ತಿ ಇದೆ. ಬೇರೆ ಮೇಳಗಳಿಂದ ಕರೆ ಬಂದಿದ್ದರೂ, ಈಗಾಗಲೇ ಕಲಾವಿದರ ಆಯ್ಕೆ ನಡೆದಿರುವುದರಿಂದ, ನನ್ನಿಂದಾಗಿ ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವುದಕ್ಕಾಗಿ ಈ ವರ್ಷ ತಿರುಗಾಟ ಮಾಡುವುದಿಲ್ಲ. ಆದರೆ ಯಾವುದೇ ಪ್ರದರ್ಶನಕ್ಕೆ ಪ್ರೀತಿಯಿಂದ ಕರೆ ಬಂದರೂ ಅತಿಥಿಯಾಗಿ ಭಾಗವತಿಕೆಗೆ ಹೋಗುತ್ತೇನೆ" ಎಂದು ಜನ್ಸಾಲೆ ರಾಘವೇಂದ್ರ ಆಚಾರ್ಯ ಪ್ರತಿಕ್ರಿಯಿಸಿದ್ದಾರೆ.

English summary
Raghavendra Acharya Jansale quit the Perdoor Mela. Subramanya Dhareshwara to lead mela as main bhagavatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X