ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೇಜಾವರ ಶ್ರೀಗಳ ದಾಖಲೆಯ ಪರ್ಯಾಯಕ್ಕೆ ಬಾಳೆಮುಹೂರ್ತ

|
Google Oneindia Kannada News

ಉಡುಪಿ, ಡಿ 6: ನಾಡಿನ ಹಿರಿಯ ಯತಿ ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಶ್ರೀಗಳು ದಾಖಲೆಯ ಐದನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲು ಸಜ್ಜಾಗಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ನಡೆಯುವ ನಾಲ್ಕು ಮುಹೂರ್ತಗಳಲ್ಲಿ ಒಂದಾದ ಬಾಳೆ ಮುಹೂರ್ತ ಶನಿವಾರ (ಡಿ 6) ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮುಕ್ತಾಯಗೊಂಡಿದೆ. (ಸಿಎಂ ಶ್ರೀಕೃಷ್ಣನ ಅನುಗ್ರಹ ಪಡೆಯಲೇ ಇಲ್ಲ)

ಜನವರಿ 18, 2016ರಲ್ಲಿ ಪೇಜಾವರ ಶ್ರೀಗಳು ಪರ್ಯಾಯ ಪೀಠವನ್ನೇರಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಬಾಳೆ ಮುಹೂರ್ತ , ಅಕ್ಕಿ ಮುಹೂರ್ತ , ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತಗಳು ನಡೆಯುವುದು ನಾಡಿನ ಪ್ರಮುಖ ಮಧ್ವಪೀಠವಾದ ಉಡುಪಿ ಕ್ಷೇತ್ರದ ಸಂಪ್ರದಾಯ.

ರಥಬೀದಿ ಆವರಣದಲ್ಲಿ ಮೆರವಣಿಗೆ ಮೂಲಕ ಸಾಗಿ ಪೇಜಾವರ ಮಠದ ಆವರಣದಲ್ಲಿ ಬಾಳೆ ಗಿಡವನ್ನು ನೆಡುವುದು ಈ ಮುಹೂರ್ತದ ವಾಡಿಕೆ.

ಅದರಂತೇ ವೈಭವದಿಂದ ಸಾಗಿದ ಮೆರವಣಿಗೆಯಲ್ಲಿ ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳು, ಅಷ್ಠಮಠದ ಪ್ರತಿನಿಧಿಗಳು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮಾಜಿ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಮುಂತಾದವರು ಭಾಗವಹಿಸಿದ್ದರು.

ಬಾಳೆಮುಹೂರ್ತಕ್ಕೆ ಪೂರ್ವಭಾವಿಯಾಗಿ ಪೇಜಾವರ ಶ್ರೀಗಳು ತಿರುಪತಿ ವೆಂಕಟೇಶ್ವರನ ದರ್ಶನ ಪಡೆದು ಶುಕ್ರವಾರ ಉಡುಪಿಗೆ ಆಗಮಿಸಿದ್ದರು.

ತಮ್ಮ ಏಳನೇ ವರ್ಷದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದ ಪೇಜಾವರ ಶ್ರೀಗಳು ಐದನೇ ಬಾರಿ ಪರ್ಯಾಯ ಸರ್ವಜ್ಞ ಪೀಠವನ್ನು ಏರಲು ಪೂರ್ವ ತಯಾರಿಯಾಗಿ ಈ ಧಾರ್ಮಿಕ ಕಾರ್ಯಕ್ರಮ ನಡೆದಿದೆ.

1952ರಲ್ಲಿ ಮೊದಲ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದ್ದ ಶ್ರೀಗಳು 1968-70ರಲ್ಲಿ ಎರಡನೇ ಬಾರಿ, 1984-86ರಲ್ಲಿ ಮೂರನೇ ಬಾರಿ ಮತ್ತು 2000-02ರಲ್ಲಿ ನಾಲ್ಕನೇ ಬಾರಿ ಸರ್ವಜ್ಞ ಪೀಠವನ್ನು ಏರಿದ್ದರು.

ಈ ಬಾರಿ ಪೇಜಾವರ ಕಿರಿಯ ಶ್ರೀಗಳು ಪರ್ಯಾಯ ಪೀಠವನ್ನು ಏರಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಕಿರಿಯ ಶ್ರೀಗಳ ಒತ್ತಾಸೆಯ ಮೇರೆಗೆ 84 ವರ್ಷದ ಹಿರಿಯ ಶ್ರೀಗಳೇ ದಾಖಲೆಯ ಐದನೇ ಬಾರಿ ಸರ್ವಜ್ಞ ಪೀಠವನ್ನು ಏರಲಿದ್ದಾರೆ.

ಎಂಟು ಶತಮಾನಗಳ ಇತಿಹಾಸವಿರುವ ಉಡುಪಿ ಶ್ರೀಕೃಷ್ಣನ ಪೂಜಾ ಕೈಂಕರ್ಯ ಸಾಂಗವಾಗಿ ನೆರವೇರಲು ವಾದಿರಾಜ ಗುರುಗಳು ಪರ್ಯಾಯ ಪದ್ದತಿಯನ್ನು ಜಾರಿಗೆ ತಂದಿದ್ದರು.

ಮೊದಲು ಎರಡು ತಿಂಗಳಿಗೊಮ್ಮೆ ಅಷ್ಠಮಠಗಳ ನಡುವೆ ಬದಲಾಗುತ್ತಿದ್ದ ಕೃಷ್ಣಮಠದ ಅಧಿಕಾರ ತದನಂತರ ಎರಡು ವರ್ಷಕ್ಕೊಮ್ಮೆ ಬದಲಾಯಿತು.

ಆಚಾರ್ಯ ಮಧ್ವರಿಂದ ಸ್ಥಾಪಿತವಾದ ಶ್ರೀಕೃಷ್ಣಮಠದ ಉತ್ಸವಗಳಲ್ಲಿ ಪರ್ಯಾಯ ಮಹೋತ್ಸವ ಬಹಳ ಪ್ರಸಿದ್ದ. ದೇಶದ ವಿವಿಧಡೆಯಿಂದ ಲಕ್ಷಾಂತರು ಭಕ್ತರು ಇದನ್ನು ನೋಡಲು ಆಗಮಿಸುತ್ತಾರೆ. ಎರಡು ವರ್ಷಕ್ಕೊಮ್ಮೆ ಸಮ ಸಂಖ್ಯೆಯ ವರ್ಷದ ಜನವರಿ 18ರದು ಪರ್ಯಾಯ ಮಹೋತ್ಸವ ನಡೆಯುತ್ತದೆ.

Pre Paryaya preparation, Udupi Pejawar Mutt Seer performs Bale Mahurtha

ಶಾಲಿವಾಹನ ಶಕ 1371ರ ಪಿಂಗಳ ಸಂವತ್ಸರದ ಮಾಘ ಶುದ್ದ ನವಮಿಯಂದು ಆಚಾರ್ಯ ಮಧ್ವರು ತಮ್ಮ ಎಂಟು ಶಿಷ್ಯರೊಂದಿಗೆ ಉಡುಪಿ ಶ್ರೀಕೃಷ್ಣಮಠದ ಆವರಣದಲ್ಲಿರುವ ಮದನಂತೇಶ್ವರ ದೇವಾಲಯದಲ್ಲಿ ಉಪದೇಶ ಮಾಡುತ್ತಿರುವಾಗ ಅದೃಶ್ಯರಾಗಿ ಬದರಿಕಾಶ್ರಮಕ್ಕೆ ತೆರಳಿದರು ಎನ್ನುತ್ತದೆ ಇತಿಹಾಸ.

English summary
Pre Paryaya preparation, Sri Vishwesha Tirtha Swamiji of Udupi Pejawar Mutt Seer performs Bale Mahurtha in the Mutt premises on December 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X