"ಹಿಂದೂ- ಮುಸ್ಲಿಂ ಬಾಂಧವ್ಯ ಗಟ್ಟಿಗೊಳ್ಳಲು ಅವಕಾಶವಿತ್ತ ತೀರ್ಪು" ಪೇಜಾವರ ಶ್ರೀ
ಉಡುಪಿ, ನವೆಂಬರ್ 9: ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ಇಂದು ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಿದ್ದು, "ವೈಯಕ್ತಿಕವಾಗಿ ಈ ತೀರ್ಪು ನನಗೆ ಸಮ್ಮತವಾಗಿದೆ. ಎಲ್ಲರೂ ಸಮಚಿತ್ತದಿಂದ ಈ ತೀರ್ಪನ್ನು ಸ್ವೀಕರಿಸಬೇಕು" ಎಂದು ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ ಪೇಜಾವರ ಶ್ರೀಗಳು.
ಉಡುಪಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, "ಸುಪ್ರಿಂ ಕೋರ್ಟಿನ ನ್ಯಾಯಪೀಠವು ವಿವಾದಿತ ಭೂಮಿ ಮಂದಿರಕ್ಕೆ, ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ತೀರ್ಪು ನೀಡಿದೆ. ಎಲ್ಲರೂ ಸಮಚಿತ್ತದಿಂದ ಈ ತೀರ್ಪನ್ನು ಸ್ವೀಕರಿಸಬೇಕು. ನನಗೆ ವೈಯಕ್ತಿಕವಾಗಿ ತೀರ್ಪು ಸಮ್ಮತವಾಗಿದೆ. ಮುಸ್ಲಿಮರಿಗೂ ಐದು ಎಕರೆ ಕೊಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಹಾಗಾಗಿ ಈ ತೀರ್ಪು ಸರ್ವಸಮ್ಮತವಿದೆ" ಎಂದಿದ್ದಾರೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
"ಹಿಂದೂಗಳಿಗೆ ಜನ್ಮಭೂಮಿಯ ಹಕ್ಕು ಮುಖ್ಯ, ಮುಸಲ್ಮಾನರಿಗೆ ಮಸೀದಿಗೆ ಜಾಗ ಮುಖ್ಯ. ಈ ತೀರ್ಪು ಹಿಂದೂ ಮುಸಲ್ಮಾನರಲ್ಲಿ ಬಾಂಧವ್ಯ ಬೆಳೆಯಲು ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಹಿಂದೂ ಮುಸಲ್ಮಾನರು ಒಟ್ಟು ಸೇರಿ ಸೂಕ್ತ ಸ್ಥಳವನ್ನು ಮಸೀದಿಗೆ ಕೊಡಬೇಕು, ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು. ಮಂದಿರ ನಿರ್ಮಾಣ ವಿಚಾರದಲ್ಲಿ ಮುಸ್ಲಿಮರೂ ಸಹಕರಿಸಬೇಕು" ಎಂದು ಮನವಿ ಮಾಡಿದ್ದಾರೆ.
'ವಿವಾದಿತ ಜಾಗ ಹಿಂದೂಗಳಿಗೆ'; ಧರ್ಮ ರಾಜಕಾರಣಕ್ಕಿಳಿದ ಬಿಜೆಪಿಗರು
"ತೀರ್ಪು ಪ್ರಕಟ ವಿಚಾರದಲ್ಲಿ ವಿಜಯೋತ್ಸವ, ಮೆರವಣಿಗೆ ಬೇಡ ಎಂದು ನಿನ್ನೆಯೇ ಹೇಳಿದ್ದೆ. ಈಗಲೂ ಅದನ್ನೇ ಪುನರುಚ್ಚರಿಸುವೆ. ಹಿಂದೂಗಳು, ಮುಸಲ್ಮಾನರು ಸಮಚಿತ್ತದಿಂದ ಈ ತೀರ್ಪನ್ನು ಸ್ವೀಕರಿಸಿ. ನನ್ನ ಈ ಇಳಿ ವಯಸ್ಸಿನಲ್ಲಿ ಈ ತೀರ್ಪು ನೋಡುತ್ತೇನೆ ಎಂದು ಭಾವಿಸಿರಲಿಲ್ಲ, ವೈಯಕ್ತಿಕವಾಗಿ ಸಂತೋಷವಾಗಿದೆ" ಎಂದಿದ್ದಾರೆ.