ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಜಿಲ್ಲೆ ಒಂದು ಉತ್ಪನ್ನ: ಕರಾವಳಿ ಜನರ ಹೊಟ್ಟೆಗೆ ಹಿಟ್ಟು ಕೊಡುತ್ತಿರುವ ಮೀನುಗಾರಿಕೆ

By ರಹೀಂ ಉಜಿರೆ
|
Google Oneindia Kannada News

ಉಡುಪಿ, ಜನವರಿ 12: ಉಡುಪಿ ಜಿಲ್ಲೆಯ ಮುಖ್ಯ ಆರ್ಥಿಕ ಬೆನ್ನೆಲುಬು ಮೀನುಗಾರಿಕೆ. ಜಿಲ್ಲೆಯಾದ್ಯಂತ ಲಕ್ಷಾಂತರ ಜನ ನೇರವಾಗಿ ಮತ್ತು ಪರೋಕ್ಷವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆಯ ಯೋಜನೆಯಲ್ಲಿ "ಒಂದು ಜಿಲ್ಲೆ ಒಂದು ಉತ್ಪನ್ನ'ದಡಿ ಉಡುಪಿಯ ಮೀನುಗಾರಿಕೆಗೆ ಮಾನ್ಯತೆ ನೀಡಲಾಗಿದೆ.

ಸ್ವಂತ ಮೀನುಗಾರಿಕಾ ದೋಣಿಗಳಲ್ಲಿ ಮೀನು ಹಿಡಿದು ಜೀವನ ನಡೆಸುವವರು, ಬೋಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೇರೆ ಬೇರೆ ಪ್ರದೇಶಗಳಲ್ಲಿ ಮಾರುಕಟ್ಟೆಗಳಲ್ಲಿ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರು, ಮೀನಿಗೆ ಅಗತ್ಯವಾಗಿ ಬೇಕಾದ ಮಂಜುಗಡ್ಡೆ ಉತ್ಪಾದಿಸುವುದು, ಅದರ ಸಾಗಾಟ, ಮೀನುಗಳನ್ನು ಖರೀದಿಸಿ ಅಂತರ್ ಜಿಲ್ಲೆ, ಅಂತರಾಜ್ಯ ಮತ್ತು ವಿದೇಶಗಳಿಗೆ ಮೀನು ರಫ್ತು ಮಾಡುವುದು..... ಸೇರಿದಂತೆ ಬೇರೆ ಬೇರೆ ಹಂತಗಳಲ್ಲಿ ಇಲ್ಲಿ ಮೀನುಗಾರಿಕೆ ಕಸುಬು ನಡೆಯುತ್ತದೆ.

1,119 ಕೋಟಿಯ ವ್ಯವಹಾರ

1,119 ಕೋಟಿಯ ವ್ಯವಹಾರ

ಮೀನುಗಾರಿಕೆ ಇಲಾಖೆ ನೀಡಿರುವ ಅಂಕಿ ಅಂಶ ಪ್ರಕಾರ ಪ್ರತಿವರ್ಷ ಉಡುಪಿ ಜಿಲ್ಲೆಯಲ್ಲಿ 1,20,000 ಮೆಟ್ರಿಕ್ ಟನ್ ಮೀನು ವ್ಯವಹಾರ ನಡೆಯುತ್ತದೆ. 1,119 ಕೋಟಿಯ ವ್ಯವಹಾರ ಇಲ್ಲಿ ಪ್ರತಿವರ್ಷ ಮೀನುಗಾರಿಕೆ ಮೂಲಕ ನಡೆಯುತ್ತದೆ. ಸಾಮಾನ್ಯವಾಗಿ ಮೀನುಗಾರಿಕೆ ಕಸುಬು ಪ್ರಕೃತಿಯನ್ನು ಅವಲಂಬಿಸಿದೆ. ಪ್ರಕೃತಿ ವಿಕೋಪ ಸಂಭವಿಸಿದಾಗಲೆಲ್ಲ ಮೀನುಗಾರರಿಗೆ ನಷ್ಟ ಉಂಟಾಗುತ್ತದೆ. ಪ್ರಕೃತಿ ವಿಕೋಪ ಎಂದರೆ ಚಂಡಮಾರುತ ಅಥವಾ ಜೋರಾದ ಗಾಳಿ ಮಳೆ ಅಥವಾ ಕಡಲು ಪ್ರಕ್ಷುಬ್ಧ ಗೊಳ್ಳುವುದು... ಇಂತಹ ಸಂದರ್ಭಗಳಲ್ಲಿ ಮೀನುಗಾರಿಕೆಗೆ ಸಾಕಷ್ಟು ಹೊಡೆತ ಬೀಳುತ್ತದೆ.

2020ರಲ್ಲಿ ಎರಡು ಬಾರಿ ಚಂಡಮಾರುತ

2020ರಲ್ಲಿ ಎರಡು ಬಾರಿ ಚಂಡಮಾರುತ

ಹಾಗೆ ನೋಡಿದರೆ 2020 ಮೀನುಗಾರರಿಗೆ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕೆಟ್ಟ ವರ್ಷ. ಪ್ರತಿವರ್ಷದ ವ್ಯವಹಾರಕ್ಕಿಂತ ಈ ಬಾರಿ ಶೇ.30 ಮೀನುಗಾರಿಕೆ ಕಡಿಮೆಯಾಗಿದೆ ಅಥವಾ ಉತ್ಪನ್ನ ಈ ವರ್ಷ ಕಡಿಮೆಯಾಗಿದೆ. 2020ರಲ್ಲಿ ಎರಡು ಬಾರಿ ಚಂಡಮಾರುತ ಬಂದಿದೆ. ಆರೇಳು ಬಾರಿ ಬೋಟ್ ದುರಂತ ಸಂಭವಿಸಿದೆ. ಬೈಂದೂರು ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ನಾಲ್ವರು ಮೀನುಗಾರರು ಸತ್ತಿದ್ದಾರೆ. ಹೀಗೆ ಬೇರೆ ಬೇರೆ ದುರಂತಗಳಲ್ಲಿ ಒಟ್ಟಾರೆ 10 ಮಂದಿ ಮೀನುಗಾರರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಮಲ್ಪೆಯ ಮೀನುಗಳು ವಿದೇಶಗಳಿಗೆ ರಫ್ತಾಗುತ್ತವೆ

ಮಲ್ಪೆಯ ಮೀನುಗಳು ವಿದೇಶಗಳಿಗೆ ರಫ್ತಾಗುತ್ತವೆ

2020 ಮಾರ್ಚ್ ನಂತರ ಮೀನುಗಾರಿಕೆಗೆ ಅವಕಾಶ ಇರಲಿಲ್ಲ ಇದಕ್ಕೆ ಮುಖ್ಯ ಕಾರಣ ಕೋವಿಡ್ ನಿಯಮಾವಳಿ. ಗುಂಪುಗುಂಪಾಗಿ ಮೀನು ಹಿಡಿಯಲು ಹೋಗುವ ಮೀನುಗಾರರಿಗೆ ಕೊರೊನಾ ಲಾಕ್ಡೌನ್ ಸಾಕಷ್ಟು ಹೊಡೆತವನ್ನೇ ನೀಡಿದೆ. ಉಳಿದಂತೆ ಉಡುಪಿ ಜಿಲ್ಲೆಯಲ್ಲಿ ಇರುವ ಮಲ್ಪೆ ಬಂದರು ಏಷ್ಯಾದಲ್ಲೇ ಅತಿ ದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಮಲ್ಪೆ ಮೀನುಗಾರಿಕಾ ಬಂದರು ಜಾತಿ, ಧರ್ಮ, ಬಣ್ಣ, ಭಾಷೆ ಎಲ್ಲವನ್ನೂ ಮೀರಿ ತನ್ನ ಬಳಿಗೆ ಬರುವ ಜನರಿಗೆ ಅನ್ನ ಹಾಕುತ್ತಿದೆ. ಮಲ್ಪೆಯ ಮೀನುಗಳು ವಿದೇಶಗಳಿಗೆ ರಫ್ತಾಗುತ್ತವೆ. ನೆರೆಯ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸಹಿತ ನೆರೆಯ ರಾಜ್ಯಗಳಿಗೆ ರವಾನೆಯಾಗುತ್ತದೆ.

ಹೊಟ್ಟೆಗೆ ಹಿಟ್ಟು ಕೊಡುತ್ತಿರುವ ಮೀನುಗಾರಿಕೆ

ಹೊಟ್ಟೆಗೆ ಹಿಟ್ಟು ಕೊಡುತ್ತಿರುವ ಮೀನುಗಾರಿಕೆ

ಬೇರೆ ಬೇರೆ ರಾಜ್ಯಗಳ ಬೇರೆ ಬೇರೆ ಜಿಲ್ಲೆಗಳ ಸಾವಿರಾರು ಜನರು ಮೀನುಗಾರಿಕೆಯಿಂದಾಗಿ ಹೊಟ್ಟೆ ಹೊರೆಯುತ್ತಿದ್ದಾರೆ. ಯಾರನ್ನೂ ಕೂಡ ಅರಬ್ಬಿ ಸಮುದ್ರ ಕೈಬಿಟ್ಟಿಲ್ಲ. ವರ್ಷದಲ್ಲಿ ಎರಡು ತಿಂಗಳ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಇರುವುದು ಬಿಟ್ಟರೆ ಉಳಿದ ಹತ್ತು ತಿಂಗಳು ಕೂಡ ಇಲ್ಲಿ ವಿಪುಲ ಮೀನುಗಾರಿಕೆ ಆಗುತ್ತದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಕರಾವಳಿ ಜನರ ಹೊಟ್ಟೆಗೆ ಹಿಟ್ಟು ಕೊಡುತ್ತಿರುವ ಮೀನುಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮೀನುಗಾರಿಕಾ ಬೋಟ್ ನಿರ್ಮಾಣ ಉದ್ಯಮ

ಮೀನುಗಾರಿಕಾ ಬೋಟ್ ನಿರ್ಮಾಣ ಉದ್ಯಮ

ಮಲ್ಪೆಯಲ್ಲಿ 2160 ಯಾಂತ್ರೀಕೃತ ದೋಣಿ ಮತ್ತು 4300 ರಷ್ಟು ನಾಡದೋಣಿಗಳಿವೆ. ಅತ್ಯಂತ ರುಚಿರುಚಿಯಾದ ಮೀನುಗಳಿಗೆ ಉಡುಪಿಯ ಮಲ್ಪೆ ಪ್ರಸಿದ್ಧಿ ಪಡೆದಿದೆ. ಬಂದರಿನ ಆಸುಪಾಸಿನಲ್ಲಿ ಮಂಜುಗಡ್ಡೆ ಉತ್ಪಾದಿಸುವ ಘಟಕಗಳಿವೆ. ಜೊತೆಯಲ್ಲೇ ಬಲೆ ನೇಯುವ ಉದ್ಯಮದ ಜೊತೆಗೆ ಮೀನುಗಾರಿಕಾ ಬೋಟ್ ನಿರ್ಮಾಣ ಮಾಡುವ ಉದ್ಯಮವೂ ಹರಡಿಕೊಂಡಿದೆ. ಇವನ್ನೆಲ್ಲ ಸೇರಿಸಿದರೆ ಲಕ್ಷಾಂತರ ಮಂದಿ ಮೀನುಗಾರಿಕೆಯಿಂದಾಗಿ ಜೀವನ ನಡೆಸುವಂತಾಗಿದೆ. ಕಳೆದ ವರ್ಷದ ಕೊರೊನಾ ಮತ್ತು ಚಂಡಮಾರುತವನ್ನು ಬಿಟ್ಟರೆ ಯಾವ ವರ್ಷವೂ ಕೂಡ ಸಮುದ್ರರಾಜ ಮೀನುಗಾರರ ಕೈಬಿಟ್ಟದ್ದಿಲ್ಲ. ಈ ವರ್ಷ ಅಂದರೆ 2021 ತಮಗೆ ಒಳ್ಳೆಯದಾಗುತ್ತದೆಂಬ ಭರವಸೆಯಲ್ಲಿ ಮೀನುಗಾರರ ಮತ್ತೆ ಮೀನು ಬೇಟೆಗೆ ಕಡಲಿಗಿಳಿದಿದ್ದಾರೆ.

ಉತ್ತಮ ಮೀನುಗಾರಿಕೆ ಆಗಬಹುದೆಂಬ ನಿರೀಕ್ಷೆ

ಉತ್ತಮ ಮೀನುಗಾರಿಕೆ ಆಗಬಹುದೆಂಬ ನಿರೀಕ್ಷೆ

ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ವರ್ಷಂಪ್ರತಿ ಆಗುವ ಮೀನುಗಾರಿಕೆಗಿಂತ ಕಳೆದ ವರ್ಷ ಶೇ.30 ರಷ್ಟು ಪ್ರೊಡಕ್ಟ್ ಕಡಿಮೆಯಾಗಿದೆ. ಇದಕ್ಕೆ ಕಾರಣ ಕೊರೋನಾ ಲಾಕ್ಡೌನ್ ಮತ್ತು ಪ್ರಾಕೃತಿಕ ವಿಕೋಪ. ಈ ವರ್ಷ ಉತ್ತಮ ಮೀನುಗಾರಿಕೆ ಆಗಬಹುದೆಂಬ ನಿರೀಕ್ಷೆಯಲ್ಲಿ ಮೀನುಗಾರರು ಇದ್ದಾರೆ ಎಂದು ತಿಳಿಸಿದ್ದಾರೆ.

English summary
Fishing is the main economic backbone of Udupi district. Lakhs of people are directly and indirectly involved in fishing across the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X