ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗಾಲದ ನಿಷೇಧ ಮುಗೀತು ಇನ್ನು ಸೇಂಟ್ ಮೇರೀಸ್ ದ್ವೀಪಕ್ಕೆ ಹೋಗಿಬನ್ನಿ...

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ ಎಂದಾಕ್ಷಣ ಎಲ್ಲರ ಮನಸ್ಸಿಗೆ ತಕ್ಷಣ ಬರುವುದು ಕೃಷ್ಣಮಠ ಮಾತ್ರ. ಅದು ಸತ್ಯವೂ ಹೌದು. ಇದರ ಜೊತೆಗೆ ಉಡುಪಿಯಲ್ಲಿ ಸಾಕಷ್ಟು ದೇವಾಲಯಗಳು, ಪ್ರವಾಸಿತಾಣಗಳೂ ಇವೆ. ಅವುಗಳಲ್ಲಿ ಮುಖ್ಯವಾದದ್ದು ಸೇಂಟ್ ಮೇರೀಸ್ ದ್ವೀಪ. ಮೂರು ತಿಂಗಳ ಮಳೆಗಾಲದ ನಿಷೇಧದ ಬಳಿಕ ಇದೀಗ ಈ ಪುಟ್ಟ ದ್ವೀಪ ಪ್ರವಾಸಿಗರಿಗೆ ತೆರೆದುಕೊಂಡಿದೆ.

ಸೇಂಟ್ ಮೇರೀಸ್ ಗೆ ಹೋಗುವವರು ಉಡುಪಿಗೆ ಬರಲೇಬೇಕು. ಹೀಗಾಗಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟೇ ಸೇಂಟ್ ಮೇರೀಸ್ ದ್ವೀಪಕ್ಕೆ ಪ್ರಯಾಣಿಸುವ ಯೋಜನೆ ಹಾಕಿಕೊಂಡರೆ ಒಳ್ಳೆಯದು. ಈ ದ್ವೀಪಕ್ಕೆ ತಲುಪಬೇಕಾದರೆ ದೋಣಿ ವ್ಯವಸ್ಥೆ ಇರುವುದು ಮಲ್ಪೆ ಬಂದರಿನಿಂದ. ಏಷ್ಯಾದ ಸರ್ವಋತು ಮೀನುಗಾರಿಕಾ ಬಂದರು ಬಳಿಯಿಂದ ಪ್ರತೀ ಗಂಟೆಗೊಂದು ಬಾರಿ ಡಬ್ಬಲ್ ಡೆಕ್ಕರ್ ಮತ್ತು ದೊಡ್ಡ ದೋಣಿಗಳು ಮೇರೀಸ್ ದ್ವೀಪದತ್ತ ಓಡಾಡುತ್ತವೆ.

ಕೇರಳ, ಕೊಡಗು ನೆರೆ: ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ ಕರಾವಳಿ ಬೀಚ್ ಗಳುಕೇರಳ, ಕೊಡಗು ನೆರೆ: ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ ಕರಾವಳಿ ಬೀಚ್ ಗಳು

ಸೇಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಮಜಾ ಆರಂಭವಾಗುವುದೇ ದೋಣಿ ಪ್ರಯಾಣದ ಮೂಲಕ. ಸುಮಾರು ಅರ್ಧ ಗಂಟೆಗಳ ಕಾಲ ಅರಬ್ಬೀ ಸಮುದ್ರದಲ್ಲಿ ಪ್ರಯಾಣ ಮಾಡುವ ಅಪರೂಪದ ಅನುಭವ ಇದು. ಮೊದಲ ಬಾರಿ ಸಮುದ್ರದಲ್ಲಿ ಪ್ರಯಾಣಿಸುವವರಿಗಂತೂ ಇದು ಮತ್ತೂ ರೋಮಾಂಚಕ.

ಧುಮ್ಮಿಕ್ಕುತ್ತಿರುವ ಜೋಗದ ವೈಭವ ನೋಡಲು ಮುಗಿಬಿದ್ದ ಪ್ರವಾಸಿಗರುಧುಮ್ಮಿಕ್ಕುತ್ತಿರುವ ಜೋಗದ ವೈಭವ ನೋಡಲು ಮುಗಿಬಿದ್ದ ಪ್ರವಾಸಿಗರು

ಸಮುದ್ರದ ಅಲೆಗಳು ಏರಿ- ಇಳಿಯುವಾಗ ಆಗುವ ಅನುಭವ ವರ್ಣನೆಗೆ ನಿಲುಕದ್ದು. ಪ್ರಯಾಣದ ಮಧ್ಯೆ ಡಾಲ್ಫಿನ್ ಮೀನುಗಳು ಜಿಗಿಯುವ ದೃಶ್ಯ ಎದುರಾದರೆ ನೀವು ಮತ್ತಷ್ಟು ಅದೃಷ್ಟವಂತರು ಎಂದೇ ಲೆಕ್ಕ.

ಕುಟುಂಬ ಸಮೇತ ಬಂದರೆ ಒಂದಿಡೀ ದಿನ ಕಳೆಯಬಹುದು

ಕುಟುಂಬ ಸಮೇತ ಬಂದರೆ ಒಂದಿಡೀ ದಿನ ಕಳೆಯಬಹುದು

ಸೇಂಟ್ ಮೇರೀಸ್ ಗೆ ಹೋಗುತ್ತಾ ದೋಣಿ ಬದಲಾವಣೆ ಮಾಡಬೇಕಾಗುತ್ತದೆ. ಬೋಟಿಂಗ್ ಪಾಯಿಂಟ್ ನಿಂದ ದ್ವೀಪದ ಹತ್ತಿರದವರೆಗೆ ದೊಡ್ಡ ದೋಣಿ ಹೋದರೆ, ಸಣ್ಣ ದೋಣಿಗಳು ತೀರಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತವೆ. ದೋಣಿ ಪ್ರಯಾಣದ ವೇಳೆ ಪ್ರವಾಸಿಗರೆಲ್ಲ ಸುತ್ತಲ ಸುಂದರ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಳ್ಳುತ್ತಾರೆ. ಸೇಂಟ್ ಮೇರೀಸ್ ಗೆ ಬರುವವರು ಗೆಳೆಯರ ಗುಂಪಿನಲ್ಲಿ ಅಥವಾ ಕುಟುಂಬ ಸಮೇತ ಬಂದರೆ ಉತ್ತಮ. ಯಾಕೆಂದರೆ ಒಂದಿಡೀ ದಿನಕ್ಕೆ ಒಬ್ಬಿಬ್ಬರು ಮಾತ್ರ ಈ ದ್ವೀಪದಲ್ಲಿ ಎಂಜಾಯ್ ಮಾಡೋದು ಕಷ್ಟ. ಸಮುದ್ರ ಸ್ನಾನ, ವಾಲಿಬಾಲ್ ಆಟ, ದೋಣಿಯಲ್ಲಿ ಡ್ಯಾನ್ಸ್ ಹೀಗೆ... ಗೆಳೆಯರು ಅಥವಾ ಕುಟುಂಬ ಸದಸ್ಯರು ಮಸ್ತ್ ಮಜಾ ಮಾಡಬಹುದು.

ಲಕ್ಷದ್ವೀಪ ಬಿಟ್ಟರೆ ಸೇಂಟ್ ಮೇರೀಸ್ ದ್ವೀಪ ಮಾತ್ರ

ಲಕ್ಷದ್ವೀಪ ಬಿಟ್ಟರೆ ಸೇಂಟ್ ಮೇರೀಸ್ ದ್ವೀಪ ಮಾತ್ರ

ಇದು ಭೂಲೋಕದ ಸ್ವರ್ಗವೇ ಸರಿ. ಏಕೆಂದರೆ ಸುತ್ತಲೂ ನೀರು, ಮಧ್ಯೆ ಭೂಮಿ. ಇಂತಹ ಸುಂದರ ದೃಶ್ಯ ಮತ್ತೆಲ್ಲೂ ಕಾಣಸಿಗದ ಅನುಭವವನ್ನು ಹೊತ್ತು ತರುತ್ತದೆ. ವಿದೇಶದಲ್ಲಿ ಇಂತಹ ದ್ವೀಪ ಕಂಡುಬಂದರೂ ಭಾರತದಲ್ಲಿ ಲಕ್ಷದ್ವೀಪ ಬಿಟ್ಟರೆ ಸೇಂಟ್ ಮೇರೀಸ್ ಸುಂದರ ಮತ್ತು ವೈಭವದ ದ್ವೀಪ. ಬೇಸಿಗೆಯಲ್ಲಿ ಮೇಲಿಂದ ಬಿರು ಬಿಸಿಲು ನೆತ್ತಿ ಸುಟ್ಟರೂ ಬೀಸುವ ತಂಪು ಗಾಳಿ ಎಲ್ಲವನ್ನೂ ಮರೆಸಿಬಿಡುತ್ತದೆ. ಸೇಂಟ್ ಮೇರೀಸ್ ನ ದೃಶ್ಯ ವೈಭವವನ್ನು ಹೆಚ್ಚಿಸುವುದು ಇಲ್ಲಿನ ಬಂಡೆಕಲ್ಲುಗಳು. ಅವುಗಳನ್ನು ನೋಡುವಾಗ ಯಾರೋ ಶಿಲ್ಪಿ ತನ್ನ ಕನಸುಗಳನ್ನು ಮನಬಂದಂತೆ ಕೆತ್ತಿದಂತೆ ಭಾಸವಾಗುತ್ತದೆ. ವಿಭಿನ್ನ ಆಕಾರದಲ್ಲಿ ಕಲ್ಲುಗಳನ್ನು ಸಮುದ್ರದ ತಟದಲ್ಲಿ ನೆಟ್ಟಂತೆ ಕಾಣುತ್ತದೆ. ಮಳೆಗಾಲದಲ್ಲಿ ಸಮುದ್ರದ ರಕ್ಕಸ ಗಾತ್ರದ ಅಲೆಗಳು ಬಂಡೆಯ ಮೇಲೆ ಅಪ್ಪಳಿಸಿ ಈ ರೀತಿ ಕಾಣಿಸುತ್ತದೆ. ವಿವಿಧ ಆಕಾರದ ಬಂಡೆಕಲ್ಲುಗಳು ದ್ವೀಪದ ದೃಶ್ಯ ವೈಭವವನ್ನು ದುಪ್ಪಟ್ಟುಗೊಳಿಸುತ್ತದೆ.

ದ್ವೀಪಕ್ಕೆ ತೋರಣದಂತೆ ತೆಂಗಿನ ಮರಗಳು

ದ್ವೀಪಕ್ಕೆ ತೋರಣದಂತೆ ತೆಂಗಿನ ಮರಗಳು

ಇಡೀ ಸೇಂಟ್ ಮೇರೀಸ್ ದ್ವೀಪಕ್ಕೆ ತೋರಣದಂತೆ ಇರುವುದು ಇಲ್ಲಿ ಸೊಂಪಾಗಿ ಬೆಳೆದಿರುವ ತೆಂಗಿನ ಮರಗಳು. ಸುತ್ತಲೂ ನೀರು. ಮಧ್ಯಭಾಗದಲ್ಲಿ ನೂರಾರು ತೆಂಗಿನ ಮರಗಳು ಆಕಾಶದೆತ್ತರಕ್ಕೆ ಕೈಚಾಚಿ ನಿಂತಂತೆ ದ್ವೀಪದ ಸೊಬಗು ಕೂಡಾ ಹೆಚ್ಚುತ್ತದೆ. ಜೊತೆಗೆ ತೆಂಗಿನ ಮರಗಳು ದ್ವೀಪದಲ್ಲಿ ನೆರಳಿನ ವಾತಾವರಣವನ್ನೂ ಸೃಷ್ಟಿಸಿದೆ. ಪ್ರವಾಸಿಗರು ಮರಗಳ ಕೆಳಗೆ ಕೂತು ದಣಿವಾರಿಸಿಕೊಳ್ಳಬಹುದು. ಎಲ್ಲಾ ಕಡಲ ತೀರದಲ್ಲಿ ಮರಳು ಇರುವುದು ಸಹಜ. ಆದರೆ ಈ ದ್ವೀಪದ ಸುತ್ತಲೂ ಮರಳಿಲ್ಲ. ಆಶ್ಚರ್ಯ ಆಗ್ತಿದ್ಯಾ! ಆದರೂ ಸತ್ಯ. ಇಲ್ಲಿ ಮರಳು ತಯಾರಾಗಿರೋದು ಬಂಡೆಯಿಂದಲ್ಲ. ಬದಲಾಗಿ ಚಿಪ್ಪಿನಿಂದ. ಕಪ್ಪೆಚಿಪ್ಪು ಪುಡಿಪುಡಿಯಾಗಿ ಇಲ್ಲಿ ಮರಳು ರಾಶಿ ಬಿದ್ದಿದೆ. ಹೀಗಾಗಿ ತಟದಲ್ಲಿ ಕೊಂಚ ಎಚ್ಚರಿಕೆಯಿಂದಲೇ ಓಡಾಡಬೇಕಾಗುತ್ತದೆ. ಸ್ವಲ್ಪ ಎಡವಿದರೂ ಕಾಲಲ್ಲಿ ಗಾಯ ಮಾಡಿಕೊಳ್ಳುತ್ತೀರಿ. ಹೀಗಾಗಿ ಮುನ್ನೆಚ್ಚರಿಕೆ ತುಂಬಾ ಅಗತ್ಯ.

ಮಲ್ಪೆ ಬೀಚ್ ಗೂ ಭೇಟಿ ನೀಡಬಹುದು

ಮಲ್ಪೆ ಬೀಚ್ ಗೂ ಭೇಟಿ ನೀಡಬಹುದು

ಸೇಂಟ್ ಮೇರೀಸ್ ದ್ವೀಪದಲ್ಲಿ ಸಾಕಷ್ಟು ಸಿನಿಮಾಗಳ ಚಿತ್ರೀಕರಣವೂ ನಡೆದಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ ಅನ್ನೋದನ್ನು ಅದು ಸೂಚಿಸುತ್ತದೆ. ಹಾಡಿನ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಜಾಗ ಅಂದರೆ ಅದು ಸೇಂಟ್ ಮೇರೀಸ್. ಇಲ್ಲಿ ಸ್ಥಳೀಯರ ಕಿರಿಕಿರಿಯಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿಕೊಂಡು ಹೋಗಬೇಕಾದ ಅವಶ್ಯಕತೆಯೂ ಇಲ್ಲ. ಹೀಗಾಗಿ ಹೆಚ್ಚಿನ ಬಹಳ ಮಂದಿ ಸೇಂಟ್ ಮೇರೀಸ್ ದ್ವೀಪವನ್ನೇ ಆಯ್ಕೆ ಮಾಡುತ್ತಾರೆ. ಈ ದ್ವೀಪ ಸುತ್ತಿ ಬಂದು ಸಮಯ ಉಳಿದರೆ ಮಲ್ಪೆ ಬೀಚ್ ಗೂ ಹೋಗಬಹುದು. ಅಲ್ಲೂ ಕಡಲ ತಡಿಯಲ್ಲಿ ವಿಹಾರ ಮಾಡಿಕೊಂಡು ಬರಬಹುದು. ಸೇಂಟ್ ಮೇರೀಸ್ ನಿಂದ ಸಂಜೆ ಐದೂವರೆ ಗಂಟೆಗೆ ಕೊನೆಯ ದೋಣಿ ಮಲ್ಪೆಗೆ ಬರೋದರಿಂದ ಅಲ್ಲಿ ಸೂರ್ಯಾಸ್ತ ನೋಡಲು ಸಾಧ್ಯವಿಲ್ಲ. ಹೀಗಾಗಿ, ಮಲ್ಪೆ ಕಡಲ ತೀರದಲ್ಲೇ ಸೂರ್ಯಾಸ್ತದ ರಮ್ಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಸೇಂಟ್ ಮೇರೀಸ್ ದ್ವೀಪ ಈವರೆಗೆ ನೋಡದವರು ಈ ಬಾರಿಯಾದರೂ ಪುಟ್ಟ ದ್ವೀಪಕ್ಕೆ ಭೇಟಿ ಕೊಡಿ.

English summary
After rainy season shut down in Saint Mary's island, now island open for tourists. Here is the details of One of the best tourist spot of Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X