ಸಿ.ಪಿ.ಯೋಗೇಶ್ವರ್ ಪರ ಮತ್ತೋರ್ವ ಬಲಾಢ್ಯ ಸಚಿವರ ಲಾಬಿ
ಉಡುಪಿ, ನ 27: ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಬಿರುಕು ಕಾಣಿಸುತ್ತಿದೆ. ಸಿಎಂ ಯಡಿಯೂರಪ್ಪನವರಿಗೆ ಯಾವುದೇ ಸ್ಪಷ್ಟ ದಿನಾಂಕ ಇನ್ನೂ ತಿಳಿಯದೇ ಇರುವುದರಿಂದ, ಇನ್ನೆರಡು ದಿನದಲ್ಲಿ ವರಿಷ್ಥರಿಗೆ ಗ್ರೀನ್ ಸಿಗ್ನಲ್ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ, ಮೂಲ ಮತ್ತು ವಲಸೆ ಬಿಜಿಪಿಗರಲ್ಲಿ ಮಾತಿನ ಚಕಮಕಿಗೆ ಕಾರಣವಾಗುತ್ತಿದೆ. ಸಿಪಿವೈಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಸಿಕ್ಕಾಪಟ್ಟೆ ಪರಿಶ್ರಮ ಪಡುತ್ತಿರುವುದು ಗೊತ್ತಿರುವ ವಿಚಾರ.
ಯೋಗೇಶ್ವರ್ ಗೆ ಸಚಿವ ಸ್ಥಾನ: ರಮೇಶ್ ಜಾರಕಿಹೊಳಿ ಹಠ ಸಾಧಿಸುತ್ತಿರುವುದಕ್ಕೆ ಇದೊಂದೇ ಕಾರಣ
ಈಗ, ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. "ನಮ್ಮ ಸರಕಾರ ಅಧಿಕಾರಕ್ಕೆ ಬರುವಲ್ಲಿ, ಯೋಗೇಶ್ವರ್ ಅವರ ಕೊಡುಗೆ ಅಪಾರ. ಹಾಗಾಗಿ, ಅವರಿಗೆ ಸಚಿವ ಸ್ಥಾನ ಸಿಗಬೇಕು ಎನ್ನುವುದು ನನ್ನ ನಿಲುವು ಕೂಡಾ"ಎಂದು ಹೇಳಿದರು.
ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕ್ರಮಕ್ಕೆ ನಗರಕ್ಕೆ ಆಗಮಿಸಿದ್ದ ಅಶ್ವಥ್ ನಾರಾಯಣ, "ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಒಂದು ಜಟಿಲ ವಿಚಾರವಾಗುತ್ತಾ ಸಾಗುತ್ತಿದೆ. ಅಲ್ಪಾವಧಿಯಲ್ಲಿ ಎಲ್ಲವೂ ಗೊತ್ತಾಗಲಿದೆ"ಎಂದು ಹೇಳಿದರು.
"ಯೋಗೇಶ್ವರ್ ಅವರಿಗೂ ಸಚಿವ ಸ್ಥಾನ ಸಿಗಬೇಕು ಎನ್ನುವ ಅಪೇಕ್ಷೆಯಿದೆ. ಸಿಎಂ ಮತ್ತು ವರಿಷ್ಠರು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಬೇಕು ಎನ್ನುವುದು ನನ್ನ ಅಭಿಪ್ರಾಯ ಕೂಡಾ"ಎಂದು ಡಾ.ಅಶ್ವಥ್ ನಾರಾಯಣ, ಸೈನಿಕನ ಪರವಾಗಿ ಬ್ಯಾಟ್ ಬೀಸಿದ್ದಾರೆ.
"ಬಿಜೆಪಿಗೆ ಬಂದ ಮೇಲೆ ಎಲ್ಲರೂ ಒಂದೇ. ವಲಸಿಗರು ಮತ್ತು ಮೂಲ ಬಿಜೆಪಿಯವರು ಎನ್ನುವ ಬೇಧಬಾವ ಇಲ್ಲ" ಎಂದು ಡಿಸಿಎಂ, ಪರೋಕ್ಷವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯಗೆ ಟಾಂಗ್ ನೀಡಿದ್ದಾರೆ.