"ಕೇಂದ್ರ, ರಾಜ್ಯದ ಎಲ್ಲಾ ನಾಯಕರ ಸಹಮತ ಯಡಿಯೂರಪ್ಪ ಅವರಿಗಿದೆ"
ಉಡುಪಿ, ನವೆಂಬರ್ 06: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆಯಾಗುತ್ತದೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ತಮ್ಮ ಹಗಲುಗನಸನ್ನು ನಿಲ್ಲಿಸಲಿ. ರಾಜ್ಯದ ಎಲ್ಲ ಸಂಕಷ್ಟದ ಕಾಲದಲ್ಲಿ ಯಡಿಯೂರಪ್ಪ ಸಮರ್ಥವಾಗಿ ಅಧಿಕಾರ ನಿರ್ವಹಿಸಿದ್ದಾರೆ. ಸಿದ್ದರಾಮಯ್ಯಗೆ ಅಲ್ಲಾವುದ್ದೀನನ ಯಾವ ಅದ್ಭುತ ದೀಪ ಮಾಹಿತಿ ಕೊಟ್ಟಿದೆಯೋ ಗೊತ್ತಿಲ್ಲ. ಬಿಎಸ್ ವೈ ರಾಜ್ಯದ ಸರ್ವೋಚ್ಚ ಮುಖಂಡ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ" ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಇನ್ನೂ ಸಣ್ಣತನ ಬಿಟ್ಟಿಲ್ಲ: ಸಚಿವ ಈಶ್ವರಪ್ಪ
ಕೇಂದ್ರ ಮತ್ತು ರಾಜ್ಯದ ಎಲ್ಲಾ ನಾಯಕರ ಸಹಮತ ಯಡಿಯೂರಪ್ಪ ಅವರಿಗೆ ಇದೆ ಎಂದರು. ಇದೇ ವೇಳೆ ಬಿಜೆಪಿಯಲ್ಲಿ ಬಿಎಸ್ ವೈ ಪುತ್ರ ವಿಜಯೇಂದ್ರ ಪಾತ್ರದ ಕುರಿತು ಮಾತನಾಡಿ, ಚುನಾವಣೆ ಮತ್ತು ಪಕ್ಷ ಸಂಘಟನೆಯಲ್ಲಿ ವಿಜಯೇಂದ್ರ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ ಚುನಾವಣಾ ರಾಜಕೀಯ ಪ್ರವೇಶದ ಬಗ್ಗೆ ರಾಜ್ಯ ಮತ್ತು ಕೇಂದ್ರದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಉಪಾಧ್ಯಕ್ಷರಾಗಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ವಿಜಯೇಂದ್ರ ಚೆನ್ನಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಂಘಟನಾತ್ಮಕ ಕೆಲಸದಲ್ಲಿ ವಿಜಯೇಂದ್ರ ಚೆನ್ನಾಗಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದರು.