ಉಡುಪಿಯ ಕೃಷ್ಣ ಮಠದ ದರ್ಶನ ಅವಧಿ ವಿಸ್ತರಣೆ
ಉಡುಪಿ, ನವೆಂಬರ್ 4: ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠದಲ್ಲಿ ಬುಧವಾರದಿಂದ ದೇವರ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ಮಠಕ್ಕೆ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದರ್ಶನದ ಅವಧಿಯನ್ನು ವಿಸ್ತರಿಸಲಾಗಿರುವುದಾಗಿ ತಿಳಿದುಬಂದಿದೆ.
ನವೆಂಬರ್ 4ರಿಂದ ಬೆಳಿಗ್ಗೆ 8.30 ರಿಂದ 10 ಗಂಟೆವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 6 ಗಂಟೆಯವರೆಗೆ ದೇವರ ದರ್ಶನವನ್ನು ಪಡೆಯಬಹುದು ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಉಡುಪಿ ಕೃಷ್ಣಮಠ ಭಕ್ತರಿಗೆ ಮುಕ್ತ: ದರ್ಶನ ಪಡೆದ ನೂರಾರು ಭಕ್ತರು
ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ಮಾರ್ಚ್ 22ರಿಂದ ಸೆಪ್ಟೆಂಬರ್ 27ರವರೆಗೆ ಕೃಷ್ಣಮಠಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರವೂ ಸೀಮಿತ ಅವಧಿಯಲ್ಲಿ ಮಾತ್ರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿದಿನ ಮಧ್ಯಾಹ್ನ 2ರಿಂದ ಸಂಜೆ 5 ಗಂಟೆವರೆಗ ಮಾತ್ರ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗಿರುವುದರಿಂದ ದರ್ಶನದ ಅವಧಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ.
ಉಡುಪಿಯಲ್ಲಿ ಕೊರೊನಾ ಪ್ರಕರಣಗಳು: ನ.3ರ ವರದಿಯಂತೆ ಜಿಲ್ಲೆಯಲ್ಲಿ ಒಟ್ಟು 21,970 ಸೋಂಕಿತರು ಇದ್ದು, 21,341 ಮಂದಿ ಗುಣಮುಖರಾಗಿದ್ದಾರೆ. 446 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಇಟ್ಟು 183 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.