• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಡಿಯಾಳಿ ದೇವಸ್ಥಾನದಲ್ಲಿ ಕರಸೇವೆ ಮಾಡಿದ ಸಚಿವೆ ಶೋಭಾ ಕರಂದ್ಲಾಜೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 25: ಉಡುಪಿಯ ಇತಿಹಾಸ ಪ್ರಸಿದ್ಧ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರಸೇವೆ ಮಾಡಿದ್ದಾರೆ. ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರತಿದಿನ ನೂರಾರು ಭಕ್ತರು ದೇವಸ್ಥಾನದಲ್ಲಿ ಕರಸೇವೆ ಕಾರ್ಯ ಮಾಡುತ್ತಿದ್ದಾರೆ. ಶನಿವಾರ ರಾತ್ರಿ ಕಾರ್ಯಕರ್ತರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಕೆಲ ಹೊತ್ತು ಕರಸೇವೆ ಮಾಡಿದ್ದಾರೆ.

ದೇವಸ್ಥಾನದಲ್ಲಿ ಸುತ್ತು ಪೌಳಿಯ ಕೆಲಸ ನಡೆಯುತ್ತಿದ್ದು, ಹಾರೆ ಹಿಡಿದು, ಕಲ್ಲು ಮಣ್ಣು ಸಾಗಿಸುವ ಕೆಲಸವನ್ನು ಶೋಭಾ ಕರಂದ್ಲಾಜೆ ಮಾಡಿದ್ದಾರೆ. ಕಡಿಯಾಳಿ ಗ್ರಾಮಸ್ಥರು ಕಳೆದ ಹಲವು ದಿನಗಳಿಂದ ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಕರಸೇವೆ ಮಾಡುತ್ತಿದ್ದು, ಶನಿವಾರ ರಾತ್ರಿ ಕೇಂದ್ರ ಸಚಿವರೂ ಕರಸೇವೆಯಲ್ಲಿ ಭಾಗಿಯಾಗಿದ್ದು, ಕರಸೇವಕರಿಗೆ ಉತ್ಸಾಹ ಗದಿಗೆದರಿಸಿದೆ.

ಕಾರ್ಯಕರ್ತರು ಧರಿಸಿದ್ದ ಕೇಸರಿ ಬಣ್ಣದ ಟೀ ಶರ್ಟ್ ಧರಿಸಿ ಶೋಭಾ ಕರಂದ್ಲಾಜೆ ಕೆಲಸವನ್ನು ಮಾಡಿದ್ದಾರೆ. ಸುತ್ತು ಪೌಳಿಯ ಕೆಲಸ ನಡೆಯುತ್ತಿರುವ ಹಿನ್ನಲೆಯಲ್ಲಿ ದೇವಳದ ಒಳಭಾಗದಿಂದ ಮಣ್ಣು ಕಲ್ಲುಗಳನ್ನು ಬುಟ್ಟಿಯಿಂದ ಹೊರಗೆ ತಂದು ಹಾಕಿದ್ದಾರೆ. ಒಂದು ಗಂಟೆಗಳ ಹೆಚ್ಚು ಕಾಲ ದೇವಸ್ಥಾನದಲ್ಲಿ ಶೋಭಾ ಕರಂದ್ಲಾಜೆ ಕೆಲಸವನ್ನು ಮಾಡಿದ್ದಾರೆ.

 ಕರಸೇವೆಗೆ ನಾನೂ ಒಂದು ದಿನ ಬರುವುದಾಗಿ ಹೇಳಿದ್ದೆ

ಕರಸೇವೆಗೆ ನಾನೂ ಒಂದು ದಿನ ಬರುವುದಾಗಿ ಹೇಳಿದ್ದೆ

ಈ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, "ಈ ಹಿಂದೆ ದೇವಸ್ಥಾನಕ್ಕೆ ಬಂದ ಸಂಧರ್ಭದಲ್ಲಿ ಕರಸೇವೆಗೆ ನಾನೂ ಒಂದು ದಿನ ಬರುವುದಾಗಿ ಹೇಳಿದ್ದೆ, ಈ ದಿನ ಅಂತಹ ಸುಯೋಗ ಕೂಡಿ ಬಂದಿದೆ. ನಮ್ಮ ದೇಶದಲ್ಲಿ ನೂರಾರು ದೇವಸ್ಥಾನಗಳು ಕರಸೇವೆಯಿಂದಲೇ ಎದ್ದು ನಿಂತಿದೆ. ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಇದ್ದಾರೆ. ಎಲ್ಲಾ ಭಕ್ತರ ಸಹಕಾರದೊಂದಿಗೆ ಈ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಬಹಳ ವೇಗವಾಗಿ ಪೂರ್ಣಗೊಳ್ಳಲಿದೆ. ಕಡಿಯಾಳಿ ಗ್ರಾಮಸ್ಥರು ಕಳೆದ ಹಲವು ದಿನಗಳಿಂದ ಕರಸೇವೆ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳು, ಮಹಿಳೆಯರು ಎಲ್ಲರೂ ನಿಸ್ವಾರ್ಥವಾಗಿ ತಾಯಿಯ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆ ಭಾಗಿಯಾಗುತ್ತಿರೋದಕ್ಕೆ ತುಂಬಾ ಸಂತೋಷವಾಗಿದೆ," ಎಂದು ಸಚಿವೆ ಶೋಭಾ ಕರಂದ್ಲಾಜೆ ಖುಷಿ ವ್ಯಕ್ತಪಡಿಸಿದರು.

 ಬಾದಾಮಿ ಚಾಲುಕ್ಯರ ಶಿಲ್ಪಕಲೆ ಲಕ್ಷಣ

ಬಾದಾಮಿ ಚಾಲುಕ್ಯರ ಶಿಲ್ಪಕಲೆ ಲಕ್ಷಣ

ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನ ಕ್ರಿಸ್ತಶಕ ಎಂಟನೇ ಶತಮಾನದಲ್ಲಿ ನಿರ್ಮಾಣವಾಯಿತು ಎಂಬ ಇತಿಹಾಸವಿದೆ. ಕಡಿಯಾಳಿಯ ಮಹಿಷ ಮರ್ಧಿನಿ ತಾಯಿಯ ವಿಗ್ರಹದಲ್ಲಿ ಪ್ರಾಚೀನ ಇತಿಹಾಸವನ್ನು ಹಿಂದಿದೆ. ದೇವಿಯ ವಿಗ್ರಹವು ಕ್ರಿ.ಶ. 600- 750ರವರೆಗಿನ ಶಿಲ್ಪಶೈಲಿಯನ್ನು ಹೊಂದಿದೆ. ಬಾದಾಮಿ ಚಾಲುಕ್ಯರ ಶಿಲ್ಪ ಲಕ್ಷಣವನ್ನು ವಿಗ್ರಹ ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಸುಮಾರು 30 ಇಂಚು ಎತ್ತರದ ವಿಗ್ರಹದಲ್ಲಿ ಪ್ರಸನ್ನತೆ ಮತ್ತು ವಿಜಯದ ಮಂದಹಾಸವಿದೆ. ಮೇಲಿನ ಎರಡು ಕೈಗಳಲ್ಲಿ ಶಂಖ, ಚಕ್ರ, ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ. ತ್ರಿಶೂಲದ ಕೆಳಬದಿ ತಾಯಿಯ ಕಾಲ ಬುಡದಲ್ಲಿ ಸತ್ತು ಬಿದ್ದಿರುವ ಮಹಿಷನ ತಲೆಯನ್ನು ಒತ್ತಿ ಹಿಡಿದಿದೆ. ಹಿಂಗಾಲು ಎತ್ತಿ ಮುಗ್ಗರಿಸಿ ಬಿದ್ದ ಮಹಿಷನ ಬಾಲ ದೇವಿಯ ಎಡಗೈಯಲ್ಲಿದೆ. ಕ್ಷೇತ್ರದ ದುರ್ಗೆ ನಿರಾಭರಣ ಸುಂದರಿ. ಕಿರೀಟ, ಕುಂಡಲ, ಕೊರಳಲ್ಲಿ ಒಂದು ತಾಳಿ ಮತ್ತು ಸೊಂಟದಲ್ಲಿ ಒಂದು ಉದ್ಯಾಣ ಮಾತ್ರ ದೇವಿಯ ಆಭರಣವಾಗಿದೆ.

 ಪುತ್ರಕಾಮೇಷ್ಠಿ ಯಾಗ ಮಾಡಿಸಿದ ರಾಮಭೋಜ

ಪುತ್ರಕಾಮೇಷ್ಠಿ ಯಾಗ ಮಾಡಿಸಿದ ರಾಮಭೋಜ

ಈ ದೇವಸ್ಥಾನ ಇತಿಹಾಸದ ಬಗ್ಗೆ ಗಮನಿಸುವುದಾದರೆ, ತೌಳವ ರಾಜಮಂಡಲದ ರಾಜನಾಗಿದ್ದ ರಾಮಭೋಜ ಸಂತಾನವಾಗಬೇಕೆಂದು ಪುತ್ರಕಾಮೇಷ್ಠಿ ಯಾಗ ಮಾಡಿಸಿದ. ಯಾಗ ಭೂಮಿಯನ್ನು ನೇಗಿಲಿಂದ ಉಳುವಾಗ ಒಂದು ಸರ್ಪ ನೇಗಿಲಿಗೆ ಸಿಕ್ಕು ಸತ್ತು ಹೋಯಿತು. ಆ ಸರ್ಪದ ಹತ್ಯೆಯ ಪ್ರಾಯಶ್ಚಿತ್ತಕ್ಕಾಗಿ ನಾರಾಯಣನ ವಿಶೇಷ ಸನ್ನಿಧಾನವುಳ್ಳ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ. ಅದೇ ಅನಂತೇಶ್ವರ ದೇವಾಲಯ. ಅಲ್ಲದೆ ಅನಂತೇಶ್ವರ ದೇವಾಲಯದ ಸುತ್ತಮುತ್ತ ನಾಲ್ಕು ದುರ್ಗೆಯ ದೇವಾಲಯವನ್ನು ಸ್ಥಾಪಿಸಿದ, ಅದರಲ್ಲಿ ಒಂದು ಕಡಿಯಾಳಿ ಮಹಿಷ ಮರ್ಧಿನಿ ದೇವಾಲಯ ಎನ್ನುವುದು ಪ್ರತೀತಿ. ಉಳಿದ ಮೂರು ದುರ್ಗೆಯ ದೇವಾಲಯವೆಂದರೆ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಬೈಲೂರು ಮಹಿಷಾಸುರಮರ್ಧಿನಿ ದೇವಾಲಯ, ಕನ್ನರ್ಪಾಡಿ ಜಯದುರ್ಗೆ, ಪುತ್ತೂರು ದುರ್ಗಾಪರಮೇಶ್ವರಿ ದೇವಾಲಯ.

  ಪಾಕಿಸ್ತಾನದ ಭದ್ರತೆಯ ವಿಚಾರವಾಗಿ ಮಾಡಿದ ಟ್ವೀಟ್ ವೈರಲ್! | Oneindia Kannada
   ಪ್ರತಿ ಶುಕ್ರವಾರ 12 ಸುವಾಸಿನಿಯರ ಸಮಾರಾಧನೆ

  ಪ್ರತಿ ಶುಕ್ರವಾರ 12 ಸುವಾಸಿನಿಯರ ಸಮಾರಾಧನೆ

  ಉಡುಪಿ ಶ್ರೀಕೃಷ್ಣ ಮಠಕ್ಕೂ ಕಡಿಯಾಳಿ ದೇವಾಲಯಕ್ಕೂ ನಿಕಟವಾದ ಸಂಬಂಧವಿದೆ. ಉಡುಪಿ ಪರ್ಯಾಯ ಪೀಠವನ್ನು ಏರುವ ಸ್ವಾಮಿಗಳು ತಾಯಿಗೆ ಬಂದು ಮೊದಲು ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯ. ಅಲ್ಲದೆ ಪ್ರತಿ ಶುಕ್ರವಾರ 12 ಸುವಾಸಿನಿಯರ ಸಮಾರಾಧನೆಯನ್ನು ಈ ದೇವಾಲಯದಲ್ಲಿ ನಡೆಸಿಕೊಂಡು ಬಂದಿದ್ದಾರೆ. ಮುಖ ಮಂಟಪದ ಕಂಭದಲ್ಲಿ ಕೊರೆದ ಗಣಪತಿ ವಿಗ್ರಹವಿದೆ. ದೇವಾಲಯದ ಒಂದು ಕಡೆಯಲ್ಲಿ ಧೂಮಾವತಿ ದೈವದ ಮಣೆಯಿದೆ. ಹೊರಗಡೆ ಮರದ ನಂದಿ, ವಾಯವ್ಯ ದಿಕ್ಕಿನಲ್ಲಿ ಸುಬ್ರಮಣ್ಯಸ್ವಾಮಿ ದೇವಾಲಯ ಮತ್ತು ಈಶಾನ್ಯ ಮೂಲೆಯಲ್ಲಿ ವ್ಯಾಘ್ರ ಚಾಮುಂಡಿ ಗುಡಿಯಿದೆ. ಹೀಗೆ ಉಡುಪಿಯ ಜನರ ಶ್ರದ್ಧಾ ಭಕ್ತಿಯ ಕೇಂದ್ರ ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನವಾಗಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯೂ ಆಗಿರುವಂತಹ ಶೋಭಾ ಕರಂದ್ಲಾಜೆ ದೇವಸ್ಥಾನಕ್ಕೆ ಬಂದು ಕರಸೇವೆ ಮಾಡಿರುವುದು ಭಕ್ತರಲ್ಲಿ ಖುಷಿ ತಂದಿದೆ.

  English summary
  Central Minister Shobha Karandlaje has performed Kar seva at the famous Kadiyali Mahishamardhini Temple in Udupi.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X