ಹಾವು ಕಡಿದು ಎರಡೂವರೆ ವರ್ಷದ ಮಗು ಸಾವು
ಉಡುಪಿ ಮೇ 27: ನಾಗರ ಹಾವು ಕಡಿದು ಮಗುವೊಂದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಶಿರ್ಲಾಲು ಗ್ರಾಮದ ಮುಡಾಯಿ ಗುಡ್ಡೆ ಎಂಬಲ್ಲಿ ನಾಗರ ಹಾವು ಕಚ್ಚಿ ಎರಡೂವರೆ ವರ್ಷದ ಮಗು ಮೃತಪಟ್ಟಿದ್ದು, ಮಗು ಕೊಟ್ಟಿಗೆ ಬಳಿ ಆಟವಾಡುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಉಡುಪಿ: ಹಾವು ಕಡಿತ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮಹಿಳೆ ಸಾವು
ಮುಡಾಯಿಗುಡ್ಡೆ ಸರ್ಫರಾಜ್ ಮತ್ತು ಫಾತಿಮಾ ರಶೀದಾ ದಂಪತಿಯ ಎರಡೂವರೆ ವರ್ಷದ ಹೆಣ್ಣು ಮಗು ಖತೀಜತುಲ್ ಫರ್ಝಾನಾ ಮೃತ ಮಗು ಎಂದು ಗುರುತಿಸಲಾಗಿದೆ. ಮಗು ಮನೆಯ ಬಳಿಯ ಕೊಟ್ಟಿಗೆಯಲ್ಲಿ ಆಟವಾಡುತ್ತಿದ್ದ ವೇಳೆ ನಾಗರ ಹಾವೊಂದು ಆಕೆಯ ಬಲಕೈಗೆ ಕಚ್ಚಿತ್ತೆನ್ನಲಾಗಿದೆ.
ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು, ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.