ಅಯೋಧ್ಯೆಯಲ್ಲಿ ಮಸೀದಿಯೂ ನಿರ್ಮಾಣವಾಗಲಿ; ಬಾಬಾ ರಾಮ್ ದೇವ್
ಉಡುಪಿ, ನವೆಂಬರ್ 16: "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎನ್ನುವುದು ಪೇಜಾವರ ಶ್ರೀಗಳಂತಹ ಮಹನೀಯರ ಕನಸು. ಮಾತ್ರವಲ್ಲ, ದೇಶದ ಅನೇಕ ಮಹಾಪುರುಷರ ಆಂದೋಲನದ ಫಲ. ಈ ಎಲ್ಲಾ ಮಹಾನುಭಾವರ ಒಳಗೊಳ್ಳುವಿಕೆಯಿಂದ ಟ್ರಸ್ಟ್ ನಿರ್ಮಾಣವಾಗಲಿ" ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಉಡುಪಿಯಲ್ಲಿ ಐದು ದಿನಗಳ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ರಾಮ್ ದೇವ್ ಆಗಮಿಸಿದ್ದಾರೆ. ಮಾಧ್ಯಮದವರ ಜೊತೆ ಸಂವಾದ ನಡೆಸಿದ ಅವರು, "ಅಯೋಧ್ಯೆ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆಯ ಪ್ರತೀಕವಾಗಲಿ. ಕ್ರೈಸ್ತರಿಗೆ ವ್ಯಾಟಿಕನ್, ಮುಸಲ್ಮಾನರಿಗೆ ಮೆಕ್ಕಾ ಇರುವಂತೆ ಹಿಂದೂಗಳಿಗೆ ರಾಮಮಂದಿರ ರೂಪುಗೊಳ್ಳಬೇಕು ಅನ್ನುವುದು ನನ್ನ ಬಯಕೆ" ಎಂದರು.
ನರೇಂದ್ರ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ ಎಂದ ಬಾಬಾ ರಾಮ್ ದೇವ್
"ರಾಮನವಮಿ ದಿನವೇ ರಾಮಮಂದಿರಕ್ಕೆ ಶಿಲಾನ್ಯಾಸವಾಗಲಿ. ಪ್ರಧಾನಿಯವರೇ ಶಿಲಾನ್ಯಾಸ ಮಾಡಲಿ. ಪ್ರಧಾನಿ ಮೋದಿ ಹಿಂದೂ ಪರಂಪರೆಯ ಪ್ರತಿನಿಧಿಯಾಗಿ ಈ ಕೆಲಸ ಮಾಡಲಿ. ಅಯೋಧ್ಯೆಯಲ್ಲಿ ಮಸೀದಿಯೂ ದಿವ್ಯವಾಗಿ ನಿರ್ಮಾಣ ಆಗಬೇಕು. ಮುಸ್ಲಿಮರಿಗೆ ಐದು ಎಕರೆ ಭಿಕ್ಷೆ ಬೇಡ ಎಂದು ಅಸಾವುದ್ದೀನ್ ಒವೈಸಿ ಹೇಳಿದ್ದಾರೆ. ಒವೈಸಿ ಒಬ್ಬ ತಲೆಕೆಟ್ಟ ಮನಸ್ಥಿತಿಯವ, ಆತನ ಮನಸ್ಸಿನಲ್ಲಿ ವಿಷವೇ ತುಂಬಿದೆ, ಒವೈಸಿ ಎರಡನೇ ಜಿನ್ನಾ ಆಗಲು ಪ್ರಯತ್ನಿಸುತ್ತಿದ್ದಾರೆ" ಎಂದು ಕಿಡಿಕಾರಿದರು.
ಇಂದು ಬೆಳಿಗ್ಗೆ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮೊದಲ ದಿನದ ಯೋಗಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಇನ್ನೂ ನಾಲ್ಕು ದಿನ ಉಡುಪಿಯಲ್ಲೇ ತಂಗಲಿರುವ ಬಾಬಾ ರಾಮ್ ದೇವ್ ಯೋಗ ಶಿಬಿರದ ಜೊತೆಗೆ ಯೋಗ ಚಿಕಿತ್ಸೆ ಕುರಿತು ಮಾಹಿತಿ ನೀಡಲಿದ್ದಾರೆ.