ಸಚಿವ ಕೋಟ ವಿರುದ್ಧ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಯುವಕನ ವಿರುದ್ಧ ದೂರು
ಉಡುಪಿ, ಜನವರಿ 21: ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ವಿರುದ್ಧ ಫೇಸ್ ಬುಕ್ ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ಪೋಸ್ಟ್ ಹಾಕಿದ್ದ ಪೆರ್ಡೂರಿನ ಅನಿಲ್ ಕುಮಾರ್ ಶೆಟ್ಟಿ ವಿರುದ್ಧ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉಡುಪಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಬಿಲ್ಲವ, ಈಡಿಗ ಉಪಪಂಗಡಗಳ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ಬಜೆಟ್ ನಲ್ಲಿ 50 ಕೋಟಿ ರೂ.ಗಳನ್ನು ಮೀಸಲಿಡುವಂತೆ ಕೋರಿ ಸಚಿವ ಶ್ರೀನಿವಾಸ್ ಪೂಜಾರಿ ಅವರು ಮನವಿ ಸಲ್ಲಿಸಿದ್ದರು.
"ರಾಜಕೀಯ ಜಂಜಾಟ ಮರೆತು ಧಾರ್ಮಿಕ ಪ್ರವಾಸಕ್ಕೆ ಬಂದಿದ್ದೇನೆ''
ಈ ಮನವಿಯ ಚಿತ್ರ ಬಳಸಿಕೊಂಡ ಆರೋಪಿ ಅನಿಲ್ ಕುಮಾರ್ ಶೆಟ್ಟಿ ಅವಾಚ್ಯ ಶಬ್ದಗಳನ್ನು ಬಳಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಲ್ಲದೆ ಅದಕ್ಕೆ ಜಾತಿ ಬಣ್ಣ ಹಚ್ಚಿದ್ದಾನೆ.
ಈ ಪೋಸ್ಟ್ ಗೆ ಫೇಸ್ ಬುಕ್ ನಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ಆರೋಪಿಯು ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾನೆ. ಆದರೆ ಆತನ ಜೊತೆ ನಡೆಸಿದ ಸಂಭಾಷಣೆಯಲ್ಲಿ ಆತ ಕೃತ್ಯ ಮಾಡಿಕೊಂಡದ್ದನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದನು.
ನಂತರ ವರಸೆ ಬದಲಿಸಿದ್ದ ಆರೋಪಿಯು ತನ್ನ ಅಕೌಂಟನ್ನು ಹ್ಯಾಕ್ ಮಾಡಲಾಗಿದೆ ಎಂದು ಸುಳ್ಳು ಹೇಳಿದ್ದ. ಇದೀಗ ನಿಂದನಾತ್ಮಕ ಪೋಸ್ಟ್ ಹಾಕಿದ ಯುವಕನ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.