ರಾಯಣ್ಣ ಬ್ರಿಗೇಡ್: ಮಾಜಿ ಸಚಿವ ಸೊಗಡು ಶಿವಣ್ಣ ಸಂದರ್ಶನ

By: ಕುಮಾರಸ್ವಾಮಿ
Subscribe to Oneindia Kannada

ತುಮಕೂರು, ಡಿಸೆಂಬರ್ 7: ಮಾಜಿ ಸಚಿವ, ಬಿಜೆಪಿಯ ಪ್ರಭಾವಿ ನಾಯಕ ಸೊಗಡು ಶಿವಣ್ಣ ಅವರಿಗೆ ಪಕ್ಷದಲ್ಲೇ ಇರುಸುಮುರುಸು ಎದುರಿಸುವಂತಾಗಿದೆಯಾ? ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಅವರನ್ನು ಮಾತನಾಡಿಸಿದಾಗ, ಇಲ್ಲ-ಹಾಗೇನಿಲ್ಲ ಅಂತ ಹೇಳಿದರು. ಬೆಳಗಾವಿಯಲ್ಲಿ ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಶಿವಣ್ಣ ಪಾಲ್ಗೊಂಡಿದ್ದರು.

ಆ ಮಾಹಿತಿ ಖಚಿತವಾದ ನಂತರ ಒನ್ಇಂಡಿಯಾ ಕನ್ನಡ ಅವರ ಜೊತೆಗೆ ಮಾತನಾಡಿದೆ. ಜಿಲ್ಲೆಯಲ್ಲಿ ಬಿಜೆಪಿಯ ಬೆಳವಣಿಗೆಗಳು, ತಮ್ಮ ಭವಿಷ್ಯ, ನಂಬಿಕೆ, ರಾಯಣ್ಣ ಬ್ರಿಗೇಡ್, ಯಡಿಯೂರಪ್ಪನವರು..ಹೀಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಮುಕ್ತವಾಗಿ ಮಾತನಾಡಿದರಾ ಎಂಬ ಪ್ರಶ್ನೆ ಬಂದರೆ, ಖಚಿತವಾಗಿ ಹೇಳಲು ಸಾಧ್ಯವಿಲ್ಲ.[ಸೊಗಡು ಶಿವಣ್ಣ ಮನೆಗೆ ಈಶ್ವರಪ್ಪ ಹೋಗಿದ್ದು ಏಕೆ?]

Former minister Sogadu Shivanna interview

ತುಮಕೂರು ನಗರ ಕ್ಷೇತ್ರದಿಂದ 4 ಬಾರಿ ಸತತವಾಗಿ ಆಯ್ಕೆಯಾಗಿದ್ದ ಅವರಿಗೆ ಕಳೆದ ಸಲ ಮೂರನೇ ಸ್ಥಾನಕ್ಕೆ ಇಳಿದ ಆಘಾತ. ಕೆಜೆಪಿಯಿಂದ ಸ್ಪರ್ಧಿಸಿ, ಶಿವಣ್ಣ ಸೋಲಿಗೆ ಒಂದು ರೀತಿ ಕಾರಣರಾದ ವ್ಯಕ್ತಿಯೇ ಈಗ ಬಿಜೆಪಿ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಜ್ಯೋತಿಗಣೇಶ್. ಇತ್ತೀಚೆಗಷ್ಟೇ ತಮ್ಮ ಹೇಳಿಕೆ ಕಾರಣಕ್ಕೆ ಬಿಜೆಪಿಯಿಂದ ನೋಟಿಸ್ ಕೂಡ ಪಡೆದಿರುವ ಶಿವಣ್ಣ ಅವರೊಂದಿಗಿನ ಸಂದರ್ಶನ ಇಲ್ಲಿದೆ.

* ಮೊನ್ನೆ ಬೆಳಗಾವಿಯಲ್ಲಿ ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ಹೋಗಿದ್ದರಂತೆ, ಹೌದಾ?
ಹೌದು, ಹೋಗಿದ್ದೆ.

* ಬಿಜೆಪಿ ವರಿಷ್ಠರು ಯಾವುದೇ ಸಂಘಟನೆ ಜೊತೆ ಗುರುತಿಸಿಕೊಳ್ಳಬಾರದು ಎಂಬ ಎಚ್ಚರಿಕೆ ನೀಡಿದ ನಂತರವೂ...
ಆದಿ ಜಾಂಬವ ಸ್ವಾಮೀಜಿಗಳು ನೀನು ಬಾಪ್ಪ ಅಂತ ಕರೆದರು. ಅದಕ್ಕೆ ಹೋದೆ. ಸ್ವಾಮೀಜಿಗಳು ಕರೆದರೂ ಹೋಗಬಾರದು ಎಂದು ಯಾರೂ ಹೇಳಿಲ್ಲ.

Former minister Sogadu Shivanna interview

* ನಿಮಗೆ ಅಸಮಾಧಾನ ಇರುವುದನ್ನು ಹೀಗೆ ತೋರಿಸಿಕೊಳ್ತಿದೀರಾ?
ಯಾವ ಅಸಮಾಧಾನವೂ ಇಲ್ಲ. ನಾನು ಎಮರ್ಜೆನ್ಸಿ ಇರುವಾಗ ಜೈಲಿಗೆ ಹೋಗಿದ್ದೆ. ನಮ್ಮ ಪಕ್ಷವೇ ಸರ್ವಾಧಿಕಾರಿ ಧೋರಣೆಗೆ ವಿರುದ್ಧವಾದದ್ದು. ನಮ್ಮಲ್ಲಿ ಎಲ್ಲರಿಗೂ ಅಭಿಪ್ರಾಯ ಸ್ವಾತಂತ್ರ್ಯ ಇದೆ.[ಬಿಜೆಪಿ ವಿರುದ್ಧ ಆರೋಪ : ಸೊಗಡು ಶಿವಣ್ಣಗೆ ನೋಟಿಸ್]

* ಅಂದರೆ ಪಕ್ಷದಲ್ಲಿ ಎಮರ್ಜೆನ್ಸಿ ವಾತಾವರಣ ಇದೆಯಾ
ನೀವು ಹಾಗೆ ಹೇಳೋದಾದರೆ ನಾನು ಮಾತೇ ಆಡಲ್ಲ. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಅನ್ನೋದನ್ನು ಹೇಳೋಕೆ ಬಂದೆ.

Former minister Sogadu Shivanna interview

* ತುಮಕೂರಿನಲ್ಲಿ ಬಿಜೆಪಿಯಲ್ಲಿ ಶಿವಣ್ಣ ಅವರಿಗೆ ಯಾವ ಸ್ಥಾನಮಾನವೂ ಇಲ್ಲವಲ್ಲಾ?
ಹಾಗೇನಿಲ್ಲ. ನಾನು ಪಕ್ಷದ ಸೇವಕ. ಪಕ್ಷ ಕಟ್ಟುವ ಕೆಲಸ ಮಾಡ್ತಿದ್ದೀನಿ.

* ಹಾಗಿದ್ದರೆ ನಿಮ್ಮ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಿ, ನಿಮ್ಮ ಸೋಲಿಗೆ ಕಾರಣರಾದವರ ಬಗ್ಗೆ ಅಸಮಾಧಾನ ಇಲ್ಲವೆ?
ಅದನ್ನು ಹೇಳಬೇಕಾದ ಜಾಗದಲ್ಲಿ ಹೇಳ್ತೀನಿ. ಏನು ಮಾಡ್ತೀರಿ, ನಮ್ಮ ವರಿಷ್ಠರಿಗೆ ಯಾರ್ಯಾರೋ ಕಿವಿ ಕಚ್ಚಿರ್ತಾರೆ. ಅಂಥವರ ಮಾತು ಪ್ರಾಮುಖ್ಯ ಪಡೆದು ಇಂದಿನ ಸ್ಥಿತಿ ಇದೆ.[ಬಿಎಸ್ವೈಗೆ ಚಡ್ಡಿ ನೀಡಿದ್ದು ಆರ್ಎಸ್ಎಸ್,ಸಚಿವ ಶಿವಣ್ಣ]

Former minister Sogadu Shivanna interview

* ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ನಿಮ್ಮನ್ನೇ ಬಯ್ದು, ಆಡಿದವರ ಜತೇಲಿದೀನಿ ಅನ್ನಿಸಿ ಮುಜುಗರ ಆಗಲ್ವಾ?
ಆ ತಂದೆ-ಮಕ್ಕಳ ಕೊಡುಗೆ ಏನು? ಬಿಜೆಪಿಗೂ ಏನಿಲ್ಲ, ಹಿಂದೆ ಇದ್ದ ಕಾಂಗ್ರೆಸ್ ಗೂ ಏನೂ ಕೊಟ್ಟಿಲ್ಲ. ಅಂಥವರನ್ನು ಪಕ್ಷದ ಮುಂಚೂಣಿಯಲ್ಲಿ ನಿಲ್ಲಿಸಿದರಲ್ಲಾ ಅನ್ನೋದೇ ಬೇಸರ.

* ಅದಕ್ಕೆ ಸಮಾನ ದುಃಖಿಗಳಾದ ಈಶ್ವರಪ್ಪ, ನೀವು ಎಲ್ಲರೂ ಹೀಗೆ ಒಂದಾಗಿರೋದಾ?
ಈಶ್ವರಪ್ಪ ನಮ್ಮ ಪಕ್ಷದ ಹಿಂದುಳಿದ ವರ್ಗದ ನಾಯಕರು ಅಂತ ನಾನು ಒಪ್ಪಿದ್ದೀನಿ. ನಾವು ಹಿಂದೂಗಳನ್ನೆಲ್ಲ ಒಂದು ಮಾಡಬೇಕು ಅಲ್ಲವಾ, ಅದೇ ಈ ಪ್ರಯತ್ನ. ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರೇ ಅನ್ನೋದರಲ್ಲಿ ಯಾವ ಗೊಂದಲವೂ ಇಲ್ಲ.

* ಹಾಗಿದ್ದರೆ ಯಾವುದೇ ಭಿನ್ನಾಭಿಪ್ರಾಯ ಇಲ್ಲವಾ?
ಮನೆ ಅಂದರೇನೇ ಭಿನ್ನಾಭಿಪ್ರಾಯ ಇರುತ್ತೆ. ಅದೇ ರೀತಿ ಪಕ್ಷದಲ್ಲೂ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇದೆ.

* ತುಮಕೂರಿನ ಹತ್ತು ತಾಲೂಕಿನಿಂದಲೂ ಬಿಜೆಪಿ ಕಾರ್ಯಕರ್ತರು ಬೆಳಗಾವಿಗೆ ಬಂದಿದ್ದರಂತೆ?
ನಾನು ಫೋನ್ ಮಾಡಿ ಹೇಳಿದೆ. ಈ ಥರ ಸ್ವಾಮೀಜಿ ಕರೆದವ್ರೆ. ಬರೋ ಹಾಗಿದ್ದರೆ ಬನ್ನಿ ಅಂತ. ಎಲ್ಲ ತಾಲೂಕಿನಿಂದಲೂ ಬಂದಿದ್ದರು.

* ನಿಮಗೆ ಮುಂದಿನ ಸಲ ಟಿಕೆಟ್ ಸಿಗೋ ಖಾತ್ರಿ ಇದೆಯಾ?
ನಿಮಗೆ ಯಾಕೆ ಅನುಮಾನ? ನಾನು ಯಾವ ಸಲವೂ ಪಕ್ಷದ ಟಿಕೆಟ್ ಕೇಳಿಕೊಂಡು ಹೋದವನಲ್ಲ. ಪಕ್ಷದ ವರಿಷ್ಠರೇ ಕರೆದು ಟಿಕೆಟ್ ಕೊಟ್ಟಿದ್ದಾರೆ.[ಭೂ ಅಕ್ರಮದಲ್ಲಿ ಸುಳಿಯಲ್ಲಿ ಸಚಿವ ಸೊಗಡು ಶಿವಣ್ಣ?]

* ನಿಮ್ಮ ಮಾತು ಕೇಳುತ್ತಿದ್ದರೆ ಮುಂಚಿನಷ್ಟು ಖಡಕ್ ಆಗಿಲ್ಲ ಶಿವಣ್ಣನವರು ಅನ್ನಿಸ್ತಿದೆಯಲ್ಲಾ
ಹಾಗೇನಿಲ್ಲ. ನಾನು ಮುಂಚಿನಿಂದಲೂ ಇರೋದೇ ಹೀಗೆ.

* ಜಿಲ್ಲೆಯೊಳಗೂ ನಿಮಗೆ ಯಾವುದೇ ಅಸಮಾಧಾನ ಇಲ್ಲ!
ಮೋದಿಯವರು ಇಂಥ ಒಳ್ಳೆ ಕೆಲಸ ಮಾಡವ್ರೆ. ಹೇಳಿಕೊಳ್ಳೋ ಸಮಯದಲ್ಲಿ ಇಂಥ ಸ್ಥಿತಿ ಇದೆ. ನಾವು ಬಿಜೆಪಿ ಸೇವಕರು. ವರಿಷ್ಠರು ಹೇಳಿದ ಹಾಗೆ ಕೇಳ್ತೀವಿ. ಜನಕ್ಕೂ, ಪಕ್ಷಕ್ಕೂ ಶಿವಣ್ಣ ಏನು ಅಂತ ಗೊತ್ತಿದೆ. ಇದಕ್ಕಿಂತ ಹೆಚ್ಚಿಗೆ ಹೇಳಕ್ಕೆ ಏನೂ ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former minister Shivanna (Tumakuru) attended Rayanna brigade convention in Belagavi. After the warning from BJP leaders not to identify with any organisation, Shivanna participated in Belagavi convention. On the backdrop of this, here is an interview of him.
Please Wait while comments are loading...