ಕಾರ್ಯಕರ್ತರ ಕಾವು ತಾಗಿದ ಮೇಲೆ ಸೊಗಡು ಪರ ಸುರೇಶ್ ಗೌಡ ಬ್ಯಾಟಿಂಗ್!

Posted By: ಕುಮಾರಸ್ವಾಮಿ
Subscribe to Oneindia Kannada

ತುಮಕೂರು, ಏಪ್ರಿಲ್ 7: ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರದ ಬೆಂಕಿ ಇಡೀ ಜಿಲ್ಲೆಯಲ್ಲೇ ಕೇಸರಿ ಪಕ್ಷಕ್ಕೆ ಬಿಸಿ ತಾಗಿಸುವಂತೆ ಕಾಣಿಸುತ್ತಿದೆ. ಸೊಗಡು ಶಿವಣ್ಣ ಹಾಗೂ ಜಿ.ಎಸ್.ಬಸವರಾಜ್ ಮಧ್ಯೆ ಲಿಂಗಾಯತ ಮುಖಂಡರು ಮಾಡಿಸಿದ ಸಂಧಾನ ಮೇಲ್ನೋಟಕ್ಕೆ ಮಾತ್ರವೇ ಎಂಬ ಅನುಮಾನ ವ್ಯಕ್ತವಾಗುವಂಥ ಘಟನೆ ಶುಕ್ರವಾರ ನಡೆದಿದೆ.

ಅಂದ ಹಾಗೆ, ಬೆಂಗಳೂರಿನ ರಮಣಶ್ರೀ ಕ್ಯಾಲಿಫೋರ್ನಿಯಾದಲ್ಲಿ ಬಿಜೆಪಿ ಸಭೆಯೊಂದಿತ್ತು. ಅದರಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಅಧ್ಯಕ್ಷರು, ಪ್ರಮುಖ ಮುಖಂಡರನ್ನು ಕರೆಯಲಾಗಿತ್ತು. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಂತೋಷ್ ಜೀ ಸೇರಿದಂತೆ ಪ್ರಮುಖ ನಾಯಕರು ಕೂಡ ಈ ಸಭೆಯಲ್ಲಿ ಇದ್ದರು.

ತುಮಕೂರು ನಗರ ಬಿಜೆಪಿ ಟಿಕೆಟ್ ಶೀಘ್ರ ಪ್ರಕಟಿಸಲು ಬಿಎಸ್‌ವೈಗೆ ಮನವಿ

ಈ ಸಭೆಯಲ್ಲಿ ಭಾಗವಹಿಸುವವರಿಗೆ ಪಾಸ್ ವಿತರಿಸಲಾಗಿತ್ತು. ಈಗಾಗಲೇ ತಿಳಿದಿರುವಂತೆ ತುಮಕೂರಿನಲ್ಲಿ ಸೊಗಡು ಶಿವಣ್ಣ ಮೂಲ ಬಿಜೆಪಿ ಬಣ ಹಾಗೂ ಜ್ಯೋತಿ ಗಣೇಶ್- ಜಿ.ಎಸ್.ಬಸವರಾಜು ವಲಸೆ ಬಣ ಎಂಬುದು ಗೆರೆ ಕೊಯ್ದಂತೆ ಆಗಿದೆ. ಸಭೆಯ ಪಾಸ್ ವಿತರಣೆ ವಿಚಾರವಾಗಿ ಶಿವಣ್ಣ ಬಣದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಸರಿಯಾದ ಪ್ರಾಶಸ್ತ್ಯ ದೊರೆತಿಲ್ಲ ಎಂಬ ಅಸಮಾಧಾನ ಹೊರ ಹಾಕಿದ್ದಾರೆ.

ಸುರೇಶ್ ಗೌಡರಿಗೆ ಬಿಸಿ ತಾಗಿತು

ಸುರೇಶ್ ಗೌಡರಿಗೆ ಬಿಸಿ ತಾಗಿತು

ಈ ಎಲ್ಲ ಬೆಳವಣಿಗೆ ಮಧ್ಯೆ ಶಿವಣ್ಣ ವಿಚಾರವಾಗಿ ನಡೆಯುತ್ತಿರುವ ಈಚೆಗಿನ ಬೆಳವಣಿಗೆಯ ಕಾವು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರಿಗೆ ತಟ್ಟಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳುವ ವೇಳೆ, ಟಿಕೆಟ್ ಕೊಡಿಸಲು ಸೊಗಡು ಶಿವಣ್ಣ ಬೆಂಬಲಕ್ಕೆ ನೀವು ನಿಲ್ಲದಿದ್ದರೆ ನಮ್ಮ ಬೆಂಬಲ ನಿಮಗಿಲ್ಲ ಎಂದು ಬಿಜೆಪಿಯ ಕೆಲ ಮುಖಂಡರು ನೇರವಾಗಿಯೇ ಸುರೇಶ್ ಗೌಡರಿಗೆ ಹೇಳಿದ್ದಾರೆ.

ರಮಣಶ್ರೀ ಕ್ಯಾಲಿಫೋರ್ನಿಯಾಕ್ಕೆ ಧಾವಿಸಿದ್ದಾರೆ

ರಮಣಶ್ರೀ ಕ್ಯಾಲಿಫೋರ್ನಿಯಾಕ್ಕೆ ಧಾವಿಸಿದ್ದಾರೆ

ಯಾವಾಗ ಇಂಥದ್ದೊಂದು ಮುಜುಗರದ ಬೆಳವಣಿಗೆ ಎದುರಿಸಬೇಕಾಯಿತೋ ಎಚ್ಚೆತ್ತುಕೊಂಡ ಸುರೇಶ್ ಗೌಡ, ಬೆಂಗಳೂರಿನ ರಮಣಶ್ರೀ ಕ್ಯಾಲಿಫೋರ್ನಿಯಾಕ್ಕೆ ಧಾವಿಸಿದ್ದಾರೆ. ಮೊದಲಿಗೆ ಶಿವಣ್ಣನಿಗೆ ಟಿಕೆಟ್ ಅನ್ನೋದು ಖಾತ್ರಿ ಪಡಿಸಿ. ಇಲ್ಲದಿದ್ದರೆ ತುಮಕೂರು ಜಿಲ್ಲೆಯ ಎಲ್ಲ ಕಡೆ ಇರುವ ಮೂಲ ಬಿಜೆಪಿ ವರ್ಸಸ್ ವಲಸಿಗರು ಎಂಬ ಬೆಂಕಿ ದೊಡ್ಡದಾಗುತ್ತದೆ. ಅದರಲ್ಲಿ ಬಿಜೆಪಿ ಸುಟ್ಟು ಹೋಗುತ್ತದೆ ಎಂದು ಹೇಳಿದ್ದಾರೆ.

ಸಮಾಧಾನ ಪಡಿಸಿದ ಹಿರಿಯ ನಾಯಕರು

ಸಮಾಧಾನ ಪಡಿಸಿದ ಹಿರಿಯ ನಾಯಕರು

ಈ ಸಂದರ್ಭದಲ್ಲಿ ಅಲ್ಲಿದ್ದ ಬಿಜೆಪಿಯ ಪ್ರಮುಖ ನಾಯಕರೊಬ್ಬರು, ಈ ಬಗ್ಗೆ ಮಾತನಾಡುವುದಕ್ಕೆ ಈಗಾಗಲೇ ತುಮಕೂರಿನಿಂದ ಬಂದವರಿದ್ದಾರೆ. ಅವರು ಮಾತನಾಡಿ, ಮುಗಿಸಲಿ. ಆ ನಂತರ ನೀವು ಏನು ಹೇಳುತ್ತೀರೋ ಅದನ್ನು ಕೇಳೋಣ. ಆವರೆಗೆ ಸ್ವಲ್ಪ ತಾಳ್ಮೆಯಿಂದ ಕಾಯುವಂತೆ ತಿಳಿಸಿದ್ದಾರೆ.

 ಇಡೀ ಜಿಲ್ಲೆಯಲ್ಲಿ ಬಿಜೆಪಿಗೆ ಬೆಂಕಿ

ಇಡೀ ಜಿಲ್ಲೆಯಲ್ಲಿ ಬಿಜೆಪಿಗೆ ಬೆಂಕಿ

ತಮ್ಮ ಸರದಿ ಬರುವವರೆಗೆ ಕಾದಿದ್ದ ಸುರೇಶ್ ಗೌಡ, ಜಿಲ್ಲೆಯಲ್ಲಿ ಸೊಗಡು ಶಿವಣ್ಣ ಅವರ ವಿಚಾರದಲ್ಲಿ ಕಾರ್ಯಕರ್ತರಿಗೆ ಪ್ರೀತಿ ಇದೆ. ಜಿ.ಎಸ್.ಬಸವರಾಜು ಹಾಗೂ ಜ್ಯೋತಿಗಣೇಶ್ ಹೊರಗಿನಿಂದ ಬಂದವರು ಮತ್ತು ಮೂಲ ಹಾಗೂ ವಲಸಿಗ ಗುಂಪಾಗಲು ಕಾರಣರಾಗಿದ್ದಾರೆ ಎಂಬ ಸಿಟ್ಟಿದೆ. ಒಂದು ವೇಳೆ ಶಿವಣ್ಣ ಅವರಿಗೆ ತುಮಕೂರು ನಗರ ಕ್ಷೇತ್ರದ ಟಿಕೆಟ್ ತಪ್ಪಿಹೋದರೆ ಅದರ ಪರಿಣಾಮವನ್ನು ಇಡೀ ಜಿಲ್ಲೆಯಲ್ಲಿ ಬಿಜೆಪಿ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: Tuamkuru rural BJP MLA B.Suresh Gowda batting for former minister and BJP leader Sogadu Shivanna in the part meeting for ticket, which was held in Ramanasri California, Begaluru on Friday. Here is the latest developments of Tumakuru BJP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ