ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನಲ್ಲಿ ಸುಸೂತ್ರವಿಲ್ಲ ಕಣ; ಒಬ್ಬರನ್ನು ಕೆಡವಲು ಮತ್ತೊಬ್ಬರು ಪಣ!

|
Google Oneindia Kannada News

ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವತಃ ದೇವೇಗೌಡರೇ ಕಣಕ್ಕೆ ಇಳಿಯುತ್ತಿರುವ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಈಗ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ, ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದಕ್ಕೆ ಕಾಂಗ್ರೆಸ್ ನಲ್ಲಿ ಸಿಟ್ಟಿದ್ದರೆ, ಇದರ ಲಾಭ ಬಿಜೆಪಿ ಮಾಡಿಕೊಳ್ಳಬಹುದೇನೋ ಅಂತ ನೋಡಿದರೆ ಪರಿಸ್ಥಿತಿ ಆ ರೀತಿಯೂ ಇಲ್ಲ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಆಪ್ತರು ಎಸ್.ಪಿ.ಮುದ್ದಹನುಮೇಗೌಡ. ಮೊದಲಿಗೆ ಕ್ಷೇತ್ರ ಹಂಚಿಕೆ ಅಯಿತಲ್ಲ, ದೇವೇಗೌಡರೇ ಸ್ಪರ್ಧೆ ಮಾಡುವುದಾದರೆ ನನ್ನದೇನೂ ಅಕ್ಷೇಪ ಇಲ್ಲ. ಕಾಂಗ್ರೆಸ್ ನ ಹಲವು ಮುಖಂಡರದು ಇದೇ ಅಭಿಪ್ರಾಯ ಎಂದು ಅವರು ಹೇಳಿದ್ದರು. ಆದರೆ ದಿಢೀರನೇ ತಮ್ಮ ನಿಲವು ಬದಲಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮಾತನಾಡುತ್ತಿದ್ದಾರೆ.

ನಾಮಪತ್ರ ಸಲ್ಲಿಸಲಿರುವ ಮುದ್ದಹನುಮೇಗೌಡ, ಆತಂಕದಲ್ಲಿ ದೇವೇಗೌಡನಾಮಪತ್ರ ಸಲ್ಲಿಸಲಿರುವ ಮುದ್ದಹನುಮೇಗೌಡ, ಆತಂಕದಲ್ಲಿ ದೇವೇಗೌಡ

ಮುದ್ದಹನುಮೇಗೌಡರು ಸ್ವಭಾವತಃ ಆಕ್ರಮಣಕಾರಿ ಮನೋಭಾವದವರಲ್ಲ. ಅವರ ರಾಜಕಾರಣದ ವೈಖರಿಯೂ ಮೃದು ಧೋರಣೆಯದ್ದೇ. ಅಂಥವರು ಈಗ, ನನ್ನ ಬೆಂಬಲಿಗರ ಒತ್ತಾಯ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎನ್ನುತ್ತಿರುವುದು ಹಾಗೂ ಅವರಿಗೆ ಕಾಂಗ್ರೆಸ್ ಮುಖಂಡ- ಸಿದ್ದರಾಮಯ್ಯ ಆಪ್ತ ಕೆ.ಎನ್.ರಾಜಣ್ಣ ಬೆಂಬಲ ನೀಡುತ್ತಿರುವುದು ಮೇಲ್ನೋಟಕ್ಕೆ ಬಹಳ ವಿಚಿತ್ರ ಎನಿಸುತ್ತಿದೆ.

ಹೇಮಾವತಿ ನೀರಿನ ವಿಚಾರವಾಗಿ ದೇವೇಗೌಡರ ಮೇಲೆ ಸಿಟ್ಟು

ಹೇಮಾವತಿ ನೀರಿನ ವಿಚಾರವಾಗಿ ದೇವೇಗೌಡರ ಮೇಲೆ ಸಿಟ್ಟು

ತುಮಕೂರು ಜಿಲ್ಲೆಯಲ್ಲೇ ಒಂದು ಅಭಿಪ್ರಾಯ ದೇವೇಗೌಡರ ಕುಟುಂಬದ ಬಗ್ಗೆ ಇದೆ. ಜಿಲ್ಲೆಗೆ ಹೇಮಾವತಿ ನೀರು ಅಗತ್ಯ ಪ್ರಮಾಣದಲ್ಲಿ ಬಾರದಿರುವಂತೆ ತಡೆದಿರುವುದೇ ದೇವೇಗೌಡರು ಹಾಗೂ ರೇವಣ್ಣ ಎಂಬುದು ಇಲ್ಲಿನ ಜನರ ಅಭಿಪ್ರಾಯ. ಅಷ್ಟಾದರೂ ಲೋಕಸಭೆ ವ್ಯಾಪ್ತಿಗೆ ಬರುವ ಎಂಟು ಕ್ಷೇತ್ರಗಳ ಪೈಕಿ ತುಮಕೂರು ಗ್ರಾಮಾಂತರ, ಗುಬ್ಬಿ, ಮಧುಗಿರಿಯಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇನ್ನು ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರಿನಲ್ಲಿ ಬಿಜೆಪಿ ಶಾಸಕರಿದ್ದರೆ, ಕೊರಟಗೆರೆಯಲ್ಲಿ ಕಾಂಗ್ರೆಸ್ ನಿಂದ ಜಿ.ಪರಮೇಶ್ವರ್ ಜಯಿಸಿದ್ದಾರೆ. ಮೇಲ್ನೋಟಕ್ಕೆ ಗಮನಿಸಿದರೆ, ಜೆಡಿಎಸ್- ಕಾಂಗ್ರೆಸ್ ನ ಮೈತ್ರಿ ಅಭ್ಯರ್ಥಿಯಾಗಿರುವ ದೇವೇಗೌಡರಿಗೆ ಸಮಬಲದ ಬೆಂಬಲ ದೊರೆಯಬಹುದು ಎಂಬಂತೆ ಇದೆ. ಆದರೆ ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ಒಕ್ಕಲಿಗ ಸಮುದಾಯದ- ಕಾಂಗ್ರೆಸ್ ಹಾಗೂ ಜೆಡಿಎಸ್ ಮತ ಬ್ಯಾಂಕ್ ವಿಭಜನೆ ಆಗುವ ಸಾಧ್ಯತೆ ಇದೆ.

ಜಿಎಸ್ ಬಸವರಾಜ್ ಸ್ಪರ್ಧೆಗೆ ಸುರೇಶ್ ಗೌಡ, ಸೊಗಡು ಶಿವಣ್ಣ ವಿರೋಧ

ಜಿಎಸ್ ಬಸವರಾಜ್ ಸ್ಪರ್ಧೆಗೆ ಸುರೇಶ್ ಗೌಡ, ಸೊಗಡು ಶಿವಣ್ಣ ವಿರೋಧ

ಹಾಗಂತ ಇದರ ಅನುಕೂಲ ಬಿಜೆಪಿ ಅಭ್ಯರ್ಥಿ ಆಗಿರುವ ಜಿ.ಎಸ್.ಬಸವರಾಜ್ ಅವರಿಗೆ ಆಗಬಹುದಾ? ಖಂಡಿತಾ ಇಲ್ಲ. ಏಕೆಂದರೆ, ತುಮಕೂರಿನಲ್ಲಿ ಮೂಲ ಹಾಗೂ ವಲಸಿಗ ಬಿಜೆಪಿಗರು ಎಂದಿದೆ. ತುಮಕೂರು ನಗರ, ತುರುವೇಕೆರೆ, ಚಿಕ್ಕನಾಯಕನಹಳ್ಳಿಯಲ್ಲಿ ಶಾಸಕರಾಗಿರುವವರು ಯಡಿಯೂರಪ್ಪ ಅವರಿಗೆ ಆಪ್ತರು. ಆ ಪೈಕಿ ತಿಪಟೂರಿನ ಬಿ.ಸಿ.ನಾಗೇಶ್ ಬಿಜೆಪಿಯ ನಿಷ್ಠರೇ ಹೊರತು ವ್ಯಕ್ತಿಗೆ ನಿಷ್ಠರು ಅಂತಲ್ಲ. ಬಸವರಾಜ್ ಸ್ಪರ್ಧೆಗೆ ತುಮಕೂರು ಗ್ರಾಮಾಂತರದ ಮಾಜಿ ಶಾಸಕ ಬಿ.ಸುರೇಶ್ ಗೌಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ತೀವ್ರ ವಿರೋಧ ಇದೆ. ಆ ಕಾರಣಕ್ಕೆ ದೇವೇಗೌಡರಿಗೆ ಬೆಂಬಲ ನೀಡುವ ಸಾಧ್ಯತೆ ಇದೆಯಾ ಅನ್ನೋದು ಒಂದು ಪ್ರಶ್ನೆಯಾದರೆ, ಮುದ್ದಹನುಮೇಗೌಡರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಒಕ್ಕಲಿಗ ಸಮುದಾಯದ ಮತಗಳು ಸುರೇಶ್ ಗೌಡ ಮೂಲಕ, ಸೊಗಡು ಶಿವಣ್ಣ ಅವರ ಮೂಲಕ ಲಿಂಗಾಯತ ಸಮುದಾಯದ ಮತಗಳು ಹಾಕಿಸುವ ಸಾಧ್ಯತೆ ಇದೆ. ಅಂಥ ಸನ್ನಿವೇಶದಲ್ಲಿ ಲಿಂಗಾಯತ ಸಮುದಾಯದ ಮತಗಳು ಸಾಲಿಡ್ ಆಗಿ ಬಿಜೆಪಿಗೆ ಹೋಗುವುದಿಲ್ಲ.

ಅಪ್ಪ-ಮಕ್ಕಳಿಗೇ ಎಲ್ಲ ಅಧಿಕಾರ ಎಂಬ ಆಕ್ರೋಶ

ಅಪ್ಪ-ಮಕ್ಕಳಿಗೇ ಎಲ್ಲ ಅಧಿಕಾರ ಎಂಬ ಆಕ್ರೋಶ

ಸುರೇಶ್ ಗೌಡ ಅವರು ಬಿಎಸ್ ವೈ ಆಪ್ತರು. ಈ ಬಾರಿ ಅವರು ಕೂಡ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ಆಗಿದ್ದರು. ಬಿಜೆಪಿಯಿಂದ ಜಿ.ಎಸ್.ಬಸವರಾಜ್ ಅವರಿಗೆ ಟಿಕೆಟ್ ಸಿಕ್ಕಿದೆ. ತುಮಕೂರು ನಗರದಲ್ಲಿ ಜಿಎಸ್ ಬಿ ಅವರ ಮಗ ಜ್ಯೋತಿಗಣೇಶ್ ಶಾಸಕರಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಬಿಜೆಪಿಯು ಅಪ್ಪ-ಮಕ್ಕಳ ಹಿಡಿತದಲ್ಲಿದೆ ಎಂಬ ಅಕ್ರೋಶ ಸ್ಥಳೀಯವಾಗಿ ಬಲವಾಗಿದೆ. ಯಡಿಯೂರಪ್ಪ ಆಪ್ತರು ಎಂಬ ಕಾರಣಕ್ಕೆ ಜಿ.ಎಸ್.ಬಸವರಾಜ್ ಮತ್ತು ಅವರ ಮಗನಿಗೇ ಎಲ್ಲ ಅಧಿಕಾರ ಪಕ್ಷದಲ್ಲಿ ಸಿಗುತ್ತಿದೆ ಎಂಬುದು ಸಾರ್ವಜನಿಕವಾಗಿಯೇ ಕೇಳಿಬರುತ್ತಿರುವ ಆಕ್ಷೇಪ. ಇನ್ನು ಮೊದಲೇ ಹೇಳಿದ ಹಾಗೆ, ಮೂಲ ಕೆಜೆಪಿ ವರ್ಸಸ್ ಮೂಲ ಬಿಜೆಪಿ ಎಂಬುದು ಹಾಗೇ ಉಳಿದುಹೋಗಿದೆ. ಆ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಯಡಿಯೂರಪ್ಪ ಕೂಡ ಯಾವುದೇ ಪರಿಣಾಮಕಾರಿ ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ಬಿಜೆಪಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಚುನಾವಣೆ ಎದುರಿಸುವುದು ಜಿ.ಎಸ್.ಬಸವರಾಜ್ ಅವರಿಗೆ ಕಷ್ಟವಾಗಲಿದೆ.

ಅವರಿಬ್ಬರ ಎದುರು ಮುದ್ದಹನುಮೇಗೌಡರು ಮಂಕಾಗಿ ಕಾಣ್ತಾರೆ

ಅವರಿಬ್ಬರ ಎದುರು ಮುದ್ದಹನುಮೇಗೌಡರು ಮಂಕಾಗಿ ಕಾಣ್ತಾರೆ

ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗಂತೂ ಜಿ.ಎಸ್.ಬಿ ಹಾಗೂ ಜ್ಯೋತಿ ಗಣೇಶ್ ಬಗ್ಗೆ ತೀರದ ಸಿಟ್ಟಿದೆ. ತಮಗೆ ವಿಧಾನಸಭೆ ಟಿಕೆಟ್ ತಪ್ಪಿಸಿದ್ದು, ಜಿಲ್ಲೆಯಲ್ಲಿ ಮೂಲೆಗುಂಪಾಗುವಂತೆ ಮಾಡಿದ್ದು ಇವರಿಬ್ಬರು ಎಂಬುದು ಶಿವಣ್ಣ ಸಿಟ್ಟು. ಹಾಗಂತ ಬಿಜೆಪಿ ವಿರುದ್ಧ ಕೆಲಸ ಮಾಡುವ ಸಾಧ್ಯತೆ ಇಲ್ಲ. ಕೊನೆಗೆ ತಟಸ್ಥರಾಗಿ ಉಳಿದು, ಜಿಎಸ್ ಬಿಗೆ ಲಿಂಗಾಯತ ಸಮುದಾಯದ ಮತಗಳು ನೋಡಿಕೊಳ್ಳಬಹುದು. ಒಂದು ಕಡೆ ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗ ಮತಗಳು, ನಗರ ವ್ಯಾಪ್ತಿಯಲ್ಲಿ ಲಿಂಗಾಯತ ಮತಗಳು ಬಿಜೆಪಿಗೆ ಬಾರದಂತೆ ನೋಡಿಕೊಳ್ಳಲು ಈಗಾಗಲೇ ಲೆಕ್ಕಾಚಾರ ನಡೆದಿದೆ ಎನ್ನಲಾಗುತ್ತಿದೆ. ಬಿಜೆಪಿ, ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಇಬ್ಬರಿಗೂ ತುಮಕೂರಿನಲ್ಲಿ ಸನ್ನಿವೇಶ ಸಲೀಸಾಗಿಲ್ಲ. ಆದರೆ ಜಿ.ಎಸ್.ಬಸವರಾಜ್ ಹಾಗೂ ದೇವೇಗೌಡರ ಅನುಭವ ಮತ್ತು ಶಕ್ತಿ ಮುಂದೆ ಮುದ್ದಹನುಮೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ದುರ್ಬಲರಂತೆ ಕಾಣುತ್ತಾರೆ.

English summary
Lok sabha elections 2019: Here is the Tumakuru constituency political analysis. What are the factors likely to impact on contestants explained in this report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X