ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿ.ವೈ. ವಿಜಯೇಂದ್ರ ಮೇಲೆ ದಿನೇಶ್ ಗುಂಡೂರಾವ್ ಗಂಭೀರ ಆರೋಪ!

|
Google Oneindia Kannada News

ಬೆಂಗಳೂರು, ಅ. 29: ಆರ್‌ ಆರ್‌ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಈ ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ತಾಯಿ ಸಮಾನ ಎಂದು ಹೇಳಿಕೊಂಡು ತಿರುಗಾಡಿದ್ದರು. ಈಗ ತಾಯಿ ಸಮಾನವಾದ ಪಕ್ಷ ಬಿಟ್ಟು ಹೋದ ಹಿನ್ನೆಲೆಯಲ್ಲಿ ನಮ್ಮ ಪಕ್ಷದ‌ ಮುಖಂಡ ರಿಜ್ವಾನ್ ಅರ್ಷದ್ ಅವರು, ಮುನಿರತ್ನ ಅವರು ಪಕ್ಷಕ್ಕೆ ಮಾಡಿದ ದ್ರೋಹ ತಾಯಿಗೆ ಮಾಡಿದ ದ್ರೋಹವಿದ್ದಂತಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ.

ಶಾಸಕ ರಿಜ್ವಾನ್ ಅರ್ಷದ್ ಅವರಾಗಲಿ ಅಥವಾ ನಮ್ಮ ಪಕ್ಷದ ಯಾವುದೇ ಮುಖಂಡರಾಗಲಿ ಮುನಿರತ್ನ ಅವರ ತಾಯಿಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆದರೆ ಮುನಿರತ್ನರವರು ಇದನ್ನು ಅನುಕಂಪ ಗಿಟ್ಟಿಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ತಂದೆಯ ಹೆಸರು ಹೇಳಿಕೊಂಡು ನಾನು ರಾಜಕಾರಣ ಮಾಡುತ್ತಿದ್ದೇನೆ ಎಂಬ ಮುನಿರತ್ನ ಅವರ ಮಾತಿನಲ್ಲಿ ಅರ್ಥವಿಲ್ಲ. ನಮ್ಮ ತಂದೆ ಗುಂಡೂರಾವ್ ಅವರು ನಿಧನರಾಗಿ 27 ವರ್ಷಗಳು ಕಳೆದು ಹೋಗಿವೆ. ನನ್ನ ತಂದೆಯ ನಿಧನದ ನಂತರವೇ ನಾನು ರಾಜಕೀಯ ಪ್ರವೇಶ ಮಾಡಿದ್ದು. ನನ್ನ ಇತಿಹಾಸ ಜನರ ಮುಂದಿದೆ. 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ವಿರುದ್ಧ ಟೀಕೆ ಮಾಡಲು ಮುನಿರತ್ನ ಅವರಿಗೆ ಬೇರೆ ಯಾವುದೇ ವಿಷಯವಿಲ್ಲ. ಹಾಗಾಗಿ ಇಂತಹ ಅರ್ಥಹೀನ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣೆ ಬಳಿಕ ಯಡಿಯೂರಪ್ಪ ಬದಲಾವಣೆ

ಚುನಾವಣೆ ಬಳಿಕ ಯಡಿಯೂರಪ್ಪ ಬದಲಾವಣೆ

ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗಿದೆ. ಬಹುಶಃ ಉಪಚುನಾವಣೆ ಮುಗಿದ ಬಳಿಕವೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಿದ್ದತೆ ಮಾಡಿಕೊಂಡಿದ್ದಾರೆ. ಬಿಎಸ್‌ವೈ ಜೊತೆಗಿರುವ ಮುಖಂಡರೆ ಅವರನ್ನು ಇಳಿಸುವ ವ್ಯವಸ್ಥಿತ ಸಂಚು ಹಾಕಿಕೊಂಡಿದ್ದಾರೆ.

ನಮ್ಮ ಪಕ್ಷಕ್ಕೆ ಬಿಜೆಪಿ ಸರ್ಕಾರವನ್ನು ಬೀಳಿಸಿ ಹಿಂಬಾಗಿಲಿನಿಂದ ಸರ್ಕಾರ ಸರ್ಕಾರ ರಚಿಸುವ ಯಾವ ಉದ್ದೇಶವೂ ಇಲ್ಲ. ನಾವು ಚುನಾವಣೆಯ ಮೇಲೆ ನಂಬಿಕೆ ಇಟ್ಟಿದ್ದೇವೆ. ಚುನಾವಣೆಯಲ್ಲಿ ಮತದಾರರ ಆಶಿರ್ವಾದ ಪಡೆದ ನಂತರವೇ ನಾವು ಸರ್ಕಾರ ರಚಿಸುವ ಪ್ರಯತ್ನ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅಸಂಬದ್ಧ ನಳಿನ್ ಕುಮಾರ್ ಕಟೀಲ್

ಅಸಂಬದ್ಧ ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಅಸಂಬದ್ಧ ಹೇಳಿಕೆಯಿಂದಲೇ ಸದಾ ಸುದ್ದಿಯಲ್ಲಿರುವ ಚಪಲವಿದೆ. ಹಾಗಾಗಿ 'ಹುಲಿಯಾ' 'ಕಾಡು ಮನುಷ್ಯರು' ಎನ್ನುತ್ತಾ ತಿರುಗಾಡುತ್ತಿದ್ದಾರೆ. ಕಟೀಲ್ ಮತದಾರರ ಮುಂದೆ ನೈಜ ವಿಷಯಗಳನ್ಯಾಕೆ ಪ್ರಸ್ತಾಪ ಮಾಡುವುದಿಲ್ಲ?. ಯಡಿಯೂರಪ್ಪ ಸರ್ಕಾರದ ಸಾಧನೆ ಏನು? ಮೋದಿ ಸರ್ಕಾರದ ಸಾಧನೆ ಏನು? ಎಂಬುದನ್ನು ಪ್ರಸ್ತಾಪ ಮಾಡಲಿ ಎಂದರು.

ಈಗಾಗಲೆ ಅನ್ನಭಾಗ್ಯ ಯೋಜನೆಯಲ್ಲಿ ಕೊಡುತ್ತಿದ್ದ ಅಕ್ಕಿಯನ್ನು ಬಿಎಸ್‌ವೈ ಸರ್ಕಾರ ಕಡಿತ ಮಾಡಿದೆ, ಜನರಿಗೆ ಪಿಂಚಣಿ ಸಿಗುತ್ತಿಲ್ಲ, ಇಂದಿರಾ ಕ್ಯಾಂಟೀನ್ ಮುಚ್ಚುವ ಯತ್ನ ನಡೆಸಲಾಗುತ್ತಿದೆ, ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲ, ಕೊರೋನಾ ಪರಿಹಾರದಲ್ಲೂ ವ್ಯಾಪಕ ಭ್ರಷ್ಟಾಚಾರವಾಗಿದೆ. ಪ್ರವಾಹ ಸಂತ್ರಸ್ತರಿಗೆ ಇನ್ನೂ ಪರಿಹಾರವನ್ನೇ ಕೊಟ್ಟಿಲ್ಲ. ಈ ಬಗ್ಗೆ ನಳಿನ್ ಕುಮಾರ್ ಕಟೀಲ್ ಯಾಕೆ ಮಾತಾಡುವುದಿಲ್ಲ?

ಯತ್ನಾಳ್ ಹಿಂದೆ ಕಟೀಲ್ ಇದ್ದಾರೆ

ಯತ್ನಾಳ್ ಹಿಂದೆ ಕಟೀಲ್ ಇದ್ದಾರೆ

ನಳಿನ್ ಕುಮಾರ್ ಕಟೀಲ್ ಅವರರು ಮಾತನಾಡುವುದಿಲ್ಲ ಯಾಕೆಂದರೆ ಕಟೀಲ್ ಅವರಿಗೂ ತಮ್ಮ ಸರ್ಕಾರದ ಸಾಧನೆ ಶೂನ್ಯ ಎಂಬ ಸತ್ಯ ಗೊತ್ತಿದೆ. ಹಾಗಾಗಿ ದಿಕ್ಕು ತಪ್ಪಿಸಲು ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸ್ವತಃ ಕಟೀಲ್ ಅವರಿಗೂ ಯಡಿಯೂರಪ್ಪ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಬಿಎಸ್‌ವೈ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮುಂದೆ ಬಿಟ್ಟು ಮಾತನಾಡಿಸುತ್ತಿರುವುದೇ ಕಟೀಲ್ ಎಂದರು.

ಇನ್ನು ಶಿರಾ ಕ್ಷೇತ್ರದ ಅಭ್ಯರ್ಥಿ ಜಯಚಂದ್ರ ಪರ ಜನರ ಒಲವಿದೆ. ಅವರು ಉತ್ತಮ ಕೆಲಸಗಾರ. ಜಯಚಂದ್ರ ಬೂಟಾಟಿಕೆ ಮಾಡಿಕೊಂಡಾಗಲಿ, ಜಾತಿ ಹೆಸರೇಳಿಕೊಂಡಾಗಲಿ, ಹಣದ ಆಮಿಷ ತೋರಿಸಿ ಹಾಗೂ ಹೆದರಿಸಿ ಬೆದರಿಸಿ ಮತ ಕೇಳುತ್ತಿಲ್ಲ. ಅವರು ಮಾಡಿದ ಅಭಿವೃದ್ಧಿಯನ್ನೇ ಆಧಾರವಾಗಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅವರ ಸಾಧನೆಯ ಬಗ್ಗೆ ಕ್ಷೇತ್ರದ ಮತದಾರರಿಗೆ ತಿಳಿದಿದೆ. 1978 ರಿಂದಲೂ ಕ್ಷೇತ್ರಕ್ಕೆ ನೀರಾವರಿ, ರಸ್ತೆ ಸೇರಿದಂತೆ ಸರ್ಕಾರದ ಹಲವು ಯೋಜನೆಗಳನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ.

ಲೂಟಿ ಹೊಡೆದ ದುಡ್ಡು ಸುರಿಯುತ್ತಿರುವ ವಿಜಯೇಂದ್ರ!

ಲೂಟಿ ಹೊಡೆದ ದುಡ್ಡು ಸುರಿಯುತ್ತಿರುವ ವಿಜಯೇಂದ್ರ!

ಶಿರಾದಲ್ಲಿ ಬಿಜೆಪಿ ಹಣದ ಹೊಳೆಯನ್ನೆ ಹರಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಲೂಟಿ ಹೊಡೆದ ದುಡ್ಡನ್ನು ಹಂಚುವುದನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ. 2 ಸಾವಿರದಿಂದ 2 ಲಕ್ಷದವರೆಗೂ ಹಣದ ಹಂಚಿಕೆ ಮಾಡುತ್ತಿದ್ದಾರೆ. ಬಿಜೆಪಿಗೆ ಚುನಾವಣೆ ಎಂಬುದು ವ್ಯಾಪಾರವಾಗಿದೆ.

ಆಪರೇಷನ್ ಕಮಲ ಮಾಡಿದ್ದು ವ್ಯಾಪಾರ, ಸರ್ಕಾರ ರಚನೆ ಮಾಡಿದ್ದು ವ್ಯಾಪಾರ ಜೊತೆಗೆ ಈ ಚುನಾವಣೆಯೂ ಕೂಡ ವ್ಯಾಪಾರವಾಗಿದೆ. ಬಿಜೆಪಿಗೆ ಚುನಾವಣೆ ಎದುರಿಸುವ ಯಾವ ನೈತಿಕತೆಯಿದೆ. ವಿಜಯೇಂದ್ರ ಕೆ.ಆರ್. ಪೇಟೆಯಲ್ಲೂ ಹಣ ಹಂಚಿ ಅಕ್ರಮ ಎಸಗಿದ್ದರು. ಶಿರಾದಲ್ಲಿ ಆ ಪ್ರಯತ್ನ ನಡೆಯುವುದಿಲ್ಲ. ಶಿರಾ ಮತದಾರರು ಪ್ರಜ್ಞಾವಂತರಿದ್ದಾರೆ. ಇಲ್ಲಿ ಜಯಚಂದ್ರ ಮಾಡಿದ ಅಭಿವೃದ್ಧಿ ಕೆಲಸ ಅವರ ಕೈ ಹಿಡಿಯಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

English summary
KPCC former President Dinesh Gundu Rao has made serious allegations against BY Vijayendra, son of Chief Minister B.S. Yediyurappa. He has stated that BY Vijayendra is distributing looted money it in Sira by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X