ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಢನಂಬಿಕೆ ಮಸೂದೆ : ಸಿಎಂ, ಸಚಿವರ ಗೊಂದಲ

|
Google Oneindia Kannada News

ತುಮಕೂರು, ನ.11 : ಸದ್ಯ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ 2013ರ ಬಗ್ಗೆ ಸಿದ್ದರಾಮಯ್ಯ ಮತ್ತು ಸಂಪುಟ ಸದಸ್ಯರ ನಡುವೆಯೇ ಗೊಂದಲ ಮೂಡಿದೆ. ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸುತ್ತೇವೆ ಎಂದು ಸಚಿವ ಜಯಚಂದ್ರ ಹೇಳಿದರೆ, ಮಂಡಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಗೊಂದ ಮೂಡಿಸುತ್ತಿದ್ದಾರೆ.

ಭಾನುವಾರ ಚಿತ್ರದುರ್ಗದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮೂಢನಂಬಿಕೆ ನಿಷೇಧ ಮಸೂದೆ ಮಂಡಿಸುವುದಿಲ್ಲ ಎಂದು ಹೇಳಿದ್ದಾರೆ. ಮೂರು ದಿನಗಳ ಹಿಂದೆಯೂ ಸಿದ್ದರಾಮಯ್ಯ ಇದೇ ಮಾತು ಹೇಳಿದ್ದರು. ಆದರೆ, ಸಿಎಂ ಸಂಪುಟದ ಸಚಿವರೊಬ್ಬರು ಅಧಿವೇಶನದಲ್ಲಿ ವಿಧೇಯಕ ಮಂಡಿಸುತ್ತೇವೆ ಎಂದು ಹೇಳುವ ಮೂಲಕ ಗೊಂದಲ ಹುಟ್ಟು ಹಾಕಿದ್ದಾರೆ.

ಭಾನುವಾರ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಮಹಾರಾಷ್ಟ್ರ ಮಾದರಿಯ ಮೂಢನಂಬಿಕೆ ವಿರೋಧಿ ವಿಧೇಯಕವನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು. ನಿಧಿ ಶೋಧ, ಮಾಟ ಮಂತ್ರದ ಹೆಸರಲ್ಲಿ ಜೀವ ಬಲಿ, ನರಬಲಿ ಕೊಡುವಂತಹ ಮೂಢನಂಬಿಕೆಯನ್ನು ಕಿತ್ತೊಗೆಯಲು ಮೌಢ್ಯ ನಿಷೇಧ ವಿಧೇಯಕವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದರು.

ಮಾನವ ಹಕ್ಕುಗಳ ಕಾಯ್ದೆ ಮತ್ತು ಸಂವಿಧಾನದ 21ನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಮೂಡನಂಭಿಕೆ ನಿಷೇಧ ಕಾಯ್ದೆಯನ್ನು ರೂಪಿಸಲಾಗುವುದು. ಎಲ್ಲಾ ಧರ್ಮಗಳಲ್ಲಿ ಆಚರಿಸಲಾಗುತ್ತಿರುವ ಮೌಡ್ಯಗಳನ್ನು ಈ ಕಾಯ್ದೆಯ ವ್ಯಾಪ್ತಿಗೆ ತರಲಾಗುವುದು. ಯಾವುದೇ ಧರ್ಮಕ್ಕೆ ಅಪಚಾರವಾಗದ ರೀತಿಯಲ್ಲಿ ಕಾಯ್ದೆ ರೂಪಿಸಲಾಗುವುದು ಎಂದು ತಿಳಿಸಿದರು. (ಕಾಯ್ದೆ ಕುರಿತು ಪ್ರತಿಕ್ರಿಯೆಗಳು)

ಸಿಎಂ ಏಕಪಾತ್ರಾಭಿನಯ

ಸಿಎಂ ಏಕಪಾತ್ರಾಭಿನಯ

ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಪಾತ್ರಾಭಿನಯ ಮಾಡುತ್ತಿದ್ದಾರೆಂದು ಮಾಜಿ ಸಚಿವ ಸುರೇಶ್‌ ಕುಮಾರ್‌ ಟೀಕಿಸಿದ್ದಾರೆ. ಬಳ್ಳಾರಿಯಲ್ಲಿ ಭಾನುವಾರ ಮಾತನಾಡಿದ ಅವರು, ಆರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಹಕಾರದ ಕೊರತೆ ಎದುರಿಸುತ್ತಿದೆ. ಸಂಪುಟದಲ್ಲಿ ಮುಖ್ಯಮಂತ್ರಿಗಳ ಹೇಳಿಕೆ ಸಮರ್ಥಿಸಿಕೊಳ್ಳುವ ಒಬ್ಬ ಸಚಿವರಿಲ್ಲ. ಒಗ್ಗಟ್ಟಿನಿಂದ ಸರ್ಕಾರ ಕಾರ್ಯ ಮಾಡುತ್ತಿಲ್ಲ. ಆದ್ದರಿಂದಲೇ ಮೂಢನಂಬಿಕೆ ಮಸೂದೆ ಬಗ್ಗೆ ಸಚಿವರು ಹೇಳಿಕೆ ನೀಡುತ್ತಿಲ್ಲ. ಮುಖ್ಯಮಂತ್ರಿ ಏಕಮೇವ ಅಭಿನಯ ನಡೆಸುತ್ತಿದ್ದು, ಉಳಿದವರು ನಗಣ್ಯವಾಗಿದ್ದಾರೆ ಎಂದು ಟೀಕಿಸಿದರು.

ಮಸೂದೆಗೆ ಬೆಂಕಿ ಹಚ್ಚುವೆ

ಮಸೂದೆಗೆ ಬೆಂಕಿ ಹಚ್ಚುವೆ

ಮೂಢನಂಬಿಕೆ ನಿಷೇಧದ ನೆಪದಲ್ಲಿ ಮೂಲ ನಂಬಿಕೆಗೆ ಅಪಚಾರವೆಸಗುವ ಮಸೂದೆ ಮಂಡಿಸಲು ಯತ್ನಿಸಿದರೆ ಅದಕ್ಕೆ ಬೆಂಕಿ ಹಚ್ಚುವ ಮೊದಲ ವ್ಯಕ್ತಿ ತಾವೇ ಎಂದು ಮಾಜಿ ಸಚಿವ, ಅಥಣಿ ಶಾಸಕ ಲಕ್ಷ್ಮಣ ಸವದಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮನುಷ್ಯನಲ್ಲಿ ಭಕ್ತಿ ಮೂಡಿಬಂದಾಗ ಅವನು ಸಂಸ್ಕಾರವಂತನಾಗುತ್ತಾನೆ. ಆದರೆ, ಕಾಂಗ್ರೆಸ್‌ ಸರ್ಕಾರ ಜನರ ಭಾವನೆ ಹತ್ತಿಕ್ಕಲು ಹೊರಟಿದೆ. ಇದರ ವಿರುದ್ಧ ತೊಡೆತಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ರಂಭಾಪುರಿ ಶ್ರೀಗಳ ವಿರೋಧ

ರಂಭಾಪುರಿ ಶ್ರೀಗಳ ವಿರೋಧ

ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕರಡು ಮಸೂದೆಯನ್ನು ಜಾರಿಗೆ ತರಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ರಮಕ್ಕೆ ತಮ್ಮ ವಿರೋಧವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ವೀರ ಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ. ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವ ಕೆಲವು ವ್ಯಕ್ತಿಗಳ ಮಾತು ಕೇಳಿ ಮುಖ್ಯಮಂತ್ರಿಗಳು ಆತುರದ ನಿರ್ಧಾರ ಕೈಗೊಳ್ಳುವುದು ಸರಿಯಾದ ಕ್ರಮವಲ್ಲ. ಜನರನ್ನು ದಾರಿ ತಪ್ಪಿಸುವ ಮೂಢನಂಬಿಕೆಯನ್ನು ನಿಷೇಧಿಸಲು ತಮ್ಮ ಬೆಂಬಲವಿದೆ. ಆದರೆ, ಜಾರಿಗೊಳಿಸಲು ಉದ್ದೇಶಿಸಿರುವ ಮಸೂದೆಯಲ್ಲಿ ಇತರ ಧರ್ಮಗಳ ಆಚರಣೆಗಿಂತಲೂ ವೀರಶೈವ ಧರ್ಮದ ಆಚರಣೆಗಳನ್ನೇ ಕೇಂದ್ರೀಕರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನಾಭಿಪ್ರಾಯ ಕಡೆಗಣಿಸುವುದಿಲ್ಲ

ಜನಾಭಿಪ್ರಾಯ ಕಡೆಗಣಿಸುವುದಿಲ್ಲ

ಜನಾಭಿಪ್ರಾಯ ಕಡೆಗಣಿಸಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲಾಗದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ. ಸಾಗರದಲ್ಲಿ ಭಾನುವಾರ ಮಾತನಾಡಿದ ಅವರು, ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ಸರ್ಕಾರ ಉದ್ದೇಶಿಸಿರಬಹುದು. ಆದರೆ, ಕಾಯ್ದೆಯೊಂದನ್ನು ಜಾರಿಗೆ ತರಬೇಕಾದರೆ ಎಲ್ಲರ ಸಹಮತ ಅಗತ್ಯ. ಅತಿ ಮುಖ್ಯವಾಗಿ ಜನರ ಒಪ್ಪಿಗೆ ದೊರೆಯದೇ ಹೋದರೆ ಕಾಯ್ದೆ ಅನುಷ್ಠಾನಕ್ಕೆ ಬರುವುದಿಲ್ಲ ಎಂದರು.

ಸಾಹಿತಿಗಳ ಬೆಂಬಲ

ಸಾಹಿತಿಗಳ ಬೆಂಬಲ

ರಾಜ್ಯದಲ್ಲಿ ಮೌಢ್ಯ ನಿಯಂತ್ರಣ ವಿಧೇಯಕ ಮಂಡಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಚಾರವಂತರ, ಸಾಹಿತಿಗಳ ಬೆಂಬಲವಿದೆ ಎಂದು ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ನಾಡಿನ ವಿವೇಕದ ಬಾಗಿಲು ತೆಗೆಯುವ ಭಾಗ್ಯದ ಹರಿಕಾರರಾಗಿ ಮುಂದೆ ಬಂದಿದ್ದಾರೆ. ಈ ಹಂತದಲ್ಲಿ ಅವರ ಕಾಲು ಹಿಡಿದು ಎಳೆಯುವ ಮತ್ತು ವಿಜ್ಞಾನದ ಕ್ರಿಯಾಶೀಲತೆಗೆ ತಡೆಗೋಡೆ ಒಡ್ಡುವ ಕಾರ್ಯವನ್ನು ಯಾರೂ ಮಾಡಬಾರದು. ಪ್ರತಿಪಕ್ಷದವರು ಎಲ್ಲವನ್ನೂ ವಿರೋಧಿಸಬೇಕೆಂದೇನೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ದುಡುಕಿನ ನಿರ್ಧಾರ ಬೇಡ

ದುಡುಕಿನ ನಿರ್ಧಾರ ಬೇಡ

ಮೂಢನಂಬಿಕೆ ವಿಧೇಯಕ ಕುರಿತು ಇನ್ನೂ ಚರ್ಚೆ ನಡೆಯುವ ಅಗತ್ಯವಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಈಗ ಸಾರ್ವಜನಿಕ ಚರ್ಚೆಗಳು ಆರಂಭವಾಗಿದ್ದು, ಸರ್ಕಾರದ ಮಟ್ಟದಲ್ಲಿಯೂ ಚರ್ಚೆಗಳು ನಡೆಯಬೇಕಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಂಖಡ ಎಸ್.ಎಂ.ಕೃಷ್ಣ ಹೇಳಿದ್ದಾರೆ. ವಿಧೇಯಕಗಳಿಗೆ ಕಾನೂನಿನ ರೂಪ ನೀಡುವಾಗ ಸಾಧಕ ಬಾಧಕಗಳ ಆಲೋಚನೆ ಮಾಡಬೇಕು. ದುಡುಕಿನಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

English summary
Notwithstanding criticism from various quarters, the state government will table the Karnataka Superstitious Practices Bill in the upcoming legislature session to be held in Belgaum from November 25 said, Law and Parliamentary Affairs Minister T.B.Jayachandra. when the issue came up for debate, the entire council of ministers supported for it he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X