• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಿ: ಆರೋಗ್ಯ ಸಚಿವರ ತಾಕೀತು

|
Google Oneindia Kannada News

ತುಮಕೂರು, ಮೇ 20: ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರಿಸಿದ್ದು, 3ನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಗುರುವಾರದಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸದ್ಯ ಸೋಂಕಿನ ಹರಡುವಿಕೆ ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

25 ಆಕ್ಸಿಜನ್ ಜನರೇಟರ್ಸ್ ನೀಡಲಾಗಿದೆ

25 ಆಕ್ಸಿಜನ್ ಜನರೇಟರ್ಸ್ ನೀಡಲಾಗಿದೆ

ತುಮಕೂರು ಜಿಲ್ಲೆಗೆ ನಾಲ್ಕು ಆಕ್ಸಿಜನ್ ಪ್ಲಾಂಟ್ ಅಳವಡಿಸಲು ಆದೇಶಿಸಲಾಗಿತ್ತು. ಉಸ್ತುವಾರಿ ಸಚಿವರು ಹೆಚ್ಚುವರಿಯಾಗಿ ಮಧುಗಿರಿಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಅಲ್ಲಿಗೆ ಒಂದು ಸೇರಿ, ಒಟ್ಟು ಐದು ಪ್ಲಾಂಟ್ ಕೊಡಲಾಗುವುದು. ಇವತ್ತೇ 25 ಆಕ್ಸಿಜನ್ ಜನರೇಟರ್ಸ್ ನೀಡಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ಎಲ್ಲಾ ಔಷಧಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಆರಂಭದಲ್ಲೇ ಸೋಂಕು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಕ್ರಮ ಕೈಗೊಂಡರೆ ಹೆಚ್ಚಿನ ಅನಾಹುತ ಆಗುವುದಿಲ್ಲ. ಈಗ ಸೋಂಕು ಕಡಿಮೆ ಆಗುತ್ತಿರುವ ಲಕ್ಷಣಗಳು ಕಂಡು ಬರುತ್ತಿರುವುದು ಸಮಾಧಾನಕರ ಸಂಗತಿ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ಜೊತೆ ಶಾಸಕರು ಮತ್ತು ಸಂಸದರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಿರುವುದರಿಂದ ನಿಯಂತ್ರಣದ ವಿಶ್ವಾಸವಿದೆ. ಅಗತ್ಯವಿರುವ ಎಲ್ಲಾ ನೆರವು ಇಲಾಖೆಯಿಂದ ನೀಡಲಾಗುವುದು ಎಂದು ತಿಳಿಸಿದರು.

ಕಾಯ್ದೆ ಅಡಿ ಕ್ರಮ ಜರುಗಿಸಿ

ಕಾಯ್ದೆ ಅಡಿ ಕ್ರಮ ಜರುಗಿಸಿ

3ನೇ ಅಲೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಎರಡೂ ಮೆಡಿಕಲ್ ಕಾಲೇಜುಗಳು ಮತ್ತು ಜಿಲ್ಲಾಡಳಿತ ಮಾಡಿಕೊಳ್ಳಬೇಕು. ಆಕ್ಸಿಜನ್ ಪ್ಲಾಂಟ್, ಟೆಸ್ಟ್‌ಗಳ ಹೆಚ್ಚಿನ ಪರೀಕ್ಷೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡಬೇಕು. ಖಾಲಿ ಇರುವ ವೈದ್ಯರ ಹುದ್ದೆಗಳನ್ನು ನೇಮಕ ಮಾಡಲಾಗಿದೆ. ಉಳಿದ ಸಿಬ್ಬಂದಿಗಳ ನೇಮಕವೂ ಆಗಲಿದೆ. ಹೀಗಾಗಿ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ನಮಗಿದೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೆಪಿಎಂಇ ಕಾಯಿದೆ ಅಡಿ ಒಟ್ಟು ಹಾಸಿಗೆಗಳ ಪೈಕಿ ಶೇ.50ರಷ್ಟನ್ನು ಪಡೆದುಕೊಳ್ಳಬೇಕಿತ್ತು. ವೈದ್ಯಕೀಯ ಕಾಲೇಜಿನಲ್ಲಿ ಶೇ.75ರಷ್ಟನ್ನು ಪಡೆದುಕೊಳ್ಳಬೇಕಿತ್ತು. ಜಿಲ್ಲೆಯಲ್ಲಿ ಆ ರೀತಿ ಪಡೆದುಕೊಂಡಿಲ್ಲ. ತಕ್ಷಣ ಆ ಬಗ್ಗೆ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲು ಮತ್ತು ನಿಗದಿತ ಸಂಖ್ಯೆ ಹಾಸಿಗೆ ತೆಗೆದುಕೊಳ್ಳಲು ಆದೇಶಿಸಲಾಗಿದೆ ಎಂದರು.

ಸರಕಾರ ನೀಡಿರುವ ಸೂಚನೆಯಂತೆ ಸಿಟಿ ಸ್ಕ್ಯಾನ್‌ಗೆ ದರ ನಿಗದಿ

ಸರಕಾರ ನೀಡಿರುವ ಸೂಚನೆಯಂತೆ ಸಿಟಿ ಸ್ಕ್ಯಾನ್‌ಗೆ ದರ ನಿಗದಿ

ಸರಕಾರ ನಿಗದಿಗೊಳಿಸಿರುವ ದರಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವ ದೂರುಗಳು ಚುನಾಯಿತ ಪ್ರತಿನಿಧಿಗಳಿಂದ ಬಂದಿವೆ. ತಕ್ಷಣ ಈ ಬಗ್ಗೆ ಗಮನಹರಿಸಿ ಸರಕಾರದ ದರಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸಿಟಿ ಸ್ಕ್ಯಾನ್‌ಗೆ ಸರಕಾರ ನೀಡಿರುವ ಸೂಚನೆ ಪಾಲಿಸದೆ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೇ ಗಮನಕ್ಕೆ ತಂದಿದ್ದಾರೆ. ಅಂತಹ ಸಂಸ್ಥೆಗಳ ಲೈಸೆನ್ಸ್ ಅನ್ನು ತಕ್ಷಣ ರದ್ದು ಮಾಡಬೇಕು. ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ತಾಕೀತು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ದೂರುಗಳ ಪರಿಶೀಲನೆ

ದೂರುಗಳ ಪರಿಶೀಲನೆ

ಎಬಿಆರ್‌ಕೆ ನಂಬರ್‌ ಗೊಂದಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ರೋಗಿಗಳಿಗೆ ಶುಲ್ಕದ ವಿಷಯದಲ್ಲಿ ತೊಂದರೆ ಆಗುತ್ತಿರುವ ದೂರುಗಳು ಬಂದಿವೆ. ಇದರ ನಿವಾರಣೆಗೆ ರಿಯಲ್‌ ಟೈಮ್‌ ಬೆಡ್‌ ಅಲಾಟ್‌ಮೆಂಟ್‌ ಸಿಸ್ಟಂ ಅಳವಡಿಸಿಕೊಳ್ಳಬೇಕು. ಈಗ ಚಾಲ್ತಿಗೆ ತಂದಿರುವ ಆನ್‌ಸೈಟ್‌ ರಿಜಿಸ್ಟ್ರೇಷನ್ ಸಿಸ್ಟಂ ಲೋಪ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ವ್ಯಾಕ್ಸಿನ್ ವಿಷಯದಲ್ಲಿ ಗೊಂದಲಗಳು ಹೆಚ್ಚು ಮುಂದುವರಿಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪ್ರಕಟಿಸಿರುವಂತೆ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುವುದು. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದರು.

ಸಚಿವರು ಹೇಳಿದ ಇತರೆ ಅಂಶಗಳು

ಸಚಿವರು ಹೇಳಿದ ಇತರೆ ಅಂಶಗಳು

• ತಿಪಟೂರು ತಾಲ್ಲೂಕಿನಲ್ಲಿ ಹದಿನೇಳು ಖಾಸಗಿ ಆಸ್ಪತ್ರೆಗಳ ಪೈಕಿ ಎರಡು ಮಾತ್ರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ನೋಂದಣಿಯಾಗಿವೆ. ಉಳಿದವು ಆಗಿಲ್ಲ ಎಂಬ ಕಾರಣಕ್ಕೆ ಹಾಸಿಗೆ ತೆಗೆದುಕೊಳ್ಳದಿರುವುದು ಸರಿಯಲ್ಲ. ಈಗ ಆಕ್ಸಿಜನ್ ಸಮಸ್ಯೆ ಬಗೆಹರಿಯುತ್ತಿರುವ ಹಿನ್ನೆಲೆಯಲ್ಲಿ ಉಳಿದ ಆಸ್ಪತ್ರೆಗಳನ್ನು ನೋಂದಣಿ ಮಾಡಲು ಸೂಚಿಸಲಾಗಿದೆ.

• ಕೋವಿಡ್ ಸ್ಯಾಂಪಲ್‌ಗಳ ಪರೀಕ್ಷಾ ವರದಿಯನ್ನು ೨೪ ತಾಸಿನೊಳಗೆ ನೀಡುತ್ತಿಲ್ಲ ಎಂಬ ವಿಷಯದಲ್ಲಿ ವಿವರವಾಗಿ ಮಾಹಿತಿ ಪಡೆಯಲಾಗಿದೆ. ಆಯಾ ದಿನದ ಸ್ಯಾಂಪಲ್‌ಗಳ ವರದಿ ಅದೇ ದಿನ ನೀಡುವಂತೆ ಸೂಚಿಸಲಾಗಿದೆ.

• ಖಾಸಗಿ ಆಂಬ್ಯುಲೆನ್ಸ್‌ಗಳಿಗೆ ದರ ನಿಗದಿ ಮಾಡುವ ವಿಷಯದಲ್ಲೂ ಸಾರಿಗೆ ಹೊಣೆ ಹೊತ್ತಿರುವ ಡಿಸಿಎಂ ಲಕ್ಷ್ಮಣ್‌ ಸವದಿ ಅವರ ಜತೆ ಈಗಾಗಲೇ ಸಮಾಲೋಚಿಸಲಾಗಿದೆ. ರಾಜ್ಯ ಮಟ್ಟದಲ್ಲೇ ಈ ಕುರಿತು ಅಧಿಕೃತ ಸೂಚನೆ ನೀಡಲಾಗುವುದು.

• ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶವಗಳ ಸಾಗಾಣೆಗೆ ನಗರ ಪಾಲಿಕೆ ವತಿಯಿಂದ ಹೆಚ್ಚುವರಿಯಾಗಿ ಎರಡು ಅಥವಾ ಮೂರು ವಾಹನಗಳನ್ನು ನೀಡಲು ಸೂಚಿಸಲಾಗಿದೆ. ಬಾಡಿಗೆ ಪಡೆದು ತಕ್ಷಣ ನೀಡಲಾಗುವುದು.

English summary
Health and medical education minister Dr K Sudhakar has instructed the Tumakuru district Administration to start preparations immediately to tackle the Covid 3rd wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X