ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ.15ಕ್ಕೆ ಗುಬ್ಬಿ ವೀರಣ್ಣ ರಂಗಮಂದಿರ ಲೋಕಾರ್ಪಣೆ

By Mahesh
|
Google Oneindia Kannada News

ಗುಬ್ಬಿ, ಏ.14: ನಾಟಕ ರತ್ನ ಡಾ.ಗುಬ್ಬಿ ವೀರಣ್ಣ ಅವರ ಕನಸಿನಂತೆ ಅವರ ಹುಟ್ಟೂರಿನಲ್ಲಿ ರಂಗಮಂದಿರ ನಿರ್ಮಾಣಗೊಂಡಿದೆ. ವೀರಣ್ಣ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ರಂಗಮಂದಿರವನ್ನು ಏ.15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.

ಗುಬ್ಬಿಯಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಂಗ ಮಂದಿರ ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿರುವ ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದು ಗುಬ್ಬಿ ವೀರಣ್ಣ ಟ್ರಸ್ಟ್ ಉಪಾಧ್ಯಕ್ಷರಾದ ಬಿ. ಜಯಶ್ರೀ ಹೇಳಿದ್ದಾರೆ.

ಇದು ಎಲ್ಲರ ರಂಗಮಂದಿರ: ಈ ರಂಗ ಮಂದಿರ ನಿರ್ಮಾಣಕ್ಕೆ ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಟ್ಟಣ ಪಂಚಾಯ್ತಿ ಸೇರಿದಂತೆ ರಾಜ್ಯ ಸಭಾ ಸದಸ್ಯರ ಅನುದಾನವನ್ನು ಬಳಸಿಕೊಳ್ಳಲಾಗಿದ್ದು ಹಲವಾರು ಅಭಿಮಾನಿಗಳು, ಕಲಾವಿದರು, ಶಾಸಕರು, ಜನಪ್ರತಿನಿಧಿಗಳು ಮತ್ತು ಗುಬ್ಬಿಯ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ಗುಬ್ಬಿಯಲ್ಲಿ 4 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾದ ಕಲಾಗ್ರಾಮವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಜಯಶ್ರೀ ಹೇಳಿದರು.

Gubbi Veeranna Rangamandira Inauguration on April 15

ರಂಗ ಮಂದಿರದಲ್ಲಿ ಪೌರಾಣಿಕ ರಂಗ ನಾಟಕಗಳ ಜೊತೆಗೆ ಮುಂಬರುವ ದಿನಗಳಲ್ಲಿ ನೃತ್ಯ ರೂಪಕ, ರಂಗೋತ್ಸವ, ಗುಬ್ಬಿ ನಾಟಕ ಕಂಪೆನಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ರಂಗನಾಟಕಗಳ ಪ್ರದರ್ಶನ, ರಾಜ್ಯ ಮಟ್ಟದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳ ಪ್ರದರ್ಶನ, ಸ್ಥಳೀಯ ಕಲಾವಿದರಿಗೆ ಪೋತ್ಸಾಹ ನೀಡುವುದರ ಜೊತೆಗೆ ಮಕ್ಕಳಿಗೆ ರಂಗ ತರಬೇತಿ ಶಿಬಿರಗಳನ್ನು ನಡೆಸಲಾಗುವುದು ಎಂದು ಅವರು ವಿವರಣೆ ನೀಡಿದರು.

ಡಾ. ರಾಜ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ, ಜಿ.ವಿ ಅಯ್ಯರ್, ಬಿ. ಜಯಶ್ರೀ, ಜಿ,ವಿ ಶಿವಾನಂದ್ ಸೇರಿದಂತೆ ಹತ್ತು ಹಲವು ಪ್ರತಿಭಾವಂತರನ್ನು ಕನ್ನಡ ನಾಡಿಗೆ ಪರಿಚಯಿಸಿದ ಕೀರ್ತಿ ಗುಬ್ಬಿ ಸಂಸ್ಥೆಗೆ ಸೇರುತ್ತದೆ.

ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ಮಂಡಳಿಯ ವ್ಯವಸ್ಥಾಪಕರಾಗಿ ಮಾಲೀಕರಾಗಿ ಕನ್ನಡ ನಾಟಕ ರಂಗಕ್ಕೆ ಅಪಾರ ಕೊಡುಗೆ ನೀಡಿದ ಗುಬ್ಬಿ ವೀರಣ್ಣ ಅವರ ಸದಾರಮೆ, ಕುರುಕ್ಷೇತ್ರ, ದಶಾವತಾರ, ಲವ ಕುಶ ಸೇರಿದಂತೆ ಅನೇಕ ನಾಟಕಗಳು ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ. ವೃತ್ತಿ ರಂಗಭೂಮಿ ಏಳಿಗೆಗಾಗಿ ಶ್ರಮಿಸಿದ ನಾಟಕ ರತ್ನ ವೀರಣ್ಣ ಅವರ ಸ್ಮರಣಾರ್ಥ ಬೆಂಗಳೂರಿನ ಗಾಂಧಿನಗರದಲ್ಲಿ ರಂಗಮಂದಿರ ನವೀಕರಣ ಕಾರ್ಯ ಕುಂಟುತ್ತಾ ಸಾಗಿರುವುದು ಅಭಿಮಾನಿಗಳಿಗೆ ನೋವು ತಂದಿದೆ.

English summary
A newly built Gubbi Veeranna Rangamandira, Gubbi, Tumakuru will be inaugurated by CM Siddaramaiah on April 15, 2015 said Theater artist and Gubbi Veeranna Trust member B Jayashri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X