• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಬ್ಬಿ ತಹಶೀಲ್ದಾರ್ ಮಮತಾ ವರ್ಗಾವಣೆ ಹಿಂದೆ ಕೆರೆ ಒತ್ತುವರಿ, ಜಾತಿ ಪಿತೂರಿ?

By ತುಮಕೂರು ಪ್ರತಿನಿಧಿ
|

ತುಮಕೂರು, ಮಾರ್ಚ್ 17: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಹಶೀಲ್ದಾರ್ ಎಂ. ಮಮತಾ ಅವರ ವರ್ಗಾವಣೆಯನ್ನು ಖಂಡಿಸಿ, ಕಳೆದ ಶುಕ್ರವಾರ ತುಮಕೂರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಆಗಿದೆ. ದಲಿತಪರ, ಕನ್ನಡಪರ ಸಂಘಟನೆಗಳು ನಡೆಸಿದ ಈ ಪ್ರತಿಭಟನೆ ವೇಳೆ, ಮಮತಾ ಅವರ ವರ್ಗಾವಣೆಯನ್ನು 'ರಾಜಕೀಯ ಪಿತೂರಿ' ಎಂದು ಆರೋಪಿಸಿವೆ. ಅಷ್ಟೇ ಅಲ್ಲ, ಈ ಬಗ್ಗೆ ತನಿಖೆಗೂ ಒತ್ತಾಯಿಸಿವೆ.

   ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಕಾರ್ಯಾರಂಭ | Solar Plant | World's Biggest | karnataka | Oneindia Kannada

   ಅಂದಹಾಗೆ, ಈ ತಹಶೀಲ್ದಾರ್ ಮಮತಾ ಅವರು ಯಾರು ಮತ್ತು ಯಾಕೆ ವರ್ಗಾವಣೆಯಾದರು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕಿದೆ. ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಇತ್ತೀಚೆಗೆ ಸಿದ್ದಮ್ಮ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ತೆಂಗು- ಅಡಿಕೆಯ ನೂರು ಮರಗಳನ್ನು ಗ್ರಾಮಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರ ಸಮ್ಮುಖದಲ್ಲೇ ಕಡಿಯಲಾಗಿತ್ತು. ಆ ವೇಳೆ ಇಬ್ಬರೂ ಸಹ ಘಟನೆಗೆ ತಹಶೀಲ್ದಾರ್ ಹೊಣೆ ಎಂದು ಹೇಳಿದ್ದಾರೆ ಎಂಬುದು ಚರ್ಚೆಯ ಸಂಗತಿ.

   ಅಡಿಕೆ ಮರ ಕಡಿಸಿದ ಗ್ರಾಮ ಲೆಕ್ಕಿಗ ಅಮಾನತು, ತಹಶೀಲ್ದಾರ್ ವರ್ಗಾವಣೆ

   ತಹಶೀಲ್ದಾರ್ ಮಮತಾ ಅವರು ಬಲಗೈ ಸಮುದಾಯಕ್ಕೆ ಸೇರಿದವರು. ಅವರನ್ನು ಗುಬ್ಬಿಗೆ ವರ್ಗಾವಣೆ ಮಾಡಿಸುವುದರಲ್ಲಿ ಡಾ. ಜಿ. ಪರಮೇಶ್ವರ ಅವರ ಪಾತ್ರ ಇತ್ತು. ಮಮತಾ ಅವರ ವಿರುದ್ಧ ಮೇಲ್ಜಾತಿಗೆ ಸೇರಿದ ಕೆಲವು ಮುಖಂಡರಿಗೆ ಜಾತಿ ಕಾರಣದಿಂದಲೂ ಸಿಟ್ಟಿತ್ತು ಎಂಬ ಅಂಶ ಕೂಡ ಈಗ ಹೊರಬರುತ್ತಿದೆ.

   ಆದರೆ, ಈ ಇಡೀ ಘಟನೆಯ ಮತ್ತೊಂದು ಮಗ್ಗುಲಿನ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಆ ದಿನ ಮರ ಕಡಿದ ನಂತರ ತಹಶೀಲ್ದಾರ್ ಮಮತಾ ಸ್ಥಳಕ್ಕೆ ತೆರಳಿದ್ದಾರೆ. ಈ ಪ್ರಕರಣದ ಸೂಕ್ಷ್ಮತೆಯನ್ನು ಮುಂಚಿತವಾಗಿ ತಿಳಿಯುವುದರಲ್ಲಿ ಅವರು ಸೋತಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿ ಮಮತಾ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಲೆಕ್ಕಾಚಾರ ಮತ್ತು ರಾಜಕೀಯ ಪಿತೂರಿ ಏನು ಅಂತ ನೋಡಿದರೆ, ಸಂಸದ ಜಿ. ಎಸ್. ಬಸವರಾಜು ಅವರ ಕಡೆಗೆ ಬೊಟ್ಟು ಮಾಡಲಾಗುತ್ತಿದೆ.

    ಸಂಸದ ಜಿ.ಎಸ್. ಬಸವರಾಜು ಕೈವಾಡ

   ಸಂಸದ ಜಿ.ಎಸ್. ಬಸವರಾಜು ಕೈವಾಡ

   ಹೊದಲೂರು ಕೆರೆ ಒತ್ತುವರಿ ಹಿಂದೆ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಕೈವಾಡವಿದೆ. ಮಾರ್ಚ್ 13ರಂದು ತಹಶೀಲ್ದಾರ್ ಮಮತಾ ಕೆರೆ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದರು. ಈ ಕಾರಣಕ್ಕೆ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗನನ್ನು ಬಳಸಿಕೊಂಡು, ತಹಶೀಲ್ದಾರ್ ಮಮತಾ ಮೇಲೆ ಷಡ್ಯಂತ್ರ ಮಾಡಲಾಗಿದೆ ಎಂಬುದು ಆರೋಪದ ತಿರುಳು. ತಿಪ್ಪೂರಿನಲ್ಲಿ ರೈತ ಮಹಿಳೆ ಸಿದ್ದಮ್ಮ ಅವರ ಇನಾಂ ಭೂಮಿಯಲ್ಲಿದ್ದ ತೆಂಗು- ಅಡಿಕೆ ಮರಗಳನ್ನು ಕಂದಾಯ ಇಲಾಖೆ ಕಡಿದ ಪ್ರಕರಣ ರಾಜ್ಯಾದ್ಯಂತ ಯಾವಾಗ ದೊಡ್ಡ ಸುದ್ದಿಯಾಯಿತೋ, ಜಿಲ್ಲಾಡಳಿತವು ಘಟನೆ ಕುರಿತು ತನಿಖಾ ವರದಿ ನೀಡುವಂತೆ ತುಮಕೂರು ಉಪವಿಭಾಗಾಧಿಕಾರಿಗೆ ಸೂಚಿಸಿತ್ತು. ಉಪವಿಭಾಗಾಧಿಕಾರಿ ವರದಿ ಆಧರಿಸಿ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಇರುವ ಪ್ರಕಾರ, ಉಡುಸಲಮ್ಮ ದೇವಿ ಜಾತ್ರಾ ಪ್ರಯುಕ್ತ ಹೆಚ್ಚು ಜನ ಸೇರುವ ನಿರೀಕ್ಷೆ ಇರುವುದರಿಂದ ದೇವಸ್ಥಾನಕ್ಕೆ ಸೇರಿದ ಸರ್ವೇ ನಂ 113ರ ಜಮೀನಲ್ಲಿರುವ ಮರಗಳನ್ನು ತೆರವುಗೊಳಿಸಿಕೊಡುವಂತೆ ಅರ್ಚಕರು ಮನವಿ ಮಾಡಿದ್ದರು.

    ಕಂದಾಯ ನಿರೀಕ್ಷಕರಿಂದ ಜಮೀನಿನ ವರದಿ

   ಕಂದಾಯ ನಿರೀಕ್ಷಕರಿಂದ ಜಮೀನಿನ ವರದಿ

   ತಹಶೀಲ್ದಾರ್ ಮಮತಾ ಅವರು ಕಂದಾಯ ನಿರೀಕ್ಷಕರಿಂದ ಜಮೀನಿನ ವರದಿ ನೀಡುವಂತೆ ಕೇಳಿದ್ದರು. ಒತ್ತುವರಿ ಜಮೀನು ದೇವಸ್ಥಾನದ ಜಾಗದಲ್ಲಿದ್ದು, ತೆರವುಗೊಳಿಸಬಹುದಾಗಿದೆ ಎಂದು ಕಂದಾಯ ನಿರೀಕ್ಷಕರು ತಹಶೀಲ್ದಾರ್ ಗೆ ವರದಿ‌ ನೀಡಿದ್ದರು. ಆ ವರದಿಯನ್ನು ಆಧರಿಸಿಯೇ "ದೇವಸ್ಥಾನದ ಸುತ್ತ‌ ಇರುವ ಸಣ್ಣ ಸಣ್ಣ ಗಿಡಗಳನ್ನು ತೆರವುಗೊಳಿಸಿ, ಜಾತ್ರೆ ನಡೆಯಲು‌ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ" ತಹಶೀಲ್ದಾರ್ ಆದೇಶಿಸಿದ್ದರು. ಗ್ರಾಮಲೆಕ್ಕಿಗ ಮುರಳಿ ಅವರು ತಹಶೀಲ್ದಾರ್ ಆದೇಶವನ್ನೂ ಮೀರಿ ಸ್ವಯಂಪ್ರೇರಿತವಾಗಿ 25 ತೆಂಗು, 75 ಅಡಿಕೆ ಮರಗಳನ್ನು ಕಡಿಸಿದ್ದಾರೆ. ಉಪವಿಭಾಗಾಧಿಕಾರಿ ತನಿಖೆ ವೇಳೆ ಸ್ವತಃ ತಪ್ಪೊಪ್ಪಿಕೊಂಡಿರುವ ಗ್ರಾಮಲೆಕ್ಕಿಗ ಮುರಳಿ, ಜಮೀನಲ್ಲಿದ್ದ ದೊಡ್ಡ ಮರಗಳು ನಮಗೆ ಸೇರಿದ್ದವು ಎಂದು ಅರ್ಚಕರು ಹೇಳಿಕೆ‌ ನೀಡಿದ್ದರಿಂದ ತೆರವುಗೊಳಿಸಿದ್ದೇವೆ. ಆ ಬಳಿಕ ಅವುಗಳಲ್ಲಿ‌10 ಮರಗಳು ಬೇರೆಯವರಿಗೆ ಸೇರಿವೆ ಎಂದು ತಿಳಿದ ತಕ್ಷಣ ತಹಶೀಲ್ದಾರ್ ಅವರಿಗೆ ವರದಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಗ್ರಾಮ‌ಲೆಕ್ಕಿಗ ಮುರಳಿಯನ್ನು ಅಮಾನತು

   ಗ್ರಾಮ‌ಲೆಕ್ಕಿಗ ಮುರಳಿಯನ್ನು ಅಮಾನತು

   ಈ ಪ್ರಕರಣದಲ್ಲಿ ಅಧಿಕಾರ ವ್ಯಾಪ್ತಿ ಮೀರಿ ಕರ್ತವ್ಯ ಲೋಪ ಎಸಗಿರುವ ಗ್ರಾಮ‌ಲೆಕ್ಕಿಗ ಮುರಳಿಯನ್ನು ಅಮಾನತು ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ಈ ದೇವಸ್ಥಾನದ ಜಮೀನು ವ್ಯಾಜ್ಯದಲ್ಲಿ ಇದ್ದುದರಿಂದ ಸ್ವತಃ ತಹಶೀಲ್ದಾರ್ ಅವರೇ ನಿಂತು ತೆರವು ಮಾಡಿಸಬೇಕಿತ್ತು. ಇಂಥ ಸೂಕ್ಷ್ಮ ಸಂದರ್ಭದಲ್ಲಿ ಗ್ರಾಮಲೆಕ್ಕಿಗನಿಗೆ ಆ ಜವಾಬ್ದಾರಿ ನೀಡಿದ್ದು ತಪ್ಪು ಎಂಬಂತಾಗಿದೆ. ದೇವಸ್ಥಾನದ ಇನಾಂ ಜಮೀನು ಹಂಚಿಕೊಂಡಿದ್ದ ಅರ್ಚಕರ ಮಧ್ಯದ ಕಿತ್ತಾಟ ಹಾಗೂ ಗ್ರಾಮಲೆಕ್ಕಿಗನ ಕರ್ತವ್ಯ ಲೋಪದಿಂದ ತಹಶೀಲ್ದಾರ್ ಮಮತಾ ಅವರ ವಿರುದ್ಧ ಆಕ್ರೋಶ ತಿರುಗುವಂತೆ ಮಾಡಿದೆ. ಇದೀಗ ಮೇಲ್ನೋಟಕ್ಕೇ ತಹಶೀಲ್ದಾರ್ ಅವರ ತಪ್ಪೇನೂ ಇಲ್ಲದಿರುವುದು ಜಿಲ್ಲಾಧಿಕಾರಿಗಳ ವರದಿಯಲ್ಲೇ ಸಾಬೀತು ಆಗಿದೆ. ಆದ್ದರಿಂದ ಮಮತಾ ಅವರನ್ನು ಈ ಕೂಡಲೇ ಸರ್ಕಾರವು ಸೇವೆಗೆ ಮರುನಿಯೋಜನೆ ಮಾಡಬೇಕು ಎಂದು ಗುಬ್ಬಿ ತಾಲೂಕಿನ‌ ಜನರು ಒತ್ತಾಯಿಸುತ್ತಿದ್ದಾರೆ.

    ತಹಶೀಲ್ದಾರ್, ರೈತ ಮಹಿಳೆ ಸಿದ್ದಮ್ಮ ಇಬ್ಬರಿಗೂ ನ್ಯಾಯ

   ತಹಶೀಲ್ದಾರ್, ರೈತ ಮಹಿಳೆ ಸಿದ್ದಮ್ಮ ಇಬ್ಬರಿಗೂ ನ್ಯಾಯ

   ಈ ಮಧ್ಯೆ ಟೀವಿ ಚಾನೆಲ್ ವೊಂದರ ನಿರೂಪಕರ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಾನ್ ಕಾಗ್ನಿಸಬಲ್ ರಿಪೋರ್ಟ್ (ಪೊಲೀಸ್ ಅಧಿಕಾರಿಗೆ ವಾರಂಟ್ ಇಲ್ಲದೆ ಅರೆಸ್ಟ್ ಮಾಡುವ ಅಧಿಕಾರ ಇರುವುದಿಲ್ಲ ಮತ್ತು ಕೋರ್ಟ್ ಆದೇಶ ಇಲ್ಲದೆ ತನಿಖೆ ಆರಂಭಿಸುವಂತೆ ಇರುವುದಿಲ್ಲ) ದೂರು ದಾಖಲಾಗಿದೆ. ತಹಶೀಲ್ದಾರ್ ಮಮತಾ ಅವರ ಬಳಿ ಹಣಕ್ಕಾಗಿ ಮಾಧ್ಯಮದ ಕೆಲವರು ಬೇಡಿಕೆ ಇಟ್ಟಿದ್ದರು ಎಂಬ ಬಗ್ಗೆ ಕೂಡ ತುಮಕೂರು ಜಿಲ್ಲೆಯಾದ್ಯಂತ ಚರ್ಚೆ ಜಾರಿಯಲ್ಲಿದೆ. ಅಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ಷೇಪ ವ್ಯಕ್ತವಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮದ ಇಬ್ಬರು ವರದಿಗಾರರ ಬಗ್ಗೆ ಸ್ಥಳೀಯವಾಗಿ ಜನರು ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸರಿ- ತಪ್ಪುಗಳ ಬಗ್ಗೆ ಸೂಕ್ತವಾದ ತನಿಖೆಯೊಂದು ಆಗಿ, ಈಗಾಗಲೇ ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ ಅಂತಾದಲ್ಲಿ ತಹಶೀಲ್ದಾರ್ ಮಮತಾ ಅವರ ಕಡೆ ನ್ಯಾಯ ಇದ್ದಲ್ಲಿ ಅದು ಅವರಿಗೆ ಸಿಗಬೇಕು. ಇನ್ನು ರೈತ ಮಹಿಳೆ ಸಿದ್ದಮ್ಮ ಅವರಿಗೆ ಈ ಪ್ರಕರಣದಲ್ಲಿ ನಷ್ಟವಾಗಿದ್ದಲ್ಲಿ ಅವರಿಗೂ ಆ ನಷ್ಟದ ಪರಿಹಾರ ಸಿಗಲೇಬೇಕು ಎಂಬುದು ಸದ್ಯದ ಒತ್ತಾಯ.

   English summary
   Here is truth behind Tumakuru district Gubbi taluk areca trees cutting drive and Tahsildar Mamatha Transfer. Hundreds of agitators shouted slogans against the government for transferring Mamata and demanded probe into it.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more