ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಸ್ಮಯ ಆತ್ಮಹತ್ಯೆ ಪ್ರಕರಣ: ಪತಿ ಕಿರಣ್ ಬಂಧನ, ಸೇವೆಯಿಂದ ಸಸ್ಪೆಂಡ್

|
Google Oneindia Kannada News

ಕೊಲ್ಲಂ(ಕೇರಳ), ಜೂನ್ 22: ಸಾಮಾಜಿಕ ಜಾಲ ತಾಣದಲ್ಲಿ ವಿಸ್ಮಯಳಿಗಾಗಿ ನ್ಯಾಯ ಎಂದು ಪೋಸ್ಟ್ ಟ್ರೆಂಡ್ ಆಗಿದ್ದಲ್ಲದೆ, ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಿಣಿಯ ನ್ಯಾಯಕ್ಕಾಗಿ ಕೇರಳಿಗರು ದನಿಯೆತ್ತಿದ ಘಟನೆ ನಡೆದಿದೆ. ಮೃತ ವಿಸ್ಮಯ ಪತಿ ಎಸ್ ಕಿರಣ್ ಕುಮಾರ್ ಬಂಧನವಾಗಿದ್ದು, ಮೋಟರ್ ವಾಹನ ಇಲಾಖೆಯಿಂದ ಅಮಾನತು ಮಾಡಲಾಗಿದೆ. ಕಿರಣ್‌ನನ್ನು ಕೆಲಸದಿಂದ ವಜಾಗೊಳಿಸುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡಮಟ್ಟ ಕೂಗೆದ್ದಿತ್ತು.

ಸಾರ್ವಜನಿಕರ ಆಗ್ರಹಕ್ಕೆ ಮಣಿದ ಸರ್ಕಾರ ಈ ಬಗ್ಗೆ ತಕ್ಷಣವೇ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದು, ಕಿರಣ್ ಅಮಾನತುಗೊಂಡಿರುವುದನ್ನು ಖುದ್ದು ಸಾರಿಗೆ ಸಚಿವ ಅಂಟೋನಿ ರಾಜು ಸ್ಪಷ್ಟಪಡಿಸಿದ್ದಾರೆ.

''ಕಿರಣ್‌ನನ್ನು ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಕೆಲಸದಿಂದ ವಜಾಗೊಳಿಸಲಾಗಿದ್ದು, 6 ತಿಂಗಳು ಸೇವೆಗೆ ಮರಳುವಂತಿಲ್ಲ, ಇಲಾಖಾ ಮಟ್ಟದ ತನಿಖೆ ಆರಂಭಗೊಂಡಿದೆ. ಪೊಲೀಸ್ ತನಿಖೆಗೆ ಇಲಾಖೆ ಪೂರ್ಣ ಸಹಕಾರ ನೀಡಲಿದೆ, ತನಿಖಾ ವರದಿ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು," ಎಂದು ಸಚಿವ ರಾಜು ಹೇಳಿದರು.

''ದಕ್ಷಿಣ ವಲಯ ಐಜಿ ಹರ್ಷಿತಾ ಅಥಲ್ಲೂರಿ ಅವರು ತನಿಖೆಯ ಹೊಣೆ ಹೊತ್ತುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.'' ಎಂದು ಸಚಿವರು ಭರವಸೆ ನೀಡಿದರು.

ಏನಿದು ವಿಸ್ಮಯ ಆತ್ಮಹತ್ಯೆ ಪ್ರಕರಣ?

ಏನಿದು ವಿಸ್ಮಯ ಆತ್ಮಹತ್ಯೆ ಪ್ರಕರಣ?

24 ವರ್ಷ ವಯಸ್ಸಿನ ಎಸ್.ವಿ ವಿಸ್ಮಯ ಎಂಬ ಗೃಹಿಣಿ ತನ್ನ ಪತಿ ಕಿರಣ್ ನೀಡಿದ್ದ ವರದಕ್ಷಿಣೆ ಕಿರುಕುಳವನ್ನು ಸಹಿಸದೆ ನೇಣು ಬಿಗಿದುಕೊಂಡು ಸ್ವಗೃಹದಲ್ಲಿ ಮೃತಪಟ್ಟಿದ್ದಾಳೆ. ಸಾವಿಗೂ ಮುನ್ನ ತನ್ನ ಅಣ್ಣನಿಗೆ ವರದಕ್ಷಿಣೆ ಕಿರುಕುಳ ನೀಡಿ ದೈಹಿಕವಾಗಿ ಹಿಂಸೆ ನೀಡಿರುವ ಬಗ್ಗೆ ವಾಟ್ಸಾಪ್ ಚಾಟ್ ಮೂಲಕ ವಿವರವಾಗಿ ತಿಳಿಸಿದ್ದಾಳೆ.

''ವಿಸ್ಮಯ ಕುತ್ತಿಗೆಯಲ್ಲಿ ಕೈ ಮೇಲೆ ಗಾಯದ ಗುರುತುಗಳಿವೆ. ನೇಣು ಬಿಗಿದುಕೊಂಡು ಸತ್ತರೆ, ದೇಹದಿಂದ ಮಲ ಮೂತ್ರ ವಿಸರ್ಜನೆಯಾಗುತ್ತದೆ, ಕಣ್ಣು ಮೇಲಕ್ಕೆ ತಿರುಗುವುದು, ನಾಲಗೆ ಹೊರ ಹಾಕುವುದು ಇತ್ಯಾದಿ ಆತ್ಮಹತ್ಯೆ ಎನ್ನಲು ಸಾಕ್ಷಿ ಒದಗಿಸಬಲ್ಲ ಅಂಶಗಳಿಲ್ಲ. ಅದಲ್ಲದೆ, ಸಾವು ಸಂಭವಿಸಿ ಎರಡು ಗಂಟೆಗಳ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ,'' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತಾಯಿಯ ಆಕ್ರಂದನ

ತಾಯಿಯ ಆಕ್ರಂದನ

''ಯಾವುದೋ ಪರೀಕ್ಷೆಗಾಗಿ 5500 ರು ಫೀ ಕಟ್ಟಬೇಕು ಎಂದು ಕೇಳಿದ್ದಳು. ನನಗೆ ಫೋನ್ ಕರೆ ಮಾಡಿದಾಗಲೂ ಹೆದರಿಕೆಯಿಂದ ಮಾತನಾಡುತ್ತಿದ್ದಳು. ಮನೆಯಲ್ಲಿ ಕಿರಣ್- ವಿಸ್ಮಯ ನಡುವೆ ಕಿತ್ತಾಟವಾಗುತ್ತಿದ್ದರೆ, ಅವಳ ಅತ್ತೆ ಅಡುಗೆ ಮನೆ ಸೇರುತ್ತಿದ್ದರು, ಮಾವ ಟಿವಿ ನೋಡುತ್ತಿದ್ದರಂತೆ. ವಿಸ್ಮಯ ಕೆನ್ನೆಗೆ ಕಿರಣ್ ಒಮ್ಮೆ ಬಲವಾಗಿ ಬಾರಿಸಿದ್ದ, ಕೆನ್ನೆ ಕೆಂಪಾಗಿ ಊದುಕೊಂಡಿದ್ದ ಚಿತ್ರವನ್ನು ಕಳಿಸಿದ್ದಳು, ನಾವು ಗಂಡನ ಮನೆ ಬಿಟ್ಟು ಬಾ ಎಂದು ಹೇಳಿದರೂ, ಅಪ್ಪನ ಮರ್ಯಾದೆ ಹಾಳಾಗುತ್ತೆ ಬೇಡ,'' ಎಂದಿದ್ದಳು ಎಂದು ಕೈತೋಡೆ ಗ್ರಾಮದಲ್ಲಿರುವ ವಿಸ್ಮಯ ತಾಯಿ ಸಜಿತಾ ಕಣ್ಣೀರಿಟ್ಟಿದ್ದಾರೆ.

ಉತ್ತಮ ಭವಿಷ್ಯದ ಕನಸು ಹೊತ್ತಿದ್ದ ವಿಸ್ಮಯ

ಉತ್ತಮ ಭವಿಷ್ಯದ ಕನಸು ಹೊತ್ತಿದ್ದ ವಿಸ್ಮಯ

ಪಂಡಾಲಂನ ಮನ್ನಂ ಆಯುರ್ವೇದ ಮೆಡಿಕಲ್ ಕಾಲೇಜಿನ ನಾಲ್ಕನೇ ವರ್ಷ ಬಿಎಎಂಎಸ್ ವಿದ್ಯಾರ್ಥಿನಿ ವಿಸ್ಮಯ ಹಾಗೂ ಕಿರಣ್ ಮದುವೆ(ಮೇ 2020ರಲ್ಲಿ) ತಕ್ಕಮಟ್ಟಿಗೆ ಚೆನ್ನಾಗಿ ಮಾಡಿಕೊಡಲಾಗಿತ್ತು. ಆದರೆ, ವರದಕ್ಷಿಣೆ ರೂಪದಲ್ಲಿ ಕಿರಣ್‌ಗೆ ವಿಸ್ಮಯ ತಂದೆ ತ್ರಿವಿಕ್ರಿಮನ್ ನಾಯರ್ ಕಾರು ನೀಡಿದ್ದರು. ಆದರೆ, ಕಿರಣ್‌ಗೆ ಆ ಕಾರು ಇಷ್ಟವಿರಲಿಲ್ಲ. ಕಾರಿನ ನೆಪವೊಡ್ಡಿ, ಪ್ರತಿನಿತ್ಯ ವಿಸ್ಮಯಳನ್ನು ನಿಂದಿಸಿ ಅವಾಚ್ಯ ಶಬ್ದಗಳನ್ನು ಬಳಸಿ ಬೈದು, ಹೊಡೆದು ಮಾಡುತ್ತಿದ್ದ. ಈ ಬಗ್ಗೆ ಕಿರಣ್ ತಂದೆ ತಾಯಿ ಚಕಾರ ಎತ್ತುತ್ತಿರಲಿಲ್ಲ. ನನ್ನ ಲೆವಲ್‌ಗೆ ಇನ್ನೂ ಜಾಸ್ತಿ ವರದಕ್ಷಿಣೆ ಕೊಡಬೇಕಾಗಿತ್ತು ಎಂದು ಕೂಗಾಡುತ್ತಿದ್ದ ಎಂದು ವಾಟ್ಸಾಪ್ ಚಾಟ್ ಹಿಸ್ಟರಿಯಿಂದ ತಿಳಿದು ಬಂದಿದೆ.

ವರದಕ್ಷಿಣೆ ಬಗ್ಗೆ ವಿಸ್ಮಯ ತಂದೆ ಪ್ರತಿಕ್ರಿಯೆ

ವರದಕ್ಷಿಣೆ ಬಗ್ಗೆ ವಿಸ್ಮಯ ತಂದೆ ಪ್ರತಿಕ್ರಿಯೆ

ಕೇರಳದಲ್ಲಿ ವರದಕ್ಷಿಣೆಗಿಂತ ವಧುದಕ್ಷಿಣೆ ನೀಡುವ ಪದ್ಧತಿ ಹೆಚ್ಚಾಗಿ ಇದೆ. ಕಿರಣ್‌ಗೆ ಸರ್ಕಾರಿ ಕೆಲಸ ಇತ್ತು, ನೋಡಲು ಚೆನ್ನಾಗಿದ್ದ, ತಮ್ಮ ಮುದ್ದಾದ ಪುತ್ರಿಯನ್ನು ಚೆನ್ನಾಗಿ ಬಾಳಿಸಬಲ್ಲ ಎಂಬ ನಂಬಿಕೆಯಲ್ಲಿ ಶಕ್ತಿ ಮೀರಿ ವರದಕ್ಷಿಣೆ, ಉಪಚಾರ ಮಾಡಿದ್ದರು.

''100 ಸವರನ್ ಚಿನ್ನ, ಒಂದು ಎಕರೆ ಫಲವತ್ತಾದ ಭೂಮಿ, ಒಂದು ಕಾರು ಅಲ್ಲದೆ 10 ಲಕ್ಷ ರು ನಗದು ಕೊಟ್ಟು ಕಳೆದ ವರ್ಷ ವಿಜೃಂಭಣೆಯಿಂದ ಮದುವೆ ಮಾಡಿಕೊಟ್ಟೆವು. ಆದರೆ, ಕಿರಣ್‌ಗೆ ನಾವು ಕೊಟ್ಟ ಕಾರು ಇಷ್ಟವಾಗಲಿಲ್ಲ, 10 ಲಕ್ಷ ರು ಹೆಚ್ಚಿನ ಮೊತ್ತ ಕೊಡುವಂತೆ ಬೇಡಿಕೆ ಹಾಕಿದ, ನಮ್ಮಿಂದ ಹಣ ಒದಗಿಸಲು ಕಷ್ಟ ಎಂಬುದು ಅರಿತು, ವಿಸ್ಮಯಳಿಗೆ ಕಿರುಕುಳ ನೀಡಲಾರಂಭಿಸಿದ. ವಿಸ್ಮಯ ತವರು ಮನೆಗೆ ಬಂದಾಗಲೂ ಅವರ ಮೇಲೆ ಕೈಎತ್ತಿದ್ದ. ನಾವು ಸಮಾಧಾನ ಮಾಡಿ ಕಳಿಸಿದ್ದೆವು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವಿಲ್ಲ, ಕಿರಣ್ ಹಾಗೂ ಕುಟುಂಬದವರು ಕೊಲೆ ಮಾಡಿದ್ದಾರೆ,'' ಎಂದು ತ್ರಿವಿಕ್ರಮನ್ ನಾಯರ್ ತಮ್ಮ ನೋವು ತೋಡಿಕೊಂಡಿದ್ದಾರೆ.

ತನಿಖೆ ಎತ್ತ ಸಾಗಿದೆ?

ತನಿಖೆ ಎತ್ತ ಸಾಗಿದೆ?

ಕೊಲ್ಲಂ ಪೊಲೀಸರಲ್ಲದೆ, ರಾಜ್ಯ ಮಹಿಳಾ ಆಯೋಗ ಕೂಡಾ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಸೂರನಾಡು ಸಾಥಾಂಕೊಟ್ಟದಲ್ಲಿರುವ ವಿಸ್ಮಯ ಮನೆಗೆ ಮಹಿಳಾ ಆಯೋಗದ ಸದಸ್ಯೆ ಶಹೀದಾ ಕಮಾಲ್ ಭೇಟಿ ಮಾಡಿ ಪರಿಶೀಲಿಸಿದ್ದಾರೆ. ಕುಟುಂಬಸ್ಥರ ಪ್ರಾಥಮಿಕ ಹೇಳಿಕೆ ಪಡೆದುಕೊಂಡಿದ್ದಾರೆ. ಕಿರಣ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಲು ಆಯೋಗ ಮುಂದಾಗಿದ್ದು, ಕೊಲ್ಲಂ ಗ್ರಾಮಾಂತರ ಎಸ್ ಪಿಯಿಂದ ವರದಿ ಕೇಳಿದೆ.

ಇತ್ತ ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ವಿಸ್ಮಯ ತಂದೆ ಮಾಡಿರುವ ಆರೋಪವನ್ನು ಪರಿಗಣಿಸಿ, ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ಕೂಡಾ ಖುದ್ದು ಈ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ, ಸೂಕ್ತ ತನಿಖೆ ಸೂಚಿಸಿದ್ದಾರೆ.

Note: The all-India helpline for women in distress is 1091. ರಾಜ್ಯವಾರು ಸಹಾಯವಾಣಿ ಸಂಖ್ಯೆಗಳ ವಿವರ ಇಲ್ಲಿದೆ (https://indianhelpline.com/WOMEN-HELPLINE/)

English summary
Vismaya Death Case: Kiran Kumar, assistant motor vehicle inspector of Kollam enforcement, and husband of Vismaya, who committed suicide at Sasthamcotta in Kollam, has been suspended from service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X