ಶಬರಿಮಲೆ ಭಕ್ತರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ನಿರ್ಲಕ್ಷ್ಯ: ಆರೋಪ
ತಿರುವನಂತಪುರಂ, ನವೆಂಬರ್ 19: ಕೇರಳದ ಪ್ರಸಿದ್ಧ ಪವಿತ್ರ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ತೆರಳುವ ಭಕ್ತರಿಂದ ಕೊರೊನಾ ವೈರಸ್ ಹರಡದಂತೆ ತಡೆಯಲು ಅಲ್ಲಿನ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೇರಳ ಸರ್ಕಾರವು ಅಲ್ಲಿಗೆ ಭೇಟಿ ನೀಡುವ ಭಕ್ತರ ಆರೋಗ್ಯದ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅಯ್ಯಪ್ಪ ಭಕ್ತರಿಗೆ ಅನೇಕ ನಿಯಮಗಳನ್ನು ಹೇರಿರುವ ಸರ್ಕಾರವು ಅವರ ಆರೋಗ್ಯ ಮತ್ತು ಅಗತ್ಯಗಳನ್ನು ಪೂರೈಸಲು ವಿಫಲವಾಗುತ್ತಿದೆ. ಮುಖ್ಯವಾಗಿ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಭಕ್ತರಿಗೆ ಪ್ರತಿ ಬಾರಿ ತೆರೆದಿರುತ್ತಿದ್ದ ಆಯುರ್ವೇದಿಕ್ ಆಸ್ಪತ್ರೆಗಳನ್ನು ಈ ಬಾರಿ ತೆರೆಯದೆ ಇರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಶಬರಿಮಲೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಉಚಿತ ಊಟವಿಲ್ಲ
ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ಒಂದು ವೇಳೆ ಅಲ್ಲಿ ಆರೋಗ್ಯ ಕೆಟ್ಟರೆ ಸರ್ಕಾರಿ ಆಸ್ಪತ್ರೆಗಳು, ಆಯುರ್ವೇದಿಕ್ ಆಸ್ಪತ್ರೆಗಳು ಮತ್ತು ಅಲೋಪಥಿ ಆಸ್ಪತ್ರೆಗಳು ಸಾಕಷ್ಟು ಲಭ್ಯವಿರುತ್ತವೆ. ಶಬರಿಮಲೆ, ಪಂಬಾ, ಎರಿಮೆಲಿ ಮತ್ತು ಇತರೆ ಸ್ಥಳಗಳಲ್ಲಿ ಭಕ್ತರಿಗೆ ಚಿಕಿತ್ಸೆ ನೀಡಲು ಪ್ರತಿ ವರ್ಷ ಕೇರಳ ಸರ್ಕಾರ ಆಯುರ್ವೇದಿಕ್ ಆಸ್ಪತ್ರೆಗಳನ್ನು ತೆರೆಯುತ್ತದೆ. ಆದರೆ ಅಯ್ಯಪ್ಪ ಸ್ವಾಮಿ ಭಕ್ತರ ಯಾತ್ರೆ ಆರಂಭವಾಗುತ್ತಿದ್ದು, ಇದುವರೆಗೂ ಎಲ್ಲಿಯೂ ಆಯುರ್ವೇದಿಕ್ ಆಸ್ಪತ್ರೆಗಳನ್ನು ತೆರೆದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪತ್ತನಮಿಟ್ಟ ಜಿಲ್ಲಾಧಿಕಾರಿ ಒಂದು ತಿಂಗಳ ಹಿಂದೆ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದು, ಶಬರಿಮಲೆ ಯಾತ್ರಿಕರ ಚಿಕಿತ್ಸೆಗೆ ಆಯುರ್ವೇದ ಆಸ್ಪತ್ರೆಗಳನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದರು. ಆದರೆ ಜಿಲ್ಲಾಧಿಕಾರಿಯ ಪತ್ರದ ಹೊರತಾಗಿಯೂ ಕೇರಳ ಆರೋಗ್ಯ ಸಚಿವರು ಮತ್ತು ಸರ್ಕಾರದ ಅಧಿಕಾರಿಗಳು ಆಯುರ್ವೇದಿಕ್ ಆಸ್ಪತ್ರೆಗಳನ್ನು ತೆರೆಯಲು ಆಸಕ್ತಿ ತೋರಿಸಿಲ್ಲ.
ಶಬರಿಮಲೆ ದರ್ಶನ: ಭಕ್ತರ ಮಿತಿ ಹೆಚ್ಚಿಸುವ ಸಾಧ್ಯತೆ
ಕಳೆದ ವರ್ಷ ಕೇರಳ ಸರ್ಕಾರ ಭಕ್ತರ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಲು ಏಳು ಲಕ್ಷ ರೂ ಅನುದಾನ ನೀಡಿತ್ತು. ಆದರೆ ಈ ಬಾರಿ ಬಿಡಿಗಾಸೂ ಬಿಡುಗಡೆ ಮಾಡಿಲ್ಲ. ಅಯ್ಯಪ್ಪ ಸ್ವಾಮಿ ಕ್ಷೇತ್ರವನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ಆರೋಪಿಸಲಾಗಿದೆ.