450 ರೂ. ಕೊಟ್ಟರೆ ಮನೆ ಬಾಗಿಲಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದ
ತಿರುವನಂತಪುರಂ, ನವೆಂಬರ್.20: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ವಿಶೇಷ ಎನಿಸುವಂತಾ ಯೋಜನೆ ಹಾಕಿಕೊಳ್ಳಲಾಗಿದೆ. ಮಣಿಕಂಠನ ಭಕ್ತರಿಗೆ ಪೋಸ್ಟ್ ಮೂಲಕ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.
ಅಯ್ಯಪ್ಪ ಸ್ವಾಮಿ ಭಕ್ತರು ಮನೆಯಲ್ಲೇ ಕುಳಿತುಕೊಂಡು ಶಬರಿಮಲೆಯ ಪ್ರಸಾದವನ್ನು ಆನ್ ಲೈನ್ ಮೂಲಕ ಬುಕ್ ಮಾಡಬಹುದು. ಭಕ್ತರಿಗಾಗಿ ಅಂಚೆ ಇಲಾಖೆಯು "ಹೋಮ್ ಡೆಲಿವೆರಿ ಸ್ಕೀಮ್"ಗೆ ಚಾಲನೆ ನೀಡಿದೆ. ಕೇರಳದ ಅಂಚೆ ಇಲಾಖೆ ಮುಖ್ಯಸ್ಥ ವಿ. ರಾಜರಾಜನ್ ಅವರು ನೂತನ ಯೋಜನೆಗೆ ತಿರುವಲ್ಲಾದಲ್ಲಿ ಚಾಲನೆ ನೀಡಿದರು.
ಶಬರಿಮಲೆ ಭಕ್ತರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ನಿರ್ಲಕ್ಷ್ಯ: ಆರೋಪ
ಅರವನ, ತುಪ್ಪ, ಚಂದನ, ವಿಭೂತಿ, ಕುಂಕುಮ ಮತ್ತು ಅರಿಶಿಣವನ್ನು ಒಳಗೊಂಡ ಪ್ರಸಾದದ ಕಿಟ್ ನ್ನು ಸಿದ್ಧಪಡಿಸಲಾಗಿದೆ. ಆರ್ಡರ್ ಮಾಡುವ ಭಕ್ತರ ಮನೆಗೆ ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದದ ಕಿಟ್ ತಲುಪಿಸಲಾಗುತ್ತದೆ. ಒಂದು ಪ್ರಸಾದದ ಕಿಟ್ ಗೆ 450 ರೂಪಾಯಿ ದರ ನಿಗದಿಗೊಳಿಸಲಾಗಿದೆ.
ಶಬರಿಮಲೆಯಲ್ಲಿ ಭದ್ರತೆ ಬಗ್ಗೆ ಹೆಚ್ಚಿನ ನಿಗಾ:
ಸನ್ನಿಧಿ ತೆರಳುವ ಯಾತ್ರಾರ್ಥಿಗಳ ಭದ್ರತೆ ಕುರಿತು ಈ ಬಾರಿ ವಿಶೇಷ ಲಕ್ಷ್ಯ ವಹಿಸಲಾಗಿದೆ. ಸಂಜೆ 7 ಗಂಟೆಗೆ ಪಂಪಾದಿಂದ ಹೊರಡುವ ಯಾತ್ರಿಕರು ರಾತ್ರಿ 9 ಗಂಟೆ ವೇಳೆಗೆ ಸನ್ನಿಧಾನವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಬೆಟ್ಟದ ಮೇಲಿನ ಅಯ್ಯಪ್ಪ ಸ್ವಾಮಿಯ ದೇವಸ್ಥಾನವನ್ನು ರಾತ್ರಿ 9 ಗಂಟೆಗೆ ಮುಚ್ಚಲಾಗುತ್ತದೆ. ಈ ಅವಧಿಯೊಳಗೆ ಯಾತ್ರಾರ್ಥಿಗಳು ಸನ್ನಿಧಾನವನ್ನು ತಲುಪುವಂತೆ ನೋಡಿಕೊಳ್ಳಲು ಚಾರಣದ ಮಾರ್ಗದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದ್ದು, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯು ವಿಶೇಷ ಗಮನ ವಹಿಸಲಿದ್ದಾರೆ.
ಖಾಸಗಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಆಹಾರದ ಪ್ಲೇಟ್ ಮತ್ತು ಕಪ್ ಗಳನ್ನು ಕೊವಿಡ್-19 ಶಿಷ್ಟಾಚಾರದ ಅನ್ವಯ ಬಿಸಾಡುವುದಕ್ಕೆ ಸೂಚಿಸಲಾಗಿದೆ. ಮರಕುಟ್ಟಮ್, ಚರಲ್ಮೇಡು, ಸನ್ನಿಧಾನಂನಲ್ಲಿ ಕಾರ್ಯ ನಿರ್ವಹಿಸುವ ಅಯ್ಯಪ್ಪ ಸೇವಾ ಸಂಘದ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆ ವತಿಯಿಂದ ಮುಖದ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.