ಕೇಂದ್ರ + ರಾಜ್ಯ: ಕೇರಳದಲ್ಲಿ ಪೆಟ್ರೋಲ್ 12, ಡೀಸೆಲ್ 9 ರೂಪಾಯಿ ಇಳಿಕೆ
ತಿರುವನಂತಪುರಂ, ಮೇ 21: ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬೆನ್ನಲ್ಲೇ ಕೇರಳ ಸರ್ಕಾರ ರಾಜ್ಯ ತೆರಿಗೆಯನ್ನು ಇಳಿಸಿರುವುದಾಗಿ ಘೋಷಿಸಿದೆ.
ಕೇರಳ ಸರ್ಕಾರವು ರಾಜ್ಯದ ವಾಹನ ಸವಾರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಕೇಂದ್ರ ಬೆಲೆ ಇಳಿಸಿದ ದಿನವೇ ಪೆಟ್ರೋಲ್ ಮೇಲಿನ ತೆರಿಗೆಯಲ್ಲಿ 2.41 ರೂಪಾಯಿ ಇಳಿಸಿದರೆ, ಡೀಸೆಲ್ ದರದಲ್ಲಿ 1.36 ರೂಪಾಯಿ ಕಡಿತಗೊಳಿಸಿದೆ.
ಕೇಂದ್ರ ಸರ್ಕಾರವು ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ ಹಾಗೂ ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ 9.50 ರೂಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀ.ಗೆ 7 ರೂಪಾಯಿ ಇಳಿಕೆಯಾಗಲಿದೆ.
ಪೆಟ್ರೋಲ್-ಡೀಸೆಲ್ ಇಳಿಸಿದ ಸರ್ಕಾರದ ಲೆಕ್ಕಾಚಾರ ತಿಳಿಸಿದ ಸುರ್ಜೇವಾಲಾ!
ಕೇರಳದಲ್ಲಿ ಎಷ್ಟಾಗುತ್ತೆ ಪೆಟ್ರೋಲ್-ಡೀಸೆಲ್ ಇಳಿಕೆ?:
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಕಡಿತಗೊಳಿಸಿದ ದಿನವೇ ರಾಜ್ಯ ಸರ್ಕಾರ ಕೂಡ ಬೆಲೆ ಇಳಿಕೆ ಮಾಡಿದೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ದರ 11.96 ರೂಪಾಯಿ ಇಳಿಕೆಯಾಗಲಿದ್ದು, ಡೀಸೆಲ್ ದರ 8.86 ರೂಪಾಯಿ ಕಡಿತಗೊಳ್ಳಲಿದೆ.
ಸಿಲಿಂಡರ್ ಸಬ್ಸಿಡಿ ಘೋಷಿಸಿರುವ ಕೇಂದ್ರ ಸರ್ಕಾರ:
ಪ್ರಧಾನಮಂತ್ರಿ ಉಜ್ವಲ ಯೋಜನೆ 9 ಕೋಟಿ ಫಲಾನುಭವಿಗಳಿಗೆ ಕೇಂದ್ರ ಬಂಪರ್ ಕೊಡುಗೆ ನೀಡಿದೆ. ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಘೋಷಿಸಿದೆ. ಪ್ರತಿವರ್ಷ ಉಜ್ವಲ ಯೋಜನೆಯ ಅಡಿಯಲ್ಲಿ 12 ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತೇವೆ. "ಈ ವರ್ಷ ನಾವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೀಡುವ ಪ್ರತಿ ಗ್ಯಾಸ್ ಸಿಲಿಂಡರ್ಗೆ 200 ಸಬ್ಸಿಡಿ ನೀಡುತ್ತೇವೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಹಣದುಬ್ಬರಕ್ಕೆ ಕಾರಣ ತಿಳಿಸಿದ ನಿರ್ಮಲಾ ಸೀತಾರಾಮನ್:
ಇಂದು ಜಗತ್ತು ಕಷ್ಟದ ಕಾಲವನ್ನು ದಾಟುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಜಗತ್ತು ಚೇತರಿಸಿಕೊಳ್ಳುತ್ತಿರುವಾಗಲೂ, ಉಕ್ರೇನ್ ಸಂಘರ್ಷವು ಪೂರೈಕೆ ಸರಪಳಿ ಸಮಸ್ಯೆಗಳನ್ನು ಮತ್ತು ವಿವಿಧ ಸರಕುಗಳ ಕೊರತೆಯನ್ನು ತಂದಿದೆ. ಇದು ಬಹಳಷ್ಟು ದೇಶಗಳಲ್ಲಿ ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ