ಕೊರೊನಾ ವೈರಸ್: ಕೇರಳದಲ್ಲಿ ಎರಡನೇ ಪ್ರಕರಣ ಪತ್ತೆ
ತಿರುವನಂತಪುರಂ, ಫೆಬ್ರವರಿ 2: ಕೇರಳದಲ್ಲಿ ಎರಡನೇ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಮೊದಲ ಪ್ರಕರಣ ಪತ್ತೆಯಾಗಿ ಮೂರು ದಿನಗಳ ಬಳಿಕ ಎರಡನೇ ಪ್ರಕರಣ ಪತ್ತೆಯಾಗಿದೆ.
ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಇವರು ಚೀನಾದಿಂದ ಭಾರತಕ್ಕೆ ಬಂದವರಾಗಿದ್ದಾರೆ. ರಾಷ್ಟ್ರದ ಮೊದಲ ಕೊರೊನಾ ವೈರಸ್ ಕೇರಳದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿತ್ತು.
ಚೀನಾದಲ್ಲಿ ವಿಶೇಷ ವಿಮಾನ ಹತ್ತದ ಆರು ಭಾರತೀಯರು
ಚೀನಾದಿಂದ ಕೇರಳಕ್ಕೆ ಬಂದ ವಿದ್ಯಾರ್ಥಿಯಲ್ಲಿ ವೈರಸ್ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ಪತ್ತೆಯಾಗಿದೆ. ಚೀನಾದ ವುವಾನ್ನಲ್ಲಿ ಈ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದ. ವೈರಸ್ ಹರಡದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸುವಂತೆ ಕೇರಳಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.
ಚೀನಾದಕ್ಕೆ ಕೇರಳಕ್ಕೆ ಆಗಮಿಸುವ ವ್ಯಕ್ತಿಗಳನ್ನು ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತಪಾಸಣೆ ನಡೆಸಲು ಪ್ರಯೋಗಾಲಯಗಳನ್ನು ತೆರೆಯಲಾಗಿದೆ.
ಕೊರೊನಾ ಮಾರಣಾಂತಿಕ ಸೋಂಕು ಇಡೀ ಚೀನಾವನ್ನೇ ಆವರಿಸಿದೆ. ಅಲ್ಲಿನ ವುಹಾನ್ನಲ್ಲಿರುವ 324 ಭಾರತೀಯರನ್ನು ವಿಶೇಷ ವಿಮಾನ ಮೂಲಕ ಕರೆತರಲಾಯಿತು. ಆದರೆ ಆರು ಮಂದಿ ಮಾತ್ರ ವಿಶೇಷ ವಿಮಾನವನ್ನು ಏರಲಿಲ್ಲ. ನಗರದಲ್ಲಿ ತೀವ್ರ ಜ್ವರದಿಂದಾಗಿ ಆರು ಭಾರತೀಯರನ್ನು ಮೊದಲ ವಿಶೇಷ ಏರ್ ಇಂಡಿಯಾ ವಿಮಾನ ಹತ್ತಲು ನಿರ್ಬಂಧ ಹೇರಲಾಗಿತ್ತು ಎಂದು ತಿಳಿದುಬಂದಿದೆ.